ಗಜ ಪ್ರೇಮಿಗಳು

ಮಾನವ–ಪ್ರಾಣಿ ನಡುವಿನ ಸಂಘರ್ಷ ನಿತ್ಯದ ಸುದ್ದಿಯಾಗುತ್ತಿರುವ ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಹಾಗೂ ಯಲ್ಲಾಪುರದಲ್ಲಿ ಇದಕ್ಕೆ ತದ್ವಿರುದ್ಧವಾದ ವಾತಾವರಣ ನಿರ್ಮಾಣವಾಗುತ್ತಿದೆ. ಬೆಳೆ ಹಾನಿ ಮಾಡುತ್ತಿದ್ದ ಆನೆಗಳನ್ನು ಅಲ್ಲಿನ ರೈತರು ಸ್ನೇಹಿತರಂತೆ ಕಾಣುತ್ತಿದ್ದಾರೆ. ಜೇಬಿಗೆ ಭಾರವಲ್ಲದ, ಆನೆಗಳಿಗೂ ಮಾರಕವಾಗದ ತಂತ್ರಗಳನ್ನು ಅನುಸರಿಸಿ....

‘I am a friend of elephant’ (ನಾನು ಆನೆಯ ಸ್ನೇಹಿತ) ಇಂಥದ್ದೊಂದು ಬರಹ ಹೊತ್ತ ಟೀ–ಶರ್ಟ್‌ ಹಾಕಿಕೊಂಡಿರುವ ರೈತರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಹಾಗೂ ಯಲ್ಲಾಪುರದ ಕೆಲವು ಕಡೆಗಳಲ್ಲಿ ನಿಮಗೆ ಕಾಣ­ಸಿಗುತ್ತಾರೆ. ಹೊಲಗಳಿಗೆ ನುಗ್ಗಿದ ಆನೆ, ಅಪಾರ ಬೆಳೆ ಹಾನಿ, ಆನೆ ತುಳಿದು ರೈತ ಸಾವು ಎಂಬಂತಹ ವಿಷಯಗಳೇ ನಿತ್ಯದ ಸುದ್ದಿಯಾಗುತ್ತಿರುವ ಈ ದಿನಗಳಲ್ಲಿ ಈ ಭಾಗದಲ್ಲಿರುವ ‘ಆನೆ – ರೈತ’ ಸೌಹಾರ್ದ ಸಂಬಂಧ ಕುತೂಹಲ ಮೂಡಿಸುತ್ತದೆ. ಅದರೊಂದಿಗೆ ಇಂತಹ ಬದಲಾವಣೆಗೆ ಕಾರಣ ಏನು ಎಂಬ ಪ್ರಶ್ನೆಯೂ ಮೂಡುತ್ತದೆ.

ಕಾಡಿನ ಪರಿಸರದಲ್ಲಿ ಮನುಷ್ಯನ ಹಸ್ತಕ್ಷೇಪ ಹೆಚ್ಚಾಗುತ್ತಿರುವಂತೆ, ಆನೆಗಳು ಅರಣ್ಯದ ಹೊರವಲಯದ ಹೊಲಗಳಿಗೆ ದಾಳಿ ಇಡುತ್ತಿವೆ ಮತ್ತು ಸಿಕ್ಕ ಸಿಕ್ಕ ಬೆಳೆ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಇದು ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ಸಂಘರ್ಷ ಸಾಮಾಜಿಕವಾಗಿ ಹಾಗೂ ನೈಸರ್ಗಿಕವಾಗಿ ದುಷ್ಪರಿಣಾಮ ಬೀರುತ್ತಿದೆ.

ಭತ್ತ, ಜೋಳ, ಕಬ್ಬು, ಮೆಕ್ಕೆಜೋಳ, ಹುಲ್ಲು, ಬಾಳೆ ಹಾಗೂ ಹಲಸು ಆನೆಗಳಿಗೆ ಪ್ರಿಯವಾದ ಆಹಾರ. ಈ ಬೆಳೆಗಳನ್ನು ಬೆಳೆಯುವ ಈ ಭಾಗದ ರೈತರು ರಾತ್ರಿಯಿಡೀ ತಮ್ಮ ಬೆಳೆಯನ್ನು ಆನೆಗಳಿಂದ ರಕ್ಷಿಸಬೇಕಿತ್ತು. ಹೀಗೆ, ನಿರಂತರವಾಗಿ ಕಾವಲು ಕಾದು ರೈತರ ಆರೋಗ್ಯವೂ ಹದಗೆಟ್ಟಿತ್ತು. ಕಾವಲು ಕಾಯದೆ ಹೋದರೆ ಇಂತಹ ಹೊಲಗಳಿಗೆ ದಾಳಿ ಇಡುವ ಆನೆಗಳು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿದ್ದವು.

