ಧರ್ಮ ಮತ್ತು ಲೈಂಗಿಕತೆ: ನನ್ನ ಹುಡುಕಾಟ

ಧರ್ಮ ಮತ್ತು ಲೈಂಗಿಕತೆ – ಎರಡನ್ನೂ ಜೊತೆಯಲ್ಲಿ ಅನ್ವೇಷಿಸುವ ನನ್ನ ಪ್ರಯತ್ನ ನಿಮಗೆ ವಿಚಿತ್ರವೆನ್ನಿಸಬಹುದು. ಧರ್ಮದ ದೃಷ್ಟಿಯಿಂದ ಬಹುಸಂಖ್ಯಾತನೂ, ಲೈಂಗಿಕತೆಯ ದೃಷ್ಟಿಯಿಂದ ಅಲ್ಪಸಂಖ್ಯಾತನೂ ಆದ ನನ್ನ ಹುಡುಕಾಟದಲ್ಲಿ ಈ ಎರಡೂ ಜೊತೆಜೊತೆಯಲ್ಲಿಯೇ ಅನಾವರಣಗೊಂಡಿದ್ದು ಮಾತ್ರ ಸತ್ಯ.

ನಾನು ಜನಿಸಿದ್ದು, ಶತಮಾನಗಳಿಂದ ಮುಸ್ಲಿಂ ದೊರೆಗಳು ಆಳಿದ ಭೂಭಾಗದ ಪುಟ್ಟ ಹಳ್ಳಿಯೊಂದರ ಮೇಲ್ಜಾತಿಯ ಹಿಂದೂ ಕುಟುಂಬದಲ್ಲಿ. ನನಗೆ ಹತ್ತು ವರ್ಷವಿದ್ದಾಗ ನನ್ನ ತಿಳಿವಳಿಕೆಗೆ ದಕ್ಕಿದ್ದು ಎರಡೇ ಧರ್ಮಗಳು; ತೆಲುಗು ಮಾತನಾಡುವವರೆಲ್ಲಾ ಹಿಂದೂಗಳೆಂದೂ, ಉರ್ದು ಮಾತನಾಡುವವರೆಲ್ಲಾ ಮುಸ್ಲಿಮರೆಂದೂ ನಾನಾಗ ನಂಬಿದ್ದೆ. ‘ಮುಸ್ಲಿಂ’ ಎನ್ನುವ ಪದ ನಮ್ಮ ಮನೆಯಲ್ಲಿ ಬಳಕೆಯಾಗುತ್ತಿದ್ದುದು ಅಪರೂಪ. ನಾನು ಊಟ ಮಾಡುವಾಗ ಸಿಕ್ಕಾಪಟ್ಟೆ ಚೆಲ್ಲಾಡಿದರೆ ನನ್ನಜ್ಜಿ ‘ನೀನು ಆ ರೀತಿ ಉಂಡರೆ ಮುಂದಿನ ಜನ್ಮದಲ್ಲಿ ಮಸ್ಲಿಂ ಆಗಿ ಹುಟ್ತೀಯ’ ಎಂದು ಹೇಳುತ್ತಿದ್ದಳು. ಅವಳ ವರ್ತನೆಯೂ ತಪ್ಪೆಂದು ಈಗ ನನಗೆ ಅನ್ನಿಸುತ್ತಿಲ್ಲ; ಏಕೆಂದರೆ ಆ ಹೊತ್ತಿನಲ್ಲಿ ನಮ್ಮೂರಿನ ಎಲ್ಲ ಹಿರಿಯರ ಅಭಿಪ್ರಾಯಗಳ ಸಾರಾಂಶವೇ ಅವಳ ಮಾತಿನಲ್ಲಿ ಪ್ರತಿಬಿಂಬಿತವಾಗುತ್ತಿತ್ತು.

ಹಿಂದೂಗಳಲ್ಲಿ ಹಲವು ಜಾತಿಗಳಿದ್ದವೆಂಬುದು ನನಗಾಗಲೇ ಗೊತ್ತಾಗಿತ್ತು. ಅವುಗಳನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಿಕೊಂಡಿದ್ದೆ– ನಮ್ಮ ಮನೆಯಲ್ಲಿ ಜೊತೆಯಲ್ಲಿ ಊಟ ಮಾಡುವವರು, ನಮ್ಮ ಮನೆಯನ್ನು ಪ್ರವೇಶಿಸಿದರೂ ಜೊತೆಯಲ್ಲಿ ಊಟ ಮಾಡಲಾರದವರು, ಕೊನೆಗೆ ನಮ್ಮ ಮನೆಯ ಪ್ರವೇಶವನ್ನೂ ಮಾಡಲು ಸಾಧ್ಯವಿಲ್ಲದವರು. ನಮ್ಮಜ್ಜಿಯು ನಮ್ಮ ಗೆಳೆಯರನ್ನು ಮನೆಯೊಳಗೆ ಕರೆದುಕೊಂಡು ಬರಲು ಒಪ್ಪುತ್ತಿರಲಿಲ್ಲ. ಒಂದು ದಿನ ನನ್ನ ಅಣ್ಣ ಹಟ ಮಾಡಿ, ತನ್ನ ಗೆಳೆಯರನ್ನು ಕರೆದುಕೊಂಡು ಬಂದ. ಮರುದಿನವೇ ನಮ್ಮಜ್ಜಿ ತುಳಸಿ ತೀರ್ಥದಿಂದ ಇಡೀ ಮನೆಯನ್ನು ಶುದ್ಧಗೊಳಿಸಿ, ಅವರು ಬಳಸಿದ ಹೊದಿಕೆಗಳನ್ನು ದಾನ ಮಾಡಿದಳು. ಪ್ರತಿ ಬಾರಿ ಹೊಸ ಹೊದಿಕೆಗಳನ್ನು ಕೊಳ್ಳಲು ಸಾಧ್ಯವಿಲ್ಲವೆಂದು ನಮ್ಮಪ್ಪ ಎಚ್ಚರಿಕೆ ನೀಡಿದ. ನಮ್ಮ ಅಮ್ಮ–ಅಪ್ಪ ಸ್ವಲ್ಪ ಮಟ್ಟಿಗೆ ಆಧುನಿಕರಾಗಿದ್ದರೂ ಅಜ್ಜಿ ಮತ್ತು ಸಮುದಾಯವನ್ನು ವಿರೋಧಿಸುವ ಶಕ್ತಿಯನ್ನು ಹೊಂದಿರಲಿಲ್ಲ. ಮತ್ತೊಮ್ಮೆ ಏನನ್ನು ಮಾಡಬಾರದೆಂಬುದು ನನಗೆ ಮತ್ತು ಅಣ್ಣನಿಗೆ ಈ ಘಟನೆಯಿಂದ ಚೆನ್ನಾಗಿ ಅರ್ಥವಾಗಿತ್ತು.

