ಗೊತ್ತಿದ್ದ ‘ಸತ್ಯ’ವ ದೃಢಪಡಿಸಿದರೆ?

ಈ‌ಚೆಗೆ ಬಿಡುಗಡೆಯಾದ ಎರಡು ‌ಪುಸ್ತಕ­ಗಳ ಬಗ್ಗೆ ರಾಜಕೀಯ ವಲಯ­ದಲ್ಲಿ ಬಹ­ಳಷ್ಟು ಚರ್ಚೆಗಳು ನಡೆಯು­ತ್ತಿವೆ. ಒಂದು ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌– ದಿ ಮೇಕಿಂಗ್‌ ಅಂಡ್‌ ಅನ್‌ಮೇಕಿಂಗ್‌ ಆಫ್‌ ಮನಮೋಹನ್‌ ಸಿಂಗ್‌’. ಮತ್ತೊಂದು ‘ಕ್ರುಸೇಡರ್‌ ಆರ್‌ ಕಾನ್ಸ್‌­ಪಿರೇಟರ್‌?-ಕೋಲ್ ಗೇಟ್‌ ಅಂಡ್‌ ಅದರ್‌ ಟ್ರೂಥ್ಸ್’...

ಗೊತ್ತಿದ್ದ ‘ಸತ್ಯ’ವ ದೃಢಪಡಿಸಿದರೆ?

ಈ‌ಚೆಗೆ ಬಿಡುಗಡೆಯಾದ ಎರಡು ‌ಪುಸ್ತಕ­ಗಳ ಬಗ್ಗೆ ರಾಜಕೀಯ ವಲಯ­ದಲ್ಲಿ ಬಹ­ಳಷ್ಟು ಚರ್ಚೆಗಳು ನಡೆಯು­ತ್ತಿವೆ. ಒಂದು, ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್‌ ಬಾರು ಬರೆ­ದಿ­ರುವ ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌– ದಿ ಮೇಕಿಂಗ್‌ ಅಂಡ್‌ ಅನ್‌ಮೇಕಿಂಗ್‌ ಆಫ್‌ ಮನಮೋಹನ್‌ ಸಿಂಗ್‌’. ಮತ್ತೊಂದು ಕಲ್ಲಿ­ದ್ದಲು ಸಚಿವಾಲಯದ ನಿವೃತ್ತ  ಕಾರ್ಯದರ್ಶಿ ಪಿ.ಸಿ. ಪಾರೇಖ್‌ ಅವರ ‘ಕ್ರುಸೇಡರ್‌ ಆರ್‌ ಕಾನ್ಸ್‌­ಪಿರೇಟರ್‌?-ಕೋಲ್ ಗೇಟ್‌ ಅಂಡ್‌ ಅದರ್‌ ಟ್ರೂಥ್ಸ್’ ಇವೆರಡೂ ಕೃತಿಗಳು ಸಿಕ್ಕಾ­ಪಟ್ಟೆ ಪ್ರಚಾರದಲ್ಲಿರುವುದರಿಂದ, ಪುಸ್ತಕ ಮಳಿಗೆ­­­ಗಳಲ್ಲಿ ಬಿಸಿ ದೋಸೆಯಂತೆ ಮಾರಾಟ­ವಾಗುತ್ತಿವೆ.

