ಮಹಿಳೆಯರ ಮತದಾನ ಹೆಚ್ಚಳ: ಹೊಸ ‘ಶಕ್ತಿ’

ರಾಷ್ಟ್ರದಲ್ಲಿ  16ನೇ ಲೋಕಸಭೆಗೆ ವಿವಿಧ ಹಂತಗಳಲ್ಲಿ ಐದು ವಾರಗಳ ಕಾಲ ಚುನಾ­ವಣೆಗಳನ್ನು ನಡೆಸುವ ಪ್ರಕ್ರಿಯೆ ಚಾಲನೆ­ಯ­ಲ್ಲಿದೆ. ಈವರೆಗೆ ಚುನಾವಣೆ ನಡೆದಿರುವ ವಿವಿಧ ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ  28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾ­ವಣೆಗಳಲ್ಲಿ ಮಹಿಳಾ ಮತದಾನದ ಪ್ರಮಾಣ ಶೇ  65.81 ರಷ್ಟಿತ್ತು.

ಮಹಿಳೆಯರ ಮತದಾನ ಹೆಚ್ಚಳ: ಹೊಸ ‘ಶಕ್ತಿ’

ರಾಷ್ಟ್ರದಲ್ಲಿ  16ನೇ ಲೋಕಸಭೆಗೆ ವಿವಿಧ ಹಂತಗಳಲ್ಲಿ ಐದು ವಾರಗಳ ಕಾಲ ಚುನಾ­ವಣೆಗಳನ್ನು ನಡೆಸುವ ಪ್ರಕ್ರಿಯೆ ಚಾಲನೆ­ಯ­ಲ್ಲಿದೆ. ಈವರೆಗೆ ಚುನಾವಣೆ ನಡೆದಿರುವ ವಿವಿಧ ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ರಾಜ್ಯದಲ್ಲಿ  28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾ­ವಣೆಗಳಲ್ಲಿ ಮಹಿಳಾ ಮತದಾನದ ಪ್ರಮಾಣ ಶೇ  65.81 ರಷ್ಟಿತ್ತು.
ಸಂಸದೀಯ ಚುನಾವಣೆಯಲ್ಲಿ  ಈ ಪ್ರಮಾಣದಲ್ಲಿ ರಾಜ್ಯದ ಮಹಿ­ಳೆ­ಯರು ಮತ ಚಲಾಯಿಸಿರುವುದು ಅತ್ಯಂತ ಹೆಚ್ಚಿನದು ಎಂದು ಚುನಾವಣಾ ಆಯೋಗ ಹೇಳಿದೆ.

ದಕ್ಷಿಣ ಕನ್ನಡ  ಕ್ಷೇತ್ರ­ದ­ಲ್ಲಂತೂ ಪುರುಷರಿಗಿಂತ ಮಹಿಳೆಯರ ಮತದಾನ ಪ್ರಮಾಣ ಜಾಸ್ತಿ ಇತ್ತು. ಈ ಕ್ಷೇತ್ರದಲ್ಲಿ  ಮಹಿಳಾ ಮತದಾನದ ಪ್ರಮಾಣ  ಶೇ 77.39­ರಷ್ಟಿ­ದ್ದರೆ, ಪುರುಷರ ಮತದಾನ ಪ್ರಮಾಣ ಶೇ 76.97 ಇತ್ತು. ಅನೇಕ ರಾಜ್ಯಗಳಲ್ಲೂ  ಇಂತಹದೇ  ವಿದ್ಯಮಾನ ಕಂಡು ಬಂದಿರುವುದು ವಿಶೇಷ.    ಚಂಡೀಗಡ, ಅರುಣಾಚಲ ಪ್ರದೇಶ, ಗೋವಾ, ಸಿಕ್ಕಿಂ ಹಾಗೂ ಲಕ್ಷದ್ವೀಪಗಳಲ್ಲಿ   ಪುರುಷ ಮತದಾರರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರೇ ಮತ ಹಾಕಿದ್ದಾರೆ. ಸಂಸದೀಯ ಚುನಾವಣೆಗಳಲ್ಲಿ ಮಹಿಳಾ ಮತದಾರರ ಗರಿಷ್ಠ ಮಟ್ಟದ ಪಾಲ್ಗೊಳ್ಳುವಿಕೆಗೆ ಇದು ದ್ಯೋತಕ.

