ಪ್ರಶ್ನೋತ್ತರ?

ಬಡ್ಡಿ ಅನುದಾನಿತ ಶಿಕ್ಷಣ ಸಾಲ 2009ರ ಏಪ್ರಿಲ್ 1ರಿಂದ ಜಾರಿಯಲ್ಲಿದೆ. ನಿಮ್ಮ ಕುಟುಂಬದ ಆದಾಯ ವಾರ್ಷಿಕರೂ 4.50 ಲಕ್ಷಕ್ಕಿಂತ ಕಡಿಮೆ ಇರಬೇಕು ಹಾಗೂ ತಹಸೀಲ್‌ದಾರರಿಂದ ಈ ಬಗ್ಗೆ ಆದಾಯ ದೃಢೀಕರಣ ಪ್ರಮಾಣ ಪತ್ರವನ್ನು ಪಡೆದು ಬ್ಯಾಂಕಿಗೆ ಸಲ್ಲಿಸಬೇಕು.

ಮೋಹನ್
ಪ್ರಶ್ನೆ: ನಾನು ಕೆನರಾ ಬ್ಯಾಂಕಿನಿಂದ 2007ರಿಂದ ಎಂಜಿನಿಯರಿಂಗ್ ಕೋರ್ಸಿಗೆ ಶಿಕ್ಷಣ ಸಾಲ ಪಡೆದಿದ್ದೇನೆ (2007ರ ಸೆಪ್ಟೆಂಬರ್‌ನಲ್ಲಿರೂ 43,090 ಹಾಗೂ 2009 ಮತ್ತು  2010ರ ಆಗಸ್ಟ್‌ನಲ್ಲಿ ಎರಡು ಬಾರಿರೂ43,000). ಕೇಂದ್ರ ಸರ್ಕಾರ 2009ರಿಂದ ಅನುದಾನಿತ ಬಡ್ಡಿ ಯೋಜನೆ ಜಾರಿಗೆ ಬಂದಿದೆ. ನನ್ನ ವಿಚಾರದಲ್ಲಿ ಸರಿಯಾದ ಮಾರ್ಗದರ್ಶನ ಮಾಡಿರಿ.
ಉತ್ತರ: ಬಡ್ಡಿ ಅನುದಾನಿತ ಶಿಕ್ಷಣ ಸಾಲ 2009ರ ಏಪ್ರಿಲ್ 1ರಿಂದ ಜಾರಿಯಲ್ಲಿದೆ. ನಿಮ್ಮ ಕುಟುಂಬದ ಆದಾಯ ವಾರ್ಷಿಕರೂ 4.50 ಲಕ್ಷಕ್ಕಿಂತ ಕಡಿಮೆ ಇರಬೇಕು ಹಾಗೂ ತಹಸೀಲ್‌ದಾರರಿಂದ ಈ ಬಗ್ಗೆ ಆದಾಯ ದೃಢೀಕರಣ ಪ್ರಮಾಣ ಪತ್ರವನ್ನು ಪಡೆದು ಬ್ಯಾಂಕಿಗೆ ಸಲ್ಲಿಸಬೇಕು. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್(ಐ.ಬಿ.ಎ)  2011ರ ಫೆಬ್ರುವರಿ 26ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆ ಪ್ರಕಾರ, ಒಬ್ಬ ವಿದ್ಯಾರ್ಥಿ ಶಿಕ್ಷಣ ಸಾಲವನ್ನು 2009ರ ಏಪ್ರಿಲ್ 1ಕ್ಕೂ ಮುನ್ನ ಮಂಜೂರು ಮಾಡಿಸಿಕೊಂಡು ಸಾಲದ ಕೆಲವು ಕಂತುಗಳನ್ನು ಏಪ್ರಿಲ್ 1ರ ನಂತರ ಪಡೆದಿದ್ದರೆ ಅಂತಹ ಸಾಲದ ಮೊತ್ತಕ್ಕೆ ಬಡ್ಡಿ ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ನೀವು 2009ಮತ್ತು 2010ರ ಆಗಸ್ಟ್‌ನಲ್ಲಿ ಪಡೆದುಕೊಂಡಿರುವ ಶಿಕ್ಷಣ ಸಾಲದ ಮೊತ್ತಕ್ಕೆ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ಸಾವಿತ್ರಿ, ಊರು ಬೇಡ
