ಇನ್ನೊಂದು ಅಂತರಜಾಲ ಪ್ರೇಮ

ಅಂತರಜಾಲ ಪ್ರೇಮಗಳನ್ನು ಕಥೆಯಾಗಿಸಿಕೊಂಡ ಸಾಕಷ್ಟು ಚಿತ್ರಗಳು ಬಂದಿವೆ. ಕಥೆ ಅದೇ ಆದರೂ ಅವುಗಳ ಆದಿ ಅಂತ್ಯಗಳು ಕೊಂಚ ಭಿನ್ನವಾಗಿರುತ್ತವೆ. ಹೀಗೆ ಗೊತ್ತಿರುವ ಕಥೆಯನ್ನು ಹೇಳುವಲ್ಲಿ ನಿರ್ದೇಶಕರ ಕಸಬುದಾರಿಕೆ ಹಾಗೂ ಜವಾಬ್ದಾರಿ ತುಸು ಹೆಚ್ಚಿರುತ್ತದೆ. ಸಣ್ಣ ಎಳೆಗೆ ದೃಶ್ಯ, ಸಂಭಾಷಣೆ, ತಿರುವು ಇತ್ಯಾದಿಗಳ ರಕ್ತ ಮಾಂಸಗಳನ್ನು ತುಂಬಿ ಜೀವ ನೀಡುವಲ್ಲಿ ತುಸು ಹೆಚ್ಚು ಕಮ್ಮಿಯಾದರೂ ಅದು ವಿರೂಪವಾಗುವುದರಲ್ಲಿ ಅನುಮಾನವೇ ಇಲ್ಲ.

ಅಂತರಜಾಲ ಪ್ರೇಮಗಳನ್ನು ಕಥೆಯಾಗಿಸಿಕೊಂಡ ಸಾಕಷ್ಟು ಚಿತ್ರಗಳು ಬಂದಿವೆ. ಕಥೆ ಅದೇ ಆದರೂ ಅವುಗಳ ಆದಿ ಅಂತ್ಯಗಳು ಕೊಂಚ ಭಿನ್ನವಾಗಿರುತ್ತವೆ. ಹೀಗೆ ಗೊತ್ತಿರುವ ಕಥೆಯನ್ನು ಹೇಳುವಲ್ಲಿ ನಿರ್ದೇಶಕರ ಕಸಬುದಾರಿಕೆ ಹಾಗೂ ಜವಾಬ್ದಾರಿ ತುಸು ಹೆಚ್ಚಿರುತ್ತದೆ. ಸಣ್ಣ ಎಳೆಗೆ ದೃಶ್ಯ, ಸಂಭಾಷಣೆ, ತಿರುವು ಇತ್ಯಾದಿಗಳ ರಕ್ತ ಮಾಂಸಗಳನ್ನು ತುಂಬಿ ಜೀವ ನೀಡುವಲ್ಲಿ ತುಸು ಹೆಚ್ಚು ಕಮ್ಮಿಯಾದರೂ ಅದು ವಿರೂಪವಾಗುವುದರಲ್ಲಿ ಅನುಮಾನವೇ ಇಲ್ಲ.

ಇಂಥದ್ದೇ ಒಂದು ಅಂತರಜಾಲ ಪ್ರೇಮ ಪ್ರಕರಣದ ಚಿತ್ರವೊಂದು ಈ ವಾರ ತೆರೆಕಂಡಿದೆ. ಮಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ನಾಯಕನಿಗೆ ತನ್ನ ತಾಯಿ ತೋರಿಸುವ ಯಾವ ಹೆಣ್ಣನ್ನೂ ಮದುವೆಯಾಗಲು ಇಷ್ಟವಿಲ್ಲ. ಸ್ನೇಹಿತರ ಸಲಹೆಯಂತೆ ಆತ ವಿವಾಹ ಸಂಬಂಧ ಬೆಸೆಯುವ ಜಾಲತಾಣಕ್ಕೆ ನೋಂದಾಯಿಸಿಕೊಳ್ಳುತ್ತಾನೆ.

ಅಲ್ಲಿ ತನ್ನದೇ ಅಭಿರುಚಿ, ಒಂದೇ ಜನ್ಮದಿನ ಇತ್ಯಾದಿಗಳು ಹೊಂದಾಣಿಕೆಯಾಗುವ ನಾಯಕಿಯ ಪರಿಚಯವಾಗುತ್ತದೆ. ಫೋನ್‌ನಲ್ಲೇ ಗೆಳೆತನ, ಪ್ರೀತಿ, ಕೊನೆಗೆ ಮದುವೆಯವರೆಗೂ ಪ್ರಸ್ತಾಪವಾಗುತ್ತದೆ. ಆದರೆ ಈ ಇಷ್ಟು ಪ್ರಕ್ರಿಯೆ ಮುಗಿಯುವವರೆಗೂ ನಾಯಕನಿಗೆ ಮಾತ್ರವಲ್ಲ ಪ್ರೇಕ್ಷಕರಿಗೂ ನಾಯಕಿ `ಬೆಳದಿಂಗಳ ಬಾಲೆ'.

