ತಮಿಳು ಸಿನಿಮಾ ನಟ ರಾಜೇಂದ್ರನ್‌ ಇನ್ನಿಲ್ಲ

ತಮಿಳು ಸಿನಿಮಾದ ಹಿರಿಯ ನಟ ಎಸ್‌.ಎಸ್‌. ರಾಜೇಂದ್ರನ್‌ (86) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.

ಚೆನ್ನೈ (ಐಎಎನ್‌ಎಸ್‌): ತಮಿಳು ಸಿನಿಮಾದ ಹಿರಿಯ ನಟ ಎಸ್‌.ಎಸ್‌. ರಾಜೇಂದ್ರನ್‌ (86) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದರು.

‘ಎಸ್‌ಎಸ್‌ಆರ್’ ಎಂದೇ ಖ್ಯಾತರಾದ ರಾಜೇಂದ್ರನ್‌, 1952ರಲ್ಲಿ ‘ಪರಾಶಕ್ತಿ’ ಸಿನಿಮಾದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. 50ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ್ದ ಅವರು, ತಮಿಳು ಸಿನಿಮಾದ ಖ್ಯಾತನಾಮರಾದ ಎಂ.ಜಿ.ರಾಮಚಂದ್ರನ್‌ ಹಾಗೂ ಶಿವಾಜಿ ಗಣೇಶನ್‌ ಅವರಷ್ಟೇ ಹೆಸರುವಾಸಿ­ಯಾಗಿದ್ದರು.

‘ರಂಗೂನ್‌ ರಾಧಾ’, ‘ಮನೋಗರ’, ‘ಪೂಂಪುಹಾರ್‌’, ‘ಕಾಂಚಿ ತಲೈವನ್‌’, ‘ಮಣಿಮಗುದಂ’, ‘ಕುಮುದಂ’,    ‘ಶಾರದಾ’, ‘ತಾಯ್‌ ಪಿರಂತಲ್‌’, ‘ವಳಿ ಪಿರಕ್ಕುಂ’ ರಾಜೇಂದ್ರನ್‌ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾಗಳು.

ಸುಮಾರು ಎರಡು ದಶಕಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದ ರಾಜೇಂದ್ರನ್‌, ತಮಿಳುನಾಡು ವಿಧಾನಸಭೆ (ಡಿಎಂಕೆ ಪಕ್ಷದಿಂದ 1962ರಲ್ಲಿ ಆಯ್ಕೆ) ಮತ್ತು ರಾಜ್ಯಸಭೆಯ ಸದಸ್ಯರೂ ಆಗಿದ್ದರು. ರಾಜಕೀಯಕ್ಕೆ ಕಾಲಿಟ್ಟ ಮೊದಲ ನಟ ಎಂಬ ಶ್ರೇಯಕ್ಕೂ ಅವರು ಪಾತ್ರರಾಗಿದ್ದರು.

ರಾಜೇಂದ್ರನ್‌ ತಮ್ಮ ಪತ್ನಿ ಪಂಕಜಂ ಅವರ ಹೆಸರಿನಲ್ಲಿ ಸಿನಿಮಾ ಮಂದಿರ, ಸಿನಿಮಾ ಸ್ಟುಡಿಯೊ ಮತ್ತು ಧ್ವನಿಮುದ್ರಣ ಸ್ಟುಡಿಯೊಗಳನ್ನು ತೆರೆದಿದ್ದರು. ರಾಜೇಂದ್ರನ್‌ ಅವರ ನಿಧನಕ್ಕೆ ಸಿನಿಮಾ ಮತ್ತು ರಾಜಕೀಯ ವಲಯದ ಗಣ್ಯರು ಕಂಬನಿ ಮಿಡಿದಿದ್ದಾರೆ.

Comments