1962ರಿಂದ ಪುರುಷ ಹಾಗೂ ಮಹಿಳಾ ಮತದಾರರ ಮಧ್ಯದ ಅಂತರ ಸ್ಥಿರವಾಗಿ ಕಡಿಮೆ­ಯಾಗುತ್ತಲೇ ಬರುತ್ತಿರುವುದನ್ನು ನಾವು ಗಮನಿ­ಸಬಹುದು.  ಕಳೆದ 2009ರ ಸಂಸತ್ ಚುನಾ­ವಣೆ ಸಂದರ್ಭದಲ್ಲಿ ಈ ಅಂತರ ಅತ್ಯಂತ ಕಡಿಮೆ ಇತ್ತು ಎಂದು ಚುನಾವಣಾ ಆಯೋಗ ಹೇಳಿದೆ.

ಮತದಾರರಾಗಿ ಮಹಿಳೆಯರ ಪಾಲ್ಗೊ­ಳ್ಳುವಿಕೆ ನಿರಂತರವಾಗಿ ಏರಿಕೆ ಕಾಣುತ್ತಲೇ ಇರುವುದು ಈ ಬೆಳವಣಿಗೆಗಳಲ್ಲಿ ವ್ಯಕ್ತವಾಗು­ತ್ತಲೇ ಇದೆ. ಆದರೆ  ಚುನಾವಣಾ ಕಣದಲ್ಲಿ ಮಾತ್ರ  ಅವರ ಪಾಲ್ಗೊಳ್ಳುವಿಕೆಯಲ್ಲಿ ಗಣ­ನೀಯ ಏರಿಕೆ ಕಂಡು ಬರುತ್ತಿಲ್ಲ ಎಂಬ ವಿಪರ್ಯಾಸ ಮಾತ್ರ ಯಥಾಸ್ಥಿತಿಯದೇ ಆಗಿದೆ.

ಚುನಾವಣೆ ಎಂಬುದು ಈಗಲೂ ಪುರುಷರ ರಂಗ ಸ್ಥಳವಾಗೇ ಉಳಿದುಕೊಂಡಿದೆ.  ಮಹಿಳೆ­ಯರ ಹಾಜರಿ ಇಲ್ಲಿ ಏನಿದ್ದರೂ ಸಾಂಕೇತಿಕ. 2014ರ ಲೋಕಸಭಾ ಚುನಾವಣೆಯಲ್ಲೂ  ಮತ್ತೆ ಇದರ ಪುನರಾವರ್ತನೆಯಾಗಿದೆಯಷ್ಟೇ. ರಾಜ್ಯದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈ ಬಾರಿ ಚುನಾವಣಾ ಕಣದಲ್ಲಿರುವವರು  435 ಅಭ್ಯರ್ಥಿಗಳು.  ಇವರಲ್ಲಿ 23 ಮಂದಿ ಮಾತ್ರ ಮಹಿಳೆಯರು. ಒಟ್ಟು ಅಭ್ಯರ್ಥಿಗಳಲ್ಲಿ ಮಹಿಳೆಯರ ಪ್ರಮಾಣ ಕೇವಲ ಶೇ 5.28. ಮಹಿಳಾ ಸಬಲೀಕರಣದ ವಿಷಯವನ್ನು ಈ ಬಾರಿ  ಪ್ರಮುಖ ರಾಜಕೀಯ ಪಕ್ಷಗಳು ದೊಡ್ಡ ದನಿ­ಯಲ್ಲೇ  ಎತ್ತಿ ಮಾತನಾಡಿವೆ. ಆದರೂ ಲೋಕ­­ಸಭಾ ಚುನಾವಣೆಯಲ್ಲಿ ಅವರ ಪಾಲ್ಗೊಳ್ಳುವಿಕೆ ಪ್ರಮಾಣ  ಈ ಬಾರಿಯೂ ಹೆಚ್ಚಾಗಲಿಲ್ಲ.