ಪಂಜಾಬ್‌ಗೆ ಹೋಗಿ ನಾಯಕಿಯನ್ನು ಹುಡುಕಿ ಅಲ್ಲಿ ತನ್ನ ಪ್ರೇಮಿಯನ್ನು ಭೇಟಿಯಾಗುವ ಇವರ ಪ್ರೇಮ ಯಾತ್ರೆಯಲ್ಲಿ ಅಡ್ಡಗಾಲು ಹಾಕಲು ಯಾರೂ ಇಲ್ಲ. ಆದರೂ ಕುತೂಹಲ ಕಾಪಿಟ್ಟುಕೊಳ್ಳಲೇಬೇಕೆಂಬ ನಿರ್ದೇಶಕರ ಹಟದಿಂದಾಗಿ ಅಲ್ಲಲ್ಲಿ ಅನಗತ್ಯವಾಗಿ ಸತಾಯಿಸುತ್ತಿದ್ದಾರೆ ಎಂದೆನಿಸುತ್ತದೆ. ಪವಿತ್ರ ಪ್ರೇಮ ಗಟ್ಟಿ ಮಾಡಿಕೊಳ್ಳುವಲ್ಲಿ ಇಬ್ಬರೂ ಯಶಸ್ಸು ಸಾಧಿಸುತ್ತಾರೆಯೇ ಇಲ್ಲವೇ ಎನ್ನುವುದನ್ನು ತಿಳಿಯಲು ಚಿತ್ರ ನೋಡಬೇಕು.

ಚಿತ್ರದಲ್ಲಿ ಸುಂದರ ದೃಶ್ಯಗಳಿವೆ, ಪ್ರೀತಿಯ ನಿವೇದನೆ, ಪ್ರೇಮದ ಆಲಾಪನೆ, ಹಾಡುಗಳು ಇತ್ಯಾದಿ ಎಲ್ಲವೂ ಇವೆ. ಆದರೂ ಏನೂ ಇಲ್ಲದ ಭಾವ ಕಾಡುತ್ತದೆ. ಹುಡುಗಾಟ, ಮುಗ್ಧತೆ, ಪ್ರೇಮದ ನಿವೇದನೆ ಎಲ್ಲಾ ವಿಭಾಗಗಳಲ್ಲೂ ದಿಗಂತ್ ಅಭಿನಯ ಉತ್ತಮ. ಉಳಿದಂತೆ ಸಂಪೂರ್ಣ ಹಿಂದಿಯಲ್ಲೇ ಸಂಭಾಷಣೆ ಒಪ್ಪಿಸಿರುವ ಸರ್ದಾರ್‌ಜೀ ಪಾತ್ರಧಾರಿ ದಿಲೀಪ್ ರಾಜ್ ಚಿತ್ರಕ್ಕೆ ಲವಲವಿಕೆ ತುಂಬಿದ್ದಾರೆ.

ಭಾಮಾ ಅವರದ್ದು ಅದೇ ಮುಗ್ಧ ನಟನೆ. ಪವಿತ್ರಾ ಲೋಕೇಶ್, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್, ಜೈ ಜಗದೀಶ್, ಹರೀಶ್ ರಾಜ್- ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕಡಲ ಅಲೆ ಅಬ್ಬರ, ಪಂಜಾಬ್ ತಾಣಗಳನ್ನು ಸುಂದರವಾಗಿ ಹಿಡಿದಿಡುವಲ್ಲಿ ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಅವರ ಪ್ರಯತ್ನ ಚಿತ್ರದ ಗುಣಾತ್ಮಕ ಅಂಶಗಳಲ್ಲಿ ಒಂದು. ಅರ್ಜುನ್ ಜನ್ಯರ ಹಾಡುಗಳು ಚಿತ್ರಕ್ಕೆ ತಕ್ಕಂತಿದೆ.

ಸಡಿಲ ಚಿತ್ರಕಥೆಯು ಬರ್ಫಿಯ ದೊಡ್ಡ ಕೊರತೆ. ಪ್ರೇಮದ ಪಯಣವಾದ್ದರಿಂದ ಆ ದಾರಿಯಲ್ಲಿ ಒಂದಿಷ್ಟು ಕಚಗುಳಿಯ ಸಂಭಾಷಣೆ, ಹಾಸ್ಯದ ಸನ್ನಿವೇಶಗಳ ಸವಿ ಬೇಕೆನಿಸುತ್ತದೆ. ಒಟ್ಟಿನಲ್ಲಿ ಓಘವಿಲ್ಲದ ಚಿತ್ರವನ್ನು ನೋಡುವವರಿಗೆ ನಿರ್ದೇಶಕರು ಬರ್ಫಿ ಉಣಬಡಿಸುತ್ತಿದ್ದಾರೋ ಅಥವಾ ರಸವಿದ್ದರೂ ಸವಿ ಇಲ್ಲದ ಚೂಯಿಂಗಮ್ ಜಗಿಯಲು ನೀಡಿದ್ದಾರೋ ತಿಳಿಯದಾಗುತ್ತದೆ.

Comments