ಅವಿರೋಧ ಆಯ್ಕೆಯ ಸುತ್ತಮುತ್ತ...

ಇತ್ತೀಚಿಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜರುಗಿದ ಹತ್ತಾರು ಸಂಗತಿಗಳು: ಇದರಲ್ಲಿ ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ವಿಶೇಷವೆನಿಸಿತು.

ಇತ್ತೀಚಿಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜರುಗಿದ ಹತ್ತಾರು ಸಂಗತಿಗಳು:
ಇದರಲ್ಲಿ ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ವಿಶೇಷವೆನಿಸಿತು. ಇಲ್ಲಿ ಸತತವಾಗಿ 25 ವರ್ಷಗಳಿಂದ ಅವಿರೋಧ ಆಯ್ಕೆ ನಡೆಯುತ್ತಿದೆ. ಆ ಊರಿನ ಹಿರಿಯರೊಬ್ಬರು ಇಂಥ ‘ಸಂಪ್ರದಾಯ’ಕ್ಕೆ ನಾಂದಿ ಹಾಡಿದರಂತೆ. ಅವರ ನಿಧನದ ನಂತರವೂ ಈ ‘ಸಂಪ್ರದಾಯ’ವನ್ನು ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ!

‘ಚುನಾವಣೆ ನಡೆದರೆ ಊರಿನಲ್ಲಿ ಒಡಕು ಉಂಟಾಗುತ್ತದೆ. ಹಣ, ಹೆಂಡ, ಬಾಡೂಟ, ಸೀರೆಗಳನ್ನು ಹಂಚಲಾಗುತ್ತದೆ. ಇದರಿಂದ ಊರಿನ ಜನರನ್ನು ನಾವೇ ಭ್ರಷ್ಟರನ್ನಾಗಿಸಿದಂತೆ ಆಗುತ್ತದೆ. ಆದ್ದರಿಂದ ಅವಿರೋಧ ಆಯ್ಕೆಯೇ ಸರಿ ಅಲ್ಲವಾ?’ ಎಂದು ಒಬ್ಬರು ಕೇಳಿದರು.

‘ಇಂಥ’ ಮಾತು  ಕೇಳಿ ರೋಮಾಂಚನಗೊಂಡೆ. ಚುನಾವಣೆಗಳು ಊರು–ಕೇರಿಗಳಲ್ಲಿ ಮನುಷ್ಯ ಸಂಬಂಧಗಳನ್ನು ಹಾಳು ಮಾಡುತ್ತವೆ. ಊರಿನ ಶಾಂತ ವಾತಾವರಣವನ್ನು ಕದಡುತ್ತವೆ. ಈ ಕಾರಣಕ್ಕೆ  ‘ಅವಿರೋಧ ಆಯ್ಕೆ’ ಒಳ್ಳೆಯ ಉದ್ದೇಶದಿಂದ ಆಗಿದ್ದರೆ ಯಾವ ಸಮಸ್ಯೆಯೂ ಇಲ್ಲ. ಆದರೆ, ಇದರ ಒಳಹೊಕ್ಕು ನೋಡಿದಾಗ ಅವಿರೋಧ ಆಯ್ಕೆಯಂಥ ‘ಮೌಲ್ಯ’ದ ಹಿಂದಿರುವ ಅಸಲಿ ಮುಖ ಗೋಚರಿಸುತ್ತದೆ.

‘ನಿಮ್ಮೂರ ಜನರ ನಡವಳಿಕೆ ಅನುಕರಣೀಯ’ ಎಂದು ಆ ಊರಿನ ವ್ಯಕ್ತಿಯನ್ನು ಶ್ಲಾಘಿಸಿದೆ. ಆತ ‘ಅದು ಹೊರಗಿನ ಪ್ರಪಂಚಕ್ಕೆ ಮಾತ್ರ ಆದರ್ಶ. ಊರಿಗೆ ಅಲ್ಲ. ಏಕೆಂದರೆ ಅವಿರೋಧ ಆಯ್ಕೆ ಹಿಂದೆ ಪಾಳೆಗಾರಿಕೆಯ ಕರಾಳ ಮುಖವಿದೆ. ಅದನ್ನು ಹಿಮ್ಮೆಟ್ಟಿಸುವ ಯಾವ ಧ್ವನಿಯೂ ಗಟ್ಟಿಯಾಗದಂತೆ ವ್ಯವಸ್ಥಿತವಾಗಿ ಹುದುಗಿಸಲಾಗುತ್ತದೆ’ ಎಂದು ಅವರು  ಭಯದಿಂದಲೇ ಹೇಳಿದರು.

