ಬಲ ಕಳೆದುಕೊಂಡ ಎಡಪಕ್ಷಗಳು

ಪರ್ಯಾಯ ಚಿಂತನೆ ರೂಪಿಸಿದ ಚಳವಳಿಗೆ ಅಳಿವು ಉಳಿವಿನ ಪ್ರಶ್ನೆ – ನವೀಕರಣವೇ ಸೂತ್ರ

ಬಲ ಕಳೆದುಕೊಂಡ ಎಡಪಕ್ಷಗಳು

ಪ್ರತಿಯೊಂದು ಚುನಾವಣೆಯ ನಂತರ ಇರುವಂತೆ, 2014 ರ ಲೋಕಸಭಾ ಚುನಾವಣೆ ಕುರಿತೂ ಬೇಕಾದಷ್ಟು ವಿಮರ್ಶೆ– ವಿಶ್ಲೇಷಣೆಗಳು ನಡೆಯುತ್ತಿವೆ. ಅವುಗಳಲ್ಲಿ, 125 ವರ್ಷದ ಕಾಂಗ್ರೆಸ್ ಪಕ್ಷ ಕುರಿತಂತೆ ಅದರ ಅಪರ ವಯಸ್ಸಿಗೆ ಸಹಜವಾಗಿ ಏನೇನು ಮರಣೋತ್ತರ ಪರೀಕ್ಷೆಗಳು ಆಗಬೇಕೋ ಅವೆಲ್ಲವೂ ಆಗುತ್ತಿವೆ. ಅಲ್ಲದೆ, ಆ ಪಕ್ಷದ ರಾಹುಲ್ ಗಾಂಧಿ ಎಂಬ ಯುವನೇತಾರನ ‘ಯುದ್ಧವಿಮುಖಿ ಅನಾಸಕ್ತಿಯೋಗ’ ಕುರಿತು ಎಷ್ಟೊಂದು ಬಗೆಯ ವಿಶ್ಲೇಷಣೆಗಳು ಮತ್ತು ಈ ಫಲಿತಾಂಶದಿಂದ ಅವರೇನೇನು ಕಲಿಯಬೇಕು ಎಂಬ ಬಗ್ಗೆ ಎಷ್ಟೊಂದು ಬೋಧನೆ ಪ್ರಕಟವಾಗಿದೆಯೆಂದರೆ, ಅವೆಲ್ಲವನ್ನೂ ಸಂಕಲಿಸಿದರೆ ಒಂದು ‘ಕಲಿಯುಗದ ಭಗವದ್ಗೀತೆ’ ರೂಪುಗೊಳ್ಳಬಹುದು. ಯುವಕರು ಶಸ್ತ್ರಸನ್ಯಾಸ ಮಾಡಿದರೆ ಯಾರಿಗೆ ತಾನೇ ಬೇಜಾರಾಗುವುದಿಲ್ಲ: ಎಲ್ಲ ಕಾಲಕ್ಕೂ ಒಬ್ಬ ಪಾರ್ಥನ ಯುದ್ಧ ಹಲವರ ಸ್ವಾರ್ಥ!

ಕಾಂಗ್ರೆಸ್ ಪಕ್ಷವನ್ನು ಬಿಟ್ಟರೆ ಎಡರಂಗವನ್ನು ಕುರಿತು ನಾನಾ ರೀತಿಯ ನಿಧನ ವಾರ್ತೆಗಳು, ಸಮಾಧಿಶಿಲೆ ಬರಹಗಳು, ಶ್ರದ್ಧಾಂಜಲಿಗಳು, ಅಶ್ರುತರ್ಪಣಗಳು, ಚರಮಗೀತೆಗಳು ಮತ್ತು ನುಡಿನಮನಗಳು ದೇಶದಾದ್ಯಂತ ಇಂದಿಗೂ ಹರಿದುಬರುತ್ತಿವೆ. ಭಾರತೀಯ ಜನತಾ ಪಕ್ಷ ಬೃಹತ್‌ ದಿಗ್ವಿಜಯ ಸಾಧಿಸಿದ ನಂತರವೂ ದೇಶದ ರಾಜಕೀಯ ರಂಗದಲ್ಲಿ ಎಡಪಕ್ಷದ ಗೈರುಹಾಜರಿಯೂ ಅದರಿಂದ ಏನೋ ಶೂನ್ಯತೆಯೂ ಎದ್ದು ಕಾಣುತ್ತಿದೆ. ಇದೊಂದು ರೀತಿಯಲ್ಲಿ, ಇರುವಾಗ ಕಾಣದೆ ಇಲ್ಲದಿರುವಾಗ ಕಾಣುವ ಅಸ್ತಿತ್ವ. ಪ್ರಜಾಪ್ರಭುತ್ವದ ಜೀವಂತಿಕೆಯ ಲಕ್ಷಣ ಬಹುಶಃ ಇದೇ ಇರಬಹುದು. ರಾಜ್ಯ ಸರ್ಕಾರದ ಅಧಿಕಾರ ಇರಲಿ ಇಲ್ಲದಿರಲಿ, ಕಾಂಗ್ರೆಸ್‌ ಪಕ್ಷವೇನೋ ದೇಶದೆಲ್ಲೆಡೆ ಬೇರುಬಿಟ್ಟು ಆವರಿಸಿಕೊಂಡಿತ್ತು.

ಆದರೆ ಭೂಪಟದ ಅಂಚುಗಳಲ್ಲಿರುವ ಮೂರು ರಾಜ್ಯಗಳನ್ನು ಬಿಟ್ಟರೆ ನಾಲ್ಕನೆಯದರಲ್ಲಿ ಕಾಲೂರಲಾರದ ಮತ್ತು ದೆಹಲಿಯೂ ಸೇರಿದಂತೆ ಹಿಂದಿ ಸಾಮ್ರಾಜ್ಯದಲ್ಲಿ ಹಿಂದುಳಿದಿರುವ ಈ ಎಡರಂಗದ ಆತ್ಮಕ್ಕೆ (ಅದು ಆತ್ಮವನ್ನು ನಂಬದಿದ್ದರೂ) ಶಾಂತಿ ಕೋರಲು ಸ್ಪರ್ಧೆ ನಡೆಯುತ್ತಿದೆ. ರಾಜಕೀಯದ ಮಧ್ಯರಂಗದಲ್ಲಿ ಮೆರೆಯದಿದ್ದ ಎಡರಂಗ ನೇಪಥ್ಯಕ್ಕೆ ಸರಿದಾಗ ಅದನ್ನು ಕುರಿತು ಎಂದಿಗಿಂತಲೂ ಹೆಚ್ಚು ಚರ್ಚೆ ಆಗುತ್ತಿದೆ. ನಿಜ ಹೇಳಬೇಕೆಂದರೆ, ಸೋವಿಯೆತ್ ಒಕ್ಕೂಟದ ವಿಘಟನೆ ಆದಾಗ, ಬರ್ಲಿನ್ ಗೋಡೆ ಕೆಡವಿದಾಗ ಅಪ್ಪಳಿಸಿದ ಟೀಕೆಟಿಪ್ಪಣಿಗಳನ್ನು ಹೋಲುವ ಮಾತುಗಳು ಎಡರಂಗದ ಸೋಲು ಕುರಿತು ಬರುತ್ತಿವೆ. ಅಂಥಾ ಪ್ರಾಮುಖ್ಯ ಗಳಿಸಿಕೊಂಡ ಎಡರಂಗ ಅದನ್ನು ಕಳೆದುಕೊಂಡದ್ದು ಹೇಗೆ? ಅಂಥಾ ಎಡರಂಗ ಇದ್ದಕ್ಕಿದ್ದಂತೆ ಅಸಂಗತ, ಅಸ್ತಂಗತ ಎಂದು ಅನ್ನಿಸಿಕೊಂಡದ್ದು ಹೇಗೆ?

