ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ದೃಶ್ಯಾವಳಿ ಪತ್ತೆ: ತನಿಖೆಗೆ ಆಗ್ರಹ

ಗಣಪತಿ ವಿಸರ್ಜನೆ ವೇಳೆ ಮಲ್ಲಿಕಾರ್ಜುನ ಸಾವು– ಕೊಲೆ ಶಂಕೆ, ಶಹಬಜಾರ್‌ ನಿವಾಸಿಗಳ ಪ್ರತಿಭಟನೆ
Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಲಬುರ್ಗಿ:  ನಗರದ ಅಪ್ಪನ ಕೆರೆ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಸೆ.21 ರಂದು ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಲ್ಲಿಕಾರ್ಜುನ ಎನ್ನುವರು ನೀರಿನಲ್ಲಿ ಮುಳುಗಿ ಮೃತಪಟ್ಟ ಪ್ರಕರಣವು ವಿಡಿಯೊ ದೃಶ್ಯಾವಳಿಯಿಂದ ಹೊಸ ತಿರುವು ಪಡೆದುಕೊಂಡಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಆ ಸಂದರ್ಭದಲ್ಲಿ ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದ ವಿಡಿಯೊ ದೃಶ್ಯಾವಳಿ ಗುರುವಾರ ಪತ್ತೆಯಾಗಿದೆ. ಈ ದೃಶ್ಯಾವಳಿ ವಾಟ್ಸ್ ಆ್ಯಪ್‌ನಲ್ಲಿ ಹರದಾಡುತ್ತಿದ್ದು, ಇದು ಆಕಸ್ಮಿಕ ಅವಘಡವೋ ಅಥವಾ ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆಯೋ ಎಂಬ ಚರ್ಚೆ ಜನರಲ್ಲಿ ನಡೆದಿದೆ.

ಗಣೇಶ ಮೂರ್ತಿಯೊಂದಿಗೆ ನೀರಿಗೆ ಇಳಿಯುವ ನಾಲ್ಕೈದು ಯುವಕರು ಪರಸ್ಪರ ನೀರು ಎರಚಿ, ಬಳಿಕ ಮಲ್ಲಿಕಾರ್ಜುನನ್ನು ಕೆಳಗೆ ತಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ದೂರು ದಾಖಲು: ಬುಧವಾರ ಮಧ್ಯಾಹ್ನವೇ ವಿಡಿಯೊ ದೃಶ್ಯಾವಳಿ ಲಭ್ಯವಾಗಿದೆ ಎನ್ನಲಾಗಿದ್ದು, ಅದನ್ನು ವೀಕ್ಷಿಸಿದ ಮಲ್ಲಿಕಾರ್ಜುನ ಪಾಲಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಮುಂದೇನು ಮಾಡಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಅಂತಿಮವಾಗಿ ಗುರುವಾರ ಸಂಜೆ ಬ್ರಹ್ಮಪುರ ಠಾಣೆಯಲ್ಲಿ ದೂರು ದಾಖಲಿಸಿರುವ ಮಲ್ಲಿಕಾರ್ಜುನನ ತಾಯಿ ಭೀಮಾಬಾಯಿ, ‘ಇದು ಅಸಹಜ ಸಾವು ಅಲ್ಲ, ಇದೊಂದು ಕೊಲೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

ಮೊಂಬತ್ತಿ ಮೆರವಣಿಗೆ: ಮಲ್ಲಿಕಾರ್ಜುನನದು ಆಕಸ್ಮಿಕ ಸಾವಲ್ಲ, ಅದೊಂದು ವ್ಯವಸ್ಥಿತ ಕೊಲೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಶಹಾಬಜಾರ್‌ ನಿವಾಸಿಗಳು ಬುಧವಾರ ರಾತ್ರಿ ಮೊಂಬತ್ತಿ ಮೆರವಣಿಗೆ ನಡೆಸಿದರು. ಶಹಾಬಜಾರ್‌ನಿಂದ ಹೊರಟ ಪ್ರತಿಭಟನಾಕಾರರು ಶಹಾಬಜಾರ್ ನಾಕಾ, ಗೋವಾ ಹೋಟೆಲ್ ಮೂಲ ಜಗತ್
ವೃತ್ತ ತಲುಪಿದರು.