ಬೀದರ್‌ ಜಿಲ್ಲೆ ಗ್ರಾಮವೊಂದರ ಪ್ರಸಂಗವಿದು: ಆ ಊರಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಹಣ ಬೇಕಿತ್ತು. ಊರಿನವರು ಒಟ್ಟಾದರು. ಚುನಾವಣೆ ನಡೆಸುವುದು ಬೇಡ. ದೇವಸ್ಥಾನಕ್ಕೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರನ್ನು ಅವಿರೋಧವಾಗಿ ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಬಂದರು. ಅಲ್ಲಿ ಒಂದು ಲಕ್ಷ ರೂಪಾಯಿಗೆ ಸದಸ್ಯ ಸ್ಥಾನ ಹರಾಜು ಆಯಿತು.

ಊರು ಎಂದರೆ ಎಲ್ಲರೂ ದೇವಸ್ಥಾನಕ್ಕೆ ಹೋಗುವುದಿಲ್ಲ. ಮಸೀದಿ, ಚರ್ಚ್‌ಗಳಿಗೂ ಹೋಗಿ ಪ್ರಾರ್ಥಿಸುವವರು ಇರುತ್ತಾರೆ. ಊರ ಬೇಲಿಯ ಮಗ್ಗಲಿನಲ್ಲಿ ಕುಳಿತಿರುವ ಕಲ್ಲಿಗೆ ಪೂಜೆ ಮಾಡುವವರು ಇರುತ್ತಾರೆ. ಆದರೆ, ಹರಾಜು ಸಂದರ್ಭದಲ್ಲಿ ಇಂಥವರ ಭಾವನೆಗೆ ಮನ್ನಣೆ ಸಿಗುವುದಿಲ್ಲ. ಮೇಲ್ಜಾತಿಯವರ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಇಂದಿಗೂ ಕೆಲವೊಂದು ಜಾತಿಯ ಜನರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲ. ಅಂಥವರಿಗೆ ದೇವಸ್ಥಾನ ಕಟ್ಟಿಕೊಂಡು ಏನಾಗಬೇಕಿದೆ? ಎಲ್ಲರನ್ನೂ ಒಳಗೊಳ್ಳದ ದೇವಸ್ಥಾನಕ್ಕಾಗಿ ‘ಸ್ಥಾನ ಹರಾಜು’ ಹಾಕುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಸಂದೇಶವನ್ನು ರವಾನಿಸುತ್ತದೆ.

ಊರಿನವರೇ ಸ್ಥಾನವನ್ನು ಹರಾಜು ಹಾಕುವುದಾದರೆ ಚುನಾವಣೆ ಏಕೆ ನಡೆಸಬೇಕು? ಸರ್ಕಾರದ ದುಡ್ಡನ್ನು ಏಕೆ ಪೋಲು ಮಾಡಬೇಕು? ಒಂದು ವೇಳೆ ತೀವ್ರಗಾಮಿ ಸಂಘಟನೆಗಳು ಇನ್ನೂ ಜಾಸ್ತಿ ದುಡ್ಡು ಕೊಟ್ಟರೆ ಅವರಿಗೂ ಸ್ಥಾನ ಕೊಡುತ್ತಾರೆಯೇ? ಇಲ್ಲಿ ‘ಹರಾಜಿಗೆ’ ‘ಅವಿರೋಧ ಆಯ್ಕೆ’ ಎನ್ನುವ ‘ಮೌಲ್ಯ’ವೆಂಬ ಹೊಸ ಅರ್ಥವನ್ನು ಅವರು ಹುಟ್ಟು ಹಾಕಿದ್ದಾರೆಯೇ?