111 ಕ್ಷೇತ್ರಗಳನ್ನೊಳಗೊಂಡ ಮೊದಲ ನಾಲ್ಕು ಹಂತದ ಚು ನಾವಣೆಗಳಲ್ಲಿ   ಒಬ್ಬರೇ ಒಬ್ಬರು ಮಹಿಳಾ ಅಭ್ಯರ್ಥಿಯೂ ಇಲ್ಲದ  ಸ್ಥಿತಿ ಆರು ರಾಜ್ಯಗಳಲ್ಲಿ ಕಂಡು ಬಂದಿತ್ತು.   ಇವು­ಗಳಲ್ಲಿ  ಜಮ್ಮು ಮತ್ತು ಕಾಶ್ಮೀರ,  ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ , ಲಕ್ಷ ದ್ವೀಪ ಹಾಗೂ ಸಿಕ್ಕಿಂ ಸೇರಿದ್ದವು.

1950ರ ದಶಕದಿಂದ 1990ರ ದಶಕದ­ವ­ರೆಗೆ ಮಹಿಳಾ ಮತದಾರರ ಪ್ರಮಾಣ ಶೇ 38.8­ರಿಂದ ಶೇ 60ಕ್ಕೆ  ಏರಿಕೆ ಕಂಡಿದ್ದು ವಿಶೇಷ­ವಾದ ಬೆಳವಣಿಗೆ.  ಹೀಗೆ ಪ್ರತಿ ಬಾರಿ ಮಹಿಳಾ ಮತದಾನ ಪ್ರಮಾಣ ಹೆಚ್ಚಳಕ್ಕೆ ಕಾರಣರಾ­ಗುತ್ತಾ  ಉತ್ಸುಕತೆಯಿಂದ ಮತ ಚಲಾಯಿಸುವ ಈ ಮಹಿಳೆಯರು ಯಾರಿಗಾಗಿ ಮತ ನೀಡು­ತ್ತಾರೆ?  ಹೆಚ್ಚಿನ ಮಹಿಳಾ ಪ್ರತಿನಿಧಿಗಳು ಸಂಸ­ತ್ತಿಗೆ ಆರಿಸಿ ಬರಲಿ ಎಂಬ ತುಡಿತಕ್ಕಂತೂ ಇಲ್ಲಿ ಅವ­­ಕಾಶವೇ ಇಲ್ಲ.  ಸಂಸತ್ತಿನ ಉಭಯ ಸದನ­ಗಳಲ್ಲಿ ಇರುವ ಮಹಿಳಾ ಸಂಸತ್ ಸದಸ್ಯರ ಪ್ರಮಾಣ ಇನ್ನೂ ಶೇ 11ರ ಆಸುಪಾಸಿನಲ್ಲೇ ಇದೆ.  ಇದು ಸದ್ಯದ ಜಾಗತಿಕ ಸರಾಸರಿ ಶೇ 22­ಕ್ಕಿಂತ ಅತ್ಯಂತ ಕಡಿಮೆ ಎಂಬುದು ನಮಗೆ ತಿಳಿದಿರಬೇಕು.
ವಿಪರ್ಯಾಸ ಎಂದರೆ ರಾಷ್ಟ್ರದ ಬಲಾಢ್ಯ ರಾಜಕಾರಣಿಗಳಲ್ಲಿ ಮಹಿಳೆಯರೂ ಸೇರಿದ್ದಾರೆ. ಹೀಗಿದ್ದೂ ಚುನಾವಣಾ ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯೇ ಇದೆ.

