ಶನಿವಾರ, 30 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ ದಂಡಿಸಿದರು; ರಕ್ತ ಚಿಮ್ಮಿಸಿದರು

ಶಿಯಾ ಇರಾನಿ ಸಮುದಾಯದಿಂದ ಮೊಹರಂ ಮೆರವಣಿಗೆ
Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಲಬುರ್ಗಿ: ಅವರೆಲ್ಲ ‘ಹಸನ್‌...­ಹುಸೇನ್‌’, ‘ಅಲಿ..ಅಲಿ...‘ ಎನ್ನುತ್ತ ಬ್ಲೇಡ್‌ನಿಂದ ದೇಹಕ್ಕೆ ಹೊಡೆದು­ಕೊಳ್ಳು­ತ್ತಿದ್ದರು. ಹೊಡೆತದ ರಭಸಕ್ಕೆ ರಕ್ತ ಚಿಮ್ಮುತ್ತಿತ್ತು. ಇಡೀ ದೇಹ ರಕ್ತಸಿಕ್ತ­ವಾ­ಗಿತ್ತು. ರಕ್ತ ಮತ್ತು ಗಾಯದ ಪರಿವೆ ಇಲ್ಲದೆ ಅವರೆಲ್ಲ  ನರ್ತಿಸುತ್ತಲೇ ಇದ್ದರು.

ನಗರದಲ್ಲಿರುವ ಶಿಯಾ ಮುಸ್ಲಿಂ ಸಮುದಾಯದವರು ಮಂಗಳವಾರ ಮೊಹರಂ ಅಂಗವಾಗಿ ನಡೆಸಿದ ಮೆರ­ವಣಿಗೆಯಲ್ಲಿ ಆ ಸಮುದಾಯದ ಯುವ­ಕರು ಹೀಗೆ ದೇಹದಂಡಿಸಿ­ಕೊಂ­ಡರು. ಉಳಿದವರು ಕಪ್ಪುಬಟ್ಟೆ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಇಲ್ಲಿಯ ರೈಲ್ವೆ ನಿಲ್ದಾಣ ಹಿಂಭಾಗದ ತಾರ್‌ಪೈಲ್‌ ಪ್ರದೇಶದ ಇರಾನಿ ಮಸೀದಿಯಿಂದ ಮಧ್ಯಾಹ್ನ ಆರಂಭ­ವಾದ ಮೆರವಣಿಗೆ, ಸರ್ದಾರ್‌ ವಲ್ಲಭ­ಭಾಯ್‌ ಪಟೇಲ್‌ ವೃತ್ತದವರೆಗೂ ಸಾಗಿತು. ಸಮಾಜದ ಧರ್ಮಗುರು ಮೌಲಾನಾ ನಜರ್ ಅಬ್ಬಾಸ್ ರಜ್ವಿ ಅವರು ನೇತೃತ್ವ ವಹಿಸಿದ್ದರು.

‘ಶಿಯಾ ಮುಸ್ಲಿಂ ಇರಾನಿ ಸಮುದಾಯಕ್ಕೆ ಸೇರಿದ ಅಂದಾಜು 600 ಜನರು ಇಲ್ಲಿ ವಾಸವಾಗಿದ್ದೇವೆ. ಮೊಹರಂ ಆರಂಭದ ದಿನದಿಂದ 2 ತಿಂಗಳು 10 ದಿನ ಶೋಕಾಚರಣೆ ಮಾಡು­ತ್ತೇವೆ. ಈ ಮೆರವಣಿಗೆ ಶೋಕಾ­ಚರಣೆಯ ಒಂದು ಭಾಗ’ ಎಂದು ಕಲಬುರ್ಗಿ ಇರಾನಿ ಯೂನಿಯನ್‌ ಅಧ್ಯಕ್ಷೆ ರುಕ್ಸಾರ್‌ಬೇಗಂ ಗುಲಾಂಹು­ಸೇನ ಇರಾನಿ ಹೇಳಿದರು.

