ತೇಜ್‌ಪಾಲ್ ಜಾಮೀನು ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಜೈಲು ಸೇರಿರುವ ತೆಹೆಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ನಾಲ್ಕು ವಾರದ ಒಳಗೆ ಪ್ರತಿಕ್ರಿಯೆ ನೀಡುವಂತೆ ಗೋವಾ ಪೊಲೀಸರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ನವದೆಹಲಿ (ಐಎಎನ್‌ಎಸ್) : ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಜೈಲು ಸೇರಿರುವ ತೆಹೆಲ್ಕಾ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ನಾಲ್ಕು ವಾರದ ಒಳಗೆ ಪ್ರತಿಕ್ರಿಯೆ ನೀಡುವಂತೆ ಗೋವಾ ಪೊಲೀಸರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ ತೇಜ್‌ಪಾಲ್ ಪರ ವಕೀಲರು, ವಿಚಾರಣೆಗೆ ದೆಹಲಿಗೆ ಹಾಜರಾಗುವುದು ಹೊರತುಪಡಿಸಿ, ಉಳಿದಂತೆ ಗೋವಾ ಬಿಟ್ಟು ಹೋಗದಂತೆ ಷರತ್ತು ವಿಧಿಸಬಹುದು ಎಂದು ನ್ಯಾಯಾಲಯಕ್ಕೆ ಹೇಳಿದರು. ವಾದ ಆಲಿಸಿದ ನ್ಯಾಯಾಲಯವು ಅರ್ಜಿ ಪುರಸ್ಕರಿಸಿದೆ.

ಈ ಮೊದಲು ಮಾರ್ಚ್ 14ರಂದು ಬಾಂಬೆ ಹೈ ಕೋರ್ಟ್ ತೇಜ್‌ಪಾಲ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ತೀರ್ಪಿನ ವಿರುದ್ಧ ತೇಜ್‌ಪಾಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಪ್ರಕರಣ ಸಂಬಂಧ ನವೆಂಬರ್ 30, 2013ರಂದು ತೇಜ್‌ಪಾಲ್ ಬಂಧನಕ್ಕೆ ಒಳಗಾಗಿದ್ದರು. ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುವ ಅವರನ್ನು ಗೋವಾದ ಸಡಾ ಉಪ ಕಾರಾಗೃಹದಲ್ಲಿ ಇಡಲಾಗಿದೆ. 

Comments