ಆಹಾರ ಸುರಕ್ಷೆ ಹೇಗೆ?

ಹರಹರಾ... ಏನೀ ಆಹಾರ?... ಬರೀ ವ್ಯವಹಾರ!

ಮ್ಯಾಗಿ ನೂಡಲ್ಸ್ ಉಂಟು ಮಾಡಿದ ವಿವಾದ, ನಮ್ಮ ಅರಿವಿಗೇ  ಬಾರದೆ ನಾವು ದಿನನಿತ್ಯ ಸೇವಿಸುತ್ತಿರುವ ಅಪಾಯಕಾರಿ ಆಹಾರಗಳ ಬಂಡವಾಳವನ್ನು ಬಟಾಬಯಲು ಮಾಡಿದೆ. ಆಹಾರ ಪದಾರ್ಥ ಎಲ್ಲಿಯದೋ ತೋಟದಿಂದ ನಮ್ಮ ಮನೆಯ ತಾಟು ಸೇರುವವರೆಗಿನ ಹಂತಗಳ ಬಗ್ಗೆ ನಡೆಯಲೇಬೇಕಾದ ವ್ಯಾಪಕ ವಿಶ್ಲೇಷಣೆಯನ್ನು ಒತ್ತಿ ಹೇಳಿದೆ. ಇಂತಹ ಅನಿವಾರ್ಯ ಸ್ಥಿತಿ ಬಂದೊದಗಿರುವ ಈ ಹೊತ್ತಿನಲ್ಲಿ ಒಂದು ಎಚ್ಚರಿಕೆಯ ಕೈಪಿಡಿ ಇದು.

ರೊಟ್ಟಿಗೂ ಬಿಸ್ಕತ್ತಿಗೂ ಜಗಳ ನಡೆದರೆ ಹೇಗಿರುತ್ತದೆ? ಸುಮಾರು 50 ವರ್ಷಗಳ ಹಿಂದೆ ಕನ್ನಡ 4ನೇ ತರಗತಿಯಲ್ಲಿ ಇಂಥ ಒಂದು ಪಾಠ ಇತ್ತು. ಅಡುಗೆ ಒಲೆಯ ಮುಂದೆ ಅಮ್ಮ ರೊಟ್ಟಿ ತಟ್ಟುತ್ತಿದ್ದಾಳೆ; ಮಗುವೊಂದು ಮೂಲೆಯಲ್ಲಿದ್ದ ಬಿಸ್ಕತ್ತಿನ ಪ್ಯಾಕೆಟ್ ಕಂಡು ತನಗೆ ಅದೇ ಬೇಕೆಂದು ಹಟ ಹಿಡಿಯುತ್ತದೆ. ಆಗ ರೊಟ್ಟಿ ಮತ್ತು ಬಿಸ್ಕತ್ತಿನ ನಡುವೆ ವಾಗ್ವಾದ ಆರಂಭವಾಗುತ್ತದೆ. ‘ನೀನು ಬೂದಿಬಡ್ಕ, ಮೈಮೇಲೆಲ್ಲ ಸುಟ್ಟ ಕಲೆ, ಸಿಹಿ ಇಲ್ಲ, ಪರಿಮಳ ಇಲ್ಲ’ ಎಂದು ಬಿಸ್ಕತ್ತು ರೊಟ್ಟಿಗೆ ಹೇಳುತ್ತದೆ. ಅತ್ತ ರೊಟ್ಟಿ, ‘ನೀನು ಬರೀ ಥಳಕು, ಒಳಗೆಲ್ಲ ಕೊಳಕು’ ಎನ್ನುತ್ತ ಬಿಸ್ಕತ್ತಿನ ಕತೆಯನ್ನು ಬಿಚ್ಚುತ್ತಾ ಹೋಗುತ್ತದೆ. ರಚ್ಚೆ ಹಿಡಿದಿದ್ದ ಮಗು ಕ್ರಮೇಣ ಶಾಂತವಾಗಿ, ಬಿಸ್ಕತ್ತನ್ನು ಬದಿಗೊತ್ತಿ ‘ರೊಟ್ಟೀನೇ ಕೊಡಮ್ಮ’ ಎನ್ನುತ್ತದೆ.

