ಅವಮಾನದಿಂದ ಸನ್ಮಾನದವರೆಗೆ...

ಪಶ್ಚಿಮ ಬಂಗಾಳದ ನೈಹಾತಿಯಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಗಂಡಾಗಿ ಜನಿಸಿದ ಮನಬಿ ಅವರಲ್ಲಿ ದ್ವಿಲಿಂಗಿಯ ಲಕ್ಷಣಗಳು ಬೆಳೆಯತೊಡಗಿದ್ದವು. ಸೋಮನಾಥ ಹೆಸರಿನಲ್ಲಿ ಶಿಕ್ಷಣ ‍ಪಡೆದ ಅವರು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ‘ಮನಬಿ’ ಆದರು. ಅವರಿಗೆ ದೆಬಾಸಿಸ್‌ ಎಂಬ ದತ್ತು ಪುತ್ರ ಇದ್ದಾನೆ.  ಪ್ರಾಂಶುಪಾಲೆಯಾಗಿ ಸೇವೆಸಲ್ಲಿಸುತ್ತಿರುವ  ಮನಬಿ ಸಿನಿಮಾ ನಟಿಯೂ ಹೌದು. ಲಿಂಗ ಪರಿವರ್ತನೆಯಿಂದ ಪ್ರಾಂಶುಪಾಲೆಯಾಗುವವರೆಗಿನ  ಅನುಭವ ಕಥನ ಇಲ್ಲಿದೆ

ಪಶ್ಚಿಮ ಬಂಗಾಳದ ನೈಹಾತಿಯಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಗಂಡಾಗಿ ಜನಿಸಿದ ಮನಬಿ ಅವರಲ್ಲಿ ದ್ವಿಲಿಂಗಿಯ ಲಕ್ಷಣಗಳು ಬೆಳೆಯತೊಡಗಿದ್ದವು. ಸೋಮನಾಥ ಹೆಸರಿನಲ್ಲಿ ಶಿಕ್ಷಣ ‍ಪಡೆದ ಅವರು ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ‘ಮನಬಿ’ ಆದರು. ಅವರಿಗೆ ದೆಬಾಸಿಸ್‌ ಎಂಬ ದತ್ತು ಪುತ್ರ ಇದ್ದಾನೆ.  ಪ್ರಾಂಶುಪಾಲೆಯಾಗಿ ಸೇವೆಸಲ್ಲಿಸುತ್ತಿರುವ  ಮನಬಿ ಸಿನಿಮಾ ನಟಿಯೂ ಹೌದು. ಲಿಂಗ ಪರಿವರ್ತನೆಯಿಂದ ಪ್ರಾಂಶುಪಾಲೆಯಾಗುವವರೆಗಿನ  ಅನುಭವ ಕಥನ ಇಲ್ಲಿದೆ.

ತೃತೀಯ ಲಿಂಗಿಗಳೆಂದರೆ ತಕ್ಷಣ ನೆನಪಾಗುವುದು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ವಾಹನ ನಿಂತಾಗ ಕೈಚಾಚುವವರು, ಫುಟ್‌ಪಾತ್‌ನಲ್ಲಿ ಕೈಯೊಡ್ಡುವವರು, ಸಂಜೆಗತ್ತಲಾದರೆ ಬೀದಿ ಬದಿಯಲ್ಲಿ ನಿಂತು ಕಣ್ಸನ್ನೆ ಮಾಡುವವರು. ಕೆಲವರು ಹಣ ನೀಡಿದರೆ ಇನ್ನೂ ಕೆಲವರು ಶಪಿಸುತ್ತಾರೆ. ತಮ್ಮದಲ್ಲದ ತಪ್ಪಿಗೆ ಅವರು  ಹೊಟ್ಟೆ ಹೊರೆಯಲು ದಿನವೂ ಏನೇನಲ್ಲ ಕಸರತ್ತು ಮಾಡಬೇಕು. ‌‌

ಆದರೆ ಇದಕ್ಕೆಲ್ಲ ವಿರುದ್ಧವಾಗಿ ಪಶ್ಚಿಮ ಬಂಗಾಳದಲ್ಲಿ ತೃತೀಯ ಲಿಂಗಿಯೊಬ್ಬರು ಅಸಾಧಾರಣ ಸಾಧನೆ ಮಾಡಿದ್ದಾರೆ.  ಸತತ ಪರಿಶ್ರಮ, ಗುರಿಯೆಡೆಗಿನ ಛಲ, ಕಠಿಣ ಅಭ್ಯಾಸವಿದ್ದರೆ ಏನನ್ನೂ ಸಾಧಿಸಬಹುದು ಎಂದು ತೋರಿಸಿದ್ದಾರೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ  ಕೃಷ್ಣಾ ನಗರ ಕಾಲೇಜಿನ ಪ್ರಾಂಶುಪಾಲರಾಗಿ ಲೈಂಗಿಕ ಅಲ್ಪಸಂಖ್ಯಾತೆ ಮನಬಿ ಬಂಡೋಪಾಧ್ಯಾಯ ಅವರು ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ್ದಾರೆ.

