ಹೀಗಿರಲಿ ಗ್ರಂಥಾಲಯ ನಿರ್ವಹಣೆ

ಮ್ಯಾನೇಜ್‌ಮೆಂಟ್‌ನಂಥ ವಿಷಯಗಳಿಗೆ ಸಮಕಾಲೀನದೊಂದಿಗೆ ಸ್ಪಂದಿಸುವ ಗ್ರಂಥಾಲಯ ವ್ಯವಸ್ಥೆ ಅತ್ಯಗತ್ಯ. ಮ್ಯಾನೇಜ್ಮೆಂಟ್‌ ಸಂಸ್ಥೆಯ ಗ್ರಂಥಾಲಯಗಳು ಇದೇ ಕಾರಣದಿಂದ ಉಳಿದೆಲ್ಲ ಗ್ರಂಥಾಲಯಗಳಿಗಿಂತಲೂ ಭಿನ್ನವಾದ ಸಾಲಿನಲ್ಲಿ ನಿಲ್ಲುತ್ತವೆ.  

ಮಾಹಿತಿ ಸಂಗ್ರಹಣೆಗೆ ಸಹಾಯ ಮಾಡುವುದೇ ಗ್ರಂಥಾಲಯದ ಮೂಲ ಕರ್ತವ್ಯ. ಕೊಠಾರಿ ಆಯೋಗವು ಕೇವಲ ಪುಸ್ತಕಗಳ ಸಂಗ್ರಹವು ಗ್ರಂಥಾಲಯವಾಗಲಾರದು ಎಂದು ಹೇಳಿದೆ. ಇಂದು ಮಾಹಿತಿ-ತಂತ್ರಜ್ಞಾನದ ಪ್ರಭಾವದಿಂದ ಗ್ರಂಥಾಲಯವು ತನ್ನ ಸೇವೆ ಹಾಗೂ ಕಾರ್ಯಕ್ಷಮತೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದುಕೊಂಡಿದೆ. 

ಮಾಹಿತಿಯ ಆಯ್ಕೆ, ಸದುದ್ದೇಶ, ನಿರ್ವಹಣೆ
ನಿರ್ವಹಣಾ ಗ್ರಂಥಾಲಯಗಳು ಅತಿ ಹೆಚ್ಚು ಓದುಗರನ್ನು ತೃಪ್ತಿಪಡಿಸುವ ದೃಷ್ಟಿಕೋನದಲ್ಲಿಟ್ಟುಕೊಂಡು ಮಾಹಿತಿ ಆಯ್ಕೆಯಲ್ಲಿ ಓದುಗರ ಸಮಂಜಸ ಬೇಡಿಕೆಗಳು ಮತ್ತು ಗುಣಮಟ್ಟದ ಸಂಪನ್ಮೂಲ ಸಂಗ್ರಹಿಸಬೇಕು.  ಸಮೃದ್ಧ, ಗುಣಾತ್ಮಕ ಮಾಹಿತಿಯ ಆಯ್ಕೆಗೆ ಒತ್ತು ನೀಡಬೇಕು. ವಿದ್ಯಾರ್ಥಿಯು ಔದ್ಯೋಗೀಕರಣ, ಜಾಗತೀಕರಣ ಹಾಗೂ ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಬೇಕಾದ ಆರ್ಥಿಕ ನಿರ್ವಹಣೆ, ಮಾನವ ಸಂಪನ್ಮೂಲ, ಮಾರುಕಟ್ಟೆ ಅಧ್ಯಯನ, ಸ್ವಯಂ ಉದ್ಯೋಗ ಮುಂತಾದ ವಿಷಯಗಳ ಮೇಲೆ ಅತೀ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಆದುದರಿಂದ ಗ್ರಂಥಾಲಯದ ಮಾಹಿತಿ ವಿಸ್ತರಣೆಯು ಕಲಿಕೆಗೆ ಅಭಿರುಚಿಗೆ, ಚಿಂತನಶೀಲತೆ, ತಂತ್ರಗಾರಿಕೆ, ಯೋಜನಾಅಧ್ಯಯನ, ಬೌದ್ಧಿಕ ಸಾಮರ್ಥ್ಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ  ಅನುಕೂಲವಾಗುವ ಮಾಹಿತಿಯನ್ನು ಪೂರೈಸುವಂತಾಗಬೇಕು.