ಅಮ್ಮನ ಆ ಅಣಕು ಸಂಭಾಷಣೆ ಇಂದು ಇನ್ನೂ ಹೆಚ್ಚು ಪ್ರಸ್ತುತವಾಗಿದೆ. ಬಿಸ್ಕತ್ತಿನ ಜೊತೆಗೆ ಈಗ ಇತರ ನೂರಾರು ಬಗೆಯ ಆಹಾರ ಪದಾರ್ಥಗಳು ಫ್ಯಾಕ್ಟರಿಗಳನ್ನು ಹೊಕ್ಕು ಹೊರಬಿದ್ದು ಅಡುಗೆ ಮನೆಗೆ ಹೋಗುತ್ತಿವೆ. ಅಂದು ಆಹಾರಧಾನ್ಯವನ್ನು ಕುಟ್ಟಿ, ಬೀಸಿ, ಬೇಯಿಸುವ ಕಷ್ಟವಿತ್ತಾದರೂ ಆಹಾರ ಸರಪಳಿ ಚಿಕ್ಕದಾಗಿತ್ತು. ಇಂದು ಅಡುಗೆ ಕೆಲಸ ಸರಳವಾಗಿದೆ. ಆದರೆ ಆಹಾರ ಸರಪಳಿ ಇಡೀ ಪೃಥ್ವಿಯನ್ನು ಸುತ್ತಿಕೊಂಡಿದೆ. ಅಂದಿನ ಸಂವಾದದಲ್ಲಿ ಆಸ್ಪತ್ರೆಯ ಹೆಸರೂ ಇರಲಿಲ್ಲ. ಇಂದಿನ ಆಹಾರ ಸರಪಳಿಯಲ್ಲಿ ಜಾಹೀರಾತು ವೈಭವ, ಕೋಲ್ಡ್‌ಚೇನ್, ಡಯಾಗ್ನೋಸ್ಟಿಕ್ಸ್, ಸೂಪರ್ ಸ್ಪೆಷಾಲಿಟಿ, ಮೂತ್ರಪಿಂಡ ಕಸಿ, ಗ್ರಾಹಕ ವೇದಿಕೆ, ಷೇರುಪೇಟೆ, ಮಾಧ್ಯಮ ಚೀತ್ಕಾರ, ಬಾಡಿಗೆ ಬಸಿರು, ಫುಡ್‌ಮೈಲ್, ನ್ಯಾಯಾಲಯ, ಪರಿಸರ ಮಾಲಿನ್ಯ- ಹೀಗೆ ಕೈಗೂ ಬಾಯಿಗೂ ಮಧ್ಯೆ ನೂಡ್ಲ್ ಥರಾ ನೂರೊಂದು ಆಸಕ್ತಿಗಳು ಸಿಂಬೆ ಸುತ್ತಿಕೊಂಡಿವೆ. ಆಹಾರ ಬೆಳೆಯುವವನಿಗಿಂತ ಆಹಾರ ಸಂಸ್ಕರಣೆ, ವಿತರಣೆ ಮಾಡುವವರ ಕೈಗಳೇ ಬಲವಾಗಿವೆ. ಆಹಾರ ಪೂರೈಕೆಗಿಂತ ಔಷಧಗಳ ಬಿಸಿನೆಸ್ಸೇ ಬೃಹದಾಕಾರವಾಗಿದೆ. 