‘ಸದಸ್ಯತ್ವ ಹರಾಜಿನಿಂದ ಗ್ರಾಮದ ಮಾನವೂ ಹರಾಜಾಗುತ್ತದೆ. ಅದನ್ನು ನಿಮ್ಮಂಥವರು ವಿರೋಧಿಸಲಿಲ್ಲವೇ? ಎಂದು ಪರಿಚಿತರನ್ನು ಕೇಳಿದೆ. ‘ಗ್ರಾಮದಲ್ಲಿ ವಿರೋಧ ಕಟ್ಟಿಕೊಳ್ಳಬಾರದೆಂದು ಅವರ ನಿರ್ಧಾರವನ್ನು ನಾವು ಪ್ರಶ್ನಿಸುವುದಿಲ್ಲ’ ಎಂದು ತಿಳಿಸಿದರು.

‘ಹರಾಜಿನಲ್ಲಿ ಸ್ಥಾನ ಖರೀದಿಸಿದ ಮೇಲೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೀರಾ?’ ಎಂದು ಅವಿರೋಧವಾಗಿ ಆಯ್ಕೆಗೊಂಡ ಸದಸ್ಯರೊಬ್ಬರನ್ನು ಕೇಳಿದೆ. ‘ನಾನು ದೇವಸ್ಥಾನಕ್ಕೆ ದುಡ್ಡು ಕೊಟ್ಟಿರಬಹುದು. ಆದರೆ, ಮೊದಲು ಆ ಹಣವನ್ನು ದುಡಿದುಕೊಳ್ಳುತ್ತೇನೆ. ಆಮೇಲೆ ಅಲ್ಲವೇ ಸೇವೆ’ ಎಂದು ಹೇಳಿದರು.

ಕಲಬುರ್ಗಿ ಜಿಲ್ಲೆಯ ಹಳ್ಳಿಯೊಂದರ ಚುನಾವಣೆ ನನಗೆ ಅತ್ಯಂತ ಕುತೂಹಲವೆನಿಸಿತು. ಹೆಚ್ಚು ಕಡಿಮೆ ಅಲ್ಪಸಂಖ್ಯಾತ ಮತದಾರರನ್ನೇ ಒಳಗೊಂಡಿರುವ ಅಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಇಬ್ಬರು ಶ್ರೀಮಂತರಾಗಿದ್ದರೂ ಸೋತರು. ಹೀಗಾಗಿ ವಿವರಗಳನ್ನು ಕಲೆ ಹಾಕಿದೆ.

‘ಹದಿನೈದು–ಇಪ್ಪತ್ತು ವರ್ಷಗಳ ಹಿಂದೆ ಊರನ್ನು ಬಿಟ್ಟು ಮುಂಬೈಗೆ ಹೋಗಿದ್ದರು. ಸಣ್ಣಪುಟ್ಟ ಕೆಲಸ ಹುಡುಕಿ ತೆರೆಳಿದ್ದ ಅವರು ಶ್ರೀಮಂತರಾಗಿ ಚುನಾವಣೆ ಪ್ರಕಟಗೊಂಡ ಸಮಯದಲ್ಲಿ ಊರಿಗೆ ಬಂದರು. ಚುನಾವಣಾ ಕಣಕ್ಕೆ ಇಳಿದರು. ಅಬ್ಬರದ ಪ್ರಚಾರ ನಡೆಯಿತು. ಆ ಊರಿನಲ್ಲಿ ಎಂದೂ ಕಾಣದಿದ್ದ ವಿಲಾಸಿ ಕಾರುಗಳು ಓಡಾಡಿದವು. ಆಮಿಷಗಳಿಗೇನು ಕೊರತೆ ಇರಲಿಲ್ಲ. ಆದರೆ, ಆಗಿದ್ದೇ ಬೇರೆ. ಹಣವಿಲ್ಲದ ಅಭ್ಯರ್ಥಿ ಜಯಗಳಿಸಿದರು. ಸೋತ ಶ್ರೀಮಂತರು ಮತ್ತೆ ಮುಂಬೈಗೆ ಮುಖ ಮಾಡಿದರು.