ಹಳ್ಳಿಯಲ್ಲಿದ್ದ ಏಕೈಕ ಪ್ರಾಥಮಿಕ ಶಾಲೆಗೆ ನಮ್ಮಪ್ಪ ಮಾಸ್ತರರಾಗಿದ್ದರು. ವಿಶೇಷವೇನೆಂದರೆ, ನಮ್ಮೆಲ್ಲರ ಹೆಸರುಗಳು ಶಾಲೆಯ ಪಟ್ಟಿಯಲ್ಲಿದ್ದರೂ, ನಾವೆಂದೂ ಅಲ್ಲಿಗೆ ಹೋಗುತ್ತಿರಲಿಲ್ಲ. ನಾನು, ಅಣ್ಣ, ತಂಗಿ ಮತ್ತು ಕೆಲವು ಮಕ್ಕಳಿಗೆ ಮನೆಯಲ್ಲಿಯೇ ಕಲಿಸಿಕೊಡಲು ಉಪಾಧ್ಯಾಯರೊಬ್ಬರನ್ನು ನೇಮಿಸಿದ್ದರು. ನಮ್ಮಪ್ಪನಿಗೆ ಎರಡು ಸಂಗತಿಗಳು ಮನದಟ್ಟಾಗಿದ್ದವು; ಕೆಲವು ಮಾಸ್ತರರನ್ನು ಹೊರತುಪಡಿಸಿದರೆ ಉಳಿದವರು ನಗರದಿಂದ ತಿಂಗಳಿಗೊಮ್ಮೆ ಮಾತ್ರ ಶಾಲೆಗೆ ಬರುತ್ತಿದ್ದರು. ಎರಡನೆಯ ಮುಖ್ಯ ಸಂಗತಿಯೆಂದರೆ, ನಮ್ಮಜ್ಜಿಗೆ ಮನೆಯ ಹುಡುಗರು ಮುಸ್ಲಿಂ ಮತ್ತು ಕೆಳಜಾತಿಯ ಹುಡುಗರ ಜೊತೆಗೆ ಸೇರಿ ಕಲಿಯುವುದು ಇಷ್ಟವಿರಲಿಲ್ಲ.

ಮೆಟ್ರಿಕ್ ಪಾಸಾಗಿದ್ದ ನಮ್ಮಪ್ಪನಿಗೆ ಓದಿನ ಮಹತ್ವ ಗೊತ್ತಿತ್ತು. ಆದ್ದರಿಂದ ಪ್ರಾಥಮಿಕ ಶಾಲೆಯ ನಂತರ ಓದಲೆಂದು ನಮ್ಮಿಬ್ಬರನ್ನು ದೂರದ ಕ್ಯಾಥೊಲಿಕ್ ಬೋರ್ಡಿಂಗ್ ತೆಲುಗು ಮಾಧ್ಯಮ ಶಾಲೆಗೆ ಕಳುಹಿಸಿದರು. ಇಂಗ್ಲಿಷ್ ಮಾಧ್ಯಮ ಶಾಲೆಗೆ ಕಳುಹಿಸುವುದು ಅವನ ಯೋಗ್ಯತೆಗೆ ಮೀರಿದ್ದಾಗಿತ್ತು. ಗಂಡು ಹುಡುಗರಾದ ಕಾರಣ ನಮಗೆ ಕಡೆಯ ಪಕ್ಷ ಓದು ಮುಂದುವರೆಸಲು ಸಾಧ್ಯವಾಯಿತಲ್ಲಾ ಎಂದು ಖುಷಿಯಾಗಿತ್ತು. ನನ್ನ ದೊಡ್ಡಪ್ಪನ ಮಗಳೊಬ್ಬಳು ಕಾಲೇಜು ಓದುವಾಗ ಕೆಳಜಾತಿಯ ಹುಡುಗನೊಬ್ಬನನ್ನು ಪ್ರೀತಿಸಿದ್ದಳೆಂಬ ಕಾರಣದಿಂದ ವಂಶದ ಎಲ್ಲಾ ಹೆಣ್ಣುಮಕ್ಕಳಿಗೆ ಹೆಚ್ಚಿನ ಓದಿನ ಸೌಭಾಗ್ಯವಿರಲಿಲ್ಲ. ಆದರೆ ನಮ್ಮಪ್ಪನ ಹಟದಿಂದಾಗಿ ನನ್ನ ತಂಗಿ ಮಾತ್ರ ಹೆಚ್ಚಿನ ಓದಿಗಾಗಿ ನಗರದಲ್ಲಿದ್ದ ಬಂಧುಗಳ ಮನೆಗೆ ಹೋಗಿದ್ದಳು.

