‘ನಾಗಮಂಗಲದಲ್ಲಿ ಯೋಗ ತರಬೇತಿ ಕೇಂದ್ರ’

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಆಯೋಗದಡಿ­ಯಲ್ಲಿ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಯೋಗ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರದ ಆಯುಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ವೈ. ನಾಯ್ಕ್ ಭಾನುವಾರ ಉಜಿರೆಯಲ್ಲಿ ಹೇಳಿದರು.

ಉಜಿರೆ (ದಕ್ಷಿಣ ಕನ್ನಡ ಜಿಲ್ಲೆ): ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಆಯೋಗದಡಿ­ಯಲ್ಲಿ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಯೋಗ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಕೇಂದ್ರದ ಆಯುಷ್ ಇಲಾಖೆಯ ರಾಜ್ಯ ಸಚಿವ ಶ್ರೀಪಾದ್ ವೈ. ನಾಯ್ಕ್ ಭಾನುವಾರ ಇಲ್ಲಿ ಹೇಳಿದರು.

ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ ಅಂತರ­ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ತರಬೇತಿ ಕೇಂದ್ರದ ಒಂದನೇ ಹಂತದ ಕಾಮಗಾರಿ ಈಗಾಗಲೇ ಪೂರ್ಣ­ಗೊಂಡಿದ್ದು, ಸದ್ಯದಲ್ಲಿಯೇ ಎರಡನೇ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ನಾಗಮಂಗಲದ ಯೋಗ ತರಬೇತಿ ಕೇಂದ್ರಕ್ಕೆ ಕರ್ನಾಟಕ ಸರ್ಕಾರ 50 ಎಕರೆ ಜಾಗ ನೀಡಿದೆ. ಮುಂದಿನ 5 ವರ್ಷದೊಳಗೆ ದೇಶದಲ್ಲಿ ಇದೇ ರೀತಿ ಆರು ಯೋಗ ತರಬೇತಿ ಕೇಂದ್ರ­ ಪ್ರಾರಂಭಿಸಲಾಗುವುದು ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಇತರ ವೈದ್ಯಕೀಯ ಪದ್ಧತಿಗಳಂತೆ ಪ್ರಕೃತಿ ಚಿಕಿತ್ಸಾ ವಿಧಾನಕ್ಕೂ ಸರ್ಕಾರ ಸಮಾನ ಮಾನ್ಯತೆ ನೀಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಘಟಕಗಳನ್ನು ಪ್ರಾರಂಭಿ­ಸಬೇಕು ಎಂದು ಒತ್ತಾಯಿಸಿದರು.

ಸರ್ಕಾರವು ಬಜೆಟ್‌ನ ಶೇ 10 ಭಾಗ­ವನ್ನು ಆಯುಷ್ ಇಲಾಖೆಗೆ ಮೀಸಲಿಡ­ಬೇಕು. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಆಯುಷ್‌ ಘಟಕ ಪ್ರಾರಂಭಿ­ಸಬೇಕು. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಪ್ರತ್ಯೇಕ ಅಧ್ಯಯನ ಮಂಡಳಿ ರಚಿಸಬೇಕು. ಬೆಂಗಳೂರಿನಲ್ಲಿ ಸರ್ಕಾರದ ವತಿಯಿಂದ ಮಾದರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪ್ರಾರಂಭಿ­ಸಬೇಕು ಎಂದು ಅವರು ಸಲಹೆ ನೀಡಿದರು.

Comments