ರೈತರನ್ನು ಕಾಡುತ್ತಿದ್ದ ಬೆಳೆ ಹಾನಿಯ ಆತಂಕ ಈಗ ದೂರವಾಗಿದೆ. ಪುಣೆಯ ವನ್ಯಜೀವಿ ಸಂಶೋಧನಾ ಮತ್ತು ಸಂರಕ್ಷಣಾ ಸೊಸೈಟಿ ಹೆಸರಿನ ಸರ್ಕಾರೇತರ ಸಂಸ್ಥೆಯ ಒಂದು ತಂಡ ಈ ಭಾಗದ ರೈತರ ಸಂಕಷ್ಟ ಮನಗಂಡು, ನೂತನ ತಂತ್ರಗಳ ಮೂಲಕ, ಆನೆ ದಾಳಿಯನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.

ಕಡಿಮೆ ವೆಚ್ಚ, ಪರಿಣಾಮಕಾರಿ ಫಲ!
ಕೇವಲ 30 ರಿಂದ 300 ರೂಪಾಯಿ ವೆಚ್ಚದಲ್ಲಿ ರೂಪಿಸಬಹುದಾದ ರಕ್ಷಣಾ ತಂತ್ರಗಳನ್ನು ಬಳಸಿಕೊಂಡ ರೈತರು ಈಗ ಸಾಕಷ್ಟು ಖುಷಿಯಾಗಿದ್ದಾರೆ. ಆ ತಂತ್ರಗಳು ಅಷ್ಟೇ ಸರಳ, ಪರಿಣಾಮಕಾರಿಯಾಗಿಯೂ ಆಗಿವೆ.

ಇವುಗಳಲ್ಲಿ ಮೊದಲನೆಯದು, ಟ್ರಿಪ್‌ ಅಲಾರಂ ಅಳವಡಿಕೆ. ಹೊಲದ ಸುತ್ತ ತಂತಿ ಕಟ್ಟಿ, ಆ ತಂತಿಯನ್ನು ಅಲಾರಂಗೆ ಸಂಪರ್ಕ ಕಲ್ಪಿಸಲಾಗಿರುತ್ತದೆ. ಆ ತಂತಿಯನ್ನು ಆನೆಗಳು ಸ್ಪರ್ಶಿಸಿದ ತಕ್ಷಣವೇ ಅಲಾರಂ ಹೊಡೆದು ಕೊಳ್ಳುತ್ತದೆ.

ಅನಿರೀಕ್ಷಿತ ಶಬ್ದ ಆನೆಗಳು ಹಿಂದೇಟು ಹಾಕುವಂತೆ ಮಾಡುವುದರೊಂದಿಗೆ, ಕಾವಲಿಗಿದ್ದ ರೈತರನ್ನೂ ಎಚ್ಚರಿಸುತ್ತದೆ. ಈ ಕಾರಣದಿಂದ 190ಕ್ಕೂ ಹೆಚ್ಚು ರೈತರು ಟ್ರಿಪ್‌ ಅಲಾರಂಗಳನ್ನು ಅಳವಡಿಸಿದ್ದಾರೆ ಮತ್ತು 150ಕ್ಕೂ ಹೆಚ್ಚು ರೈತರು ತಮ್ಮ ಹೊಲಗಳಲ್ಲಿ ರಾತ್ರಿ ಕಾವಲನ್ನು ಮತ್ತೆ ಪ್ರಾರಂಭಿಸಿದ್ದಾರೆ.