ಕ್ಯಾಥೊಲಿಕ್ ಶಾಲೆಯಲ್ಲಿ ಕ್ರಿಶ್ಚಿಯನ್ ಹುಡುಗರಿಗೆ ವಿದ್ಯಾಭ್ಯಾಸ ಉಚಿತವಾಗಿದ್ದರೂ, ಹಿಂದೂ ಹುಡುಗರಿಗೆ ಸ್ವಲ್ಪ ಮಟ್ಟಿಗೆ ಶಾಲಾ ಶುಲ್ಕ ಇತ್ತು. ಅಲ್ಲಿಯೇ ನಾನು ಮೈಕೆಲ್‌ನನ್ನು ಮೊದಲಿಗೆ ಭೇಟಿಯಾಗಿದ್ದು. ಅವನು ಸೊಗಸಾದ ಹುಡುಗ. ಅವನನ್ನು ಭೇಟಿಯಾದ ಮೊತ್ತಮೊದಲು ನಿನಗೆ ತೆಲುಗು ಬರುತ್ತಾ? ಅಂತ ಕೇಳಿದ್ದೆ! ಹೇಗೆ ಮುಸ್ಲಿಮರು ಉರ್ದು ಮಾತನಾಡುತ್ತಾರೋ, ಹಾಗೇ ಕ್ಯಾಥೋಲಿಕ್‌ನವರು ಬೇರೊಂದು ಭಾಷೆಯನ್ನು ಮಾತನಾಡುತ್ತಿರಬೇಕೆನ್ನುವುದು ನನ್ನ ಕಲ್ಪನೆಯಾಗಿತ್ತು. ನಾವಿಬ್ಬರೂ ಒಳ್ಳೆಯ ಗೆಳೆಯರಾದೆವು. ಅವನ ಮೇಲೆ ಪ್ರೀತಿ ಮೂಡಿತ್ತೋ ಅಥವಾ ಬರೀ ಗೆಳೆತನವಿತ್ತೋ ನನಗೀಗ ನೆನಪಾಗುತ್ತಿಲ್ಲ. ಅವನಲ್ಲಿನ ಏನೋ ವಿಶೇಷತೆಯೊಂದು ಹನ್ನೊಂದು ವರ್ಷದ ನನ್ನನ್ನು ಆಕರ್ಷಿಸಿತ್ತು. ಮತಾಂತರ ಹೊಂದುವುದಕ್ಕೆ ಮುಂಚೆ ತನ್ನ ಕುಟುಂಬಕ್ಕಿದ್ದ ಕಡುಬಡತನ, ತಾಯಿ–ತಂದೆಯ ಜೊತೆ ಮೈಮುರಿಯುವಂತೆ ಹೊಲದಲ್ಲಿ ದುಡಿಯಬೇಕಾದ ಅನಿವಾರ್ಯತೆ, ಅನಂತರ ಓದಲೆಂದು ಈ ಬೋರ್ಡಿಂಗ್ ಶಾಲೆಗೆ ಬಂದಿದ್ದನ್ನು ಮೈಕೆಲ್ ಹೇಳಿಕೊಳ್ಳುತ್ತಿದ್ದ. ‘ಅವನ ಅಪ್ಪ–ಅಮ್ಮ ಅದೆಷ್ಟು ಸ್ವಾರ್ಥಿಗಳು! ಚಿಕ್ಕ ಪುಟ್ಟ ಪ್ರಲೋಭನೆಗೆ ತಮ್ಮ ಧರ್ಮವನ್ನೇ ಬಲಿ ಕೊಟ್ಟು ಬಿಟ್ಟರೆ?’ ಎಂದು ನಾನಾಗ ಯೋಚಿಸುತ್ತಿದ್ದೆ.

