ವಾರದ ವೈದ್ಯ

ಕಣ್ಣಿನ ಸೆಳೆತ

ಕಣ್ಣು ಬಡಿದುಕೊಳ್ಳುವುದು, ನಡುಗುವುದು, ಹಾರಿದಂತೆ ಆಗುವುದು, ಅದುರುವುದು ಇವೆಲ್ಲ ಕಣ್ಣಿನ ಸೆಳೆತದ ವಿವಿಧ ರೂಪಗಳು. ಹಾರುವ ಕಣ್ಣು ನಮ್ಮಲ್ಲಿ ಅನೇಕ ರೀತಿಯ ಸಂಶಯಗಳಿಗೆ ಎಡೆ ಮಾಡಿಕೊಡುತ್ತಾ ಬಂದಿದೆ. ಇದರ ಹಿಂದಿರುವ ವೈದ್ಯಕೀಯ ಕಾರಣಗಳಿಗಿಂತಲೂ ಮೂಢನಂಬಿಕೆಗಳೇ ಹೆಚ್ಚು. ಇಲ್ಲಿದೆ, ಕಣ್ಣಿನ ಸೆಳೆತ ಅಥವಾ ಹಾರುವ ಕಣ್ಣಿನ ವೈದ್ಯಕೀಯ ಮಾಹಿತಿ...

ಕಣ್ಣಿನ ಸೆಳೆತ

*ಹಾರುವ ಕಣ್ಣಿನ ಬಗ್ಗೆ ವಿವರಿಸಿ.
ಹಾರುವ ಕಣ್ಣು– ಇದನ್ನು ವೈದ್ಯಕೀಯ ಭಾಷೆಯಲ್ಲಿ ‘Blepharospasm’ ಎಂದು ಕರೆಯಲಾಗುತ್ತದೆ. ಇದೊಂದು ನರಸಂಬಂಧಿ ಸಮಸ್ಯೆ. ಕಣ್ಣಿನ ಮಾಂಸಖಂಡಗಳ ಅನಿಯಂತ್ರಿತ ಚಲನೆ ಇದಕ್ಕೆ ಕಾರಣ.
ಇದು ನರವಿಜ್ಞಾನದ ಸ್ಥಿತಿಗಳಲ್ಲಿ ಒಂದಾಗಿದ್ದು,  ಕಣ್ಣುಗುಡ್ಡೆಯ ಅನೈಚ್ಛಿಕ ಚಲನೆ ಅಥವಾ ಅನಿಯಂತ್ರಿತ ಮುಚ್ಚುವಿಕೆಯಾಗಿದೆ. ಇದು ರೆಪ್ಪೆಗಳಲ್ಲಿ ಅಸಹಜ ಮಿಟುಕಿಸುವಿಕೆ ಅಥವಾ ಕಣ್ಣಿನ ರೆಪ್ಪೆಯ ಸಂಕೋಚನ ಅಥವಾ ಸೆಳೆತದಂತಹ ಹಲವು ಅನುಭವಗಳನ್ನು ಉಂಟು ಮಾಡುತ್ತದೆ.

*ಸಾಮಾನ್ಯ ಕಾರಣಗಳನ್ನು ತಿಳಿಸಿ.
ನಿಖರ ಕಾರಣಗಳನ್ನು ಗುರುತಿಸಲು ಈವರೆಗೆ ಸಾಧ್ಯವಾಗಿಲ್ಲ. ಇದು ಅಷ್ಟೊಂದು ಗಂಭೀರ ಸಮಸ್ಯೆ ಅಲ್ಲ, ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ ಕಾಣಿಸಿಕೊಳ್ಳುತ್ತದೆ. ಕೆಲವು ಗಂಟೆಗಳ ನಂತರ ಯಾವುದೇ ಚಿಕಿತ್ಸೆ ಇಲ್ಲದೆ ತಾನಾಗೇ ಕಡಿಮೆ ಆಗುತ್ತದೆ. ಇನ್ನು ಕೆಲವೊಮ್ಮೆ ಹಲವು ದಿನಗಳವರೆಗೆ ಅಥವಾ ತಿಂಗಳವರೆಗೂ ಮುಂದುವರಿಯಬಹುದು.
ಆದಾಗ್ಯೂ ಹೆಚ್ಚಿನ ಸಂದರ್ಭಗಳಲ್ಲಿ ಈ ಸಮಸ್ಯೆಗೆ ಕಾರಣವಾಗುವ ಕೆಲವು ಅಂಶಗಳು ಹೀಗಿವೆ:
* ಮಾನಸಿಕ ಒತ್ತಡ ಮತ್ತು ಉದ್ವೇಗ
* ಆಯಾಸ, ದಣಿವು ಮತ್ತು ಬಳಲಿಕೆ
* ಅತಿಯಾದ ಮದ್ಯಪಾನ, ಕಾಫಿ ಸೇವನೆ
* ಧೂಮಪಾನ
* ಅರೆನಿದ್ರೆ ಅಥವಾ ನಿದ್ರಾಹೀನತೆ
* ನಿರಂತರವಾಗಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದು ಅಥವಾ ಟಿ.ವಿ. ನೋಡುವುದು
* ಪೌಷ್ಟಿಕಾಂಶಗಳ ಕೊರತೆ

*ವೈದ್ಯಕೀಯ ಕಾರಣಗಳ ಬಗ್ಗೆ ಹೇಳಿ.
ಕೆಲವು ಅಪರೂಪದ ಪ್ರಕರಣಗಳಲ್ಲಿ ಇದು ಮೆದುಳಿನ ತಳದ ಗ್ಯಾಂಗ್ಲಿಯಾ, ಬೆಲ್ಸ್ ಪಾಲ್ಸಿ ಹಾಗೂ ಪಾರ್ಕಿನ್ಸನ್‌ನಂತಹ ಕಾಯಿಲೆಗಳೊಂದಿಗೆ ತಳಕು ಹಾಕಿಕೊಂಡಿರುವುದನ್ನು ಪತ್ತೆ ಹಚ್ಚಲಾಗಿದೆ. ಹಾಗೆಯೇ ಪಾರ್ಕಿನ್ಸನ್, ಅಪಸ್ಮಾರ, ಹಾರ್ಮೋನ್‌ ಬದಲಿ ಚಿಕಿತ್ಸೆಯಲ್ಲಿ ಬಳಸಲಾಗುವ ಕೆಲವು ಔಷಧಗಳು ಸಹ ಕಣ್ಣಿನ ಸೆಳೆತಕ್ಕೆ ಕಾರಣ ಆಗಬಹುದಾದ ಸಾಧ್ಯತೆ ಇರುತ್ತದೆ.

*ಇದು ಯಾವುದಾದರೂ ದೀರ್ಘಕಾಲದ ಕಣ್ಣಿನ ಸಮಸ್ಯೆಗೆ ಸಂಬಂಧಿಸಿದೆಯೇ?
ಹೌದು, ಕಣ್ಣಿನ ಸೆಳೆತ, ಕಣ್ಣಿನ ಶುಷ್ಕತೆ, ಕಣ್ಣಿನ ರೆಪ್ಪೆಯ ಉರಿಯೂತ, ಕಂಜಂಕ್ಟಿವಿಟೀಸ್ (ಪಿಂಕ್ ಐ),  ಕಣ್ಣುಗುಡ್ಡೆಯ ಪರಿವರ್ತನ (ಎನ್‌ಟ್ರೊಪಿಯನ್), ಕಣ್ಣಿನ ಉರಿಯೂತದಂತಹ (ಯುವೆಯ್ಟಿ) ಕಣ್ಣಿನ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿರುತ್ತದೆ.

*ವೈದ್ಯರನ್ನು ಯಾವಾಗ ಕಾಣಬೇಕು?
ಇದು ಕಣ್ಣಿನ ರೋಗವಲ್ಲ. ಯಾವುದೇ ರೀತಿಯ ನೋವು ಇರುವುದಿಲ್ಲವಾದರೂ ಒಂದು ರೀತಿಯ ಅಸಮಾಧಾನವನ್ನು ಉಂಟು ಮಾಡುತ್ತದೆ. ಹೀಗಾಗಿ, ಅನೇಕ ದಿನಗಳವರೆಗೆ ಇದೇ ಸ್ಥಿತಿ ಮುಂದುವರಿದಲ್ಲಿ ವೈದ್ಯರನ್ನು ಕಾಣುವುದು ಒಳ್ಳೆಯದು.
ಸಾಮಾನ್ಯವಾಗಿ ಕೆಲವು ಗಂಟೆಗಳಲ್ಲಿ ಇದು ತಾನಾಗಿಯೇ ಅದೃಶ್ಯವಾಗುತ್ತದೆ. ಈ ಕೆಳಗಿನ ಸಂದರ್ಭಗಳು ಎದುರಾದರೆ ವೈದ್ಯರನ್ನು ಕಾಣಲೇಬೇಕಾಗುತ್ತದೆ.
* ಕೆಲವು ದಿನ ಅಥವಾ ವಾರಗಳು ಕಳೆದರೂ ಕಣ್ಣಿನ ಸೆಳೆತ ನಿಲ್ಲದೇ ಹೋದಾಗ ಅಥವಾ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋದಾಗ.
* ಸೆಳೆತ ಉಂಟಾದ ಪ್ರತಿ ಬಾರಿಯೂ ಕಣ್ಣಿನ ರೆಪ್ಪೆ ಸಂಪೂರ್ಣವಾಗಿ ಮುಚ್ಚಿದಾಗ.
* ಕಣ್ಣು ಮಾತ್ರವಲ್ಲದೆ, ಮುಖದ ಇತರ ಭಾಗಗಳಲ್ಲೂ ಸೆಳೆತ ಕಾಣಿಸಿಕೊಂಡಾಗ.
* ಕಣ್ಣು ಕೆಂಪಾಗುವುದು, ಊದಿಕೊಳ್ಳುವುದು ಸೇರಿದಂತೆ ಯಾವುದೇ ರೀತಿಯ ತೀವ್ರ ಸಮಸ್ಯೆ ಕಂಡುಬಂದಾಗ.

*ಚಿಕಿತ್ಸೆ ಮತ್ತು ಪರಿಹಾರಗಳನ್ನು ತಿಳಿಸಿ.
* ಮೊದಲು ಮಾನಸಿಕ ಒತ್ತಡ ಹಾಗೂ ಉದ್ವೇಗವನ್ನು ನಿಯಂತ್ರಿಸಿಕೊಳ್ಳಿ. ಸರಿಯಾದ ವಿಶ್ರಾಂತಿಯಿಂದ ಇದು ಸಾಧ್ಯ.
* ಮದ್ಯಪಾನ– ಧೂಮಪಾನದ ಚಟ ಇರುವವರು ತ್ಯಜಿಸಬೇಕು.
* ತುಂಬಾ ಹೆಚ್ಚು ಹೊತ್ತು ಟಿ.ವಿ. ನೋಡುವುದು ಅಥವಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದನ್ನು ತಪ್ಪಿಸಬೇಕು.
* ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು.
* ಶುಷ್ಕ ಕಣ್ಣು ಅಥವಾ ಕಣ್ಣಿನ ಉರಿಯೂತಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಕಣ್ಣಿನ ಸೆಳೆತ ತಾನಾಗಿಯೇ ಗುಣವಾಗುತ್ತದೆ.
* ಪ್ರಾಥಮಿಕ ಹಂತದ ಕಣ್ಣಿನ ಸೆಳೆತವನ್ನು ತಡೆಯಲು ಕೆಲವು ಔಷಧಿಗಳೂ ಇವೆ.
* ತೀರಾ ಗಂಭೀರ ಸ್ವರೂಪದ ಕಣ್ಣಿನ ಸೆಳೆತಕ್ಕೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ.

Comments