ಗುವಾಹಟಿ

ಅಸ್ಸಾಂ: ಹಳಿ ತಪ್ಪಿದ ರೈಲು, 45 ಮಂದಿಗೆ ಗಾಯ

 ಅಸ್ಸಾಂ ರಾಜ್ಯದ ಗುವಾಹಟಿ ಬಳಿ ಎಕ್ಸ್ ಪ್ರೆಸ್ ರೈಲಿನ ಒಂಬತ್ತು ಬೋಗಿಗಳು ಹಳಿ ತಪ್ಪಿದ ಪರಿಣಾಮ ಸುಮಾರು 45 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುವಾಹಟಿ (ಐಎಎನ್ ಎಸ್): ಅಸ್ಸಾಂ ರಾಜ್ಯದ ಗುವಾಹಟಿ ಬಳಿ ಎಕ್ಸ್ ಪ್ರೆಸ್ ರೈಲಿನ ಒಂಬತ್ತು ಬೋಗಿಗಳು ಹಳಿ ತಪ್ಪಿದ ಪರಿಣಾಮ ಸುಮಾರು 45 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಶಾನ್ಯ  ಗಡಿನಾಡು ರೈಲ್ವೇಯ ಅಜೂರಿ  ಮತ್ತು ಜಾಗಿರೋಡ್ ರೈಲ್ವೇ ನಿಲ್ದಾಣಗಳ ಮಧ್ಯೆ ಬೆಳಗಿನ ಜಾವ 2.15ಕ್ಕೆ ಅವಘಡ ಸಂಭವಿಸಿದೆ.

ಮಂಗಳವಾರ ರಾತ್ರಿ ನಾಗಲ್ಯಾಂಡ್ ನಿಂದ ಹೊರಟಿದ್ದ ರೈಲು ಬುಧವಾರ ಗುವಾಹಟಿಯನ್ನು ತಲುಪಬೇಕಾಗಿತ್ತು. ಅವಘಡದಲ್ಲಿ 45 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸಾವು ಸಂಭವಿಸಿಲ್ಲ ಎಂದು ಈಶಾನ್ಯ ಗಡಿನಾಡು ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್. ಲಾಹಿರಿ ತಿಳಿಸಿದ್ದಾರೆ.

ರೈಲ್ವೇ ಅಧಿಕಾರಿಗಳು ಎಂಟು ರೈಲುಗಳ ಸಂಚಾರ ರದ್ದುಗೊಳಿಸಿದ್ದಾರೆ. ನವದೆಹಲಿಯಿಂದ ಹೊರಟ ರಾಜಧಾನಿ ಎಕ್ಸ್ ಪ್ರೆಸ್  ಸೇರಿದಂತೆ ಐದು ರೈಲುಗಳು ವಿವಿಧ ನಿಲ್ದಾಣಗಳಲ್ಲಿ ಸ್ಥಗಿತಗೊಂಡಿವೆ. ರೈಲು ಮಾರ್ಗ ದುರಸ್ತಿಯಾದ ಮೇಲಷ್ಟೇ ರೈಲು ಸಂಚಾರ ಪುನರಾರಂಭಗೊಳ್ಳಲಿದೆ.

Comments