ಮನಬಿ ತಂದೆ ಸರ್ಕಾರಿ ನೌಕರ, ತಾಯಿ ಗೃಹಿಣಿ. ಕೋಲ್ಕತ್ತಾದ ಹೊರವಲಯದಲ್ಲಿ ಅವರ ಸಾಮಾನ್ಯ ಮಧ್ಯಮ ವರ್ಗದ ಕುಟುಂಬ. ಚಿಕ್ಕವರಿದ್ದಾಗಿನಿಂದ ಅವರು ಶೈಕ್ಷಣಿಕವಾಗಿ  ಮೊದಲ ಸ್ಥಾನದಲ್ಲಿದ್ದರು.

ಮನಬಿ ಅವರು ಅಧಿಕಾರ ಸ್ವೀಕಾರ ಸಮಾರಂಭ ನಡೆಯುವ ದಿನ ಮೂರು ಅಂತಸ್ತಿನ ಕಾಲೇಜಿನ ಕಟ್ಟಡವನ್ನು ಅಲಂಕಾರ ಮಾಡಲಾಗಿತ್ತು. ಪ್ರವೇಶದ್ವಾರ ದಿಂದ ಹಿಡಿದು ಎಲ್ಲೆಡೆ ಹೂಕುಂಡಗಳನ್ನು ಇಡಲಾಗಿತ್ತು.  ವರ್ಣರಂಜಿತ ಸ್ವಾಗತ ಫಲಕಗಳು ಇದ್ದವು. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹೂಗುಚ್ಛಗಳನ್ನು ಹಿಡಿದು ಸನ್ನದ್ಧರಾಗಿದ್ದರು.

ಕಾಲೇಜಿನ ‍ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಲು ಆಡಳಿತ ನಡೆಸುವ ದಕ್ಷಣೆ, ಚಾಣಾಕ್ಷತೆ ಮತ್ತು ಕುಶಾಗ್ರಮತಿ ಮಾತ್ರ ಮುಖ್ಯವಾದುದು. ಅಲ್ಲಿ ಲಿಂಗ ಅಮುಖ್ಯ ಎಂಬುದನ್ನು ಮನಬಿ ಈ ಮೂಲಕ ಸಾರಿ ಹೇಳಿದರು.

‘ನಾನು ನನ್ನ ಸ್ವಂತ ಸಾಮರ್ಥ್ಯದಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ಕಾಲೇಜಿನ ಆಯ್ಕೆ ಮಂಡಳಿ ನನ್ನ ಅರ್ಹತೆ ಗುರುತಿಸಿದೆ. ಹುದ್ದೆಗೂ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. ಲೈಂಗಿಕ ಅಲ್ಪಸಂಖ್ಯಾತೆ ಎಂಬುದು ತಮ್ಮ ಸಾಧನೆಗೆ ಯಾವುದೇ ಅಡ್ಡಿಯಾಗಲಿಲ್ಲ ಎನ್ನುತ್ತಾರೆ 50 ವರ್ಷದ ಮನಬಿ.

ಪ್ರಾಂಶುಪಾಲೆಯಾಗಿ ನೇಮಕ ವಾಗುವುದಕ್ಕಿಂತ ಮೊದಲು ಮನಬಿ, ಪಶ್ಚಿಮ ಮಿಡ್ನಾಪುರ ಜಿಲ್ಲೆಯ ವಿವೇಕಾನಂದ ಮಹಾ ವಿದ್ಯಾಲಯದಲ್ಲಿ ಬಂಗಾಳಿ ಉಪನ್ಯಾಸಕಿಯಾಗಿ 20 ವರ್ಷ ಕಾರ್ಯನಿರ್ವಹಿಸಿದ್ದರು.

‘ಮನಬಿ ಅವರ ನೇಮಕ ನಮಗೆ ಸ್ಫೂರ್ತಿ ನೀಡಿದೆ. ಲಿಂಗ ಯಾವುದೇ ಆಗಿರಲಿ ಪ್ರತಿಯೊಬ್ಬರು ತಮ್ಮ ಸ್ಥಾನವನ್ನು ಗುರುತಿಸಿಕೊಳ್ಳಬಹುದು ಎಂಬುದು ಇತರರಿಗೆ ತಿಳಿಸಿದೆ’ ಎನ್ನುತ್ತಾರೆ ಕಲ್ಯಾಣಿ ವಿಶ್ವವಿದ್ಯಾಲಯ ಕುಲಪತಿ ರತನ್‌ ಲಾಲ್‌ ಹಂಗ್ಲೊ.

ವರವಾದ ಸುಪ್ರೀಂಕೋರ್ಟ್‌ ತೀರ್ಪು: ತೃತೀಯ ಲಿಂಗಿಗಳ ಪರ ಕಳೆದ ವರ್ಷ ಸುಪ್ರೀಂಕೋರ್ಟ್‌ ಒಂದು ಮಹತ್ವದ ತೀರ್ಪು ನೀಡಿತು. ಲಿಂಗಪರಿವರ್ತಿತರನ್ನು ಸರ್ಕಾರಿ ದಾಖಲೆಗಳಲ್ಲಿ ಮೂರನೇ ಲಿಂಗಿಗಳು ಎಂದು ಪರಿಗಣಿಸಬೇಕು ಎಂದು ಹೇಳಿತು. ಅಲ್ಲದೆ ಅವರನ್ನು ಇತರೆ ಹಿಂದುಳಿದ ವರ್ಗಗಳ ಅಡಿ ತರಬೇಕು ಎಂದು ನಿರ್ದೇಶನ ನೀಡಿತು. ಇದು ಮನಬಿ ಅವರಿಗೆ ನೆರವಾಯಿತು.

ಲಿಂಗಪರಿವರ್ತಿತರ ಪರವಾಗಿ ಹೋರಾಡುತ್ತಿರುವ ಕಾರ್ಯಕರ್ತರು ಮನಬಿ ಅವರ ನೇಮಕವನ್ನು ಸ್ವಾಗತಿಸಿದ್ದಾರೆ. ಇದೇ ವೇಳೆ ತೃತೀಯ ಲಿಂಗಿಗಳ ಹಕ್ಕುಗಳ ಪರ ಇನ್ನಷ್ಟು ಹೋರಾಟ ಅಗತ್ಯವಿದೆ ಎಂದು ಹೇಳಿದ್ದಾರೆ.

‘ಮನಬಿ ಅವರ ಯಶಸ್ಸು ಮೆಚ್ಚತಕ್ಕದ್ದು. ಆದರೆ ಅದು ಅವರದೇ ಶ್ರಮದ ಪ್ರತಿಫಲ.  ಇವರಂತೆ ನೂರಾರು  ತೃತೀಯ ಲಿಂಗಿಗಳು ಉನ್ನತ ಸ್ಥಾನಕ್ಕೆ ಏರಬೇಕು. ವೈದ್ಯರು, ಶಿಕ್ಷಕಿಯರು, ವಕೀಲರು, ನ್ಯಾಯಾಧೀಶರ ಸ್ಥಾನಕ್ಕೆ ಏರಬೇಕು’ ಎನ್ನುತ್ತಾರೆ ಸಾಥಿ ಹೆಸರಿನ ಎನ್‌ಜಿಒ ಒಂದರ ಪವನ್ ಧಲ್‌.