ಡಿಜಿಟಲ್ ಕಲಿಕಾ ಸಂಪನ್ಮೂಲ ಅಳವಡಿಕೆ
ಮ್ಯಾನೇಜ್‌ಮೆಂಟ್ ಪಠ್ಯ ವಿಷಯಗಳು ಕೇವಲ ಪಠ್ಯ ಪುಸ್ತಕಗಳಿಂದ ದೊರಕುವುದಿಲ್ಲ.  ಇ- ಜರ್ನಲ್‌ಗಳು, ದೃಶ್ಯಮಾಧ್ಯಮಗಳು, ಕಂಪೆನಿ- ಡಾಟಾಬೇಸ್‌ , ಕೇಸ್ ಸ್ಟಡೀಸ್‌ಗಳು, ಮ್ಯಾನೇಜ್‌ಮೆಂಟ್ ಗೇಮ್‌ಗಳು ಮುಂತಾದ ಕಲಿಕಾ ಸಾಧನಗಳನ್ನ ದೊರಕಿಸಬೇಕು. 
ಗ್ರಂಥಾಲಯವು ಕಮರ್ಶಿಯಲ್ ಹಾಗೂ ಸ್ವತಂತ್ರ ತಂತ್ರಾಂಶ (ಓಪನ್ ಸೋರ್ಸ್) ಬಳಕೆ ಮಾಡುವುದರ ಮೂಲಕ ವಿದ್ಯಾರ್ಥಿಗ ಪ್ರೊಜೆಕ್ಟ್ ರಿಪೋರ್ಟ್‌ಗಳು, ಸಂಶೋಧನಾಕೃತಿ, ಅಧ್ಯಾಪಕರು ಅಭಿವೃದ್ಧಿಪಡಿಸಿದ ಬೋಧನಾ ಕಲಿಕಾ ವಿಷಯಗಳ ಟಿಪ್ಪಣಿಗಳು ಮುಂತಾದ ಪರಾಮರ್ಶನಾ ಮಾಹಿತಿಯನ್ನು ಇಲೆಕ್ಟ್ರಾನಿಕ್ ಟೆಕ್ಸ್ಟ್‌ಗಳ ರೂಪದಲ್ಲಿ ಸಂಗ್ರಹಿಸಿ ಡಿಜಿಟಲ್ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಬೇಕು. ಮುಖ್ಯವಾಗಿ ಇಲ್ಲಿ ಯಾವುದೇ ರೀತಿಯ ಕೃತಿಚೌರ್ಯ ಮತ್ತು ಕಾಪಿರೈಟ್ ವಿಷಯಗಳ ಬಗ್ಗೆ ಗಮನಹರಿಸಬೇಕು. ಗ್ರಂಥಾಲಯದ ಬೆಳವಣಿಗೆಯಲ್ಲಿ ಡಿಜಿಟಲ್ ಮಾಹಿತಿ ಸೇವೆಯನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡಲ್ಲಿ ಕಲಿಕಾ ವಿಷಯಗಳಲ್ಲಿ ಗುರುತರ ಬದಲಾವಣೆ ತಂದುಕೊಳ್ಳಬಹುದು.