ಹಾಗೆ ನೋಡಿದರೆ, ಭಾರತೀಯ ಕಮ್ಯುನಿಸ್ಟ್ ಪಕ್ಷಕ್ಕೆ ಅಥವಾ ಭಾರತೀಯ ಕಮ್ಯುನಿಸ್ಟರಿಗೆ, ಅವರು ಹುಟ್ಟುವುದಕ್ಕೆ ಮುಂಚಿನಿಂದಲೂ ಟೀಕೆಗಳನ್ನು ಕೇಳಿ ಅಭ್ಯಾಸವಿದೆ. ವರ್ಗಹೋರಾಟವೇ ಮುಖ್ಯ ಎಂದು ಭಾವಿಸಿದ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಚಳವಳಿಯಲ್ಲಿ ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳದೇ ಹೋದಾಗ  ಏನೇನು ಅನ್ನಿಸಿಕೊಳ್ಳಬೇಕೋ ಅದನ್ನೆಲ್ಲ ಅನ್ನಿಸಿಕೊಂಡಿದ್ದರು. ಬಡಜನರ ನಡುವೆ ಕೆಲಸ ಮಾಡುತ್ತಿದ್ದ ಅವರು ದೂರ ನಿಂತಿದ್ದರಿಂದ, ಸ್ವಾತಂತ್ರ್ಯ ಚಳವಳಿಯ ನಾಯಕತ್ವ ಸಿರಿವಂತರ ಕೈಗೆ ಹೋಗಿ ಮುಂದೆ ಅಧಿಕಾರದಲ್ಲಿ ಗಟ್ಟಿಗೊಂಡಿತು ಎಂಬ ಟೀಕೆ ಅವರ ಮೇಲೆ ಎರಗಿತ್ತು. ಆಮೇಲೆ ಅವರು ದೇಶದ ಚುನಾವಣಾ ರಾಜಕೀಯದಲ್ಲಿ ಉತ್ಸಾಹದಿಂದ ಭಾಗವಹಿಸಿದಾಗ ಅನೇಕರಿಗೆ ಆಘಾತವಾಗಿತ್ತು.

ಮುಂದೆ ‘ಭಾರತ ಕಮ್ಯುನಿಸ್ಟ್ ಪಕ್ಷ’ ಆಂತರಿಕ ವೈಚಾರಿಕ ಕಲಹದಿಂದ ಇಬ್ಭಾಗವಾದಾಗ ನಿಜಕ್ಕೂ ಈಗ ಅದೊಂದು ರಾಜಕೀಯ ಪಕ್ಷ ಎಂದು ವಿರೋಧಿಗಳೆಲ್ಲ ಗೇಲಿ ಮಾಡಿದರು. ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ– ಎಂ ಮತ್ತು ಸಿಪಿಐ) ಇವೆರಡರ ನೇತೃತ್ವದಲ್ಲಿ ಇನ್ನಿತರ ಎಡಪಂಥೀಯ ಪಕ್ಷಗಳು ಒಟ್ಟುಗೂಡಿ ಎಡರಂಗ ರೂಪುಗೊಂಡಾಗ ಚಳವಳಿಗೆ ಚಳವಳಿ, ಚುನಾವಣೆಗೆ ಚುನಾವಣೆ– ಹೀಗೆ ಅದು ಜನಪರ ಹೋರಾಟ ಮತ್ತು ಸಂಸದೀಯ ರಾಜಕಾರಣ ಎರಡರಲ್ಲೂ ನೆಲೆ ಕಂಡುಕೊಂಡಿತು. ಚುನಾಯಿತ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ ಹೆಚ್ಚು ರಾಜಕೀಯ ಪ್ರಭಾವ ಪಡೆಯುವುದು ಹೇಗೆ ಅನ್ನುವುದಕ್ಕೆ ಒಂದು ಮಾದರಿ ಸಿಕ್ಕಿತು. ಇನ್ನು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರಗಳ ಜೊತೆ ಎಡಪಂಥೀಯರ ಸರಸ ವಿರಸಗಳಿಂದಾದ ಲಾಭನಷ್ಟಗಳ ಲೆಕ್ಕಾಚಾರವೇ ಬೇರೆ ಕಥೆ. 