ಮತ್ತೊಂದು ತಂತ್ರ, ಮೆಣಸಿನ ಹೊಗೆ ಹಾಕುವುದು. ನೈಸರ್ಗಿಕವಾಗಿ ಅಷ್ಟೊಂದು ಹಾನಿಕಾರಿಯಲ್ಲದ ಈ ವಿಧಾನವೂ ಹೊಲದಿಂದ ಆನೆಗಳನ್ನು ದೂರವಿಡುವಲ್ಲಿ ಯಶಸ್ವಿಯಾಗಿದೆ. ಸಾಕಿದ ಆನೆಗಳ ಮೇಲೆ ಪ್ರಯೋಗ ನಡೆಸಿದ ನಂತರ, ಕಾಡಾನೆಗಳ ಮೇಲೆ ಈ ಪ್ರಯೋಗ ಮಾಡಲಾಗುತ್ತಿದೆ. ಶೇ 90ರಷ್ಟು ರೈತರು ಮೆಣಸಿನ ಹೊಗೆ ಹಾಕಲು ಪ್ರಾರಂಭಿಸಿದ್ದಾರೆ.

ಇನ್ನು, ಹೊಲದ ಸುತ್ತ ಜೇನುಗೂಡುಗಳ ನಿರ್ಮಾಣ. ಜೇನುಗೂಡುಗಳಿದ್ದರೆ, ಆನೆಗಳು ಬಂದಾಗ ತಾಕಿ ದುಂಬಿಗಳು, ಅವುಗಳ ಮೇಲೆ ದಾಳಿ ಮಾಡಿ ಹಿಂದಕ್ಕೆ ಓಡಿಸುತ್ತವೆ. ಜೊತೆಗೆ ಜೇನನ್ನು ಮನೆಯಲ್ಲಿ ಉಪಯೋಗಿಸುವ ಮೂಲಕ ಮತ್ತು ಅದನ್ನು ಮಾರಾಟ ಮಾಡುವ ಮೂಲಕ ರೈತರು ಲಾಭವನ್ನೂ ಪಡೆಯುತ್ತಿದ್ದಾರೆ.

ಮತ್ತೆ ಕೆಲವರು, ಜೇನುಹುಳಗಳ ದನಿ ಹೊರಡಿಸುವ ಡಬ್ಬಿಗಳನ್ನು ಹೊಲದಲ್ಲಿ ಅಳವಡಿಸಿದ್ದಾರೆ. ಜೇನು ಹುಳುಗಳಿವೆ ಎಂಬ ಕಾರಣಕ್ಕೆ ಆನೆಗಳು ಹೊಲದ ಸಮೀಪ ಸುಳಿಯುವುದಿಲ್ಲ. 70ಕ್ಕೂ ಅಧಿಕ ರೈತರು ಜೇನು ಕುಡಿಕೆ ಅಳವಡಿಸಿಕೊಂಡಿದ್ದಾರೆ.

ಸಣ್ಣ ಸಂದಿ ಸಿಕ್ಕರೂ ಹೊಲಗಳೊಳಗೆ ನುಗ್ಗುವ ಆನೆಗಳನ್ನು ಕಾಯುವುದು ಕಷ್ಟದ ಕೆಲಸ. ಇವುಗಳನ್ನು ಕಾಯುವುದೇ ದೊಡ್ಡ ತಲೆನೋವು. ದೂರದಿಂದಲೇ ಇಂತಹ ಆನೆಗಳನ್ನು ವೀಕ್ಷಿಸಲು ರೈತರು ವೀಕ್ಷಣಾ ಗೋಪುರಗಳನ್ನು ನಿರ್ಮಿಸಿಕೊಂಡಿದ್ದಾರೆ. 30 ಅಡಿ ಎತ್ತರದ ಮರದ ಮೇಲೆ ಬಿದಿರಿನ ನೆಲಹಾಸು ಹಾಗೂ ಹುಲ್ಲಿನ ಛಾವಣಿ ಮಾಡಿಕೊಳ್ಳುವ ರೈತರು, ಅಲ್ಲಿ ಮಲಗಲು ಹಾಸಿಗೆ ಮತ್ತು ಸೊಳ್ಳೆ ಪರದೆ ಹಾಕಿದರು. ಇಂತಹ ವಾಚ್‌ ಟವರ್‌ ತುಸು ಎತ್ತರದಲ್ಲಿರುವುದರಿಂದ, ಹೊಲ ಕಾಯುವ ಕೆಲಸವೂ ಸುಲಭವಾಯಿತು. ರೈತರಿಗೆ ಆನೆಗಳಿಂದ ರಕ್ಷಣೆಯೂ ದೊರೆಯಿತು.