‘ಸಂಜಯ್‌ ಬಾರು ಪುಸ್ತಕ ಬರೆದು ವಿಶ್ವಾಸ ದ್ರೋಹ ಎಸಗಿದ್ದಾರೆ’ ಎಂದು ಮನಮೋಹನ್‌ ಸಿಂಗ್‌ ಅವರ ಪುತ್ರಿ ಆರೋಪಿಸಿದ್ದಾರೆ. ಪ್ರಧಾನಿ ಕಚೇರಿಯೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಆದರೆ, ಅದು ವಿಶ್ವಾಸ ದ್ರೋಹವೂ ಅಲ್ಲ. ‘ಅಧಿಕೃತ ರಹಸ್ಯ ಕಾಯ್ದೆ’ ಉಲ್ಲಂಘನೆಯೂ ಅಲ್ಲ. ರಾಷ್ಟ್ರ­ಪತಿ, ಪ್ರಧಾನಿ ಜತೆ ಒಡನಾಡಿದವರು ಪುಸ್ತಕ ಬರೆದ ಉದಾಹರಣೆಗಳು ಬೇಕಾದಷ್ಟಿವೆ. ಎಂ.ಒ.ಮಥಾಯ್‌, ಪಿ.ಸಿ.ಅಲೆಕ್ಸಾಂಡರ್‌ ಸೇರಿ­ದಂತೆ ಅನೇಕರು ಪುಸ್ತಕ ಬರೆದಿದ್ದಾರೆ. ಆದರೆ, ಯುಪಿಎ–1 ಸರ್ಕಾರದಲ್ಲಿ ಮನಮೋಹನ್‌ ಸಿಂಗ್‌ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್‌ ಆರು ವರ್ಷ ಮೌನವಾಗಿದ್ದು, ಚುನಾ­ವಣೆ ವೇಳೆ ಪುಸ್ತಕ ಬರೆದಿರುವುದು ಸಹಜವಾಗಿ ಅನುಮಾನ ಹುಟ್ಟಿಸುತ್ತದೆ.

ಪುಸ್ತಕ ಪ್ರಕಟಣೆ ಹಿಂದೆ ಉದ್ದೇಶ ಏನೇ ಇದ್ದರೂ, ಯಾವಾಗ ಬರೆಯಬೇಕು. ಅದರೊ­ಳಗೆ ಏನಿರಬೇಕು ಎನ್ನುವುದು ಲೇಖಕರ ಪರಮಾ­ಧಿ­ಕಾರ. ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧ­ಪಟ್ಟ ವಿಷಯ. ‘ಪ್ರಧಾನಿ ಮಾಧ್ಯಮ ಸಲಹೆಗಾರ­ರಾಗಿದ್ದ ವೇಳೆ ಸಾಕಷ್ಟು ಬೆಳವಣಿಗೆಗಳನ್ನು ಕಣ್ಣಾರೆ ಕಂಡಿದ್ದರೂ ಪುಸ್ತಕ ಬರೆಯುವ ಆಲೋ­ಚನೆ ಇರಲಿಲ್ಲ. ಎಲ್ಲ ಬೆಳವಣಿಗೆ ಕುರಿತು ಡೈರಿ ಬರೆಯದಿದ್ದರೂ ಪ್ರಮುಖ ಬೆಳವಣಿಗೆ ಕುರಿತು ಟಿಪ್ಪಣಿ ಮಾಡಿಕೊಂಡಿದ್ದೆ. ಪುಸ್ತಕ ಬರೆಯ­ಬಾ­ರದು ಎಂಬ ಆಲೋಚನೆಯನ್ನು ಬದಲಾಯಿ­ಸಿದ್ದು ಪೆಂಗ್ವಿನ್‌ ಇಂಡಿಯಾ’ ಎಂದು  ಬಾರು ಅವರು ಪುಸ್ತಕದ ಆರಂಭದಲ್ಲಿ ಪ್ರಸ್ತಾಪಿಸಿದ್ದಾರೆ.