ಅರ್ಧವಾರ್ಷಿಕ ರಜೆಗಳು ಬಂದವು. ನಮ್ಮಪ್ಪ ನಮ್ಮನ್ನು ಕರೆದುಕೊಂಡು ಹೋಗಲು ಬಂದರು. ಮೈಕೆಲ್‌ನ ಅಪ್ಪ ಬರಲಿಲ್ಲ. ಏಕೆಂದು ನಾನು ಕೇಳಿದೆ. ಇಲ್ಲಿ ಇಡ್ಲಿ, ಉಪ್ಪಿಟ್ಟು, ಬೇಯಿಸಿದ ಮೊಟ್ಟೆ– ಏನೆಲ್ಲಾ ಹಾಸ್ಟೆಲಿನಲ್ಲಿ ಕೊಡ್ತಾರೆ. ಮನೆಯಲ್ಲಿ ಅವೊಂದೂ ಇರಲ್ಲ. ಜೊತೆಗೆ ಹೊಲಕ್ಕೆ ಹೋಗಿ ಅಪ್ಪನ ಜೊತೆಯಲ್ಲಿ ದುಡೀಬೇಕು. ಅದಕ್ಕೇ ನಮ್ಮಪ್ಪಂಗೆ ‘ರಜೆಗೆ ಬರಲ್ಲ’ ಅಂತ ಪತ್ರ ಬರೆದುಬಿಟ್ಟೆ ಎಂದು ಹೇಳಿದ್ದ. ನನಗೆ ದಿಗ್ಭ್ರಮೆಯಾಗಿತ್ತು. ಆ ಕ್ಷಣದಲ್ಲಿ ಅವರು ಕ್ರಿಶ್ಚಿಯನ್ ಆಗಿ ಪರಿವರ್ತನೆಗೊಂಡಿದ್ದು ಒಳ್ಳೆಯದೇ ಆಯ್ತೆಂದು ಅನ್ನಿಸಿತ್ತು. ಆದರೆ ಪೂರ್ತಿಯಾಗಿ ಒಪ್ಪಿಕೊಳ್ಳಲಾಗಿರಲಿಲ್ಲ. ಕೇವಲ ಇಡ್ಲಿ ಮತ್ತು ಉಪ್ಪಿಟ್ಟಿನ ಸಲುವಾಗಿ ರಾಮಾಯಣ, ಮಹಾಭಾರತ, ಪುರಾಣ, ಎಲ್ಲಕ್ಕೂ ಹೆಚ್ಚಾಗಿ ಭಗವದ್ಗೀತೆಯನ್ನು ಬಿಟ್ಟು ಬಿಡುವುದೆ? ಮೈಕೆಲ್‌ನ ಅಪ್ಪ–ಅಮ್ಮ ಸ್ವಾರ್ಥಿಗಳು ಅನ್ನುವ ಭಾವಕ್ಕೆ ಇನ್ನೊಮ್ಮೆ ಅಂಟಿಕೊಂಡೆ.
ಹೊಸ ಶಾಲೆಯಲ್ಲಿ ನನಗಿಷ್ಟವಾದ ಪದ್ಯ ಮತ್ತು ಶ್ಲೋಕಗಳನ್ನು ಕಲಿಸಿಕೊಡುತ್ತಿಲ್ಲವೆಂದು ಅಪ್ಪನ ಬಳಿ ಹೇಳಿಕೊಂಡೆ. ಇದಕ್ಕೆ ಬದಲು ಯಾವುದಾದರೂ ಹಿಂದೂ ಶಾಲೆಗೆ ಕಳುಹಿಸೆಂದು ಬೇಡಿಕೊಂಡೆ. ಹಿಂದೂ ಸಂಘಟನೆಯಿಂದ ನಡೆಸಲ್ಪಡುತ್ತಿದ್ದ ‘ಸರಸ್ವತಿ ಶಿಶುಮಂದಿರ’ ನಗರದಿಂದ ತುಂಬಾ ದೂರದಲ್ಲಿತ್ತು ಮತ್ತು ಬಹು ಬೇಡಿಕೆಯದಾಗಿತ್ತು. ಅದು ನಮ್ಮಪ್ಪನ ಯೋಗ್ಯತೆಯನ್ನು ಮೀರಿದ್ದಾದ್ದರಿಂದ, ಕಡಿಮೆ ಫೀ ಇರುವ ಈ ಕ್ಯಾಥೊಲಿಕ್ ತೆಲುಗು ಮಾಧ್ಯಮ ಶಾಲೆಗೆ ನಮ್ಮಪ್ಪ ಹೊಂದಾಣಿಕೆ ಮಾಡಿಕೊಂಡಿದ್ದ. ಹೇಯ್, ಹಾಗಾದ್ರೆ... ಅಂತ ಒಂದು ಕ್ಷಣ ಆಲೋಚನೆಗೆ ಸಿಕ್ಕಿದ ನನ್ನ ಮನಸ್ಸು, ಮೈಕೆಲ್‌ನ ಅಪ್ಪ ಸ್ವಾರ್ಥಿ ಎಂದಾದರೆ, ನಮ್ಮಪ್ಪ ಇನ್ನೇನು? ಅವನೂ ಸ್ವಾರ್ಥಿಯಲ್ಲವೆ? ಇಲ್ಲ, ಇಲ್ಲ. ಇಬ್ಬರೂ ಸ್ವಾರ್ಥಿಗಳಲ್ಲ. ಊಟ ಮತ್ತು ಶಿಕ್ಷಣಕ್ಕಿಂತಲೂ ಧರ್ಮ ಯಾವತ್ತೂ ದೊಡ್ಡದಲ್ಲ ಎಂದು ಅರ್ಥ ಮಾಡಿಕೊಂಡಿದ್ದೆ.

ನಿಧಾನಕ್ಕೆ ಕ್ಯಾಥೊಲಿಕ್ ಶಾಲೆಗೆ ಹೊಂದಿಕೊಳ್ಳಲಾರಂಭಿಸಿದೆ. ಅತ್ಯಂತ ಜಾಣ ವಿದ್ಯಾರ್ಥಿಯಾದ್ದರಿಂದ ಎಲ್ಲಾ ಮಾಸ್ತರರ ಮುದ್ದಿನ ಶಿಷ್ಯನಾಗಿದ್ದೆ. ಶಾಲೆಯಲ್ಲಿ ಎಲ್ಲಾ ಕ್ಯಾಥೊಲಿಕ್ ಮಕ್ಕಳು ಬೆಳಿಗ್ಗೆ ಒಂದು ತಾಸು ಚರ್ಚಿನಲ್ಲಿ ಪ್ರಾರ್ಥನೆ ಮಾಡುವುದೆಂದೂ, ಉಳಿದವರು ಆ ಹೊತ್ತಿನಲ್ಲಿ ಅಭ್ಯಾಸ ಮಾಡಿಕೊಳ್ಳಬೇಕೆಂದೂ ರಿವಾಜಿತ್ತು. ಅದನ್ನು ನಾವೆಲ್ಲಾ ದ್ವೇಷಿಸುತ್ತಿದ್ದೆವು. ಒಂದು ದಿನ ನಾನು ಓದಿಗೆ ಚಕ್ಕರ್ ಹೊಡೆದು, ಕ್ಯಾಥೊಲಿಕ್ ಹುಡುಗರ ಜೊತೆಗೆ ಪ್ರಾರ್ಥನೆ ಮಾಡಲು ಚರ್ಚಿಗೆ ಹೋದೆ. ನನಗೆ ಚರ್ಚ್ ಇಷ್ಟವಾಗಲಿಲ್ಲ. ಅಲ್ಲಿ ಆರತಿ ಮಾಡುವ ಸಂಪ್ರದಾಯವೇ ಇರಲಿಲ್ಲ. ಊದಿನಕಡ್ಡಿ ಬೆಳಗುವುದರ ಬದಲು ಮೋಂಬತ್ತಿ ಹಚ್ಚಿಡುತ್ತಿದ್ದರು. ಸಂಸ್ಕೃತ ಶ್ಲೋಕ ಮತ್ತು ಮಂಗಳಾರತಿಯ ಹಾಡಿನ ಬದಲಾಗಿ ಯಾವುದೋ ತೆಲುಗು ಹಾಡುಗಳನ್ನು ಹಾಡುತ್ತಿದ್ದರು. ನನಗೆ ಸಂಪೂರ್ಣ ಗೊಂದಲವಾಯ್ತು. ಮಂಗಳಾರತಿ ಹಾಡು ಮತ್ತು ಶ್ಲೋಕಗಳಿಲ್ಲದೆ ದೇವರನ್ನು ಪ್ರಾರ್ಥಿಸಬಹುದೆ? ದೇವರನ್ನು ಪೂಜಿಸುವ ಸರಿಯಾದ ಮಾರ್ಗ ಯಾವುದು? ಸರಿಯಾದ ದೇವರು ಯಾರು? ನಮ್ಮ ದೇವರೆ ಅಥವಾ ಅವರ ದೇವರೆ? ಅವರ ದೇವರ ಗುಡಿಯನ್ನು ಪ್ರವೇಶಿಸಿದ್ದಕ್ಕೆ ನನ್ನ ದೇವರು ನನಗೆ ಶಿಕ್ಷೆ ಕೊಡುತ್ತಾನೆಯೆ? ನನ್ನಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿದವು.