ಇಂದಿನ ಆಹಾರ ವ್ಯವಹಾರದಲ್ಲಿ ಸೇರ್ಪಡೆ ಮತ್ತು ಬೇರ್ಪಡೆ ಎಂಬ ಎರಡು ಮುಖ್ಯ ‘ಪಡೆ’ಗಳನ್ನು ಗುರುತಿಸಬಹುದು. ರುಚಿ ಸೇರ್ಪಡೆ, ಕೃತಕ ಪರಿಮಳ- ಬಣ್ಣ- ಹೊಳಪು ಸೇರ್ಪಡೆ, ಕೆಡದಂತಿಡುವ ಗುಣಗಳ ಸೇರ್ಪಡೆ, ಅಗ್ಗದ ಬೆರಕೆ ವಸ್ತುಗಳ ಸೇರ್ಪಡೆ ಇವೆಲ್ಲ ಒಂದಿಷ್ಟು ಅಗೋಚರ ಅಪಾಯಗಳನ್ನು ತರುತ್ತವೆ. ಬೇರ್ಪಡೆ ಹಾಗಲ್ಲ. ಮೂಲ ಆಹಾರ ಪದಾರ್ಥದಲ್ಲಿದ್ದ ಸದ್ಗುಣಗಳನ್ನೆಲ್ಲ ಬೇರ್ಪಡಿಸಿ, ಸತ್ವಹೀನ ಪದಾರ್ಥಗಳು ಗ್ರಾಹಕರ ತಟ್ಟೆಗೆ ಬರುತ್ತವೆ. ಹಿಂದೆಲ್ಲ ಅಕ್ಕಿ ಎಂಬುದು ಆಹಾರವೂ ಆಗಿತ್ತು; ಔಷಧವೂ ಆಗಿತ್ತು. ಅಕ್ಕಿಗೆ ಹೊಳಪು ಕೊಡುವ ತಾಂತ್ರಿಕತೆ ಸುಧಾರಿಸಿದಂತೆಲ್ಲ ಅದನ್ನು ಪದೇಪದೇ ಪಾಲಿಶ್ ಮಾಡಿ, ಸಪೂರ ಕಾಳುಗಳನ್ನಾಗಿಸಿ ನಮ್ಮನ್ನು ಮರುಳು ಮಾಡುತ್ತಲೇ, ಹಾಗೆ ಬೇರ್ಪಟ್ಟ ತೌಡಿನಿಂದ ತೈಲ ಮತ್ತು ಜೀವಸತ್ವಗಳನ್ನು ಪಡೆದು, ಔಷಧ ಕಂಪೆನಿಗಳ ಹಾಗೂ ಡಾಕ್ಟರರ ಮೂಲಕ ಆ ಸತ್ವವನ್ನು ಅನುಕೂಲಸ್ಥರತ್ತ ತಳ್ಳುವ ವ್ಯವಸ್ಥೆ ರೂಪುಗೊಂಡಿದೆ. ಲವಂಗದಿಂದ ತೈಲ ಬೇರ್ಪಡೆ, ಮೆಣಸಿನಿಂದ ಬಣ್ಣ, ಪ್ರಾಣಿಗಳ ಮಜ್ಜೆಯಿಂದ ತುಪ್ಪ ಬೇರ್ಪಡೆ... ಕೊನೆಗೆ ಆಹಾರದಿಂದ ಆರೋಗ್ಯ ಬೇರ್ಪಡೆ.

ನಮಗಿಂತ ತುಂಬ ಮೊದಲೇ ಆಹಾರವನ್ನು ಬಿಸಿನೆಸ್ ಮಾಡಿಕೊಂಡ ಶ್ರೀಮಂತ ದೇಶಗಳಲ್ಲಿ ಆಹಾರ ಸಂಬಂಧಿ ನೂರಾರು ಗೋಟಾವಳಿಗಳು, ಖಟ್ಲೆಗಳು ಆಗಿಹೋಗಿವೆ. 1858ರಲ್ಲಿ ಬ್ರಿಟನ್ನಿನ ಹಮ್‌ಬಗ್ ಹೆಸರಿನ ಚಾಕೊಲೇಟ್‌ಗಳಲ್ಲಿ ಆರ್ಸೆನಿಕ್ ವಿಷ ಸೇರಿದ್ದರಿಂದ  ಇನ್ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ, 20 ಮಂದಿ ಸಾವಪ್ಪಿದರು. 1988ರಲ್ಲಿ ಮೊಟ್ಟೆಗಳಲ್ಲಿ ವಿಷಕಾರಿ ಏಕಾಣುಜೀವಿಗಳು ಸೇರಿದ್ದರಿಂದ ಆಹಾರ ಸಚಿವೆ ರಾಜೀನಾಮೆ ನೀಡಬೇಕಾಯಿತು. ಹುಚ್ಚುಹಸು ರೋಗಪೀಡಿತ 50 ಸಾವಿರ ಹಸುಗಳು ಗ್ರಾಹಕರ ಹೊಟ್ಟೆಗೆ ಹೋಗಿ 1990ರಲ್ಲಿ ಇಡೀ ಯುರೋಪ್ ತತ್ತರಿಸಿತು. 