ಗ್ರಂಥಾಲಯದ ನಿರ್ವಹಣಾ ಪ್ರಕ್ರಿಯೆ
ಇಂದು ಬಹುತೇಕ ಗ್ರಂಥಾಲಯಗಳು ಸಂಗ್ರಹಿಸಿದ ಪುಸ್ತಕರೂಪದ, ಡಿಜಿಟಲ್‌ರೂಪದ ಮಾಹಿತಿಯನ್ನು ಕಮರ್ಶಿಯಲ್ ಸಾಫ್ಟವೇರ್ ಅಥವಾ ಸ್ವತಂತ್ರ ತಂತ್ರಾಂಶ (ಓಪನ್‌ಸೋರ್ಸ್)ಗಳ ಮೂಲಕ ಗಣಕೀಕರಣಗೊಳಿಸಿವೆ. ಇದರಿಂದ ಗ್ರಂಥಾಲಯದ ದೈನಂದಿನ ಕಾರ್ಯ ಚಟುವಟಿಕೆಗಳು ಸುಗಮವಾಗಿರುತ್ತವೆ. ಇತ್ತೀಚಿಗೆ ಅನೇಕ ಗ್ರಂಥಾಲಯಗಳ ಕ್ಯಾಟಲಾಗ್‌ಗಳು ಅಂತರ್ಜಾಲದಲ್ಲಿ ಲಭ್ಯ ಇವೆ. ಇದರಿಂದ ಸಮಯದ ಉಳಿತಾಯವಾಗುತ್ತದೆ. ಇತ್ತೀಚಿನ ಲೈಬ್ರರಿ ಆಫ್ ಕಾಂಗ್ರೆಸ್ ಹೊರತಂದಿರುವ ಸಂಯೋಜಿತ ಮಾಹಿತಿ ದಾಖಲೆ ವಿವರಗಳುಳ್ಳ ಕ್ಯಾಟಲಾಗ್ ಪದ್ಧತಿ, ’ರಿಸೋರ್ಸ್ ಡಿಸ್ಕ್ರಿಪ್ಷನ್ ಆಂಡ್ ಅಕ್ಸೆಸ್’ ವಿಧಾನ ಅಳವಡಿಸಿಕೊಳ್ಳಬೇಕು. ಗ್ರಂಥಾಲಯದ ಸಂಪೂರ್ಣ ಮಾಹಿತಿಯನ್ನು ಒಪನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್‌ನಲ್ಲಿ ಅಳವಡಿಸಿ ಅಭಿವೃದ್ಧಿಪಡಿಸಿಕೊಂಡಲ್ಲಿ ಓದುಗರಿಗೆ ಮಾಹಿತಿಯನ್ನು ಹುಡುಕಲು ತುಂಬಾ ಸುಲಭ.

ವಿಷಯಾಧಾರಿತ ಸಂಪನ್ಮೂಲಗಳ ಬ್ಲಾಗ್
  ಅಂತರ್ಜಾಲದಲ್ಲಿ ಲಭ್ಯವಿರುವ ಈ ಸೊಷಿಯಲ್ ಮಾಧ್ಯಮಗಳನ್ನು ಉಪಯೋಗಿಸಿ ಗ್ರಂಥಾಲಯಗಳು ಸ್ವತಂತ್ರವಾಗಿ ಶಿಕ್ಷಣಕ್ಕೆ ಉಪಯುಕ್ತವಾದ ಮಾಹಿತಿಯನ್ನು ದಾಖಲಿಸಬೇಕು. ಮ್ಯಾನೇಜ್‌ಮೆಂಟ್ ಅಧ್ಯಯನದಲ್ಲಿ ಪ್ರಮುಖ ಸಾಧನೆ ಮಾಡಿದ ಮ್ಯಾನೇಜ್‌ಮೆಂಟ್ ನಾಯಕರ ಜೀವನ ವೃತ್ತಾಂತ, ಕೃತಿಗಳ ವಿವರ, ಪ್ರಸ್ತುತ ಮಾರುಕಟ್ಟೆಗೆ ಸಂಬಂಧಿಸಿದ ವಿವರ, ಗ್ರಂಥಾಲಯಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಪುಸ್ತಕಗಳ ವಿವರ ಮತ್ತು  ಸಾರಾಂಶ ಅಂತರ್ಜಾಲದಲ್ಲಿ ಲಭ್ಯವಿರುವ ಉಪಯುಕ್ತ ಲೇಖನಗಳು, ನಿರ್ವಹಣಾ ಚರ್ಚೆಗಳು ವ್ಯಕ್ತಿತ್ವವನ್ನು ಪ್ರೇರಣೆ ನೀಡುವ ಉಲ್ಲೇಖನಗಳನ್ನು ಪ್ರಕಟಿಸಬೇಕು. 

