ಚೀನಾ ಗಡಿಯಲ್ಲಿ 54 ಹೊಸ ಚೌಕಿ ಮೂಲಸೌಕರ್ಯ ಯೋಜನೆಗೆ 175 ಕೋಟಿ

ಅರುಣಾ-ಚಲ ಪ್ರದೇಶದ ಗಡಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚೀನಾ ವ್ಯಕ್ತಪಡಿಸಿರುವ ಆಕ್ಷೇಪವನ್ನು ಲೆಕ್ಕಿಸದ ಸರ್ಕಾರ, ಗಡಿ-ಯಲ್ಲಿ 54  ಹೊಸ ಚೌಕಿಗಳ ಸ್ಥಾಪನೆ ಮತ್ತು ₨175 ಕೋಟಿ ಮೊತ್ತದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದೆ.

ಗ್ರೇಟರ್‌ ನೊಯ್ಡಾ (ಪಿಟಿಐ):  ಅರುಣಾ-ಚಲ ಪ್ರದೇಶದ ಗಡಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚೀನಾ ವ್ಯಕ್ತಪಡಿಸಿರುವ ಆಕ್ಷೇಪವನ್ನು ಲೆಕ್ಕಿಸದ ಸರ್ಕಾರ, ಗಡಿ-ಯಲ್ಲಿ 54  ಹೊಸ ಚೌಕಿಗಳ ಸ್ಥಾಪನೆ ಮತ್ತು ₨175 ಕೋಟಿ ಮೊತ್ತದ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದೆ.

ಶುಕ್ರವಾರ ಇಲ್ಲಿ ನಡೆದ ಭಾರತ ಟಿಬೆಟ್‌ ಗಡಿ ಪೊಲೀಸ್‌ ಪಡೆಯ (ಐಟಿಬಿಪಿ) 53ನೇ ಸಂಸ್ಥಾಪನ ದಿನಾ-ಚರಣೆಯಲ್ಲಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಈ ಘೋಷಣೆ ಮಾಡಿದರು. ‘ಚೀನಾದ ಜತೆಗೆ ಶಾಂತಿ ಅಗತ್ಯ. ಆದರೆ,  ದೇಶದ ಘನತೆ– ಗೌರವಗಳನ್ನು ಬಲಿಕೊಟ್ಟು ಇದನ್ನು ಸಾಧಿಸುವಂತಹ ಪ್ರಮೇಯ ಏನಿಲ್ಲ’ ಎಂದು ಹೇಳಿದರು.

‘ನಾವು  ‘‘ವಸುದೈವ ಕುಟುಂಬಕಂ’’ ತತ್ವದಲ್ಲಿ ನಂಬಿಕೆ ಇರಿಸಿರುವವರು. ಹಾಗಾಗಿ ಚೀನಾ ಮತ್ತು ಇತರ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದನ್ನು ಮಹತ್ವದ ವಿಷಯವೆಂದೇ ಪರಿಗಣಿಸಿದ್ದೇವೆ. ಆದರೆ, ಪಾಕಿಸ್ತಾನ ಅಥವಾ ಚೀನಾ ಗಡಿಯಲ್ಲಿ ಉಂಟು ಮಾಡುತ್ತಿರುವ ತಂಟೆ ನೋವುಂಟು ಮಾಡಿದೆ. ಪಾಕ್‌ ಕದನವಿರಾಮ ಉಲ್ಲಂಘಿಸಿದರೆ, ಚೀನಾ ತನ್ನ ಪಡೆಗಳನ್ನು ಭಾರತದ ಗಡಿಯೊಳಗೆ ಅಕ್ರಮವಾಗಿ ನುಗ್ಗಿಸುತ್ತಿದೆ’ ಎಂದರು.

‘ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಮತ್ತು ಗಡಿ ವಿವಾದಗಳನ್ನು ಶಾಂತಿಯಿಂದ ಬಗೆಹರಿಸಿಕೊಳ್ಳಲು ಬಯಸುತ್ತೇವೆಂದು ಪ್ರಧಾನಿ ನರೇಂದ್ರ ಮೋದಿ ಅವರೂ ಸ್ಪಷ್ಟವಾಗಿ ಹೇಳಿದ್ದಾರೆ. ವಿವಾದಗಳ ಕುರಿತು ಮಾತುಕತೆ ನಡೆಸೋಣವೆಂದು ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಚೀನಾ ಅಧ್ಯಕ್ಷರಿಗೂ ತಿಳಿಸಿದ್ದಾರೆ. ಆದರೂ ಚೀನಾ ಪದೇ ಪದೇ ಗಡಿ ತಂಟೆಗೆ ಬರುತ್ತಿದೆ ಹಾಗೂ ನಮ್ಮ ಗಡಿಯೊಳಗೆ ಮೂಲಸೌಕರ್ಯ ಅಭಿವೃದ್ಧಿ ಪಡಿಸಿದರೆ ಅದಕ್ಕೂ ಆಕ್ಷೇಪ ವ್ಯಕ್ತಪಡಿಸಿದೆ’ ಎಂದರು.

‘ದೀಪಾವಳಿ ಹಬ್ಬದ ಹಿಂದಿನ ದಿನ ಕೂಡ ಪಾಕ್‌ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಗಡಿ ಚೌಕಿಗಳು ಹಾಗೂ ನಾಗರಿಕರ ಮೇಲೆ ಗುಂಡು ಹಾರಿಸಿವೆ’ ಎಂದು ದೂರಿದರು. ‘ಅರುಣಾಚಲ ಪ್ರದೇಶದಲ್ಲಿ ಐಟಿಬಿಪಿಯ ಹೊಸ 54 ಗಡಿ ಚೌಕಿಗಳ ಸ್ಥಾಪಿಸುವ ಯೋಜನೆ ರೂಪಿತವಾಗುತ್ತಿದೆ. ಇದರೊಟ್ಟಿಗೆ ಗಡಿ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ₨175 ಕೋಟಿ ಮೊತ್ತದ ಯೋಜನೆಗಳನ್ನೂ ಮಾಡಲಾಗಿದೆ’ ಎಂದರು.

‘ಐಟಿಬಿಪಿಗೆ ಪ್ರತ್ಯೇಕ ವೈಮಾನಿಕ ನೆರವು ಕಲ್ಪಿಸುವ ಬೇಡಿಕೆಯನ್ನು ಸರ್ಕಾರ ಪರಿಶೀಲಿಸುತ್ತಿದೆ’ ಎಂದರು.
ಐಟಿಬಿಪಿ ಪಡೆ ಲಡಾಖ್‌ನಿಂದ ಅರುಣಾಚಲ ಪ್ರದೇಶದವರೆಗೆ ಹಬ್ಬಿರುವ 3,488 ಕಿ.ಮೀ. ಉದ್ದದ ಗಡಿ ರಕ್ಷಣೆಯ ಕಾರ್ಯದಲ್ಲಿ ನಿರತವಾಗಿದೆ.

Comments