ಪುಸ್ತಕದಲ್ಲಿ ಉತ್ಪ್ರೇಕ್ಷೆಗಳಿದ್ದರೂ, ಕುತೂಹಲ­ಕಾರಿ ಅಂಶಗಳಿವೆ. ಎಲ್ಲರಿಗೂ ಗೊತ್ತಿರುವ ಅನೇಕ ಸತ್ಯಗಳಿವೆ. ಮನಮೋಹನ್‌ ಸಿಂಗ್‌ ಅವರ ರಾಜಕೀಯ ಸಾಮರ್ಥ್ಯವನ್ನು ಅರಿತುಕೊಳ್ಳದೆ, ‘ಅಧಿಕಾರವಿಲ್ಲದ ಹೊಣೆಗಾರಿಕೆ ಹೊತ್ತಿದ್ದಾರೆ’ ಎಂದು ಲೇಖಕರು ಅಲವತ್ತುಕೊಂಡಿದ್ದಾರೆ. ಕೃತಿಯಲ್ಲಿ ಸಿಂಗ್‌ ಅವರನ್ನು ವೈಭವೀಕರಿಸ­ಲಾ­ಗಿದೆ. ಅಷ್ಟೇ ಅಲ್ಲ, ಲೇಖಕರು ತಮ್ಮನ್ನೂ ವೈಭವೀ­ಕರಿಸಿ­ಕೊಂಡಿದ್ದಾರೆಂದು ಹತ್ತು ವರ್ಷದಿಂದ ಪ್ರಧಾನಿ ಕಚೇರಿಯನ್ನು ಹತ್ತಿರದಿಂದ ನೋಡುತ್ತಿರುವ ಅನೇಕರು ಟೀಕಿಸುತ್ತಾರೆ.

ಇಡೀ ಪುಸ್ತಕ, ಪ್ರಧಾನಿ ಅವರನ್ನು ಕೇಂದ್ರೀಕರಿಸಿದೆ. ಒಂದೇ ಮಗ್ಗುಲಲ್ಲಿ ನಿಂತು­ಕೊಂಡು ರಾಜಕಾರಣವನ್ನು ನೋಡಿದಂತಿದೆ. ಸಿಂಗ್‌ ಹೆಸರಿಗಷ್ಟೇ ಪ್ರಧಾನಿ. ಅವರಿಗೆ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ಇರಲಿಲ್ಲ. ನಿಜವಾದ ಅಧಿಕಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಮ್ಮಿಶ್ರ ಸರ್ಕಾರ­ದಲ್ಲಿ ಭಾಗಿಯಾಗಿರುವ ಮಿತ್ರ ಪಕ್ಷಗಳ ನಾಯಕರ ಕೈಯಲ್ಲಿತ್ತು ಎಂದು ಪ್ರತಿಪಾದಿಸಲಾ­ಗಿದೆ. ಯುಪಿಎಯಲ್ಲಿ ಎರಡು ಅಧಿಕಾರ ಕೇಂದ್ರಗಳಿವೆ ಎನ್ನುವ ಸಂಗತಿ ಮಾಧ್ಯಮಗಳಲ್ಲಿ ಬೇಕಾದಷ್ಟು ಸಲ ವರದಿಯಾಗಿದೆ. ಅನೇಕ ಸಲ ಮಾಧ್ಯಮ ಪ್ರತಿನಿಧಿಗಳು ನೇರವಾಗಿ ಮನ­ಮೋಹನ್‌ ಸಿಂಗ್‌ ಅವರಿಗೇ ಈ ಪ್ರಶ್ನೆ ಹಾಕಿ­ದ್ದಾರೆ. ಪ್ರಧಾನಿ ಪ್ರತಿ ಸಲವೂ ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಸರ್ಕಾರದ ಮುಖ್ಯಸ್ಥರಿಗಿಂತಲೂ ಪಕ್ಷದ ಮುಖಂಡರ ಕೈಯಲ್ಲಿ ಹೆಚ್ಚು ಅಧಿಕಾರ ಕೇಂದ್ರೀ­ಕೃತ­ವಾಗುವುದು ರಾಜಕೀಯ ಅನಿವಾರ್ಯ. ಅದನ್ನು ತಪ್ಪು ಎಂದು ಹೇಳಲಾಗದು.