ಏಕೆ ಹೀಗೆ? ಎಂದರೆ ಮಹಿಳೆಯರಿಗೆ ಚುನಾ ವ­ಣೆ­ಗಳಲ್ಲಿ ಗೆಲುವಿನ ಅವಕಾಶಗಳು ಕಡಿಮೆ ಎಂಬ­ಂತಹ ವಾದಗಳನ್ನು ರಾಜಕೀಯ ಪಕ್ಷಗಳು  ಸಾಮಾನ್ಯವಾಗಿ ಮುಂದಿಡುತ್ತವೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ? 2009ರ ಲೋಕಸಭಾ ಚುನಾವಣೆಗಳನ್ನೇ ವಿಶ್ಲೇಷಿಸಿದಲ್ಲಿ ಮಹಿಳೆಯರ  ಗೆಲುವಿನ ಪ್ರಮಾಣ ಪುರುಷರ ಗೆಲುವಿನ ಪ್ರಮಾ­ಣ­ಕ್ಕಿಂತ ಹೆಚ್ಚಿದೆ. ಆಗ ಮಹಿಳಾ ಅಭ್ಯರ್ಥಿ­ಗಳ ಗೆಲುವಿನ ಪ್ರಮಾಣ ಶೇ 11ರಷ್ಟಿದ್ದರೆ ಪುರು­ಷರ ಗೆಲುವಿನ ಪ್ರಮಾಣ ಶೇ 6ರಷ್ಟಿತ್ತು.  ಹೀಗಿದ್ದೂ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿ­ಳಿ­ಸಲು ರಾಜಕೀಯ ಪಕ್ಷಗಳು ಹಿಂದೇಟು ಹಾಕು­ವುದು ಮುಂದುವರಿಸಿವೆ.

ಆದರೆ ಮಹಿಳೆಯರ ಮತ ಶಕ್ತಿಯನ್ನು  ಓಲೈ­ಸುವ ಪ್ರಯತ್ನಗಳನ್ನಂತೂ ಈ ಬಾರಿ ರಾಜ­ಕೀಯ ಪಕ್ಷಗಳು  ಜೋರಾಗಿಯೇ ಮಾಡಿವೆ.  ತಮ್ಮ ‘ಚಾಯ್ ಪೆ ಚರ್ಚಾ’ ಕಾರ್ಯ­ಕ್ರಮ ಮಾಲಿಕೆ­ಯಲ್ಲಿ ಮಹಿಳೆ ವಿಚಾರ­ವನ್ನು   ನರೇಂದ್ರ ಮೋದಿ­ಯ­ವರು ಕೈಗೆತ್ತಿ­ಕೊಂಡಿ­ದ್ದರು.ರಾಹುಲ್ ಗಾಂಧಿ­­ಯ­­­ವ­ರೂ ತಮ್ಮ ಕುಟುಂಬದ ಮಹಿಳೆಯರ   ಶಕ್ತಿ­­ಯನ್ನು ಕುರಿತು ಭಾವನಾತ್ಮಕ­ವಾಗಿ ಮಾತ­ನಾಡಿ ಮಹಿಳೆ­ಯರ ಅಂತಃಕರಣ ಮುಟ್ಟಲು ಯತ್ನಿಸಿ­ದ್ದರು.

ಕಾಂಗ್ರೆಸ್, ಬಿಜೆಪಿ ಹಾಗೂ ಆಮ್ ಆದ್ಮಿ  ಪಕ್ಷಗಳು ಮಹಿಳೆಗೆ ಸಂಬಂಧಿಸಿದಂತೆ ಒಂದೇ ರೀತಿ ಭರವಸೆಗಳನ್ನು ಪ್ರಣಾಳಿಕೆಗಳಲ್ಲಿ ನೀಡಿವೆ. ಮಹಿಳಾ ಮೀಸಲು ಮಸೂದೆ  ಹಾಗೂ ಲೈಂಗಿಕ ಅಪ­ರಾಧಗಳ ವಿಚಾರಣೆಗೆ ತ್ವರಿತ ನ್ಯಾಯಾ­ಲ­ಯಗಳ ಸ್ಥಾಪನೆ ಇದರಲ್ಲಿ ಸೇರಿದೆ. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಶೇ 25ರಷ್ಟು ಮಹಿಳೆ­ಯರ ನೇಮಕದ ಭರವಸೆಯನ್ನು ಕಾಂಗ್ರೆಸ್ ನೀಡಿದೆ.  ಬಹಳಷ್ಟು ವಿಳಂಬದ ನಂತರ ಮೊದಲ ಹಂತದ ಮತದಾನದ ದಿನದಂದು ಪ್ರಣಾಳಿಕೆ ಬಿಡುಗಡೆ ಮಾಡಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ಮಹಿಳೆಯರ ಭದ್ರತೆಗೆ ಹೆಚ್ಚಿನ ಗಮನ ನೀಡುವ ಭರವಸೆ ನೀಡಿದೆ. ಮಹಿಳಾ ಸುರಕ್ಷತೆ ವಿಚಾರ ಮುನ್ನೆಲೆಗೆ ಬಂದಿದ್ದು ಅದಕ್ಕೆ ಆದ್ಯತೆ ನೀಡು­ವು­ದಾಗಿ  ಆಮ್ ಆದ್ಮಿ ಪಕ್ಷವೂ  ಆಶ್ವಾಸನೆ ನೀಡಿದೆ.