ಒಂದು ದಿನ ನನ್ನ ತೆಲುಗು ಪಂಡಿತರ ಬಳಿ ಈ ಎಲ್ಲಾ ಪ್ರಶ್ನೆಗಳನ್ನು ತೆರೆದಿಟ್ಟೆ. ಅವರು ಹೇಳಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತವೆ. ‘ಮಗೂ, ದೇವರು ಒಬ್ಬನೇ! ಅವರು ಒಂದು ಹೆಸರಿನಿಂದ ಕರೆದರೆ, ನಾವು ಮತ್ತೊಂದು ಹೆಸರಿನಿಂದ ಕರೆಯುತ್ತೇವೆ. ಯಾವುದೇ ಭಾಷೆಯಲ್ಲಿ ಪ್ರಾರ್ಥಿಸಿದರೂ, ಹೇಗೇ ಪೂಜೆ ಮಾಡಿದರೂ ಅವನು ಖಂಡಿತಾ ಕೇಳಿಸಿಕೊಳ್ಳುತ್ತಾನೆ – ಅಷ್ಟೇ!’. ಅಂದಿನಿಂದ ಏಕೈಕ ದೇವರ ಧರ್ಮ ನನ್ನದಾಗಿದೆ. ಈವತ್ತಿನವರೆಗೂ ಬೇರೆ ಯಾವುದೇ ರೀತಿಯಿಂದಲೂ ನನ್ನನ್ನು ಒಪ್ಪಿಸಲು ಯಾರಿಗೂ ಸಾಧ್ಯವಾಗಿಲ್ಲ.

ಮತ್ತೆರಡು ವರ್ಷಗಳು ಸಂದು ಹೋದವು. ನಾನು ಎಂಟನೇ ತರಗತಿಗೆ ಬಂದೆ. ಒಂದು ದಿನ ರಮೇಶ್ ಎನ್ನುವ ಸಹಪಾಠಿಯೊಬ್ಬ ಎಲ್ಲರೂ ನನ್ನ ಬೆನ್ನ ಹಿಂದೆ ನಗುತ್ತಾರೆಂದು ನನಗೆ ಹೇಳಿದ. ಹುಡುಗರೆಲ್ಲಾ ನನ್ನನ್ನು ಅಣುಕಿಸುತ್ತಿದ್ದರು– ನನ್ನ ನಡೆ, ನುಡಿ, ಪ್ರತಿಯೊಂದೂ! ನಾನು ಮಾಸ್ತರರ ಪಟ್ಟಶಿಷ್ಯನಾದ್ದರಿಂದ ದೂರು ಕೊಡಬಹುದೆಂಬ ಹೆದರಿಕೆಯಿಂದ ನೇರವಾಗಿ ನನ್ನ ಮುಂದೆ ಅಣುಕಿಸಲು ಅವರು ಹಿಂಜರಿಯುತ್ತಿದ್ದರು. ನನಗೇನೂ ಅಂತಹ ಬೇಸರವಾಗಲಿಲ್ಲ, ಅದಕ್ಕೆ ಬದಲಾಗಿ ಪ್ರಾಮಾಣಿಕವಾಗಿ ಆ ವಿಷಯವನ್ನು ರಮೇಶ್ ಹೇಳಿದ್ದಕ್ಕಾಗಿ ಸಂತೋಷವಾಯ್ತು. ನನಗವನು ತುಂಬಾ ಇಷ್ಟವಾದ. ನಾವಿಬ್ಬರೂ ಒಳ್ಳೆಯ ಗೆಳೆಯರಾದೆವು.