‘ನಾನು ಐದಾರು ವರ್ಷಗಳಿಂದ ವೃದ್ಧಾಪ್ಯ, ವಿಧವಾ ವೇತನ, ಬಿಪಿಎಲ್‌ ಕಾರ್ಡ್‌ ಕೊಡಿಸುವುದು. ತಾಲ್ಲೂಕು ಕಚೇರಿ, ಪೊಲೀಸ್‌ ಠಾಣೆ, ದವಾಖಾನೆ ಕೆಲಸಗಳನ್ನು ಹಗಲು ರಾತ್ರಿ ಎನ್ನದೆ ಮಾಡುತ್ತಿದ್ದೇನೆ. ಜನರು ಇದನ್ನು ಮರೆಯಲಿಲ್ಲ’ ಎಂದು ಶ್ರೀಮಂತರನ್ನು ಸೋಲಿಸಿದ ಸದಸ್ಯರೊಬ್ಬರು ಹೇಳಿದರು. ಆ ಊರಿನ ಮತದಾರರ ಬಗ್ಗೆ ನನಗೆ ಮೆಚ್ಚುಗೆ ಆಯಿತು. ದುಡ್ಡಿನ ದರ್ಪದಿಂದ ಅಧಿಕಾರ ಹಿಡಿದುಕೊಳ್ಳುವ ಪ್ರಯತ್ನವನ್ನು ತಿರಸ್ಕರಿಸಿದ ಅವರ ನೈತಿಕತೆ ಇಡೀ ರಾಜ್ಯಕ್ಕೆ ವಿಸ್ತರಿಸಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಆಶಿಸಿದೆ.

ಶ್ರೀಮಂತರಾದ ಬಳಿಕವೂ ಈ ಚುನಾವಣೆಗಳಿಗೆ ಅವರು ಏಕೆ ಬರುತ್ತಾರೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ಈ ವಿಷಯವಾಗಿ ಇನ್ಯಾರನ್ನೋ ಮಾತನಾಡಿದಾಗ ಕೆಲವರ ಶ್ರೀಮಂತಿಕೆಯ ಹಿಂದೆ ಅಪರಾಧವಿರುತ್ತದೆ ಎಂದು ಹೇಳುತ್ತಾ, ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾದಾಗ ಸಂವಿಧಾನಬದ್ಧವಾಗಿ ದಕ್ಕುವ ಸವಲತ್ತುಗಳು ಹಲವೊಮ್ಮೆ ಅವರು ಎಸಗಿರುವ ಅಪರಾಧಗಳಿಗೆ ಆಶ್ರಯ ನೀಡುತ್ತವೆ’ ಎಂದು ವಿಶ್ಲೇಷಿಸಿದರು.

ಈ ಕಾರಣಕ್ಕೆ ಹತ್ತಾರು ಉದ್ಯಮಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ ಎಂದು ಪಟ್ಟಿ ಮಾಡಿದ ಅವರು ‘ಬೆಂಗಳೂರಿನಿಂದ ಬಂದ ಉದ್ಯಮಿಗಳು ಕೆಲವು ಕಡೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದ್ದು, ಅವರ ಉದ್ದೇಶವೇ ಬೇರೆ ಇರುತ್ತದೆ’ ಸಂಶಯ ವ್ಯಕ್ತಪಡಿದರು.ಪಟ್ಟಭದ್ರರು ‘ಅವಿರೋಧ ಆಯ್ಕೆ’ ಎನ್ನುವ ಅಸ್ತ್ರವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರೋಕ್ಷವಾಗಿ ಸೋಲಿಸಲು ಕಂಡುಕೊಂಡಿದ್ದಾರೆ. ಇದಕ್ಕೆ ‘ಮೌಲ್ಯ’ವೆಂಬ ಶಾಲು ಹೊದಿಸಿದ್ದಾರೆ. ಈ ಶಾಲನ್ನು ಸರಿಸಿದರೆ ‘ಮೇಲ್ಜಾತಿ’, ‘ಪಾಳೆಗಾರಿಕೆ’ಯ ನಿಜವಾದ ಒರಟು ಮುಖ ಕಾಣಿಸುತ್ತದೆ.