ಆದರೆ ಈ ಎಲ್ಲಾ ಆಶ್ವಾಸನೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಲಾಗುತ್ತದೆ? ಪ್ರಣಾಳಿಕೆ­ಗಳಲ್ಲಿ ಮಹಿಳೆಯರ  ಹಕ್ಕುಗಳ ವಿಚಾರಗಳು ಪ್ರಸ್ತಾ­ಪವಾಗುವುದು ಹೊಸದೇನಲ್ಲ. ಹಿಂದೆಯೂ ಇಂತಹ ಎಷ್ಟೋ ಭರವಸೆಗಳನ್ನು ನೀಡಲಾಗಿದೆ. ಆದರೆ ಈ ಬಾರಿ ಮಹಿಳೆಯರ ವಿಚಾರ­ಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರ­ಹಿಸಿ ವಿವಿಧ ಕ್ಷೇತ್ರಗಳ ಪರಿಣತರು ಸೇರಿ  ರೂಪಿಸಿರುವ ‘ವುಮ­­ನಿಫೆಸ್ಟೊ’  ಬಿಡುಗಡೆ ಮಾಡ­ಲಾಗಿದೆ. ಮಹಿ­ಳೆ­ಯರ ಹಿತಚಿಂತನೆಗೆ ಆದ್ಯತೆ ನೀಡುವ ಪರ್ಯಾ­ಯ ಪ್ರಣಾಳಿಕೆ ಇದು. ಭಾರತದ ಮಹಿಳೆಯರು ಹಾಗೂ ಬಾಲಕಿಯರ ಸ್ಥಿತಿಗತಿ ಸುಧಾರಣೆಗೆ ಮುಂದಿನ ಐದು ವರ್ಷಗಳಲ್ಲಿ ಕೈಗೊಳ್ಳ­ಬೇಕಾದ ವಿವರಗಳನ್ನು  ಈ ಪ್ರಣಾಳಿಕೆ  ನೀಡಿದೆ. 1966ರಲ್ಲೇ ಮಹಿಳಾ ಪ್ರಧಾನಿ ಹೊಂದಿದ ದೇಶ ಭಾರತ.  ಆದರೆ ಮುಖ್ಯವಾಹಿನಿ ರಾಜಕಾ­ರ­ಣದಲ್ಲಿ ಮಹಿಳೆ ಅಂಚಿನಲ್ಲೇ ಉಳಿದುಕೊಂಡು ಬಂದಿರುವುದು ವಿಪರ್ಯಾಸ.  ರಾಜಕೀಯ ಪಕ್ಷಗಳೂ ಇವರನ್ನು ಮುಖ್ಯವಾಹಿನಿಗೆ ತರಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದೇ  ದುರದೃಷ್ಟಕರ.