ಎಸ್ಪಿಗೆ ದೂರು: ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಅವರನ್ನು ಭೇಟಿ ಮಾಡಿದ ಸುಲಫಲ ಮಠದ ಮಹಾಂತ ಶಿವಾಚಾರ್ಯರು, ರಾಜಶೇಖರ ಶಿವಾಚಾರ್ಯರು, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಪಾಲಿಕೆ ಸದಸ್ಯ ಪ್ರಭುಲಿಂಗ ಹಾದಿಮನಿ ಅವರು, ‘ಗಣಪತಿ ವಿಸರ್ಜನೆ ವೇಳೆ ನಡೆದ ಘಟನೆ ಅಸಹಜ ಸಾವಿನಂತೆ ಕಂಡು ಬರುತ್ತಿದೆ. ಈ ಬಗ್ಗೆ ವಿಡಿಯೊ ದೃಶ್ಯಾವಳಿ ಲಭ್ಯವಾಗಿವೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ
ಮನವಿ ಸಲ್ಲಿಸಿದರು.

3 ತಿಂಗಳ ಹಿಂದೆ ಮದುವೆ: ಮೃತ ಮಲ್ಲಿಕಾರ್ಜುನ ಎಚ್‌ಕೆಇ ಸಂಸ್ಥೆಯ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳ ಹಿಂದಷ್ಟೇ ಇವರ ಮದುವೆಯಾಗಿತ್ತು.
ತನಿಖೆಗೆ ಸಚಿವ ಆದೇಶ: ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ವಿವರವಾದಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೃತ ಯುವಕನ ಮನೆಗೆ ಭೇಟಿ ನೀಡಿದ್ದೆ. ಆತನ ಪಾಲಕರು ವಿಡಿಯೊ ದೃಶ್ಯಾವಳಿ ತೋರಿಸಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ  ಬ್ರಹ್ಮಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಕೆ.ಎಂ.ಸತೀಶಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಕಾಲೇಜಿನಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆಗೆ ತೆರಳಿದ್ದ. ಆತನೊಂದಿಗೆ ಅದೇ ಕಾಲೇಜಿನ ಹೈದರಾಬಾದ್ ಮೂಲದ ಐವರು ವಿದ್ಯಾರ್ಥಿಗಳೂ ಇದ್ದರು. ಅವರಲ್ಲಿ ಒಬ್ಬರು ಆತನನ್ನು ನೀರಿನೊಳಗೆ ತಳ್ಳಿರುವ ಶಂಕೆ ಇದೆ ಎಂಬುದು ಪಾಲಕರ ಆರೋಪವಾಗಿದೆ’ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್, ಡಿವೈಎಸ್ಪಿ ಮಹಾನಿಂಗ ನಂದಗಾವಿ, ಪಾಲಿಕೆ ಆಯುಕ್ತ ಪಿ.ಸುನಿಲ್‌ಕುಮಾರ್, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಟೆಂಗಳಿ, ಅಜಮಲ್ ಗೋಳಾ ಇದ್ದರು.

* ಈ ದುರ್ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ, ವರದಿ ನೀಡುವ ಮಹತ್ತರ ಜವಾಬ್ದಾರಿ ಪೊಲೀಸ್ ಅಧಿಕಾರಿಗಳ ಮೇಲಿದೆ. ಅವರಿಗೆ ಈ ಬಗ್ಗೆ ಸೂಚಿಸಲಾಗಿದೆ

ಖಮರುಲ್ ಇಸ್ಲಾಂ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT