ಬೆಂಗಳೂರು

ನಾಗರಿಕರ ಸುರಕ್ಷತೆಗೆ ಸಿಸಿಬಿ ವಸ್ತುಪ್ರದರ್ಶನ

ಅಪರಾಧ ಕೃತ್ಯಗಳ ನಿಯಂತ್ರಣ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) ಇದೇ ಮೊದಲ ಬಾರಿಗೆ ನಗರದಲ್ಲಿ ‘ಸುರಕ್ಷತಾ ಸಾಧನಾ ಮತ್ತು ಸಲಕರಣೆ’ ವಸ್ತು ಪ್ರದರ್ಶನ ಆಯೋಜಿಸಿದೆ.

ಬೆಂಗಳೂರು: ಅಪರಾಧ ಕೃತ್ಯಗಳ ನಿಯಂತ್ರಣ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಅಪರಾಧ ವಿಭಾಗವು (ಸಿಸಿಬಿ) ಇದೇ ಮೊದಲ ಬಾರಿಗೆ ನಗರದಲ್ಲಿ ‘ಸುರಕ್ಷತಾ ಸಾಧನಾ ಮತ್ತು ಸಲಕರಣೆ’ ವಸ್ತು ಪ್ರದರ್ಶನ ಆಯೋಜಿಸಿದೆ.
ರಾಜಾಜಿನಗರದ ಒರಾಯನ್‌ ಮಾಲ್‌­ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಪ್ರದರ್ಶನಕ್ಕೆ, ಚಿತ್ರ­ನಟಿ ರಾಗಿಣಿ ದ್ವಿವೇದಿ ಅವರು ಶುಕ್ರ­ವಾರ ಚಾಲನೆ ನೀಡಿದರು. ಪ್ರದರ್ಶ­ನವು ಶನಿವಾರ ಅಂತ್ಯಗೊಳ್ಳಲಿದೆ.

‘ಲೈಂಗಿಕ ದೌರ್ಜನ್ಯ, ಅತ್ಯಾಚಾರ, ದರೋಡೆ, ಕೊಲೆ ಯತ್ನ ಸೇರಿದಂತೆ ಅಪರಾಧ ಕೃತ್ಯಗಳ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಈ ಪ್ರದರ್ಶನ ವೇದಿಕೆಯಾಗಲಿದೆ. 24 ವಿವಿಧ ಸುರಕ್ಷತಾ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ಮನವಿ ಮಾಡಿದರು.

ಆ್ಯಪ್‌ನಿಂದ ಅಪಘಾತದ ಮಾಹಿತಿ: ಅಪ­ಘಾತ ಸಂಭವಿಸಿದಾಗ ಸೂಕ್ತ ಸಮ­ಯಕ್ಕೆ ಚಿಕಿತ್ಸೆ ದೊರೆಯದೆ ಪ್ರಾಣಹಾನಿ ಆಗುತ್ತಿರುವ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಖಾಸಗಿ ಕಂಪೆ­ನಿಯ ಉದ್ಯೋಗಿಗಳಾದ ವಿನೋದ್ ಮತ್ತು ರಾಜೇಶ್ ‘mishapp’ ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿ­ಪಡಿಸಿದ್ದಾರೆ.

‘ರಸ್ತೆ ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಮೊಬೈಲ್ ಕೆಳಗೆ ಬೀಳು­ವುದು ಸಾಮಾನ್ಯ. ಹಾಗೆ ಮೊಬೈಲ್ ಬಿದ್ದಾಗ ವ್ಯಕ್ತಿಯ ಕುಟುಂ­ಬಕ್ಕೆ ಎಚ್ಚರಿ­ಕೆಯ ಸಂದೇಶ ರವಾನೆ­ಯಾ­ಗುತ್ತದೆ.  ಕೂಡಲೇ ಅವರು ಆತನಿಗೆ ಕರೆ ಮಾಡ­ಬ­ಹುದು. ಪ್ರತಿಕ್ರಿಯೆ ಸಿಗದಿ­ದ್ದಾಗ ಜಿಪಿಎಸ್‌ ವ್ಯವಸ್ಥೆ ಮೂಲಕ ಯಾವ ಸ್ಥಳ­ದಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಿ, ಹತ್ತಿರದ ಠಾಣೆಗೆ ಕರೆ ಮಾಡಿ ವಿಷಯ ತಿಳಿಸ­ಬ­ಹುದು. ಸ್ಮಾರ್ಟ್‌ ಫೋನ್‌ನಲ್ಲಿ ಪ್ಲೇಸ್ಟೋರ್‌ಗೆ ಹೋಗಿ,  ‘mishapp’ ಡೌನ್‌ಲೋಡ್ ಮಾಡಿ­ಕೊಳ್ಳಬೇಕು’ ಎನ್ನುತ್ತಾರೆ ವಿನೋದ್.

Comments