ಗ್ರಂಥಾಲಯ ಬಳಕೆಯ ಪ್ರೇರಣೆ
ಗ್ರಂಥಾಲಯವನ್ನು ಶೈಕ್ಷಣಿಕವಾಗಿ ಉಪಯುಕ್ತ ರೀತಿಯಲ್ಲಿ ಬಳಸುವ ಬಗ್ಗೆ ಓದುಗನಿಗೆ ತರಬೇತಿ ನೀಡಬೇಕು.   ಬೋಧನಾ ಕಲಿಕಾ ಮಾಹಿತಿ ಸಮರ್ಪಕವಾಗಿ ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳ ಆಯ್ಕೆಗೆ ಮುಕ್ತದ್ವಾರ ವ್ಯವಸ್ಥೆಯನ್ನು ಕಲ್ಪಿಸಬೇಕು (ಶಿಕ್ಷಣ ಆಯೋಗದ ಶಿಫಾರಸ್ಸು) ಇವರಿಂದ ತಮಗೆ ಇಚ್ಛಿತ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಬಹುದು. ಗ್ರಂಥಾಲಯಕ್ಕೆ ಹೆಚ್ಚಿನ ಮಾಹಿತಿ ಸಂಪನ್ಮೂಲಗಳ ಅಗತ್ಯ ಕಂಡುಬಂದಲ್ಲಿ ಸಂಸ್ಥೆಯ ಗ್ರಂಥಾಲಯ ಅಭಿವೃದ್ಧಿ ಸಮಿತಿಯು ಕೂಡಲೇ ಸ್ಪಂದಿಸಬೇಕು. 

ಉತ್ತಮ ಗ್ರಂಥಪಾಲಕರಾಗುವುದು ಹೇಗೆ?
ಗ್ರಂಥಪಾಲಕರು ಓದುಗರ ಮತ್ತು ಮಾಹಿತಿಯ ಆಗರಗಳ ನಡುವಿನ ಸೇತುವೆಯಾಗಿರುತ್ತಾರೆ. ಓದುಗರ ನಡುವೆ ತಾರತಮ್ಯ ತೋರಬಾರದು. ಎಲ್ಲರ ಅವಶ್ಯಕತೆಗಳಿಗೆ ಸಮನಾದ ಪ್ರಾಮುಖ್ಯತೆ ನೀಡಿ ಸೌಲಭ್ಯ ಒದಗಿಸಬೇಕು. ಈಗಿನ ಅಗತ್ಯವನ್ನು ಪರಿಶೀಲಿಸಿ  ಸೇವೆ ಒದಗಿಸಬೇಕು.. ಗ್ರಂಥಾಲಯದಲ್ಲಿ ಇರುವ ಮಾಹಿತಿಯು ದುರುಪಯೋಗ ಆಗದಂತೆ  ಎಚ್ಚರಿಕೆ ವಹಿಸಬೇಕು.  ಕಾಪಿರೈಟ್ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಗಮನ ವಹಿಸಬೇಕು ಹಾಗೂ ಲೇಖಕರ ಪೂರ್ವಾನುಮತಿ ಪಡೆಯುವ ಮೂಲಕ ಮಾಹಿತಿಯ ಗೌಪ್ಯ ಮತ್ತು ಕಾನೂನನ್ನು ಗೌರವಿಸಬೇಕು.
l

Comments