ಕಾಂಗ್ರೆಸ್‌ಮಯ ರಾಜಕಾರಣದೊಳಗೆ ಕೇರಳದಲ್ಲಿ ಮೊತ್ತಮೊದಲ ಕಾಂಗ್ರೆಸ್ಸೇತರ ಸರ್ಕಾರ ಸ್ಥಾಪನೆ, ಪಶ್ಚಿಮ ಬಂಗಾಳದಲ್ಲಿ ಎಡರಂಗ ಸುದೀರ್ಘ ಕಾಲ ನಡೆಸಿದ ಆಡಳಿತ ಮತ್ತು ಜ್ಯೋತಿ ಬಸು ಅವರು ಸುದೀರ್ಘ ಕಾಲ ಮುಖ್ಯಮಂತ್ರಿ ಆಗಿದ್ದ ದಾಖಲೆ, ತ್ರಿಪುರಾ ರಾಜ್ಯದಲ್ಲಿ ಸಿಪಿಎಂ ಸರ್ಕಾರ– ಹೀಗೆ ಎಡಪಂಥೀಯರ ಪ್ರಮುಖ ಹೆಜ್ಜೆಗುರುತುಗಳನ್ನು ದೇಶದ ರಾಜಕಾರಣ ಮರೆಯಲು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ಭಾರತದಲ್ಲಿ ಎಡಪಂಥೀಯ ಚಳವಳಿಗೆ ಮುಕ್ಕಾಲು ಶತಮಾನ ಮೀರಿದ ಇತಿಹಾಸವಿದೆ. ಅಷ್ಟೊಂದು ಪ್ರಾಮುಖ್ಯ ಗಳಿಸಿಕೊಂಡಿದ್ದ ಎಡ ಪಂಥೀಯರು ಅದನ್ನು ಕಾಲಕ್ರಮೇಣ ಕಳೆದುಕೊಂಡದ್ದು ಹೇಗೆ? ಎಡರಂಗ ಈಗ ಅಸಂಗತ, ಅಪ್ರಸ್ತುತ ಅಷ್ಟೇ ಅಲ್ಲ, ಅಸ್ತಂಗತವೇ ಆಗಿಬಿಟ್ಟಿದೆ ಎಂದೆಲ್ಲಾ ಅನ್ನಿಸಿಕೊಳ್ಳುತ್ತಿರುವುದು ಏಕೆ?

