ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ನಾಲ್ವರು ಕನ್ನಡಿಗರಿಗೆ ‘ರಜತ ಕಮಲ’

2013ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ­ಗಳನ್ನು ಪ್ರಕಟಿಸಲಾಗಿದ್ದು ನಿರ್ದೇಶಕ­ರಾದ ಪಿ. ಶೇಷಾದ್ರಿ, ಗಿರೀಶ್‌ ಕಾಸರ­ವಳ್ಳಿ, ನಿರ್ಮಾಪಕ ಬಸಂತ ಕುಮಾರ್‌ ಹಾಗೂ ಚಿತ್ರಕತೆಗಾರ ಪಂಚಾಕ್ಷರಿ ಅವರಿಗೆ ‘ರಜತ ಕಮಲ’ಗಳು ಬಂದಿವೆ.  

ನವದೆಹಲಿ (ಪಿಟಿಐ): 2013ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ­ಗಳನ್ನು ಪ್ರಕಟಿಸಲಾಗಿದ್ದು ನಿರ್ದೇಶಕ­ರಾದ ಪಿ. ಶೇಷಾದ್ರಿ, ಗಿರೀಶ್‌ ಕಾಸರ­ವಳ್ಳಿ, ನಿರ್ಮಾಪಕ ಬಸಂತ ಕುಮಾರ್‌ ಹಾಗೂ ಚಿತ್ರಕತೆಗಾರ ಪಂಚಾಕ್ಷರಿ ಅವರಿಗೆ ‘ರಜತ ಕಮಲ’ಗಳು ಬಂದಿವೆ.

‘ಡಿಸೆಂಬರ್‌ 1’ ಕನ್ನಡ ಚಿತ್ರವು ಮೂರು ಪ್ರಶಸ್ತಿಗಳಿಗೆ ಪಾತ್ರವಾಗಿದೆ. ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರಕತೆಗಾರ (ಒರಿಜಿನಲ್‌) ಪ್ರಶಸ್ತಿಯನ್ನು ಪಿ. ಶೇಷಾದ್ರಿ ಅವರು ಪಡೆದಿದ್ದಾರೆ. ಅವರು ರಜತ ಕಮಲದೊಂದಿಗೆ ರೂ. 50 ಸಾವಿರ ನಗದು ಪಡೆಯಲಿದ್ದಾರೆ.

ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು (ಕನ್ನಡ ವಿಭಾಗ), ಮನ್ನಣೆ ಪಡೆದಿದ್ದು ನಿರ್ದೇಶನ­ಕ್ಕಾಗಿಯೂ ಶೇಷಾದ್ರಿ ‘ರಜತ ಕಮಲ’­ದೊಂದಿಗೆ ರೂ. 1 ಲಕ್ಷ ಪಡೆಯಲಿದ್ದಾರೆ. ಇವರೊಂದಿಗೆ ನಿರ್ಮಾಪಕ ಬಸಂತ­ಕುಮಾರ್‌ ‘ರಜತ ಕಮಲ’ದ ಜತೆ ರೂ. 1 ಲಕ್ಷ ನಗದು ಬಹುಮಾನ ಪಡೆಯುವರು.

ಕನ್ನಡ ಸಿನಿಮಾ ‘ಪ್ರಕೃತಿ’ಗಾಗಿ ಅತ್ಯು­ತ್ತಮ ಚಿತ್ರಕತೆಗಾರ ಪ್ರಶಸ್ತಿಯು ಪಂಚಾಕ್ಷರಿ ಅವರಿಗೆ ಸಂದಿದೆ. ಹಿರಿಯ ಸಾಹಿತಿ ಯು.ಆರ್‌. ಅನಂತಮೂರ್ತಿ ಅವರ ಸಾಹಿತ್ಯ ಆಧರಿಸಿದ ‘ಅನಂತ­ಮೂರ್ತಿ–ನಾಟ್‌ ಎ ಬಯಾಗ್ರಫಿ.. ಬಟ್‌ ಎ ಹೈಪೋಥಿಸಿಸ್‌’ ಇಂಗ್ಲಿಷ್‌ ಸಾಕ್ಷ್ಯಚಿತ್ರದ ನಿರ್ದೇಶನಕ್ಕಾಗಿ ಗಿರೀಶ್‌ ಕಾಸರವಳ್ಳಿ  ಅವರು ತೀರ್ಪುಗಾರರ ವಿಶೇಷ ಪ್ರಶಸ್ತಿ ಹಂಚಿಕೊಂಡಿದ್ದಾರೆ.

‘ಶಾಹಿದ್‌’ ಚಿತ್ರದ ನಟನೆಗಾಗಿ ರಾಜ್‌ಕುಮಾರ್‌ ರಾವ್‌ ಮತ್ತು ಮಲಯಾಳಂ ಚಿತ್ರ ‘ಪೆರಾರಿಯಾ­ಥವರ್‌’ದ ನಟನೆಗಾಗಿ ಸೂರಜ್‌ ವೆಂಜರಮೂಡು ಅವರು ಜಂಟಿ­ಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಂಚಿಕೊಂಡಿದ್ದಾರೆ. ‘ಶಾಹಿದ್‌’ ನಿರ್ದೇಶಕ ಹನ್ಸಲ್‌ ಮೆಹ್ತಾ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೇ 3ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕವಿ ಗುಲ್ಜಾರ್‌ ಅವರಿಗೆ ಅದೇ ದಿನ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Comments