1994ರಲ್ಲಿ ಹಂಗೆರಿಯಲ್ಲಿ ಮೆಣಸಿನಪುಡಿಗೆ ಸೀಸದ ಬಣ್ಣವನ್ನು ಸೇರಿಸಿದ್ದರಿಂದ ಸಾವಿರಾರು ಜನರಿಗೆ ವಿಷಪ್ರಾಶನವಾಗಿ ಕೆಲವರು ಪ್ರಾಣಬಿಟ್ಟರು. ಬರ್ಗರ್ ತಿಂದಿದ್ದರಿಂದಲೇ ತಾನು ದಢೂತಿಯಾದೆನೆಂದು 2002ರಲ್ಲಿ ಅಮೆರಿಕ ಹದಿಹುಡುಗನೊಬ್ಬ ಮೆಕ್ಡೊನಾಲ್ಡ್ ವಿರುದ್ಧ ದಾವೆ ಹೂಡಿದ. 2005ರಲ್ಲಿ ಆಸ್ಟ್ರೇಲಿಯಾದ ಮನೆಮನೆಗಳ ಫ್ರಿಜ್‌ಗಳಲ್ಲಿಟ್ಟ ಮಾಂಸದ ಚೂರುಗಳು ವಿಷಾಣುಗಳಿಂದಾಗಿ ಫಳಫಳ ಮಿನುಗತೊಡಗಿದವು. 2011ರಲ್ಲಿ ಫುಕುಶಿಮಾ ದುರಂತದ ನಂತರ ವಿಕಿರಣಪೂರಿತ ಮೇವು ತಿಂದ ದನಗಳ ಮಾಂಸದಲ್ಲಿ ಸುರಕ್ಷಾ ಮಿತಿಗಿಂತ 320 ಪಟ್ಟು (ಶೇಕಡ 320 ಅಲ್ಲ,) ವಿಕಿರಣ ಸೇರ್ಪಡೆಯಾಗಿ, ಅದು ಪತ್ತೆಯಾಗುವ ಮೊದಲೇ ಅನೇಕರ ಹೊಟ್ಟೆಗೆ ಸೇರಿಹೋಗಿತ್ತು.

ಜಾಗತೀಕರಣದ ನಂತರ ಈ ಎಲ್ಲ ಅವಾಂತರಗಳೂ ಈಗ ಎಲ್ಲ ದೇಶಗಳಲ್ಲಿ ಪುನರಾವರ್ತನೆ ಆಗುತ್ತಿವೆ. ಚೀನಾದಲ್ಲಿ ಡೇರಿ ಹಾಲಿಗೆ ಮೆಲಮೈನ್ ಎಂಬ ಬಿಳಿಪುಡಿಯನ್ನು ಸೇರಿಸಿದ್ದರಿಂದ ಲಕ್ಷಾಂತರ ಮಕ್ಕಳು ಕಾಯಿಲೆ ಬಿದ್ದು ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಲಾಗಿತ್ತು. ನಮ್ಮಲ್ಲೇ ಮೆಣಸಿನ ಪುಡಿಗೆ ಸುಡಾನ್-3 ಎಂಬ ವಿಷಕಾರಿ ಬಣ್ಣವನ್ನು ಸೇರಿಸಿದ್ದು, ಸಾಸಿವೆ ತೈಲಕ್ಕೆ ಅದನ್ನೇ ಹೋಲುವ ಅರ್ಜಿಮೋನ್ ಎಣ್ಣೆಯನ್ನು ಬೆರೆಸಿದ್ದರಿಂದ ದಿಲ್ಲಿಯಲ್ಲಿ ಸಾವಿರಾರು ಜನರು ಕಾಯಿಲೆ ಬಿದ್ದು 59 ಜನರು ಸಾವಪ್ಪಿದ್ದು, ಚಹಾಪುಡಿಯಲ್ಲಿ ‘ಟೆಟ್ರಾಡೈಫಾನ್’ ಎಂಬ ಪೀಡೆನಾಶಕ ವಿಷ ಸೇರಿದೆಯೆಂದು ಜರ್ಮನಿ ತಿರಸ್ಕರಿಸಿದ್ದು ಎಲ್ಲ ಹಳೇ ಕತೆ (ಟೆಟ್ರಾಡೈಫಾನ್‌ನ ವ್ಯಂಗ್ಯ ಏನಿತ್ತೆಂದರೆ ಅದರ ಉತ್ಪಾದನೆಯ ತಾಂತ್ರಿಕತೆಯನ್ನು ಈ ಮೊದಲು ಜರ್ಮನಿಯಿಂದ ಭಾರತಕ್ಕೆ ಸ್ಥಳಾಂತರಿಸಲಾಗಿತ್ತು!).

