ಏರ್‌ ಇಂಡಿಯಾ ವಿಮಾನಗಳಿಗೆ ಬಾಂಬ್‌ ಬೆದರಿಕೆ

ನಿಲ್ದಾಣಗಳಲ್ಲಿ ಕಟ್ಟೆಚ್ಚರ

ಏರ್‌ ಇಂಡಿಯಾದ ಎರಡು ವಿಮಾನಗಳಿಗೆ ಬಾಂಬ್‌ ಮತ್ತು ಆತ್ಮಾಹುತಿ ದಾಳಿ ಬೆದರಿಕೆ ಬಂದ ಕಾರಣ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಕೊಚ್ಚಿ (ಪಿಟಿಐ): ಏರ್‌ ಇಂಡಿಯಾದ ಎರಡು ವಿಮಾನಗಳಿಗೆ ಬಾಂಬ್‌ ಮತ್ತು ಆತ್ಮಾಹುತಿ ದಾಳಿ ಬೆದರಿಕೆ ಬಂದ ಕಾರಣ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

‘ಮುಂಬೈನಿಂದ ಕೊಚ್ಚಿಗೆ ಅ. 25ರ (ಶನಿವಾರ) ಬೆಳಗಿನ ಜಾವ 5ಕ್ಕೆ ಮತ್ತು ಅಹಮದಾಬಾದ್‌ನಿಂದ ಮುಂಬೈಗೆ ಶುಕ್ರವಾರ ಮಧ್ಯರಾತ್ರಿ ನಂತರ ಹೊರಡುವ ಏರ್‌ ಇಂಡಿಯಾ ವಿಮಾನಗಳಿಗೆ ಬಾಂಬ್‌ ಇಲ್ಲವೇ ಆತ್ಮಾಹುತಿ ದಾಳಿಯ ಬೆದರಿಕೆ ಇದೆ ಎಂಬ ಮಾಹಿತಿ ಕೋಲ್ಕತ್ತದಿಂದ ಬಂದಿತ್ತು. ಆದ ಕಾರಣ ಇಲ್ಲಿನ ವಿಮಾನ ನಿಲ್ದಾಣದ ಭದ್ರತೆಯನ್ನು ಹೆಚ್ಚಿಸಲಾಗಿದೆ’ ಎಂದು ಕೊಚ್ಚಿ ವಿಮಾನ ನಿಲ್ದಾಣದ ನಿರ್ದೇಶಕ ಎ.ಕೆ.ಸಿ.ನಾಯರ್‌ ತಿಳಿಸಿದ್ದಾರೆ.

ಕೋಲ್ಕತ್ತದಲ್ಲಿರುವ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಗುರುವಾರ ರಾತ್ರಿ ಈ ಬೆದರಿಕೆ ಕರೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ. ಈ ಮಾಹಿತಿಯನ್ನು ಪೊಲೀಸರು ಮತ್ತು ನಾಗರಿಕ ವಿಮಾನಯಾನದ ಭದ್ರತಾ ಸಂಸ್ಥೆಗೆ ರವಾನಿಸಲಾಯಿತು. ನಂತರ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್‌) ಮಹಾನಿರ್ದೇಶಕ ಆನಂದ್‌ ಮೋಹನ್‌ ಅವರು ಚೆನ್ನೈನಿಂದ ಕೊಚ್ಚಿಗೆ ಬಂದಿದ್ದು ಉನ್ನತಾಧಿಕಾರಿಗಳ ಸಭೆ ನಡೆಸಿದರು.

ಈ ಬೆದರಿಕೆಯಿಂದಾಗಿ ಅಹಮದಾಬಾದ್‌, ಮುಂಬೈ ಮತ್ತು ಕೊಚ್ಚಿಯ ವಿಮಾನಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಲ್ದಾಣಗಳಲ್ಲಿ
ಮತ್ತು ಪ್ರವೇಶ ದ್ವಾರಗಳಲ್ಲಿ ಭದ್ರತಾ ವ್ಯವಸ್ಥೆ ಯನ್ನು ಬಿಗಿಗೊಳಿಸಲಾಗಿದೆ. ಪ್ರಯಾಣಿಕರನ್ನು ಹೆಚ್ಚಿನ ತಪಾಸಣೆಗೆ  ಒಳಪಡಿಸಲಾಗುತ್ತಿದೆ.  ಅಪಹರಣ ನಿರೋಧಕ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಬಾಂಬ್‌ ಪತ್ತೆ ಹಾಗೂ ನಿಷ್ಕ್ರಿಯ ದಳ, ತುರ್ತು ಸ್ಪಂದನಾ ತಂಡ, ಸಿಐಎಸ್‌ಎಫ್‌ ಮತ್ತು ಪೊಲೀಸರ ತಂಡಗಳು ಹದ್ದಿನ ಕಣ್ಣು ಇರಿಸಿವೆ.