ಪ್ರಶ್ನೆ: ನನ್ನ ವಯಸ್ಸು 58 ವರ್ಷ. ಎರಡು ವರ್ಷದಲ್ಲಿ ನಿವೃತ್ತಿ. ಸ್ವಂತ ಮನೆ ಇದ್ದು, ಅದೇ ಮನೆಯಲ್ಲಿ ವಾಸ. ನನ್ನ ಜೀವಿತಕಾಲದ ಎಲ್ಲಾ ಉಳಿತಾಯ ಹಾಗೂ ಬ್ಯಾಂಕ್ ಸಾಲ ಪಡೆದು ಒಂದು ನಿವೇಶನ ಖರೀದಿಸಬೇಕೆಂದಿದ್ದೇನೆ. ನನ್ನ ಉದ್ದೇಶ ಈ ನಿವೇಶನದಲ್ಲಿ ನಿವೃತ್ತಿಯಿಂದ ಬರುವ ಹಣದಿಂದ ಸಣ್ಣ ಮನೆ ಕಟ್ಟಿಸಿ ಬಾಡಿಗೆ ಕೊಟ್ಟು ಬರುವ ಬಾಡಿಗೆಯಿಂದ ಮುಂದಿನ ಜೀವನ ಸಾಗಿಸುವುದು. ನನ್ನ ಯೋಜನೆ ಸರಿ ಇದೆಯೇ?
ಉತ್ತರ
: ನೀವು ಕುಟುಂಬದ ಹಿನ್ನೆಲೆ, ಅಂದರೆ ಗಂಡ, ಮಕ್ಕಳು ಹಾಗೂ ಯಾವ ಊರಿನಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಿಸಬೇಕೆಂದಿದ್ದೀರಿ ಎಂಬ ವಿವರ ನೀಡಿಲ್ಲ. ನಿವೇಶನ ಕೊಳ್ಳಲು ನಿಮ್ಮ ಜೀವಿತ ಕಾಲದ ಎಲ್ಲಾ ಉಳಿತಾಯ ಹಾಗೂ ಬ್ಯಾಂಕ್ ಸಾಲ ಬೇಕು ಎಂತ ತಿಳಿಸಿದ್ದೀರಿ. ಪ್ರಾಯಶಃ ನೀವು ಬೆಂಗಳೂರಿನಲ್ಲಿ ನಿವೇಶನ ಖರೀದಿಸಲು ಇಚ್ಚಿಸಿರಬೇಕು. ಹೂಡಿಕೆಗೆ, ಸ್ಥಿರ ಆಸ್ತಿಗಿಂತ ಮಿಗಿಲಾದ ದಾರಿ ಬೇರೊಂದಿಲ್ಲ. ಆದರೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸುವಾಗ ಇಳಿವಯಸ್ಸಿನಲ್ಲಿ ನಿಮ್ಮ ಎಲ್ಲಾ ಉಳಿತಾಯ ಹಾಗೂ ನಿವೃತ್ತಿಯಿಂದ ಬರುವ ಮೊತ್ತ, ನಿವೇಶನ ಹಾಗೂ ಮನೆಕಟ್ಟಲು ವಿನಿಯೋಗಿಸುವುದು ಸೂಕ್ತವಲ್ಲ. ನಿಮಗೆ ಉಳಿಯಲು ಮನೆ ಇದೆ ಹಾಗೂ ನಿಮ್ಮಡನೆ ಈಗ ಇರುವ ಮತ್ತು ಬರಲಿರುವ ಹಣವನ್ನು ಸಮೀಪದ ಭದ್ರವಾದ ಬ್ಯಾಂಕಿನಲ್ಲಿ ಅವಧಿ ಠೇವಣಿ ಇರಿಸಿರಿ. ನಿಶ್ಚಿಂತೆಯಿಂದ ನಿವೃತ್ತ ಜೀವನ ಅನುಭವಿಸಿರಿ.