ಸೋನಿಯಾ ಪ್ರತಿ ಹಂತದಲ್ಲೂ ಸರ್ಕಾರದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು. ಯಾರನ್ನು ಕೈಬಿಡಬೇಕು. ಯಾರಿಗೆ ಯಾವ ಖಾತೆ ಕೊಡಬೇಕು ಎನ್ನುವ ಸಂದೇಶ ಸೋನಿಯಾ ಅವರಿಂದಲೇ ಬರುತ್ತಿತ್ತು ಎಂದು ಬಾರು ಮಾಡಿರುವ ಆರೋಪ ಸುಳ್ಳಲ್ಲ. ಕಾಂಗ್ರೆಸ್‌ ಪಕ್ಷದ ಬೇರುಗಳಲ್ಲೇ ಈ ಸಂಸ್ಕೃತಿ ಹುದುಗಿದೆ. ಪ್ರಧಾನ ಮಂತ್ರಿಗೆ ಎಲ್ಲ ವಿಷಯ­ದಲ್ಲೂ ಮುಕ್ತ ಸ್ವಾತಂತ್ರ್ಯ ಇರಬೇಕು ಎನ್ನುವುದು ನಿರ್ವಿವಾದ. ಅದನ್ನು ಯಾರೂ ಅಲ್ಲಗಳೆಯ­ಲಾ­ಗದು. ಆದರೆ, ಅಸಾಮಾನ್ಯ ಪರಿಸ್ಥಿತಿಯಲ್ಲಿ ‘ಸಂಯುಕ್ತ ಪ್ರಗತಿ ರಂಗ’ ಮುನ್ನಡೆಸುವ ಜವಾ­ವ್ದಾರಿ ಹೊತ್ತವರ ಮೇಲೂ ಒತ್ತಡಗಳಿರುತ್ತವೆ ಎನ್ನುವುದು ಅಷ್ಟೇ ಸತ್ಯ.

ಮನಮೋಹನ್‌ ಸಿಂಗ್‌ ಪೂರ್ಣ ಪ್ರಮಾಣದ ರಾಜಕಾರಣಿಯಲ್ಲ. ಜನ ನಾಯಕರೂ ಅಲ್ಲ. ಅವರಿಗೆ ಒಂದೇ ಒಂದು ಚುನಾವಣೆ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿಯೇ ಅವರು ಯಾವಾ­ಗಲೂ ರಾಜ್ಯಸಭೆಗೆ ನಾಮಕರಣಗೊಂಡಿದ್ದಾರೆ. ಒಮ್ಮೆ 1999ರಲ್ಲಿ ದೆಹಲಿ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆ. ಆದರೂ ಅವರನ್ನು ಕಾಂಗ್ರೆಸ್‌ ಪಕ್ಷ ಪ್ರಧಾನಿ ಕುರ್ಚಿಯಲ್ಲಿ ಕೂರಿಸಿದೆ. ಇದು ಸ್ವಂತ ಸಾಮರ್ಥ್ಯದಿಂದ ದಕ್ಕಿದ ಹುದ್ದೆಯಲ್ಲ. ಅನಿರೀಕ್ಷಿತವಾಗಿ ಬಂದಿದ್ದು. ಪ್ರಣವ್‌ ಮುಖರ್ಜಿ, ಅರ್ಜುನ್‌ ಸಿಂಗ್‌, ಎ.ಕೆ. ಆಂಟನಿ ಮೊದಲಾದ ಘಟಾನುಘಟಿಗಳನ್ನು ಅಧಿಕಾರದಿಂದ ದೂರವಿಡಲು ಮನಮೋಹನ್‌  ಅವರನ್ನು ಬಳಸಿಕೊಂಡಿದ್ದು. ಯುಪಿಎ ಮಿತ್ರ ಪಕ್ಷಗಳೂ ಸಹಮತ ವ್ಯಕ್ತಪಡಿಸಿದ್ದರಿಂದ  ಸಿಂಗ್‌ ಅವರ ನೇಮಕ ಸುಲಭವಾಯಿತು.  ಅವರ ಜಾಗದಲ್ಲಿ ಬೇರೆ ಯಾರಿದ್ದರೂ ಸರ್ಕಾರ ಉಳಿಯುವುದು ಕಷ್ಟವಾಗುತ್ತಿತ್ತು. ಯುಪಿಎ ಸರ್ಕಾರ ಹತ್ತು ವರ್ಷ ಪೂರೈಸಿರುವುದೇ ಸಿಂಗ್‌ ಎಷ್ಟೊಂದು ರಾಜಿ ಮನೋಭಾವದವರು ಎನ್ನುವುದನ್ನು ಖಚಿತಪಡಿಸುತ್ತದೆ.

ಸೋನಿಯಾ ಅವರಿಗೂ ‘ಸೂತ್ರದ ಗೊಂಬೆ’ ಬೇಕಿತ್ತು. ಅದಕ್ಕೆ ಮನಮೋಹನ್‌ ಸಿಂಗ್‌ ತಯಾ­ರಿದ್ದರು. ಕೈಗೊಂಬೆಗಳಿಗೆ ಮಣೆ ಹಾಕುವುದು ಇದೇ ಮೊದಲಲ್ಲ. ನಿರಂತರವಾಗಿ ನಡೆದು­ಕೊಂಡು ಬಂದಿದೆ. ರಾಜಕೀಯ ಇತಿಹಾಸ ಅವ­ಲೋ­­ಕಿಸಿದರೆ ಇದರ ಅರಿವಾಗುತ್ತದೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ನಿಧನರಾದಾಗ, ಉತ್ತರಾಧಿಕಾರಿ ಯಾರಾಗ­ಬೇಕು ಎನ್ನುವ ಪ್ರಶ್ನೆ ತಲೆದೋರಿತ್ತು. ಮೊರಾರ್ಜಿ ದೇಸಾಯಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಹೆಸರು ಚಲಾವಣೆಗೆ ಬಂತು. ಮೊರಾರ್ಜಿ ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಹಿರಿಯರು. ಆದರೆ, ಅವರು ತಮ್ಮ ಮಾತು ಕೇಳುವುದಿಲ್ಲ ಎಂಬ ಒಂದೇ ಕಾರಣಕ್ಕೆ ಆಗಿನ ‘ಕಾಂಗ್ರೆಸ್‌ ಸಿಂಡಿಕೇಟ್‌’  ಶಾಸ್ತ್ರಿ ಅವರಿಗೆ ಪಟ್ಟ ಕಟ್ಟಿತು.

ಇದೇ ತಂತ್ರ ಶಾಸ್ತ್ರಿ ಮೃತಪಟ್ಟಾಗ ಮತ್ತೊಮ್ಮೆ ಪುನರಾವರ್ತನೆ ಆಯಿತು. ಆಗಲೂ ಮೊರಾರ್ಜಿ ಅವರಿಗೆ ಅವಕಾಶ ತಪ್ಪಿಸಲಾ­ಯಿತು. ಇಂದಿರಾ ಗಾಂಧಿ ಅವರನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಲಾಯಿತು. ಮುಂದೆ ಕಾಮರಾಜ್ ನಾಡರ್‌ ನೇತೃತ್ವದ ಸಿಂಡಿಕೇಟ್‌ಗೆ ಇಂದಿರಾ ತಿರುಗಿ ಬಿದ್ದರು. ಅದೇ ಕೆಲಸವನ್ನು ಮನಮೋಹನ್‌  ಸಿಂಗ್‌ ಮಾಡಬಹುದಿತ್ತು. ಅವರಿಗೆ ಧೈರ್ಯವಿರಲಿಲ್ಲ. ಬಂಡಾಯದ ಮನೋಧರ್ಮ ಪ್ರದರ್ಶಿಸಲು ಇಷ್ಟವಿಲ್ಲದಿದ್ದರೆ, ರಾಜೀನಾಮೆ ಕೊಡಬಹುದಿತ್ತು. ‘ಅಕ್ಕಿ ಮೇಲೂ ಆಸೆ; ನೆಂಟರ ಮೇಲೂ ಪ್ರೀತಿ’ ಎಂಬ ಗಾದೆ ಮಾತಿನಂತೆ ಉಳಿದವರಂತೆ ಅವರೂ ಅವಕಾಶ­ವಾದಿ ರಾಜಕಾರಣ ಮಾಡಿದ್ದಾರೆ.