‘ಇಂಥ’ ವ್ಯವಸ್ಥೆಯಿಂದ ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗುವ ಬದಲು ಸಡಿಲಗೊಳ್ಳುತ್ತದೆ. ಇದರಿಂದ ಉಂಟಾಗುವ ದೂರಗಾಮಿ ಪರಿಣಾಮದ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ‘ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳ ಹರಾಜು ಪ್ರವೃತ್ತಿಯನ್ನು ಹತ್ತಿಕ್ಕಲು ಪಂಚಾಯತ್‌ರಾಜ್‌ ಕಾಯ್ದೆಗೆ ತಿದ್ದುಪಡಿ ತರಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಹೇಳಿರುವುದು ಸ್ವಾಗತಾರ್ಹ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಥಮ ಪ್ರಜೆಗೂ, ಅವರ ತೋಟದಲ್ಲಿ ಕೆಲಸ ಮಾಡುವ ಮಾಲಿಗೂ ಇರುವುದು ಒಂದೇ ಮೌಲ್ಯದ ಓಟು. ಹಣದ ಥೈಲಿ ಇಟ್ಟುಕೊಂಡವರು ‘ಅವಿರೋಧ’ ಎನ್ನುವ ‘ಮೌಲ್ಯ’ದ ಮುಖವಾಡ ತೊಟ್ಟು ಆಯ್ಕೆಯಾಗುವುದು ಅಧಿಕಾರ ವಿಕೇಂದ್ರಿಕರಣ ಹಾಗೂ ಪ್ರಜಾಪ್ರಭುತ್ವದ ಆಶಯಕ್ಕೆ ಮಾರಕ.

ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿದ್ದ ಜೆ.ಎಂ.ಲಿಂಗ್ಡೊ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು– ‘ಅವಿರೋಧ ಆಯ್ಕೆಯ ಹಿಂದೆ ಒತ್ತಡ ಇದ್ದೇ ಇರುತ್ತದೆ’. ಈ ಮೇಲಿನ ಘಟನಾವಳಿಗಳನ್ನೆಲ್ಲ ಗಮನಿಸಿದಾಗ ಬಹುಶಃ ಬದುಕನ್ನೇ ಮುಡಿಪಾಗಿಟ್ಟು ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಕನಸಿನ ಭಾರತ ಇಲ್ಲಿ ಸೋಲುತ್ತಿರಬಹುದು. ಅದು ಸೋತರೂ ಚಿಂತೆ ಇಲ್ಲ. ನಮ್ಮ ಜನತಂತ್ರ ವ್ಯವಸ್ಥೆ ಇನ್ನಷ್ಟು ಬಲಿಯಬೇಕು. ದೇಶದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕು. ಈ ಶಿಕ್ಷಣ, ಮೌಲ್ಯಗಳನ್ನು ಉಳಿಸಬಲ್ಲ, ಬೆಳೆಸಬಲ್ಲ, ವಿಕಸಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಲ್ಲಿಯವರೆಗೆ ತಲೆ ತಗ್ಗಿಸಬೇಕಾದ, ಅವಮಾನಗಳನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಗಳು ಸಮಾಜಕ್ಕೆ ಅನಿವಾರ್ಯ.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಈಶಾನ್ಯ ದಿಕ್ಕಿನಿಂದ
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

8 Dec, 2017
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಈಶಾನ್ಯ ದಿಕ್ಕಿನಿಂದ
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

24 Nov, 2017
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಈಶಾನ್ಯ ದಿಕ್ಕಿನಿಂದ
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

10 Nov, 2017
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಈಶಾನ್ಯ ದಿಕ್ಕಿನಿಂದ
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

27 Oct, 2017
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ಈಶಾನ್ಯ ದಿಕ್ಕಿನಿಂದ
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

28 Sep, 2017