ಆಹಾರ ಸುರಕ್ಷೆಯ ವಿಷಯದಲ್ಲಿ ಸುಧಾರಿತ ದೇಶಗಳಲ್ಲಿ ಗ್ರಾಹಕರಿಗೆ ಅವರದೇ ಭಾಷೆಯಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಇದೆ. ಕಟ್ಟುನಿಟ್ಟಾದ ಸರ್ಕಾರಿ ತಪಾಸಣಾ ವ್ಯವಸ್ಥೆ ಇದೆ. ಎಲ್ಲ ದೇಶಗಳಿಗೂ ಅನ್ವಯವಾಗುವಂಥ ಮಾರ್ಗಸೂಚಿಗಳನ್ನು ವಿಶ್ವಸಂಸ್ಥೆ ನೀಡಿದೆ. ನಮ್ಮಲ್ಲಿ ಅವೆಲ್ಲವೂ ದುರ್ಬಲವಾಗಿವೆ. ತಪಾಸಣೆ ಮಾಡುವವರಿಗೆ ಆಮಿಷ, ಬೆದರಿಕೆಗಳಿವೆ. ಎಲ್ಲೋ ಸಂಜಯ್ ಸಿಂಗ್ ಎಂಬ ಯುವ ಪರೀಕ್ಷಕನೊಬ್ಬ ಪಟ್ಟು ಹಿಡಿದು ಮ್ಯಾಗಿ ಶ್ಯಾವಿಗೆಯ ಪರೀಕ್ಷೆ, ಮರುಪರೀಕ್ಷೆ ಮಾಡಿರದೇ ಇದ್ದರೆ ನೆಸ್ಲೆ ಭಾನಗಡಿಯೂ ಹೂತು ಹೋಗುತ್ತಿತ್ತು. ಹಾಗೆಂದು ಎಲ್ಲ ಅಧ್ವಾನಗಳಿಗೂ ಕಂಪೆನಿಗಳನ್ನೇ ದೂರಬೇಕೆಂದಿಲ್ಲ. ಅಂಗಡಿ ದಾಸ್ತಾನಿನಲ್ಲಿ ವಿಷಾಣು ಸೇರ್ಪಡೆಯಾದೀತು. ಕಂಪೆನಿಗಳ ಪ್ಯಾಕೆಟ್‌ಗಳನ್ನೇ ನಕಲು ಮಾಡುವ ವಂಚಕರಿದ್ದಾರೆ. ನಿಷೇಧಿತ ಪೀಡೆನಾಶಕಗಳನ್ನು ರೈತರಿಗೆ ಮಾರುವ ಖದೀಮರು ನಮ್ಮಲ್ಲಿದ್ದಾರೆ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಅಕ್ಕಿಗಿಂತ ಗೋಧಿಯಲ್ಲಿ, ಕಾಫಿಗಿಂತ ಚಹಾದಲ್ಲಿ ಕೃಷಿ ವಿಷ ಸೇರ್ಪಡೆ ಸಾಧ್ಯತೆ ಜಾಸ್ತಿ ಎಂಬುದು ಗೊತ್ತಿರಬೇಕು. ಎಲ್ಲ ರುಚಿಕರ ತಿನಿಸಿನಲ್ಲೂ ಅಜಿನೊಮೊಟೊ, ಕೊಳಚೆತೈಲ ಇದ್ದೀತೆಂಬ ಗುಮಾನಿ ನಮಗಿರಬೇಕು. ಮೆಣಸಿನ ಪುಡಿ, ಮಸಾಲೆ ಪುಡಿ, ಬೇಬಿಫುಡ್ ಪುಡಿಯನ್ನೆಲ್ಲ ಮನೆಯಲ್ಲೇ ಮಾಡಿಕೊಳ್ಳಬೇಕು.

‘ಗೊತ್ತಿಲ್ಲದ್ದನ್ನು ಹೇಳಿ ಭಯ ಹುಟ್ಟಿಸಬೇಡಿ’ ಎನ್ನುತ್ತೀರಾ? ಹಾಗಿದ್ದರೆ ಗೊತ್ತಿದ್ದುದನ್ನೇ ಹೇಳೋಣವೆ? ಎಳೆಯರ ಮಧುಮೇಹ, ಬೊಜ್ಜು, ರಕ್ತದೊತ್ತಡ, ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಆಸ್ತಮಾ ಕಾಯಿಲೆಗಳೆಲ್ಲ ಹೇಗೆ ಊರೂರಲ್ಲಿ ಹೆಚ್ಚುತ್ತಾ ಜಾಗತಿಕ ದಾಖಲೆ ಸೃಷ್ಟಿಸುತ್ತಿವೆ ಎಂಬುದನ್ನು ಹೇಳೋಣವೆ? ತಮ್ಮ ಜೀವಮಾನದ ಗಳಿಕೆಯನ್ನೆಲ್ಲ ಆಸ್ಪತ್ರೆಗಳಿಗೆ ಕೊಟ್ಟು, ಮನೆಯವರನ್ನೂ ಸಾಲಕ್ಕೆ ಸಿಲುಕಿಸಿ ಹರಹರಾ ಎಂದವರ ಕತೆ ಹೇಳೋಣವೆ? ಈಗಿನ ಕಾಯಿಲೆಗಳೆಲ್ಲ ಆಹಾರದ ಮೂಲಕವೇ ಬರುತ್ತವೆ ಎನ್ನುವಂತಿಲ್ಲ ನಿಜ. ಆರೋಗ್ಯಕ್ಕೆ ಅಪಾಯ ತರಬಲ್ಲ ಅಂಶಗಳು ನಮ್ಮ ನೀರಿನಲ್ಲಿ, ಗಾಳಿಯಲ್ಲಿ, ಕಲ್ನಾರಿನ ಶೀಟಿನಲ್ಲಿ, ಪ್ಲಾಸ್ಟಿಕ್ಕಿನಲ್ಲಿ, ಗೋಡೆ ಬಣ್ಣದಲ್ಲಿ, ಅಷ್ಟೇಕೆ, ಔಷಧಗಳಲ್ಲೂ ಹಾಸು ಹೊಕ್ಕಾಗುತ್ತಿವೆ. ‘ಮ್ಯಾಗಿಯಲ್ಲಿ ದೋಷ ಇರಲಿಲ್ಲ; ಅದನ್ನು ತುಂಬಿಟ್ಟ ಪ್ಲಾಸ್ಟಿಕ್ ಚೀಲದಲ್ಲಿ, ಅದಕ್ಕೆ ಬಳಿದ ಹಳದಿ ಬಣ್ಣದಲ್ಲಿ ಸೀಸ ವಿಷ ಇತ್ತೇನೊ’ ಎಂಬ ವಾದದಲ್ಲಿ ಹುರುಳು ಇದ್ದರೂ ಇರಬಹುದು. ಇದೇ ನೆಸ್ಲೆ ಕಂಪೆನಿಯ ಬೇಬಿಫುಡ್ ಬಳಸಿದ್ದರಿಂದ ಎಳೆಮಕ್ಕಳು ಕಾಯಿಲೆಬಿದ್ದಾಗ, ‘ಹಾಲಿನ ಪುಡಿಯಲ್ಲಿ ದೋಷ ಇರಲಿಲ್ಲ, ತಾಯಂದಿರು ಅದನ್ನು ಅಶುದ್ಧ ನೀರಿನಲ್ಲಿ ಕಲಕಿದ್ದೇ ತಪ್ಪು’ ಎಂದು ವಾದಿಸಿ ಕಂಪೆನಿ ಬಚಾವಾಗಿತ್ತು. ಸುಳ್ಳಿನಲ್ಲಿ ನಿಜಾಂಶವನ್ನೂ ಕಲಬೆರಕೆ ಮಾಡುವವರ ಈ ಯುಗದಲ್ಲಿ ಯಾರನ್ನು ನಂಬೋಣ?

Comments