ಎನ್‌ಡಿಎ ಸರ್ಕಾರದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗೆ ಮನಮೋಹನ್‌ ಸಿಂಗ್‌ ಅವರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅಟಲ್‌ ಸಕ್ರಿಯ ರಾಜಕಾರಣಿ. ನೇರವಾಗಿ ಜನರಿಂದ ಆಯ್ಕೆಯಾಗಿ ಬಂದವರು. ಜನಪ್ರಿಯತೆಯೂ ಕಡಿಮೆ ಇರಲಿಲ್ಲ. ಅದರಿಂದಾಗಿ ಅಧಿಕಾರ ಚಲಾಯಿಸಲು ಸಾಧ್ಯವಾಯಿತು. ಈ ಅಧಿಕಾರ ಬೇಡಿದರೆ ಸಿಗುವುದಿಲ್ಲ. ಅದನ್ನು ಕಸಿದುಕೊಂಡು ಚಲಾಯಿಸುವ ಕಲೆ ಗೊತ್ತಿರಬೇಕು.

ಸಂಜಯ್‌ ಬಾರು ಅವರೇ ಒಂದು ಕಡೆ ಬರೆದಿರುವಂತೆ ಕಾಂಗ್ರೆಸ್‌ ಮೊದಲ ಬಾರಿಗೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದೆ. ಇಷ್ಟೊಂದು ಪಕ್ಷಗಳನ್ನು ಒಟ್ಟುಗೂಡಿಸಿ ಕರೆದೊಯ್ಯುವುದು ಸುಲಭದ ಮಾತಲ್ಲ. ಎಲ್ಲರ ಬೇಡಿಕೆಗಳನ್ನು ಈಡೇರಿಸಬೇಕು. ಎಲ್ಲರನ್ನೂ ಸಂತೃಪ್ತಿಪಡಿಸಬೇಕು. ಸ್ವಲ್ಪ ಹೆಚ್ಚು ಕಡಿಮೆಯಾ­ದರೂ ಸರ್ಕಾರ ಬಿದ್ದು ಹೋಗುವ ಅಪಾಯವಿ­ರುತ್ತದೆ. ವಿರೋಧ ಪಕ್ಷಗಳು ಯಾವಾಗಲೂ ಇಂತಹದೊಂದು ಸಂದರ್ಭಕ್ಕಾಗಿ ತುದಿಗಾಲಲ್ಲಿ ನಿಂತಿರುತ್ತವೆ. ಯುಪಿಎ ಸರ್ಕಾರದ ಪಾಲುದಾರ ಪಕ್ಷಗಳನ್ನು ಸುಲಭವಾಗಿ ನಿಭಾಯಿಸಿಬಿಡ­ಬಹುದು. ಆದರೆ, ಕಾಂಗ್ರೆಸ್‌ ಪಕ್ಷವನ್ನು ನಿಭಾಯಿಸುವುದು ಕಷ್ಟ ಎನ್ನುವ ಕಟು ಸತ್ಯ ಸಂಜಯ್‌ ಅವರಿಗೆ ಗೊತ್ತಿದ್ದ ಮೇಲೂ ಪ್ರಧಾನಿ ಅವರಿಗೆ ಅನ್ಯಾಯವಾಗಿದೆ ಎಂದು ಗೋಳಾಡಿದ್ದಾರೆ.

ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್‌ ಉಳಿಯುವುದು ಕಷ್ಟ. ಪ್ರಜಾಸತ್ತಾತ್ಮಕ ವ್ಯವಸ್ಥೆ­ಯಲ್ಲಿ ಕುಟುಂಬ ರಾಜಕಾರಣ ಒಪ್ಪಲಾಗದಿ­ದ್ದರೂ, ವಾಸ್ತವವನ್ನು ಅರ್ಥ ಮಾಡಿಕೊಳ್ಳ­ಲೇಬೇಕು. ಹಳೇ ಅನುಭವದ ಆಧಾರದ ಮೇಲೆ ಕೆಲವು ಕಾಂಗ್ರೆಸ್‌ ಮುಖಂಡರು ಸೋನಿಯಾ ಅವರನ್ನು ರಾಜಕೀಯಕ್ಕೆ ಬಲವಂತವಾಗಿ ಕರೆತಂದಿದ್ದು. ಇದನ್ನು ಬಾರು ಕೂಡಾ ತಮ್ಮ ಕೃತಿಯಲ್ಲಿ ಒಪ್ಪಿಕೊಂಡಿದ್ದಾರೆ.

ಮನಮೋಹನ್‌ ಸಿಂಗ್‌ ಕೈ ಕೊಳೆ ಮಾಡಿಕೊಳ್ಳದ ಶುದ್ಧ ಹಿನ್ನೆಲೆಯ ಮನುಷ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೂ, ಎರಡನೇ ತಲೆಮಾರಿನ ತರಂಗಾಂತರ ಹಗರಣ, ಕಲ್ಲಿದ್ದಲು ಹಗರಣದ ಮಸಿ ಸರ್ಕಾರಕ್ಕೆ ಅಂಟಿದೆ. ಬೇಹುಗಾರಿಕೆ ಸಂಸ್ಥೆ, ಕೆಲ ಸಚಿವರು ಭ್ರಷ್ಟಾಚಾರ ಮಾಡುತ್ತಿರುವ ಕುರಿತು ಪ್ರಧಾನಿಗೆ ಮೊದಲೇ ಎಚ್ಚರಿಸಿದೆ. ಆದರೂ ಏಕೆ ಅವರು ತಟಸ್ಥರಾ­ಗಿದ್ದರು. ತಕ್ಷಣ ಏಕೆ ಕ್ರಮ ಕೈಗೊಳ್ಳಲಿಲ್ಲ. ಸಚಿವರ ಮೇಲೆ ಕ್ರಮ ಕೈಗೊಳ್ಳದಂತೆ ಅವರಿಗೆ ಅಡ್ಡಿ ಮಾಡಿದವರು ಯಾರು? ಹಗರಣಗಳು ಹೊರ ಬರುತ್ತಿದ್ದಂತೆ ಪ್ರಧಾನಿ ಏಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ. ರಾಜೀ­ನಾ­ಮೆಗೆ ಒತ್ತಡವಿದ್ದರೂ ಏಕೆ ಸುಮ್ಮನಿದ್ದರು ಎಂಬ ಪ್ರಶ್ನೆಗೆ ಮನಮೋಹನ್‌ ಸಿಂಗ್‌ ಅಧಿಕಾರ ಬಿಟ್ಟ ಮೇಲಾದರೂ ಉತ್ತರ ಹೇಳಬೇಕಾಗುತ್ತದೆ.

2009ರ ಚುನಾವಣೆ ಗೆಲುವಿನ ಹಿಂದೆ ಪ್ರಧಾನಿ ಪಾತ್ರವೂ ಇದೆ ಎಂದು ಸಂಜಯ್‌ ಬಾರು ಬರೆದಿದ್ದಾರೆ. ಇದೂ ಚರ್ಚೆ ಆಗ­ಬೇಕಾದ ವಿಷಯ. 1999 ರಲ್ಲಿ ದೆಹಲಿ ದಕ್ಷಿಣದಿಂದ ಗೆಲ್ಲಲಾಗದ ಸಿಂಗ್‌, ಹೇಗೆ ಪಕ್ಷವನ್ನು ದಡ ಮುಟ್ಟಿಸಲು ಸಾಧ್ಯ ಎಂದು ಮನಮೋಹನ್‌ ಸಿಂಗ್‌ ಟೀಕಾಕಾರರು ಕೇಳಿದ್ದಾರೆ. ‘ಆ್ಯಕ್ಸಿಡೆಂಟಲ್‌ ಪ್ರೈಮ್ ಮಿನಿಸ್ಟರ್‌’ ಚುನಾವಣೆ ಸಮಯದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದೆ. ಇದು ಕಾಂಗ್ರೆಸ್‌ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಆದರೆ, ಪಕ್ಷ ಮತ್ತು ಸರ್ಕಾರದ ವರ್ಚಸ್ಸು– ನೈತಿಕ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಬಹುದೇನೊ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

Comments