ರೋಶನ್, ಬೆಂಗಳೂರು
ಪ್ರಶ್ನೆ: ನನ್ನ ಸಂಬಳರೂ 14,248. ಎಷ್ಟು ಆದಾಯ ತೆರಿಗೆ ಸಲ್ಲಿಸಬೇಕು? ಹೇಗೆ ಸಲ್ಲಿಸಬೇಕು? ನಾನು ಮೂವರು ಅಕೌಂಟೆಂಟ್‌ಗಳನ್ನು ಕೇಳಿದೆ, ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ!
ಉತ್ತರ:
ನಿಮ್ಮ ವಾರ್ಷಿಕ  ಸಂಬಳದ ಆದಾಯರೂ1,70,976 ನಿಮಗೆ ಸಂಬಳದ ಹೊರತು ಬೇರಾವ ಆದಾಯ ಇಲ್ಲದಿದ್ದರೆ ನೀವು ಆದಾಯ ತೆರಿಗೆ ಕಟ್ಟಬೇಕಾಗಿ ಬರುವುದಿಲ್ಲ. ವೈಯಕ್ತಿಕವಾಗಿ ವಾರ್ಷಿಕರೂ 2 ಲಕ್ಷ ಆದಾಯವಿದ್ದರೆ ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ. ನೀವು ತೆರಿಗೆ ವ್ಯಾಪ್ತಿಗೆ ಸೇರಿದಾಗ ಮಾತ್ರವೇ ಉದ್ಯೋಗ ನೀಡಿದ ಕಂಪೆನಿ ನಿಮ್ಮ ಸಂಬಳದ ಮೂಲದಲ್ಲಿಯೇ ತೆರಿಗೆ ಕಡಿತ(ಟಿ.ಡಿ.ಎಸ್) ಮಾಡುತ್ತದೆ. ಒಟ್ಟಿನಲ್ಲಿ ಸದ್ಯಕ್ಕೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ. ಪ್ರತಿ ತಿಂಗಳೂ ಎಷ್ಟಾದರಷ್ಟು ಹಣ ಉಳಿಸಿ ಮುಂದಿನ ಜೀವನವನ್ನು ಸುಗಮಗೊಳಿಸಿಕೊಳ್ಳಿರಿ.  

ಲಕ್ಷ್ಮೀನಾರಾಯಣ ಹೆಗಡೆ, ಶಿವಮೊಗ್ಗ
ಪ್ರಶ್ನೆ: 25.3.1954 ನನ್ನ ಜನನ ತಾರೀಕು. 25.3.2014ಕ್ಕೆ ನನಗೆ 60 ವರ್ಷ ಪೂರ್ಣಗೊಳ್ಳುತ್ತದೆ. ಹಣಕಾಸು ವರ್ಷ 2013-14 ಚಾಲ್ತಿಯಲ್ಲಿರುವಾಗಲೇ ನಾನು ಹಿರಿಯ ನಾಗರಿಕ ಎನಿಸಿಕೊಳ್ಳುತ್ತೇನೆ. ಇದರಿಂದ ನನಗೆ 2013-14 ಹಣಕಾಸು ವರ್ಷದಲ್ಲಿರೂ 2.50 ಲಕ್ಷದವರೆಗಿನ ಆದಾಯ ತೆರಿಗೆ ವಿನಾಯಿತಿ ಸೌಲಭ್ಯ ದೊರೆಯುವುದೇ? ದಯಮಾಡಿ ತಿಳಿಸಿ.
ಉತ್ತರ:
ನಿಮ್ಮ ಜನ್ಮದಿನಾಂಕ ಹಣಕಾಸು ವರ್ಷದ ಕೊನೆಗೆ ಇರುವುದರಿಂದ ಅದೇ ವರ್ಷ ಹಿರಿಯ ನಾಗರಿಕರಾಗುತ್ತೀರೋ ಇಲ್ಲವೋ ಎಂಬ ಸಂಶಯ ನಿಮಗಿದೆ ಅಲ್ಲವೇ? ಯಾವುದೇ ವ್ಯಕ್ತಿಯ ಜನ್ಮದಿನ ಏಪ್ರಿಲ್ 1ರಿಂದ  ಮಾರ್ಚ್ 31ರ ನಡುವಿನ ಅವಧಿಯಲ್ಲಿದ್ದು, ಆ ವ್ಯಕ್ತಿಯನ್ನು ಅದೇ ಹಣಕಾಸು ವರ್ಷದಲ್ಲಿ `ಹಿರಿಯ ನಾಗರಿಕ' ಎಂದೇ ಪರಿಗಣಿಸಲಾಗುತ್ತದೆ. ನೀವು 25.3.14ರಂದು 60 ವರ್ಷ ಮುಗಿದು 61ಕ್ಕೆ ಕಾಲಿಡುವುದರಿಂದ ಹಣಕಾಸು ವರ್ಷ 2013-14ರಲ್ಲಿರೂ 2.50 ಲಕ್ಷ ಆದಾಯದವರೆಗೂ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದು.

ಕೆ.ಬಿ.ಧೀರಜ್, ಮೈಸೂರು
ಪ್ರಶ್ನೆ: ನಾನು ಕಳೆದ 13 ವರ್ಷಗಳಿಂದ ಒಟ್ಟುರೂ 80,000 ಉಳಿತಾಯ ಮಾಡಿದ್ದೇನೆ. ನನಗೆ ಐದು ವರ್ಷದ ಮಗಳಿದ್ದಾಳೆ. ಅವಳಿಗೆ 18-20 ವರ್ಷವಾದಾಗ ಮದುವೆ ಮಾಡಬೇಕಾಗಿದೆ. ನನ್ನ ಉಳಿತಾಯದ ಹಣವನ್ನು ಎಂಟು ವರ್ಷಗಳಲ್ಲಿರೂ10 ಲಕ್ಷವಾಗಿಸಲು ಸೂಕ್ತ ಹೂಡಿಕೆ ಯೋಜನೆ ತಿಳಿಸಿಕೊಡಿ.
ಉತ್ತರ:
ನಿಮ್ಮಡನಿರುವರೂ80,000ವನ್ನು ನೀವು ಆರಿಸಿಕೊಂಡಿರುವ ಬ್ಯಾಂಕಿನಲ್ಲಿ 10 ವರ್ಷಗಳ ಅವಧಿಗೆ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ತಕ್ಷಣವೇ ಇರಿಸಿರಿ. ಅವಧಿಯ ಕೊನೆಗೆರೂ1,94,816 ಪಡೆಯಿರಿ. ಹೀಗೆ ಬಂದ ಹಣವನ್ನು ಮತ್ತೆ 10 ವರ್ಷಗಳ ಅವಧಿಗೆ ಅದೇ ಠೇವಣಿಯಲ್ಲಿ ಇರಿಸಿದರೆ ಅವಧಿ ಕೊನೆಗೆರೂ4,74,415 ಪಡೆಯುವಿರಿ. ಒಟ್ಟು 20 ವರ್ಷಗಳ ಅವಧಿಯಲ್ಲಿ ನಿಮ್ಮ ಉಳಿತಾಯದರೂ 80,000ವನ್ನು ಗರಿಷ್ಠರೂ4,74,415 ಮೊತ್ತಕ್ಕೆ ಹೆಚ್ಚಿಸಿಕೊಳ್ಳಬಹುದು.

ರೂ 80,000 ಎಂಟು ವರ್ಷಗಳಲ್ಲಿರೂ10 ಲಕ್ಷ ಆಗುವ ಕನಸು ಕಾಣದಿರಿ. ಈ ಹಣವನ್ನು ಮೇಲೆ ತಿಳಿಸಿದಂತೆ ಬ್ಯಾಂಕಿನಲ್ಲಿ ಅವಧಿ ಠೇವಣಿಯಲ್ಲಿ ಇರಿಸಿ ನಿಶ್ಚಿಂತರಾಗಿರಿ.

ಹಣ ದ್ವಿಗುಣಗೊಳಿಸಿಕೊಡುವ ಆಮಿಷವೊಡ್ಡಿ ನಿಮ್ಮ ಕಷ್ಟಾರ್ಜಿತವಾದ ಹಣವನ್ನು ಕಂಟಕಕ್ಕೆ ಸಿಲುಕುವಂತಹ ಹೂಡಿಕೆಗಳತ್ತ ಸೆಳೆಯುವವರಿದ್ದಾರೆ ಜಾಗ್ರತೆ.

ರಾಜು, ಟಾಟಾ ಮೋಟಾರ್ಸ್‌, ಬೆಂಗಳೂರು
ಪ್ರಶ್ನೆ: ನನ್ನ ವಯಸ್ಸು 31. ಮಾಸಿಕ ಸಂಬಳರೂ15000. ಎಲ್ಲಾ ಖರ್ಚು ಕಳೆದುರೂ3000 ಉಳಿಯುತ್ತದೆ. ಏಳು ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದೆ. ಅವಳ ಭವಿಷ್ಯಕ್ಕೆ ಯಾವ ರೀತಿ ಉಳಿತಾಯ ಮಾಡಬೇಕು. ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಉಳಿತಾಯದ ಖಾತೆಯಲ್ಲಿ 70,000 ಇದೆ. ಇದನ್ನು ಯಾವ ರೀತಿ ಮುಂದುವರಿಸಬೇಕು. ನಾನು ಎಲ್.ಐ.ಸಿಯಲ್ಲಿ ಎಂಟು ವರ್ಷಗಳಿಂದ `ಜೀವನ್ ಆನಂದ್' ವಿಮಾ ಪಾಲಿಸಿಗೆರೂ4000 ಕಟ್ಟುತ್ತಿದ್ದೇನೆ. ನನಗೆ ಉತ್ತಮ ಸಲಹೆ ನೀಡಿರಿ.
ಉತ್ತರ:
ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇರಿಸುವುದು ಜಾಣತನವಲ್ಲ. ನೀವು ಪಡೆದಿರುವ ಎಲ್.ಐ.ಸಿ ಪಾಲಿಸಿ ತುಂಬಾ ಉತ್ಕೃಷ್ಟವಾಗಿದೆ. ಅದನ್ನು ಮುಂದುವರಿಸಿರಿ. ನಿಮ್ಮ ಮುಂದಿನ ಉಳಿತಾಯದ ಯೋಜನೆ ಈ ಕೆಳಗಿನಂತಿರಲಿ.

ಮೇಲಿನ ಉದಾಹರಣೆಯಂತೆ ನೀವು ಪ್ರತಿ ತಿಂಗಳೂರೂ 3000  ಕಟ್ಟುವಂತೆ ತಕ್ಷಣವೇ ಸಮೀಪದ ಬ್ಯಾಂಕ್‌ನಲ್ಲಿ ಆರ್.ಡಿ ಖಾತೆ ಆರಂಭಿಸಿ. ಕಾಲಕಾಲಕ್ಕೆ ಬರುವ ಮೊತ್ತವನ್ನು  ಮೇಲೆ ಸೂಚಿಸಿದ ಕೋಷ್ಠಕದಂತೆ ಮರು ಹೂಡಿಕೆ ಮಾಡುತ್ತಾ ಬಂದಲ್ಲಿ ಮುಂದಿನ 30 ವರ್ಷಗಳಲ್ಲಿ ನಿಮ್ಮ ಉಳಿತಾಯ ರೂ 34,56,564 + 14,19,147+ 5,82,636 =ರೂ54,58,347 ಆಗುತ್ತದೆ.