‘ಇಸ್ಲಾಂ ಸ್ಥಾಪನೆಗಾಗಿ ಹಜರತ್‌ ಹುಸೇನ್‌ ಅವರು ಹುತಾತ್ಮರಾಗಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮತ್ತು ಅವರ ಬಲಿದಾನವನ್ನು ನೆನಪಿಸಲು ಈ ಆಚರಣೆ. ಸಮಾಜದ 50ಕ್ಕೂ ಹೆಚ್ಚು ಯುವಕರು ಮೈಮೇಲೆ ಬ್ಲೇಡ್‌ನಿಂದ ಹೊಡೆದುಕೊಂಡು ಗಾಯ ಮಾಡಿ­ಕೊಂ­ಡರು.

ಈ ಗಾಯಕ್ಕೆ ಯಾವುದೇ ಚಿಕಿತ್ಸೆ ಪಡೆಯುವುದಿಲ್ಲ. ದೇವರಿಗಾಗಿ ದೇಹ ದಂಡಿಸಿದ್ದೇವೆ. ದೇವರೇ ಅದನ್ನು ವಾಸಿ ಮಾಡುತ್ತಾನೆ ಎಂಬುದು ನಮ್ಮ ನಂಬಿಕೆ’ ಎಂದರು. ‘ಈ ಅವಧಿಯಲ್ಲಿ ನಾವೆಲ್ಲ ಕಪ್ಪು ಬಟ್ಟೆ ತೊಡುತ್ತೇವೆ. ಪ್ರತಿ ನಿತ್ಯ ಬೆಳಿಗ್ಗೆ ಮತ್ತು ರಾತ್ರಿ 9ಕ್ಕೆ ಇಲ್ಲಿಯ ಇರಾನಿ ಮಸೀದಿಯಲ್ಲಿ ಒಟ್ಟಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ.

2 ತಿಂಗಳು 10 ದಿನದ ನಂತರ ಖುಷಿ ದಿನ. ಹುತಾತ್ಮ ಹಜರತ್‌ ಇಮಾಮ್‌ ಹುಸೇನ್‌ ಅವರಿಗೆ ಮುಕ್ತಿ ದೊರೆಯಿತು ಎಂದು ಖುಷಿ ಆಚರಿಸುತ್ತೇವೆ. ಹೊಸ ಬಟ್ಟೆ ತೊಟ್ಟು ಮನೆಯಲ್ಲಿ ಬಗೆ ಬಗೆಯ ತಿಂಡಿ ತಯಾರಿಸಿ ಸಂಭ್ರಮಿಸುತ್ತೇವೆ’ ಎಂದು ಹೇಳಿದರು. ‘ಕೂಲಿಂಗ್‌ ಗ್ಲಾಸ್‌, ಹರಳಿನ ವ್ಯಾಪಾರ ಮಾಡುತ್ತ ಜೀವನ ನಿರ್ವಹಿಸುತ್ತಿದ್ದೇವೆ. ರಾಜ್ಯ ಸರ್ಕಾರ ನಮಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.

ನಾವು ಅಲ್ಪಸಂಖ್ಯಾತರ ಇಲಾಖೆಯ ನೆರವಿನಿಂದಲೂ ವಂಚಿತರಾಗಿದ್ದೇವೆ. ನಮ್ಮನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಲ್ಲಿ ಒಂದು ಸ್ಮಶಾನ ಭೂಮಿಯೂ ನಮಗಿಲ್ಲ’ ಎಂದು ಸಮಾಜದ ಗುಲಾಮ್‌ ಹಸನ್‌ ದೂರಿದರು.

ಕಲಬುರ್ಗಿ ನಗರದಲ್ಲಿ ಕಳೆದ ಏಳು ವರ್ಗಳಿಂದ ಈ ಆಚರಣೆ ನಡೆಸುತ್ತಿರುವುದಾಗಿಯೂ ಅವರು ಹೇಳಿದರು.