ಬಹುಶಃ ಯಾವುದೇ ಸೈದ್ಧಾಂತಿಕ ಅಥವಾ ರಾಜಕೀಯ ಚಳವಳಿಯ ಪ್ರಗತಿ ಮತ್ತು ವಿಗತಿ ಎರಡೂ ಅದರ ಹೊಟ್ಟೆಯೊಳಗೇ ರೂಪುಗೊಳ್ಳುತ್ತದೆ. ನಮ್ಮ ಎಡಪಂಥೀಯರು ತಮಗೆ ಮಾರ್ಕ್ಸ್‌ವಾದ ಕೊಟ್ಟ ಚಿಂತನೆಯನ್ನು ‘ಸಿದ್ಧಾಂತ’ ದ ಪೀಠದ ಮೇಲೆ ಇಟ್ಟು ಮರೆತುಬಿಟ್ಟರೇ? ರೈತಕಾರ್ಮಿಕ ಚಳವಳಿಗಳ ಬಲದಿಂದ ದಕ್ಕಿದ ಚುನಾವಣಾ ವಿಜಯಗಳು ಮತ್ತು ಆಡಳಿತಾಧಿಕಾರಗಳು ಎಡಪಕ್ಷಗಳ ಹೋರಾಟದ ಮೂಲಸತ್ವವನ್ನು ಮರೆಸಿಬಿಟ್ಟವೇ? ನಂಬೂದಿರಿಪಾದ್‌ ಅವರು ಕೇರಳದಲ್ಲಿ ಅಲ್ಪಕಾಲದಲ್ಲೇ ರೂಪಿಸಿಕೊಟ್ಟ ಅಭಿವೃದ್ಧಿಯ ಮಾನಕಗಳು, ಮೂರುದಶಕಗಳ ಆಡಳಿತವಿದ್ದರೂ ಪಶ್ಚಿಮ ಬಂಗಾಳದಲ್ಲಿ ಅವು ಇಡೀ ದೇಶಕ್ಕೇ ಮಾದರಿಗಳಾಗಿ ಬೆಳೆಯಲಿಲ್ಲ ಎನ್ನುವುದು ಅವರ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತಿದೆಯೇ? 

ಪಶ್ಚಿಮ ಬಂಗಾಳದಲ್ಲಿ ಎಡಪಂಥೀಯರು ನಡೆಸಿದ ಆಡಳಿತ ಮತ್ತು ನವದೆಹಲಿಯಲ್ಲಿ ಅವರು ನಡೆಸಿದ ರಾಜಕಾರಣ–ಇವೆರಡರಲ್ಲೂ ಅವರ ಇಂದಿನ ಸ್ಥಿತಿಗೆ ಕಾರಣಗಳು ಹುದುಗಿರಬಹುದು. ‘ಈ ರಾಜ್ಯ ಎಂದಿದ್ದರೂ ನಮ್ಮ ಜಹಗೀರು, ನಾವು ಹೇಗೆ ನಡೆದುಕೊಂಡರೂ ಈ ಜನ ನಮ್ಮ ಹಿಂದೆ ಬಿದ್ದಿರುತ್ತಾರೆ ಎಂಬ ಅಹಂಕಾರ ಎಡರಂಗದ ರಾಜಕಾರಣಿಗಳಲ್ಲಿ ಬೆಳೆದಿತ್ತು, ಅದಕ್ಕೆ ತಕ್ಕ ಶಾಸ್ತಿ ಆಯಿತು’ ಎಂದು ಎಡರಂಗದ ಸೋಲನ್ನು ಸರಳೀಕರಿಸಲಾಗುತ್ತದೆ. ಸತ್ಯ ಕೆಲವೊಮ್ಮೆ ಅಷ್ಟು ಸರಳವಾಗಿಯೇ ಇರುತ್ತದೆ. ಸಿಂಗೂರು, ನಂದಿಗ್ರಾಮಗಳಲ್ಲಿ ರೈತರ ಮೇಲೆ ಆದ ಲಾಠಿ ಏಟುಗಳು ಎಡರಂಗದ ವಿಶ್ವಾಸಾರ್ಹತೆಗೆ ಬಿದ್ದ ಪ್ರಹಾರಗಳು ಎಂಬ ಟೀಕೆಯೂ ಇದೆ. ಕಾರ್ಮಿಕ ಹೋರಾಟಗಳು ಅವರನ್ನೂ ಉದ್ಧಾರ ಮಾಡಿಲ್ಲ, ಉದ್ದಿಮೆಗಳನ್ನೂ ಉಳಿಸಿಲ್ಲ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ಮುಂದಿಡಲಾಗುತ್ತದೆ. ಹಿಂದೊಮ್ಮೆ ‘ಅಧಿಕಾರ ವಿಕೇಂದ್ರೀಕರಣ’ ಎಂದರೇನು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟು ಹಳ್ಳಿಜನರ ಕೈಗೆ ಅಧಿಕಾರ ಕೊಟ್ಟವರನ್ನು ಅದೇ ಹಳ್ಳಿಗಳ ಜನರೇ ಕೈಬಿಟ್ಟಿದ್ದಾರೆ.