ರಮೇಶನ ತಂದೆ–ತಾಯಿ ಉತ್ತರ ಭಾರತದ ಕಡೆಗೆ ವ್ಯಾಪಾರಕ್ಕಾಗಿ ವಲಸೆ ಹೋಗಿದ್ದರಿಂದ, ಹಿಂದಿ ಮತ್ತು ತೆಲುಗು ಭಾಷೆಗಳೆರಡನ್ನೂ ಅವನು ಸುಲಲಿತವಾಗಿ ಮಾತನಾಡುತ್ತಿದ್ದ. ನಗರದ ಬದುಕನ್ನು ಕಂಡ ಕೆಲವೇ ಬೆರಳೆಣಿಕೆಯ ಮಕ್ಕಳಲ್ಲಿ ಅವನೂ ಒಬ್ಬನಾಗಿದ್ದ. ಟೂತ್‌ಪೇಷ್ಟೂ, ಬ್ರಷ್ಷು, ಶ್ಯಾಂಪೂ, ಲಕ್ಸ್ ಸೋಪು ಅವನು ಬಳಸಿದರೆ, ಉಳಿದ ನಾವು ಹಲ್ಲಿನ ಪುಡಿ, ಕೂದಲು ತೊಳೆಯಲು ಡಿಟರ್ಜೆಂಟ್ ಬಾರ್, ಮೈ ತೊಳೆಯಲು ಲೈಫ್‌ಬಾಯ್ ಸೋಪನ್ನು ಬಳಸುತ್ತಿದ್ದೆವು. ಶಾಲೆಯಲ್ಲಿದ್ದ ಏಕೈಕ ಫೋನಿನಲ್ಲಿ ಅವನೊಬ್ಬನಿಗೆ ಮಾತ್ರ ಕರೆ ಬರುತ್ತಿತ್ತು.

ರಮೇಶ್ ನನಗೆ ಹಿಂದಿ ಕಲಿಸಿಕೊಡಲು ಪ್ರಾರಂಭಿಸಿದ. ಹಿಂದಿ ಮತ್ತು ಉರ್ದು ಭಾಷೆಗಳೆರಡೂ ಒಂದೇ ಎಂದೂ ಮತ್ತು ಅದನ್ನು ಕೇವಲ ಮುಸಲ್ಮಾನರು ಮಾತ್ರ ಮಾತನಾಡಬೇಕೆಂದು ನಾನು ಭಾವಿಸಿದ್ದೆ. ಅವನು ನನಗೆ ಹಿಂದಿ ಕಲಿಸಿಕೊಡುವ ತನಕ ನಾನು ಅದೊಂದು ವಿಷಯವನ್ನು ಹೊರತುಪಡಿಸಿ ಉಳಿದದ್ದರಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದೆ. ಅದಕ್ಕೆ ಪ್ರತಿಯಾಗಿ ನಾನವನಿಗೆ ಗಣಿತ ಮತ್ತು ಇತರ ವಿಷಯಗಳನ್ನು ಕಲಿಸಿಕೊಡುತ್ತಿದ್ದೆ. ನಾವಿಬ್ಬರು ಜೊತೆಯಲ್ಲಿ ಬಹಳಷ್ಟು ಸಮಯವನ್ನು ಕಳೆಯುತ್ತಿದ್ದೆವು. ಹಾಸ್ಟೆಲಿನಲ್ಲಿ ರಾತ್ರಿ ಏನೆಲ್ಲಾ ನಡೆಯುತ್ತಿತ್ತೆಂದು ರಮೇಶ್ ನನಗೆ ಹೇಳುತ್ತಿದ್ದ. ಹೇಗೆ ವಾರ್ಡನ್‌ಗಳು ಕೆಲವು ಹುಡುಗರನ್ನು ತಮ್ಮ ರೂಮಿಗೆ ಕರೆಸಿಕೊಳ್ಳುತ್ತಾರೆಂದೂ, ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ರಾತ್ರಿಯ ವೇಳೆ ತಮ್ಮ ರೂಮಿಗೆ ಹೇಳಿ ಕಳುಹಿಸುತ್ತಾರೆಂದೂ ಹೇಳುತ್ತಿದ್ದ. ಹಾಸ್ಟೆಲಿನಲ್ಲೇ ಇದ್ದರೂ ನನಗೆ ಇವೊಂದೂ ತಿಳಿದಿರಲಿಲ್ಲ. ನನ್ನನ್ನು ಯಾರೂ ಆ ರೀತಿ ನಡೆಸಿಕೊಂಡಿರಲಿಲ್ಲ. ಬಹುಶಃ ನಾನು ಮಾಸ್ತರರ ಮುದ್ದಿನ ಶಿಷ್ಯನೆಂದೋ ಅಥವಾ ನನಗೆ ರಮೇಶನ ಸಹಕಾರವಿದೆಯೆಂದೋ ಇರಬೇಕೆಂದು ನನ್ನ ಅಂದಾಜು. ನನ್ನನ್ನು ಯಾರಾದರೂ ಅಣಕಿಸಿದರೆ ಅಥವಾ ಗೋಳು ಹೊಯ್ದುಕೊಂಡರೆ ಅವನು ನನಗಾಗಿ ಹೊಡೆದಾಡುತ್ತಿದ್ದ. ಕೆಲವೇ ದಿನಗಳಲ್ಲಿ ನಾನು ಅವನ ಪ್ರೀತಿಯಲ್ಲಿ ಬಿದ್ದೆ. ಸಂಜೆಯ ವೇಳೆ ಆಡುತ್ತಿದ್ದ ಎಲ್ಲಾ ಆಟಗಳಲ್ಲಿ ಅವನ ಗುಂಪಿನಲ್ಲಿಯೇ ನಾನಿರುವಂತೆ ನೋಡಿಕೊಳ್ಳುತ್ತಿದ್ದೆ. ಅವನ ಬಟ್ಟೆಗಳನ್ನು ಒಗೆದುಕೊಡುತ್ತಿದ್ದೆ, ಅವನ ಹೋಂ ವರ್ಕ್ ಮಾಡುತ್ತಿದ್ದೆ, ಅವನು ಪಾಸಾಗುವುದಕ್ಕೆ ಸಹಾಯ ಮಾಡುತ್ತಿದ್ದೆ... ಅವನಿಗಾಗಿ ನಾನು ಏನೆಲ್ಲಾ ಮಾಡುತ್ತಿದ್ದೆ! ಅವನೊಡನೆ ನನಗೆ ಎಂದೂ ದೈಹಿಕ ಸಂಬಂಧವಿರಲಿಲ್ಲ, ಬಹುಶಃ ಅಪ್ಪುಗೆ ಮತ್ತು ಮುತ್ತುಗಳೇ ಆ ವಯಸ್ಸಿಗೆ ಸಾಕಾಗುತ್ತಿತ್ತು. ಎಲ್ಲರೂ ನಮ್ಮಿಬ್ಬರನ್ನು ಗಂಡ-ಹೆಂಡಿರೆಂದು ಕರೆಯಲಾರಂಭಿಸಿದರು. ನನಗೆ ಹಾಗಂದಾಗ ಖುಷಿ ಆಗುತ್ತಿತ್ತು! ಆದರೆ ಕೇವಲ ಒಂದೂವರೆ ವರ್ಷದಲ್ಲಿ ಅವನ ಸೆಕ್ಷನ್ ಬದಲಾದಾಗ ಅವೆಲ್ಲಕ್ಕೂ ಕೊನೆಯಾಯಿತು.