ಏನೀ ಆಚರಣೆ?
ಮುಸ್ಲಿಂ ಸಮುದಾಯದಲ್ಲಿ ಶಿಯಾ ಮತ್ತು ಸುನ್ನಿ ಎಂಬ ಎರಡು ಪಂಗಡಗಳಿವೆ. ಮಹಮ್ಮದ್‌ ಪೈಗಂಬರರ ನಿಧನದ ಬಳಿಕ ಅರಬ್ಬರು ಪೈಗಂಬರರ ಪಥದಲ್ಲಿ ನಡೆಯಬಲ್ಲ ಒಬ್ಬರನ್ನು ತಮ್ಮ ಖಲೀಫ್‌ನಾಗಿ ಆಯ್ಕೆ ಮಾಡಿಕೊಳ್ಳಲಾರಂಭಿಸಿದರು.

ಅವರು ಸುನ್ನಿ ಎನಿಸಿಕೊಂಡರು. ಆದರೆ, ಈ ವ್ಯವಸ್ಥೆ ಇನ್ನೊಂದು ಬಣಕ್ಕೆ ಸಮ್ಮತವಾಗಲಿಲ್ಲ.
ಪೈಗಂಬರರ ಬಳಿಕ ಅರಬ್ಬರ ಆಧ್ಯಾತ್ಮಿಕ ನಾಯಕ ಹಾಗೂ ಖಲೀಫ್‌ ಆಗಬೇಕಿದ್ದುದು ಅವರ ಅಳಿಯ ಅಲಿ ಎಂಬುದು ಅವರ ಬಯಕೆಯಾಗಿತ್ತು. ಅವರು ತಮ್ಮನ್ನು ‘ಅಲಿ’ ಅವರ ಅನುಯಾಯಿಗಳು ಎಂದು ಘೋಷಿಸಿಕೊಂಡರು.

ಅಲಿ ಮತ್ತು ಅವರ ಮಕ್ಕಳಾದ ಹಸನ್‌–ಹುಸೇನ್‌ ರನ್ನು ಒಳಗೊಂಡ 12 ಜನ  ಇಮಾಮರನ್ನು ತಮ್ಮ ಆಧ್ಯಾತ್ಮಿಕ ನಾಯಕರೆಂದು ಸ್ವೀಕರಿಸಿದರು.

ಅವರನ್ನು ಶಿಯಾಗಳು ಎಂದು ಕರೆಯಲಾಗುತ್ತದೆ. ಅಲಿ, ಹಸನ್‌, ಹುಸೇನ್‌ ಪಿತೂರಿಯಿಂದ ಕೊಲ್ಲಲ್ಪಟ್ಟರು ಎಂಬುದು ಇತಿಹಾಸ.

‘ಮೊಹರಂ’ ಎಂದರೆ ನಿಷೇಧಿತ, ಅಶುಭ ಎಂದರ್ಥ. ಈ ಮಾಸದಲ್ಲಿ ಶಿಯಾಗಳು ಶುಭಕಾರ್ಯ ಮಾಡುವುದಿಲ್ಲ. ಕಪ್ಪು ಬಟ್ಟೆ ಧರಿಸಿ, ಮನೆಯ ಮೇಲೆ ಕಪ್ಪು ಬಾವುಟ ಹಾರಿಸುತ್ತಾರೆ.

ಹುತಾತ್ಮರ ಹೆಸರಿನಲ್ಲಿ ಪಂಜಾ (ಹಸ್ತ), ಆಲಂ (ಮೆರೆಸುವ ಚಿಹ್ನೆ)ಗಳಿಗೆ ಕಪ್ಪುಬಟ್ಟೆ ತೊಡಿಸಿ ಆರಾಧಿಸುತ್ತಾರೆ.
ಹುತಾತ್ಮರ ಶವಪೆಟ್ಟಿಗೆಯ (ಡೋಲಿ) ಮೆರವಣಿಗೆ ಮಾಡುತ್ತಾರೆ. ಹುತಾತ್ಮರ ನೆನಪಿನಲ್ಲಿ ದೇಹದಂಡನೆ ಮಾಡಿಕೊಳ್ಳುವುದು ಸಂಪ್ರದಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT