ನಾಟ್ಯ ನಮನ

ಕರ್ನಾಟಕ ಕಲಾ ತಿಲಕ ಪದ್ಮಿನಿ ರಾವ್‌ ಅವರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ನೃತ್ಯ ದಿಶಾ ಟ್ರಸ್ಟ್, ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿತ್ತು.

ಕರ್ನಾಟಕ ಕಲಾ ತಿಲಕ ಪದ್ಮಿನಿ ರಾವ್‌ ಅವರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ನೃತ್ಯ ದಿಶಾ ಟ್ರಸ್ಟ್, ನೃತ್ಯ ಸಂಭ್ರಮ ಕಾರ್ಯಕ್ರಮವನ್ನು ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿತ್ತು.

ಭರತನಾಟ್ಯ ಕಲಾಕ್ಷೇತ್ರದಲ್ಲಿ ಪದ್ಮಿನಿ ಅವರ ಸಾಧನೆಯನ್ನು ನೆನಪಿಸುವ ಕಾರಣದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ 54 ಉದಯೋನ್ಮುಖ ಯುವ ಕಲಾವಿದರು ನೃತ್ಯ ಪ್ರದರ್ಶಿಸಿದರು. ಗಣೇಶನ ಹಾಡಿಗೆ ದರ್ಶಿನಿ ಮಂಜುನಾಥ್‌ ನೃತ್ಯ ಮಾಡುವ ಮೂಲಕ ನೃತ್ಯ ಸಂಭ್ರಮಕ್ಕೆ ನಾಂದಿ ಹಾಡಿದರು. ಆದಿತಾಳದಲ್ಲಿ ರಾಗ ಗಂಭೀರನಾಟದ ಮಲ್ಲರಿ ನೃತ್ಯಕ್ಕೆ ಹೆಜ್ಜೆ ಹಾಕಿದ ಅವರು ಶಿವನ ತಾಂಡವ ಹಾಗೂ ಪಾರ್ವತಿಯ ಲಾಸ್ಯ ಭಾವವನ್ನು ಅಭಿನಯಿಸಿದರು. ಮಹಿಷಾಸುರ ಮರ್ದಿನಿಯಲ್ಲಿ ದೇವಿಯ ಉಗ್ರ ರೂಪವನ್ನು ಬಿಂಬಿಸಲಾಯಿತು.

ಟ್ರಸ್ಟ್‌ ವಿದ್ಯಾರ್ಥಿಗಳು ರಾಧಾ ಮಾಧವರ ಕುರಿತಾದ ನೃತ್ಯಕ್ಕೆ ಹೆಜ್ಜೆ ಹಾಕಿದರು. ಇದೇ ಸಂದರ್ಭದಲ್ಲಿ ದರ್ಶಿನಿ ಮಂಜುನಾಥ್‌ ಅವರ ನಿರ್ದೇಶನದ ‘ಕರುನಾಡ ಹಿರಿಮೆ’ ನೃತ್ಯ ನಾಟಕವನ್ನು ಪ್ರದರ್ಶಿಸಲಾಯಿತು. ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಪಂಪ, ರಾಘವಾಂಕ, ಹರಿಹರ, ಸರ್ವಜ್ಞರಿಂದ ಹಿಡಿದು ಕವಿ ಕುವೆಂಪು ಅವರವರೆಗಿನ ಶ್ರೇಷ್ಠರ ಸಾಧನೆಗಳನ್ನು ಈ ನೃತ್ಯ ನಾಟಕದಲ್ಲಿ ಬಿಂಬಿಸಲಾಗಿದೆ.

ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹಿಳಾ ಸಾಧಕಿಯರ ಪಾತ್ರಗಳು ಪ್ರೇಕ್ಷಕರನ್ನು ರಂಜಿಸಿದವು. ಕಂಸಾಳೆ ನೃತ್ಯವನ್ನೂ ಈ ನಾಟಕದಲ್ಲಿ ಸೇರಿಸುವ ಮೂಲಕ ದರ್ಶಿನಿ ವಿನೂತನ ಪ್ರಯೋಗವನ್ನು ಮಾಡಿದ್ದರು. ದಿಶಾ ಮಂಜುನಾಥ್‌, ಶಾಲಿನಿ, ರಾಜೇಶ್‌, ಪ್ರೇರಣಾ, ಛಾಯಾ, ಯಶಸ್ವಿನಿ, ವರ್ಷಿಣಿ, ರಮ್ಯಾ ಆರ್‌, ರಾಶಿ, ಕ್ಷಿತಿಜಾ, ಜೀವಿತಾ, ದೀಕ್ಷಾ, ಕುಸುಮಾ, ಸ್ನೇಹಾ, ಧ್ರುವ, ಚರಿಷ್ಮಾ, ಪರಿಣಿತಾ, ಕೀರ್ತನಾ, ನೂಪುರ, ಐಶ್ವರ್ಯಾ ಮುಂತಾದವರು ನೃತ್ಯ ಪ್ರದರ್ಶನ ನೀಡಿದರು. ಕರುನಾಡ ಹಿರಿಮೆ ನೃತ್ಯ ನಾಟಕದ ಸಂಗೀತ ಸಂಯೋಜನೆಯನ್ನು ವಿದ್ವಾನ್‌ ರಮೇಶ್‌ ಚಡಗ ನಿರ್ವಹಿಸಿದ್ದರು. ಜನಾರ್ದನ ರಾವ್‌ (ಮೃದಂಗ), ವಿದ್ವಾನ್‌ ಜಯರಾಂ (ಕೊಳಲು), ಡಾ. ನಟರಾಜ್‌ ಮೂರ್ತಿ (ವಯಲಿನ್‌), ವಿದ್ವಾನ್‌ ಕಾರ್ತಿಕ್‌ ಹೆಬ್ಬಾರ್‌ (ರಿದಂಪ್ಯಾಡ್‌) ಸಹಕರಿಸಿದರು.

ಕಾರ್ಯಕ್ರಮದಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಿಜಯಾ ಆಂಜನೇಯ, ವಸಂತ ಲಕ್ಷ್ಮಿ, ಡಾ. ಸೂರ್ಯಪ್ರಸಾದ್‌, ಜೋಗಿಲ ಸಿದ್ಧರಾಜು ಹಾಗೂ ಕಾರ್ಪೋರೇಟರ್‌ ಪಿ. ಧನಂಜಯ ಭಾಗವಹಿಸಿದ್ದರು.

Comments