ಅಹಮದಾಬಾದ್‌ ಮತ್ತು ಮುಂಬೈ ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ವಿಮಾನಗಳನ್ನು ಎರಡೆರಡು ಬಾರಿ ತಪಾಸಣೆಗೆ ಒಳಪಡಿಸಬೇಕು ಎಂದು ಅಹಮದಾಬಾದ್‌ ವಿಮಾನಯಾನ ಭದ್ರತಾ ಪ್ರಾದೇಶಿಕ ಉಪ ಕಮಿಷನರ್‌ ಅವರು ಸೂಚಿಸಿದ್ದಾರೆ.ಉಗ್ರರ ಕಣ್ಣು: ಗುಜರಾತ್‌ನಲ್ಲಿ ಅ. 24 ಹೊಸ ವರ್ಷದ ಮೊದಲ ದಿನವಾದರೆ ಅ.25 ಭಾಯ್‌ ಬೀಜ್‌ ಆಚರಣೆ (ದೀಪಾವಳಿಯ ಕಡೆಯ ದಿನ) ಜೋರಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಹಬ್ಬದ ಆಚರಣೆಯ ಗುಂಗಿನಲ್ಲಿರುತ್ತಾರೆ. ಜನರ ಗಮನವೆಲ್ಲಾ ಬೇರೆಡೆ ಇರುವ ಸಂದರ್ಭವನ್ನೇ ಬಳಸಿಕೊಂಡು ಉಗ್ರರು ದಾಳಿ ಎಸಗಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌ ಉಗ್ರರು) ಮತ್ತು ಅಲ್‌ ಕೈದಾ ಸಂಘಟನೆಗಳು ಸೇರಿ ಭಾರತದ ಹಲವೆಡೆ ಭಾರಿ ದಾಳಿ ಎಸಗುವ ಸಂಚು ಹೆಣೆಯುತ್ತಿವೆ. ಅಲ್‌ ಕೈದಾ ಮುಖ್ಯಸ್ಥ ಅಯ್ಮನ್ ಅಲ್‌ ಜವಾಹಿರಿ ಕಳೆದ ತಿಂಗಳು ಅಂತರ್ಜಾಲ ತಾಣದಲ್ಲಿ ವಿಡಿಯೊ ಹರಿಬಿಟ್ಟು, ಭಾರತದಲ್ಲಿ ಅಲ್‌ ಕೈದಾ ಶಾಖೆ ಆರಂಭಿಸಿರುವುದಾಗಿ ಘೋಷಿಸಿದ್ದ.  ಆತ ತನ್ನ ಹೇಳಿಕೆಯಲ್ಲಿ ಗುಜರಾತ್‌ ಬಗ್ಗೆ ಎರಡು ಬಾರಿ ಪ್ರಸ್ತಾಪಿಸಿದ್ದ.

ಅಲ್ಲದೇ, ‘ಭಾರತದಲ್ಲಿ ಅಲ್‌ ಕೈದಾ ಶಾಖೆ ಸ್ಥಾಪನೆಯು ಬರ್ಮಾ, ಬಾಂಗ್ಲಾದೇಶ, ಅಸ್ಸಾಂ, ಗುಜರಾತ್‌, ಅಹಮದಾಬಾದ್‌ ಮತ್ತು ಕಾಶ್ಮೀರದ ಮುಸ್ಲಿಮರಿಗೆ ಶುಭ ಸುದ್ದಿಯನ್ನು ತರಲಿದೆ’ ಎಂದೂ ಹೇಳಿದ್ದ.‘ಗುಜರಾತ್‌ ರಾಜ್ಯವು 2002ರ ಗಲಭೆಗಳ ನಂತರ ಅಲ್‌ ಕೈದಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಮೊದಲ ಗುರಿಯಾಗಿದೆ.  ಈಗ ಗುಜರಾತ್‌ನ ನರೇಂದ್ರ ಮೋದಿ ಅವರು
ದೇಶದ ಪ್ರಧಾನಿಯಾಗಿರುವುದರಿಂದ ಉಗ್ರರ ಕೆಂಗಣ್ಣು ಇನ್ನಷ್ಟು ತೀಕ್ಷ್ಣಗೊಂಡಿದೆ’ ಎಂದು ಕಳೆದ ತಿಂಗಳು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದರು.

Comments