ಇನ್ನು, ಟಾರ್ಚ್‌ ಬಳಕೆ. ಟಾರ್ಚ್‌ ಹಚ್ಚುವುದರಿಂದ ಪ್ರಕಾಶಮಾನವಾದ ಬೆಳಕು ಕಣ್ಣಿನ ಮೇಲೆ ಬಿದ್ದಾಗ ಆನೆಗೆ ಮಬ್ಬು ಕವಿದಂತಾಗಿ ನಿಂತಲ್ಲೇ ನಿಲ್ಲುತ್ತವೆ. ಛಾವಣಿಯ ಮೇಲಿನಿಂದ ಟಾರ್ಚ್‌ನ ಬೆಳಕು ಬೀಳುವುದರಿಂದ ಆನೆಗಳು ಹೆದರುತ್ತವೆ.

ಚುರುಕು ಮುಟ್ಟಿಸುವ ಬಾಂಬ್ !
ಆನೆಗಳಿಗೆ ಅತೀವ ಬುದ್ಧಿಶಕ್ತಿ ಇದೆ ಮತ್ತು ಅವುಗಳಿಗೆ ಬೇಗ ಕಲಿಯುವ ಗುಣವೂ ಇದೆ.  ಒಂದೇ ತಂತ್ರವನ್ನು ಪದೇ ಪದೇ ಅನುಸರಿಸಿದರೆ, ಅಲಾರಂ ಶಬ್ದಕ್ಕೂ ಅವು ಹೆದರುವುದಿಲ್ಲ, ಜೇನುಹುಳಗಳ ದನಿಯ ಕಡೆಗೂ ಗಮನ ಕೊಡದೆ ಹೊಲಕ್ಕೆ ನುಗ್ಗಿ ಹೊಟ್ಟೆ ತುಂಬಿಸಿಕೊಂಡು ಹೋಗುತ್ತವೆ.

ಅದಕ್ಕೆ ತಂತ್ರಗಳಲ್ಲೂ ರೈತರು ಬದಲಾವಣೆ ಕಂಡುಕೊಂಡಿದ್ದಾರೆ. ಗುಂಟೂರು ಮೆಣಸಿನಕಾಯನ್ನು ನೀರಿನಲ್ಲಿ ಬೆರೆಸಿ ಹಗ್ಗಕ್ಕೆ ಹಚ್ಚುವುದು, ಅದರೊಂದಿಗೆ ಆ ಹಗ್ಗಕ್ಕೆ ಗ್ರೀಸು, ಎಂಜಿನ್ ಆಯಿಲ್ ಕೂಡ ಹಚ್ಚಿ ಬೆಳೆಯ ಸುತ್ತ ನೇತು ಹಾಕಿದರು. ಮೆಣಸಿನ ಘಾಟಿನಿಂದ ಆನೆಗಳ ಮೂಗು ಮತ್ತು ಕಣ್ಣುಗಳಿಗೆ ಉರಿ ಹತ್ತಿ ಅವುಗಳಿಗೆ ಭತ್ತದ ವಾಸನೆ ಸಿಗುವುದಿಲ್ಲ.

ಚಿಕ್ಕ ಬಾಂಬುಗಳ ಬಳಕೆ ಮತ್ತೊಂದು ತಂತ್ರ. ಹಲವು ಕವಣೆ ಹಾಗೂ ಉದ್ದ ಬತ್ತಿಯಿರುವ ಈ ಬಾಂಬುಗಳನ್ನು ಆನೆ ಕಡೆಗೆ ಹಾರಿ ಬಿಡಲಾಗುತ್ತದೆ. ಈ ಬಾಂಬುಗಳು ಚಿಕ್ಕದಾದ್ದರಿಂದ ಆನೆಗಳಿಗೆ ಗಾಯ ಆಗುವುದಿಲ್ಲ. ದೂರದಿಂದಲೇ ಹಾಕಿದ ಬಾಂಬುಗಳ ಸದ್ದಿನಿಂದ 10 ನಿಮಿಷಗಳಲ್ಲೇ ಆನೆಗಳು ಹೆದರಿ ಹಿಂದಿರುಗುತ್ತವೆ.