ನಾನು ಹತ್ತನೇ ತರಗತಿಯಲ್ಲಿ ರಜೆಗೆಂದು ಊರಿಗೆ ಬಂದಾಗ, ನನ್ನ ವಯಸ್ಸಿನವನೇ ಆದ ಇಸ್ಮಾಯಿಲ್ ಎಂಬ ಮುಸ್ಲಿಂ ಹುಡುಗನ ಪರಿಚಯವಾಯ್ತು. ಹೊಲದಲ್ಲಿರುವ ಬಾವಿಯೊಂದರಲ್ಲಿ ಈಜು ಕಲಿಸಿಕೊಡಲೆಂದು ನನ್ನನ್ನವನು ಕರೆದುಕೊಂಡು ಹೋಗಿದ್ದ. ಒಣಗಿದ ಕುಂಬಳಕಾಯಿಯೊಂದನ್ನು ಕಟ್ಟಿ ನನಗೆ ಈಜು ಕಲಿಸಿಕೊಡಲು ಪ್ರಯತ್ನಿಸಿದ. ನನಗೆ ಈಜು ಬರಲಿಲ್ಲವಾದರೂ, ಅವನ ಕಲಿಸಿಕೊಡುವ ಹುಮ್ಮಸ್ಸನ್ನು ಕಂಡು ಖುಷಿ ಪಟ್ಟಿದ್ದೆ. ಅನಂತರ ಅವನು ನನಗೆ ಸೈಕಲ್ ತುಳಿಯಲು ಕಲಿಸಿಕೊಡಲಾರಂಭಿಸಿದ. ಈ ಬಾರಿ ನಾನು ಯಶಸ್ವಿಯಾದೆ. ಅವನನ್ನು ನಾನು ತುಂಬಾ ಇಷ್ಟ ಪಡುತ್ತಿದ್ದೆ. ನನ್ನ ಮನೆಗೆ ಕರೆದುಕೊಂಡು ಹೋಗಿ ಟೀವಿ ತೋರಿಸಬೇಕೆಂದು ಆಸೆಪಡುತ್ತಿದ್ದೆ. ಹೇಳೋದು ಮರೆತೆ, ಆ ಹೊತ್ತಿಗೆ ನಮ್ಮಪ್ಪ ನಮ್ಮ ಹಳ್ಳಿಯ ಏಕೈಕ ಬಣ್ಣದ ಟೀವಿಯನ್ನು ಖರೀದಿಸಿ ತಂದಿದ್ದ. ಆಗ ಕೇವಲ ದೂರದರ್ಶನ ಮಾತ್ರ ಇದ್ದಿದ್ದು. ’ಋತು ರಾಗಾಲು’ ಎನ್ನುವ ತೆಲುಗು ಧಾರವಾಹಿಯನ್ನು ನೋಡಲೆಂದು ಸುಮಾರು 50-60 ಜನ ನಮ್ಮ ಮನೆಗೆ ಬರುತ್ತಿದ್ದರು. ಆದರೆ ನಮ್ಮಜ್ಜಿ ಇಸ್ಮಾಯಿಲ್‌ನನ್ನು ಬರಗೊಡಿಸಲಿಲ್ಲ, ಎಷ್ಟಾದರೂ ಮುಸ್ಲಿಂ ಹುಡುಗನಲ್ಲವೆ!