ಅದೇ ರೀತಿ ಉಳಿತಾಯ ಖಾತೆಯಲ್ಲಿರುವರೂ70,000ದಲ್ಲಿ ಅಗತ್ಯದ ಖರ್ಚಿಗೆ ಬೇಕಾಗುವರೂ 10,000 ತೆಗೆದಿಟ್ಟು ಉಳಿದರೂ60,000ವನ್ನು ಈ ಕೆಳಗಿನಂತೆ ಠೇವಣಿ ಮಾಡಿರಿ. ಈ ಮೇಲಿನಂತೆ ನೀವು ಉಳಿತಾಯದ ಯೋಜನೆ ರೂಪಿಸಿಕೊಂಡು ಅದರಂತೆಯೇ ನಡೆದುಕೊಂಡಲ್ಲಿ ನಿಮ್ಮ 51ನೇ ವರ್ಷದಲ್ಲಿ(ನಿಮ್ಮ ಮಗಳ 21ನೇ ವರ್ಷದಲ್ಲಿ) ನಿಮ್ಮ ಬ್ಯಾಂಕ್ ಖಾತೆಯಲ್ಲಿರೂ43.95 ಲಕ್ಷ ಸೇರಿಕೊಂಡಿರುತ್ತದೆ. ನಿಮ್ಮ ಹಾಗೂ ಮಗಳ ಉಜ್ವಲ ಭವಿಷ್ಯಕ್ಕೆ ಈ ಮೊತ್ತ ಸಹಾಯಕವಾಗುತ್ತದೆ. ಉಳಿತಾಯದ ಯೋಜನೆಯನ್ನು ಮಧ್ಯದಲ್ಲಿ ನಿಲ್ಲಿಸದಿರಿ.

ಮಹೇಶ್, ಹಿತ್ಲಹಳ್ಳಿ
ಪ್ರಶ್ನೆ: ಒಬ್ಬ ವ್ಯಕ್ತಿ ಗರಿಷ್ಠ ಎಷ್ಟು ಹಣವನ್ನು ಬ್ಯಾಂಕಿನಲ್ಲಿ ಠೇವಣಿ(ಎಫ್.ಡಿ) ಇರಿಸಬಹುದು? ನನಗೆ ಎಸ್.ಬಿ.ಐ ನಲ್ಲಿ ರೂ. 1,39,000 ಬಡ್ಡಿ ಬರುತ್ತಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಮಾದರಿ 15ಜಿ ಸಲ್ಲಿಸಲು ಯತ್ನಿಸಿದಾಗ ಸ್ವೀಕೃತವಾಗಲಿಲ್ಲ. ಈ ಸಮಸ್ಯೆಗೆ ಪರಿಹರಿಸಿರಿ.
ಉತ್ತರ:
ಒಬ್ಬ ವ್ಯಕ್ತಿ (ಇಂಡಿವಿಜುವಲ್) ಬ್ಯಾಂಕುಗಳಲ್ಲಿ ಅವಧಿ ಠೇವಣಿ ಇರಿಸಲು ಗರಿಷ್ಠ ಮಿತಿ ಎಂಬುದೇನೂ ಇಲ್ಲ. ಬಹುದೊಡ್ಡ ಮೊತ್ತವನ್ನು (ಉದಾ: ರೂ. 5 ಕೋಟಿ) ಹೀಗೆ ಠೇವಣಿ ಇರಿಸುವಾಗ ಕೆಲವು ಬ್ಯಾಂಕ್ ಶಾಖೆಗಳಲ್ಲಿನ ಮುಖ್ಯಸ್ಥರು ತಮ್ಮ ಪ್ರಧಾನ ಕಚೇರಿಯಿಂದ ಅನುಮತಿ ಕೇಳುತ್ತಾರೆ. ಇದೊಂದು ಸಂಪ್ರದಾಯ ಮಾತ್ರ. ಎಸ್.ಬಿ.ಐ ಭಾರತದ ಅತಿದೊಡ್ಡ ಬ್ಯಾಂಕ್. ನಿಮ್ಮ ಸಮಸ್ಯೆಗೆ ಎಸ್‌ಬಿಐ ಶಾಖೆ ಮ್ಯಾನೇಜರ್ ಅವರನ್ನೇ ವಿಚಾರಿಸಿರಿ. ಅವರೇ ಮಾರ್ಗದರ್ಶನ ಮಾಡುತ್ತಾರೆ. ಅಲ್ಲಿಯೂ ನಿಮಗೆ ಸರಿಯಾದ ಉತ್ತರ ಸಿಗದೇ ಇದ್ದರೆ ಬೇರೆ ಬ್ಯಾಂಕಿಗೆ ಠೇವಣಿ ವರ್ಗಾಯಿಸಿ.

 

Comments