ಇವುಗಳಲ್ಲದೆ, ಅಕ್ಕಿ ಹೊಟ್ಟು, ತಂಬಾಕು ಹಾಗೂ ಒಣಗಿದ ಮೆಣಸಿನಕಾಯಿ, ಸಗಣಿ, ಕಡ್ಡಿ, ಎಲೆಗಳ ಹೊಗೆ, ಹಳೆ ಬಟ್ಟೆಗಳನ್ನು ಮೆಣಸಿನ ಪುಡಿ ಮಿಶ್ರಣದಲ್ಲಿ ಅದ್ದಿ ಹಗ್ಗಕ್ಕೆ ನೇತು ಹಾಕುವುದು, ಮಿಣುಕು ದೀಪಗಳನ್ನು ಉಪಯೋಗಿಸುವ ಮೂಲಕ ಆನೆ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಭಾಗದ ನಲವತ್ತಕ್ಕೂ ಹೆಚ್ಚು ಗ್ರಾಮಗಳ ರೈತರು ಈ ತಂತ್ರಗಳ ಪ್ರಯೋಜನ ಪಡೆದಿದ್ದಾರೆ. ಸಂರಕ್ಷಣಾ ಕ್ರಮಗಳನ್ನು ಬಳಸಿದ ಶೇ 70ರಷ್ಟು ಅಧಿಕ ರೈತರು ಬೆಳೆ ಹಾನಿಯಿಂದ ತಪ್ಪಿಸಿಕೊಂಡು ಉತ್ತಮ ಇಳುವರಿ ಪಡೆದಿದ್ದಾರೆ.

ದಾಂಡೇಲಿ –ಅಣಶಿ ಹುಲಿ ಅಭಯಾರಣ್ಯದ ಆನೆಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅವುಗಳನ್ನು ಅಧ್ಯಯನ ಮಾಡಿದ ನಂತರ, ಈ ತಂತ್ರಗಳನ್ನು ರೂಪಿಸಿರುವುದರಿಂದ ಇವು ಹೆಚ್ಚು ಪರಿಣಾಮಕಾರಿಯಾಗಿವೆ. ರೈತರ ಆರೋಗ್ಯವೂ ಸುಧಾರಿಸಿದೆ. ಬೆಳೆಯೂ ಉಳಿದಿದೆ ಮತ್ತು ಆನೆಗಳ ಮೇಲೂ ಯಾವುದೇ ದುಷ್ಪರಿ­ಣಾಮವಾಗಿಲ್ಲ. ಆನೆಗಳೆಂದರೆ ಕನಸಿನಲ್ಲಿಯೂ ಬೆಚ್ಚಿ ಬೀಳುತ್ತಿದ್ದ ರೈತರು, ಈಗ ಅವುಗಳನ್ನು ಸ್ನೇಹಿತರಂತೆ ಕಾಣುತ್ತಿದ್ದಾರೆ.

ದಿನವೊಂದಕ್ಕೆ 150 ಕೆ.ಜಿ ಊಟ, 100 ಲೀಟರ್‌ ನೀರು ಬೇಡುವ ಆನೆಗಳಿಗೆ ಹಸಿವು ದೊಡ್ಡ ಸಮಸ್ಯೆ. ಅವುಗಳ ಹಸಿವು ನೀಗಬೇಕು, ನಾಡಿನಿಂದ ಅವು ದೂರವೂ ಇರಬೇಕು ಎಂಬುದಕ್ಕೆ ಪರಿಹಾರ ಆನೆ ಕಾರಿಡಾರ್‌ಗಳ ನಿರ್ಮಾಣ. ಇಂತಹ ಕಾರಿಡಾರ್‌ಗಳನ್ನು ನಿರ್ಮಿಸುವ ಮೂಲಕ ಆನೆಗಳಿಗೂ, ಕಾಡಂಚಿನ ಗ್ರಾಮಗಳ ರೈತರಿಗೂ ನೆಮ್ಮದಿ ಒದಗಿಸುವ ಕೆಲಸವಾಗಬೇಕಿದೆ.

ಆನೆ ದಾಳಿಗಳಿಂದ ಬೇಸತ್ತ ರೈತರು, ಮಾಹಿತಿಗಾಗಿ ಪ್ರಸನ್ನ
ಅಡುವಳ್ಳಿ: 99642 97803, ಪ್ರಾಚಿ ಮೆಹ್ತಾ: 110–52193 ಅವರನ್ನು ಸಂಪರ್ಕಿಸಬಹುದು. 

Comments