‘ದೀದಿ’ ಪಕ್ಷ ನಡೆಸುತ್ತಿರುವ ಹಲವು ಬಗೆಯ ರಾದ್ಧಾಂತಗಳನ್ನು ಸಮರ್ಥವಾಗಿ ಎದುರಿಸಲಾಗದ ಅಸಹಾಯಕತೆಯಲ್ಲಿ ಸಿದ್ಧಾಂತ ಬಲ್ಲ ಈ ಅಣ್ಣಂದಿರು ನರಳುವಂತಾಗಿದೆ. 2016 ರಲ್ಲಿ ನಡೆಯಲಿರುವ ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಈಗ ಅವರ ಪ್ರಬಲ ಎದುರಾಳಿ ತೃಣಮೂಲ ಕಾಂಗ್ರೆಸ್ ಒಂದೇ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಬಂಗಾಳವನ್ನು ಗೆದ್ದರೆ ಮಾತ್ರ ಭಾರತವನ್ನು ಗೆದ್ದಂತಾಗುತ್ತದೆ ಎನ್ನುವುದು ಭಾರತೀಯ ಜನತಾ ಪಕ್ಷದ ಅಮಿತತಂತ್ರಗಳ ಅಲೆಕ್ಸಾಂಡರ್‌ಗಳಿಗೆ ಎಲ್ಲರಿಗಿಂತ ಚೆನ್ನಾಗಿ ಗೊತ್ತು.

ಎಡಪಂಥೀಯರು ಜನಸಾಮಾನ್ಯರ ಸಮಸ್ಯೆಗಳಿಂದ ದೂರವಾಗಿ ರಾಜ್ಯಗಳ ಮತ್ತು ದೇಶದ ರಾಜಕಾರಣದಲ್ಲಿ ಪಾತ್ರವಹಿಸುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ ಎಂಬ ಟೀಕೆಗೆ ಪರವಿರೋಧಗಳು ಇರುವುದು ಸಹಜ. ಆದರೆ ಚಳವಳಿಗಾರರು ರಾಜಕಾರಣಿಗಳಾಗಬಾರದು ಎಂದು ಎಲ್ಲಿ ಹೇಳಿದೆ? ಇಷ್ಟಾದರೂ ಇತಿಹಾಸದಲ್ಲಿ ಒಮ್ಮೆ ಮಾತ್ರ ಒದಗುವ ಅವಕಾಶದಂತೆ ತೋರುವ ಪ್ರಧಾನ ಮಂತ್ರಿ ಪಟ್ಟವನ್ನು ತಮ್ಮ ಪಕ್ಷಕ್ಕೇ ತಪ್ಪಿಸಿದ ಸಿಪಿಎಂ ಮಹಾನಾಯಕರ ಐತಿಹಾಸಿಕ ತಪ್ಪನ್ನು ಹಳ್ಳಿಶಾಲೆಯ ವಿದ್ಯಾರ್ಥಿ ಸಂಘದಲ್ಲಿ ಹೊಡೆದಾಡುವ ಹುಡುಗರು ಕೂಡ ಕ್ಷಮಿಸಲಾರರು. 1996 ರಲ್ಲಿ ಎಡಪಂಥೀಯ ರಾಜಕಾರಣಿ ಜ್ಯೋತಿ ಬಸು ಅವರು ದೇಶದ ಪ್ರಧಾನಿ ಆಗುವುದನ್ನು ತಪ್ಪಿಸಲಾಯಿತು ಮತ್ತು 1998 ರಲ್ಲಿ ಬಲಪಂಥೀಯ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಿತು ಎಂದಿಷ್ಟು ಮಾತ್ರ ಹೇಳಬಹುದು. ಕೇಂದ್ರ ಸರ್ಕಾರದಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಎದುರಿಸುವುದಕ್ಕಿಂತ ಹೊರಗಿದ್ದು ಅದನ್ನು ಹೆದರಿಸುವುದೇ ಸೂಕ್ತ ಎನ್ನುವ ರಾಜಕೀಯ ಸೂತ್ರಕ್ಕೆ ಯಾವ ಕಾಲಕ್ಕೂ ಗೆಲುವಿಲ್ಲ.  

ವೃತ್ತಿಪರ ರಾಜಕಾರಣಿಗಳಂತೆಯೇ ವರ್ತಿಸುವ ಎಡಪಕ್ಷಗಳ ಧುರೀಣರು ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ತಮ್ಮ ಪಕ್ಷ ಬೆಳೆಯಬಲ್ಲ ಹೋರಾಟಗಳನ್ನು ರೂಪಿಸದೆ, ಅವುಗಳ ಬದಲಿಗೆ ತೃತೀಯ ರಂಗಗಳನ್ನು ರೂಪಿಸುವ ‘ಪೈಡ್‌ ಪೈಪರ್‌’ ಮತ್ತು ‘ಕಿಂಗ್‌ ಮೇಕರ್‌’ ಆಗುವುದರಲ್ಲೇ ತೃಪ್ತಿ ಕಾಣುತ್ತಿರುವುದು ಇಂದಿಗೂ ವಾಸ್ತವ ಸಂಗತಿ. ಅನೇಕ ರಾಜ್ಯಗಳಲ್ಲಿ ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡು ಹೊಸ ಪ್ರಾದೇಶಿಕ ಪಕ್ಷಗಳು ಬೆಳೆಯುತ್ತಿದ್ದರೆ, ಎಡಪಕ್ಷಗಳು ಮಾತ್ರ ಎಲ್ಲೂ ಅಂಥ ವಿಶೇಷ ಪ್ರಯತ್ನಗಳನ್ನು ಮಾಡಲಿಲ್ಲ. ರಾಜಕಾರಣದಲ್ಲಿ ನೆಲೆ ವಿಸ್ತರಿಸಿಕೊಳ್ಳಲು, ವಿಶ್ವಮಾನವ ಪ್ರಜ್ಞೆಗಿಂತ ಸ್ಥಳೀಯ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆಗೆ ನಡೆಸುವ ಹೋರಾಟಗಳೇ ಮುಖ್ಯ ಎಂದು ಯಾರಿಗೆ ಹೇಳೋಣ? ಇನ್ನು ಕೇರಳದಲ್ಲಿ ಪಿಣರಾಯಿ ವಿಜಯನ್ – ಅಚ್ಯುತಾನಂದನ್ ಪ್ರಕರಣದಲ್ಲಿ ಯಾರಿಂದ ಏನಾಯಿತು ಅನ್ನುವುದನ್ನು ನಿನ್ನೆಮೊನ್ನೆಯ ಸುದ್ದಿಯೂ ಹೇಳುತ್ತಿದೆ.

