ಅಸ್ಸಾಂನಲ್ಲಿ ಅಪಘಾತ: 9 ಜನರ ಸಾವು

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ವೊಂದು ರಸ್ತೆ ಬದಿಯ ಪ್ರಪಾತಕ್ಕೆ ಉರುಳಿದ ಪರಿಣಾಮ, ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದು, 24 ಜನರು ಗಾಯಗೊಂಡಿರುವ ಘಟನೆ ಅಸ್ಸಾಂನ ನಾಗಾಂವ್‌ ಜಿಲ್ಲೆಯ ಉಲೌನಿಯಲ್ಲಿ ಭಾನುವಾರ ನಡೆದಿದೆ.

ನಾಗಾಂವ್, ಅಸ್ಸಾಂ (ಪಿಟಿಐ): ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ವೊಂದು ರಸ್ತೆ ಬದಿಯ ಪ್ರಪಾತಕ್ಕೆ ಉರುಳಿದ ಪರಿಣಾಮ, ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದು, 24 ಜನರು ಗಾಯಗೊಂಡಿರುವ ಘಟನೆ ಅಸ್ಸಾಂನ ನಾಗಾಂವ್‌ ಜಿಲ್ಲೆಯ ಉಲೌನಿಯಲ್ಲಿ ಭಾನುವಾರ ನಡೆದಿದೆ.

ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಲಿದ್ದ ಜನರನ್ನು ಹೊತ್ತು ಲಖೀಂಪುರ ಜಿಲ್ಲೆಯಿಂದ ಗುವಾಹಟಿಗೆ ತೆರಳುತ್ತಿದ್ದ ಬಸ್‌ ಪ್ರಪಾತಕ್ಕೆ ಉರುಳುವ ಮುನ್ನ ಚಿಕ್ಕ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆ ನಸುಕಿನ ಸುಮಾರು 1.30ಗಂಟೆಗೆ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರವಿಂದ್ ಕಲಿತಾ ಅವರು ತಿಳಿಸಿದ್ದಾರೆ.

ಬಸ್‌ ಚಾಲಕ ಸೇರಿದಂತೆ ಎಂಟು ಜನರು ಸ್ಥಳದಲ್ಲೆ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಒಬ್ಬರು ಮಹಿಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಐವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಕಲಿತಾ ನುಡಿದಿದ್ದಾರೆ.

ಮುಂಜಾನೆ ರೈಲಿನಲ್ಲಿ ದೆಹಲಿಗೆ ಪ್ರಯಾಣಿಸಲಿದ್ದ 35 ಪ್ರಯಾಣಿಕರನ್ನು ಬಸ್‌, ಲಖೀಂಪುರ ಜಿಲ್ಲೆಯಿಂದ ಗುವಾಹಟಿಗೆ ಕೊಂಡೊಯ್ಯುತ್ತಿತ್ತು ಎಂದು ಘಟನೆಯಲ್ಲಿ ಬದುಕುಳಿದವರು ತಿಳಿಸಿದ್ದಾರೆ.

Comments