ರಾಷ್ಟ್ರದ ಅತ್ಯಂತ ಬಲಾಢ್ಯ ರಾಜಕಾರಣಿ­ಗಳಲ್ಲಿ ಮಹಿಳೆಯರಿದ್ದಾರೆ. ಕೇಂದ್ರದಲ್ಲಿ ಮುಂದಿನ ಹೊಸ ಸರ್ಕಾರ ರಚನೆ  ಸಂದರ್ಭ­ದಲ್ಲಿ  ತಮಿಳುನಾಡಿನ ಜಯಲಲಿತಾ, ಪಶ್ಚಿಮ ಬಂಗಾ­ಳದ ಮಮತಾ ಬ್ಯಾನರ್ಜಿ ಹಾಗೂ ಉತ್ತರ ಪ್ರದೇಶದ ಮಾಯಾವತಿ  ಪ್ರಮುಖ ಪಾತ್ರ­ಧಾರಿಗಳಾಗುವಂತಹವರು. ಆದರೆ ಈ   ಮೂವರು  ಬಲಾಢ್ಯ ನಾಯಕಿಯರೂ ಮಹಿಳಾ ಮತದಾರರನ್ನು ಅವಲಂಬಿಸಿಕೊಂಡು ಬಂದ­ವ­ರಲ್ಲ.  ಈ ನಾಯಕಿಯರು ಮಹಿಳೆಯರ ವಿಚಾ­ರ­­­ಗ­ಳನ್ನು ಕಡೆಗಣಿಸಿಕೊಂಡೇ ಬಂದವರು.   ‘ಪುರು­­ಷನ ಪ್ರಪಂಚದಲ್ಲಿನ ಮಹಿಳೆಯರು ತಾವು’ ಎಂಬಂ­ತಹ ಪ್ರಜ್ಞೆಯಡಿಯೇ ಅವರು ಆಡಳಿತ ನಡೆಸಿದ್ದಾರೆ.

2013ರ  ವರ್ಷಾಂತ್ಯದಲ್ಲಿ ಐದು ರಾಜ್ಯ ವಿಧಾನಸಭೆಗಳಿಗೆ ನಡೆದ   ಚುನಾವಣೆಯಲ್ಲೂ ಮಹಿಳಾ  ಮತದಾನ ಹೊಸ ಎತ್ತರಗಳಿಗೆ ತಲು­ಪಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳ­ಬ­ಹುದು.  ಅದರಲ್ಲೂ ಛತ್ತೀಸಗಡ, ರಾಜಸ್ತಾನ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಪುರುಷ­ರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದರು.

ಅಮೆರಿಕ ಹಾಗೂ ಯೂರೋಪ್ ರಾಷ್ಟ್ರ­ಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರತಿರೋಧವಿಲ್ಲದೆ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು ಎಂಬುದು ಸಾಮಾನ್ಯವಾದ ಗ್ರಹಿಕೆ. ಆದರೂ     ಭಾರತೀಯ ಮಹಿಳೆಯರಿಗೆ ಮತ­ದಾ­ನದ ಹಕ್ಕು ಸಿಗುವ ಮುಂಚೆ,  ವಸಾಹತು­ಶಾಹಿ ಆಡಳಿತ ಇದ್ದ ಬಂಗಾಳದಲ್ಲಿ  ಈ ವಿಚಾರ­ದಲ್ಲಿ ನಡೆದ ಚರ್ಚೆಗಳನ್ನು ಗಮನಿಸಬಹುದು.

ಮಹಿಳಾ ಮತದಾನದ ಹಕ್ಕಿಗೆ ವಿವಿಧ ನೆಲೆ­ಗಳಲ್ಲಿ ಆಗ ವಿರೋಧ ವ್ಯಕ್ತವಾಗಿದ್ದು ಈ ಚರ್ಚೆ­ಗಳಲ್ಲಿ ವ್ಯಕ್ತವಾಗುತ್ತದೆ.   ರಾಷ್ಟ್ರದ ರಕ್ಷಣೆ ಹಾಗೂ ಆಡಳಿತಕ್ಕೆ  ಮಹಿಳೆ ಅರ್ಹಳಲ್ಲ­ವಾದ್ದ­ರಿಂದ  ಮತದಾನ ಆಕೆಯ ಜನ್ಮಸಿದ್ಧ ಹಕ್ಕಾಗು­ವುದು ಸಾಧ್ಯವಿಲ್ಲ ಎಂಬ ವಾದವನ್ನು ಆಗ ಮುಂದಿ­ಡಲಾಗಿತ್ತು. ಗೃಹಕೃತ್ಯಗಳ ಬಗ್ಗೆ  ಮಹಿ­ಳೆಗೆ ಅತೃಪ್ತಿ  ಮೂಡಬಹುದು,  ಗಂಡ, ಮಕ್ಕ­ಳನ್ನು ನಿರ್ಲಕ್ಷ್ಯ ಮಾಡಬಹುದು, ರಾಜ­ಕೀಯ ಹಾಗೂ ಮತ್ತಿತರ ಬುದ್ಧಿಗೆ ಸಂಬಂಧಿಸಿದ ಕೆಲಸಗಳಿಂದಾಗಿ   ತನ್ನ ಮಕ್ಕಳಿಗೂ ಮೊಲೆಯೂ­ಡು­ವುದು ಮಹಿಳೆಗೆ ಸಾಧ್ಯವಾಗು­ವುದಿಲ್ಲ ಎಂಬಂ­ತಹ ಕುತರ್ಕದ ವಾದಗಳು ಆಗ ಮಂಡಿತ­ವಾ­ಗಿದ್ದವು.  ಆದರೆ ಮಹಿಳಾ ಸಂಘಟನೆಗಳ ಸಕ್ರಿಯ ಮಧ್ಯ ಪ್ರವೇಶ­ದಿಂದ ಮಹಿಳೆಯರಿಗೆ ಮತ­ದಾ­ನದ ಹಕ್ಕು ಲಭಿಸಿದ್ದನ್ನು ಮರೆಯಲಾಗದು.  ಈಗಲೂ  ಚುನಾ­ವಣೆ  ರಾಜಕೀಯದಲ್ಲಿ ಮಹಿ­ಳೆಯ ಪಾಲ್ಗೊ­ಳ್ಳುವಿಕೆಯ  ವಿಚಾರ   ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ಮಹಿಳಾ ಸಂಘಟನೆಗಳ ನಡುವಿನ ಹೋರಾಟಗಾರರ ನಡುವಿನ ವಾಗ್ವಾದಗಳಲ್ಲಿ ಸಿಲುಕಿಕೊಂಡಿದೆ.

ಭ್ರಷ್ಟತೆ ಹಾಗೂ ಜಾತಿ ಆಧಾರಿತ ರಾಜಕೀಯ ಕೊನೆ­­ಗಾಣಿಸಲು ಮಹಿಳೆಯರ ಬೃಹತ್ ಮತ­ಶಕ್ತಿಯ ಕುರಿತಾಗಿ ಚಿಂತಿಸಿದ ಬಹುಶಃ ಏಕೈಕ ಭಾರ­ತೀಯ ನಾಯಕ  ಎಂದರೆ ಗಾಂಧೀಜಿ. ೧೯೪೬ರ ಏಪ್ರಿಲ್ ೨೧ ರ ‘ಹರಿಜನ್’ ಪತ್ರಿಕೆಯ ಸಂಚಿಕೆ­ಯಲ್ಲಿ ಗಾಂಧೀಜಿ ಸ್ತ್ರೀವಾದಿಗಳಿಗೆ ಹೇಳು­ವುದು ಹೀಗೆ: ‘ಮಹಿಳಾ ಹಕ್ಕುಗಳು ಎಂದು ಕೂಗಾ­ಡಬೇಡಿ. ಎಷ್ಟು ಸಾಧ್ಯವೊ ಅಷ್ಟು ಮಹಿಳೆ­ಯರನ್ನು ಮತದಾರರಾಗಿ ನೊಂದಾಯಿಸಲು ಗಮನ ನೀಡಿ. ವ್ಯಾವಹಾರಿಕವಾದ ಶಿಕ್ಷಣ ನೀಡಿ. ಸ್ವತಂತ್ರವಾಗಿ ಯೋಚಿಸುವಂತೆ ಮಾಡಿ. ಅವ­ರನ್ನು ಬಂಧಿಸಿರುವ ಜಾತಿ ಸಂಕೋಲೆಯಿಂದ ಬಿಡು­ಗಡೆ ಮಾಡಲು ಯತ್ನಿಸಿ. ಆ ಮೂಲಕ  ಅವರಲ್ಲಾಗುವ ಬದಲಾವಣೆಗಳಿಂದ ಮಹಿ­ಳೆಯ ರಾಜಕೀಯ ಶಕ್ತಿಯನ್ನು ಅರ್ಥ ಮಾಡಿಕೊ­ಳ್ಳು­ವುದು ಪುರುಷರಿಗೆ ಅನಿವಾರ್ಯವಾಗುತ್ತದೆ. ಜೊತೆಗೆ ಆಕೆಯ ತ್ಯಾಗದ ಸಾಮರ್ಥ್ಯ ಅರಿತು ಆಕೆಗೆ ಗೌರವದ ಸ್ಥಾನ ನೀಡುವುದೂ ಅನಿವಾ­ರ್ಯ­ವಾಗುತ್ತದೆ. ಮಹಿಳಾ ಕಾರ್ಯ­ಕರ್ತರು ಇದನ್ನು ಮಾಡಿದಲ್ಲಿ ಅವರು ಸದ್ಯದ ಅಶುದ್ಧ ರಾಜಕೀಯ ವಾತಾವರಣವನ್ನು ಶುದ್ಧ­ಗೊಳಿ­ಸಿದಂತಾಗುತ್ತದೆ...’

ಈಗ ಮಹಿಳೆಯರು ಮತದಾರರಾಗಿ ತಮ್ಮ ಹಕ್ಕು­ಗಳನ್ನು  ಚಲಾಯಿಸುವಲ್ಲಿ  ಮುನ್ನಡೆ ಸಾಧಿ­­­ಸಿ­­ದ್ದಾರೆ. ಇದು ದೊಡ್ಡ ಮತಶಕ್ತಿಯಾಗಿ ಮಹಿ­ಳೆ­ಯರ ಬೇಡಿಕೆಗಳಿಗೆ ಕಿವಿಗೊಡುವ ದಿನಗಳು   ಭಾರತದ ರಾಜಕಾರಣಿಗಳಿಗೆ ಅನಿವಾ­ರ್ಯ­ವಾಗುವ ದಿನಗಳು ಹತ್ತಿರವಾಗಲಿದೆಯೆ? ಎಂಬುದನ್ನು ಕಾದು ನೋಡಬೇಕು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

Comments
ಈ ವಿಭಾಗದಿಂದ ಇನ್ನಷ್ಟು
ಅಂಚಿಗೆ ಸರಿದವರು, ಮುಂಚೂಣಿಗೆ ಬರದವರು

ಕಡೆಗೋಲು
ಅಂಚಿಗೆ ಸರಿದವರು, ಮುಂಚೂಣಿಗೆ ಬರದವರು

16 May, 2018
ಬದಲಾವಣೆಯ ಗಾಳಿ  ಬೀಸುವುದು ಎಂದು?

ಕಡೆಗೋಲು
ಬದಲಾವಣೆಯ ಗಾಳಿ ಬೀಸುವುದು ಎಂದು?

2 May, 2018
ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಬಹುದೇ?

ಕಡೆಗೋಲು
ಅತ್ಯಾಚಾರ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಬಹುದೇ?

18 Apr, 2018
ಮಹಿಳಾ ಪ್ರಾತಿನಿಧ್ಯ, ತಾರತಮ್ಯದ ರಾಜಕಾರಣ

ಕಡೆಗೋಲು
ಮಹಿಳಾ ಪ್ರಾತಿನಿಧ್ಯ, ತಾರತಮ್ಯದ ರಾಜಕಾರಣ

4 Apr, 2018
ಡಬ್ಲ್ಯುಟಿಒ: ಲಿಂಗತ್ವ ವಿಚಾರ ವಿವಾದ

ಕಡೆಗೋಲು
ಡಬ್ಲ್ಯುಟಿಒ: ಲಿಂಗತ್ವ ವಿಚಾರ ವಿವಾದ

21 Mar, 2018