ಅದೇ ಹೊತ್ತಿನಲ್ಲಿಯೇ ನಮ್ಮಪ್ಪ ಯಾವುದೋ ಅನಾರೋಗ್ಯದಿಂದ ನರಳಲಾರಂಭಿಸಿದ. ಅವನಿಗೆ ಸಿಕ್ಕಾಪಟ್ಟೆ ಜ್ವರ ಬಂದಿತ್ತು. ನಮ್ಮ ಹಳ್ಳಿಯಲ್ಲಿ ಕೇವಲ ಇಬ್ಬರು ‘ಡಾಕ್ಟರು’ಗಳು ಇದ್ದರು. ಅವರಿಬ್ಬರೂ ಓದಿ ಡಾಕ್ಟರರಾದವರಲ್ಲ. ನಗರದಲ್ಲಿ ಔಷಧದ ಅಂಗಡಿಯಲ್ಲಿ ಕೆಲಸ ಮಾಡಿದ ಅನುಭವದಿಂದ ಅವರು ನಮ್ಮೂರಲ್ಲಿ ‘ಡಾಕ್ಟರ’ರಾಗಿದ್ದರು. ಅವರಲ್ಲಿ ಒಬ್ಬರು ನನ್ನಂತಹ ಜನರನ್ನು ಮಾತ್ರ ನೋಡುವ ಮೇಲ್ಜಾತಿಯ ಡಾಕ್ಟರರಾದರೆ, ಮತ್ತೊಬ್ಬರು ಇಸ್ಮಾಯಿಲ್‌ನ ತಂದೆ; ಮುಸ್ಲಿಂ ಮತ್ತು ಇತರ ಕೆಳವರ್ಗದ ಹಿಂದೂ ಜನರನ್ನು ನೋಡುವ ಡಾಕ್ಟರು. ಆ ಹೊತ್ತಿನಲ್ಲಿ ನಮ್ಮ ಡಾಕ್ಟರರು ಊರಿನಲ್ಲಿರಲಿಲ್ಲ. ನನ್ನ ತಂದೆಯ ಸ್ಥಿತಿಯ ಬಗ್ಗೆ ನಮ್ಮ ಮನೆಯವರು ಸಿಕ್ಕಾಪಟ್ಟೆ ಆತಂಕಕ್ಕೆ ಒಳಗಾಗಿದ್ದರು. ಕೊನೆಗೆ ಬೇರೆ ಯಾವ ಆಯ್ಕೆಗಳೂ ಇಲ್ಲದೆ, ಮುಸ್ಲಿಂ ಡಾಕ್ಟರರಾದ ಇಸ್ಮಾಯಿಲ್ ತಂದೆಯನ್ನು ಪ್ರಪ್ರಥಮ ಬಾರಿಗೆ ನಮ್ಮ ಮನೆಯೊಳಗೆ ಬಿಟ್ಟುಕೊಂಡಿದ್ದರು. ತಂದೆಯವರು ಗುಣಮುಖರಾದರು. ಅಂದಿನಿಂದ ಇಸ್ಮಾಯಿಲ್‌ಗೆ ನಮ್ಮ ಮನೆಯ ಬಣ್ಣದ ಟೀವಿ ನೋಡಲು ಪರವಾನಗಿ ಸಿಕ್ಕಿತು. ಮತ್ತೊಮ್ಮೆ ನನಗೆ ‘ಜೀವಕ್ಕಿಂತಲೂ ಧರ್ಮ ಮಹತ್ವದ್ದಲ್ಲ’ ಎನ್ನುವ ಸತ್ಯ ಗೋಚರಿಸಿತ್ತು. ಆಗಿನಿಂದ ನಾನು ಇಸ್ಮಾಯಿಲ್‌ನನ್ನು ಮತ್ತೆ ಮತ್ತೆ ಮನೆಗೆ ಕರೆದುಕೊಂಡು ಬರಲಾರಂಭಿಸಿದೆ; ಭಜನೆಗೂ ಅವನು ಬೇಕು, ಗೀತಾಪಾರಾಯಣಕ್ಕೂ ಅವನಿರಬೇಕು. ಮನೆಯಲ್ಲಿ ಯಾರೂ ವಿರೋಧಿಸಲಿಲ್ಲ. ಬಹುಶಃ ಅವರಿಗೆ ಧರ್ಮಕ್ಕಿಂತಲೂ ಮನುಷ್ಯ ಸಂಬಂಧ ಮುಖ್ಯವೆಂದು ಹೊಳೆದಿರಬೇಕು ಅಥವಾ ನನ್ನನ್ನು ಅಸಮಾಧಾನಗೊಳಿಸುವುದು ಬೇಡವೆನ್ನಿಸಿರಬೇಕು. ಅಷ್ಟರಲ್ಲಿ ನಾನು ಮತ್ತೆ ಹಾಸ್ಟೆಲಿಗೆ ಹೋಗುವ ಸಮಯ ಬಂತು. ಕೆಲವೇ ದಿನಗಳಲ್ಲಿ ನಾನು ಇಸ್ಮಾಯಿಲ್‌ನನ್ನು ಮರೆತುಬಿಟ್ಟೆ.

ಬಹುಶಃ ಮೈಕೆಲ್ ಮತ್ತು ಇಸ್ಮಾಯಿಲ್‌ನನ್ನು ನಾನು ಭೇಟಿಯಾಗಿರದಿದ್ದರೆ ನನ್ನ ಧರ್ಮದ ಪರಿಕಲ್ಪನೆ ಹೀಗಿರುತ್ತಿರಲಿಲ್ಲ. ರಮೇಶನ ಪ್ರೀತಿಯಲ್ಲಿ ಬೀಳದೆ ಹಾಸ್ಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಅಥವಾ ಕೀಟಲೆಗೆ ಗುರಿಯಾಗಿದ್ದರೆ, ನನ್ನ ಲೈಂಗಿಕತೆಯ ಅರಿವು ಈಗಿನಂತಿರುತ್ತಿರಲಿಲ್ಲ. ನನ್ನ ಮತ್ತು ರಮೇಶನ ಪ್ರೀತಿಯನ್ನು ಕಣ್ಣಾರೆ ಕಂಡಿರದಿದ್ದರೆ ನನ್ನ ಖಾಸಾ ಗೆಳೆಯರಿಗೆ ಭಿನ್ನ ಲೈಂಗಿಕತೆಯ ಸಾಧ್ಯತೆಯ ತಿಳಿವಳಿಕೆಯೂ ಇರುತ್ತಿರಲಿಲ್ಲ.

ಕೊನೆಗೂ ನಮ್ಮ ನಮ್ಮ ಅನುಭವಗಳು ನಮ್ಮ ನಂಬಿಕೆಗಳನ್ನು ಗಟ್ಟಿಗೊಳಿಸುತ್ತವೆಯೇ ಹೊರತು, ಯಾವುದೇ ತರ್ಕಗಳಲ್ಲ.

(ಐಐಟಿ ಮದ್ರಾಸಿನಲ್ಲಿ ಬಿಟೆಕ್ ಓದಿರುವ ‘ಶ್ರೀನಿ’, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಮೂಲತಃ ಹೈದರಾಬಾದ್ ಸಮೀಪದ ಹಳ್ಳಿಯವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೇ ಮತ್ತು ಇತರ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.)

Comments