ರಾಜಮಹಾರಾಜರ ಯುದ್ಧಗಳೇ ಇತಿಹಾಸ ಎಂಬ ಅನಾದಿಕಾಲದ ನಂಬಿಕೆಯನ್ನು ಬದಿಗೆ ಸರಿಸಿ ಶ್ರೀಸಾಮಾನ್ಯರನ್ನು ರಾಜಕಾರಣದ ಕೇಂದ್ರವಾಗಿ ರೂಪಿಸಲು ಶ್ರಮಿಸಿದ,  ಇಡೀ ದೇಶದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರ್ಯಾಯ ಚಿಂತನೆಯನ್ನು ಕಟ್ಟಿದ ಎಡಪಂಥೀಯ ಚಳವಳಿಯ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಆದರೆ ಅದು ಕೈಗೆತ್ತಿಕೊಳ್ಳಬೇಕಾದ ವಿಷಯಗಳು ಇನ್ನೂ ಎಷ್ಟೋ ಉಳಿದಿವೆ. ಹೊಸ ಬೆಳವಣಿಗೆಗಳೇ ಅದರ ಅಗತ್ಯವನ್ನೂ ಪ್ರಾಮುಖ್ಯವನ್ನೂ ಹೆಚ್ಚಿಸಿವೆ. ಬದಲಾದ ಭಾರತಕ್ಕೆ ಹೊಂದಿಕೊಳ್ಳುವ ದಾರಿಗಳನ್ನು ಅನ್ವೇಷಿಸುವುದು 1990 ರ ನಂತರ ಎಡ ಪಕ್ಷಗಳ ಮುಖ್ಯ ಕಾರ್ಯಸೂಚಿ ಆಗಬೇಕಿತ್ತು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಬಗ್ಗೆ ಭಾಷಣ ಮಾಡುತ್ತ ಅವುಗಳ ನಾಯಕರು ತಾವು ನವೀಕರಣ ಮಾಡಿಕೊಳ್ಳುವುದನ್ನೇ ಮರೆತರೇ? ಮಾರ್ಕ್ಸ್‌ವಾದ ಒತ್ತಿ ಹೇಳುವ ಸ್ವವಿಮರ್ಶೆ ಎಂದಿಗೂ ಬದಲಾಗದ ಬೆಳವಣಿಗೆಯ ಸೂತ್ರವಷ್ಟೆ. ಇರಲಿ, ದೇಶದಲ್ಲಿ ಹಳೆಯ ಸಮಸ್ಯೆಗಳು ಉಳಿದಿವೆ, ಜೊತೆಗೆ ರಾಜಕಾರಣದ ಹೊಸ ಬೆಳವಣಿಗೆಗಳು ಹೊಸ ಸವಾಲುಗಳನ್ನೂ ಮುಂದಿಟ್ಟಿವೆ. ಇವುಗಳಿಂದ ಮುಕ್ತವಾದ ‘ಸ್ವಚ್ಛಭಾರತ’ವನ್ನು ರೂಪಿಸಲು ಯುವಜನರನ್ನು ಆಕರ್ಷಿಸಬಲ್ಲ ಹೊಸ ಸಾಮಾಜಿಕ ಆ್ಯಪ್‌ಗಳ ಆವಿಷ್ಕಾರ ಇಂದಿನ ಅಗತ್ಯ. ‘ಎಡಪಂಥೀಯರು ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ತತ್ವ ಹೇಳುವುದಿರಲಿ, ಅವರು ಮೊದಲು ಜನರ ಬಳಿಗೆ ಹೋಗಿ ಜನರ ಜೊತೆ ಇರಲಿ’ ಎಂಬಂಥ ಕಟುವಿಮರ್ಶೆಯನ್ನು ಗಂಭೀರವಾಗಿ ಪರಿಗಣಿಸುವುದು ಸೂಕ್ತ.  
editpagefeedback@prajavani.co.in 

Comments
ಈ ವಿಭಾಗದಿಂದ ಇನ್ನಷ್ಟು
ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

ಜೀವನ್ಮುಖಿ
ಪಾದುಕಾ ಪುರಾಣಕ್ಕೆ ಹೊಸ ಪ್ರಸಂಗ ಅನಗತ್ಯ

28 Feb, 2017
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

ಜೀವನ್ಮುಖಿ
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

14 Feb, 2017
ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

ಜೀವನ್ಮುಖಿ
ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

31 Jan, 2017
ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

ಜೀವನ್ಮುಖಿ
ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

17 Jan, 2017
ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ

ಜೀವನ್ಮುಖಿ
ವಿರೋಧ ಪಕ್ಷವಾಗದ ಅದಕ್ಷ ರಾಜಕಾರಣ

3 Jan, 2017