ಯಾವ ಶೌಚಾಲಯ ಬಳಸಬೇಕು: ಲಿಂಗ ಪರಿವರ್ತನೆಗೆ ಒಳಗಾಗುವ ಮೊದಲು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಅವರಿಗೆ ಪ್ರತಿದಿನ ಎದುರಾಗುತ್ತಿದ್ದುದು ನಾನು ಯಾವ ಶೌಚಾಲಯ ಬಳಸಬೇಕು? ಎಂದು. ಇಂತಹ ಸಂದರ್ಭ ದಲ್ಲಿ ಹಿಂದಿನಿಂದ ಅವರ ವಿರುದ್ಧ ಕುಹಕದ ಮಾತುಗಳನ್ನು ಆಡುತ್ತಿದ್ದರು, ಲೇವಡಿ ಮಾಡುತ್ತಿದ್ದರು,  ಹಾಸ್ಯಕ್ಕೊಳಗಾಗುತ್ತಿದ್ದರು. ಇದನ್ನೆಲ್ಲ ಮನಬಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಮನೆಯಲ್ಲಿ ಯುವತಿಯಾಗಿದ್ದುಕೊಂಡು, ಹೊರಗಡೆ ಹೋದಾಗ ಪ್ಯಾಂಟ್‌ ಹಾಗೂ ಶರ್ಟ್‌ ಧರಿಸಿ ಪುರುಷನಂತೆ ಕಾಣಿಸಿ ಕೊಳ್ಳುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಸೋಮನಾಥ ಬ್ಯಾನರ್ಜಿ ಎಂದು ಕಾಲೇಜಿಗೆ ಸೇರಿದವರು ಲಿಂಗಪರಿವರ್ತನೆಗೊಳಗಾಗಿ ಮನಬಿ ಬಂಡೋಪಾಧ್ಯಾಯ ಎಂದು ಬದಲಾಗಿ ಕಾಲೇಜಿಗೆ ಹೋದಾಗ ಎದುರಾದ ವಿರೋಧವನ್ನು ಅವರು ಮರೆತಿಲ್ಲ.
*
ಅವಮಾನದೊಂದಿಗೆ: ತೃತೀಯ ಲಿಂಗಿಯಾಗಿದ್ದಾಗ ಅನುಭವಿಸಿದ ಹಿಂಸೆ, ಅವಮಾನ, ಅತ್ಯಾಚಾರದ ಯತ್ನಗಳು ಇನ್ನೂ ಮನಬಿ ಅವರಲ್ಲಿ ಹಸಿರಾಗಿವೆ.  ಆದರೆ ಅವರಲ್ಲಿ ದೃಢವಾದ ಸಂಕಲ್ಪಶಕ್ತಿ ಎಲ್ಲವನ್ನೂ ಮೆಟ್ಟಿ ನಿಲ್ಲುವಂತೆ ಮಾಡಿತು.  ಪುರುಷ ಪ್ರಾಧ್ಯಾಪಕರ ವಸತಿ ನಿಲಯದಿಂದ ಹೊರದಬ್ಬಿದಾಗ ನೆಲೆಯಿಲ್ಲದೆ ಆಕಾಶವೇ ದಿಕ್ಕಾಗಿತ್ತು. 

ಲಿಂಗಪರಿವರ್ತಿಗೆ ಎಂದು ತಿಳಿದ ಇವರ ತಂದೆಯೇ ಬೇಸರ ವ್ಯಕ್ತಪಡಿಸಿದರು. ಆದರೀಗ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದಾಗ ಮೆಚ್ಚುಗೆ ಹಾಗೂ ಅಭಿಮಾನದಿಂದ ಆನಂದ ಬಾಷ್ಪ ಹರಿಸಿದ್ದಾರೆ.

ಸಂಶೋಧನೆ, ಪಿಎಚ್‌.ಡಿ: 1995ರಲ್ಲಿ ಮನಬಿ ದೇಶದ ಮೊದಲ ಲಿಂಗಪರಿವರ್ತಿತರ ನಿಯತಕಾಲಿಕವನ್ನು ಪ್ರಕಟಿಸಿದರು. ಕಡಿಮೆ ಪ್ರಸಾರದ ಇದು ಇಂದೂ ಪ್ರಕಟವಾಗುತ್ತಿದೆ. 2005ರಲ್ಲಿ ಲಿಂಗಪರಿವರ್ತಿತರ ಕುರಿತ ವಿಷಯದ ಸಂಶೋಧನೆಯನ್ನು ಪೂರ್ಣಗೊಳಿಸಿ ಪಿಎಚ್‌.ಡಿ ಪದವಿಯನ್ನೂ ಪಡೆದರು.

ಪಶ್ಚಿಮ ಬಂಗಾಳ ಸರ್ಕಾರ ರಚಿಸಿರುವ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಉಪಾಧ್ಯೆಕ್ಷೆಯಾಗಿ ಈಗಾಗಲೇ ಮನಬಿ ನೇಮಕವಾಗಿದ್ದಾರೆ. ಕೌಟುಂಬಿಕ ಬೆಂಬಲ ದೊರೆತರೆ ಲೈಂಗಿಕ ಅಲ್ಪಸಂಖ್ಯಾತರು ಅಭಿಮಾನದಿಂದ ಬಾಳಬಹುದು. ಅವರ ಬಗ್ಗೆ ಸ್ವೀಕಾರ್ಹ ಮನೋಭಾವ ಬೆಳೆಯವುದು ಅತ್ಯವಶ್ಯವಾಗಿದೆ ಎನ್ನುವುದು ಅವರ ಮಾತು.

Comments