ಬೆಂಗಳೂರು

‘ತಿಳಿವಳಿಕೆ ಕೊರತೆಯಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ತೊಂದರೆ’

‘ಲೈಂಗಿಕತೆ ಬಗ್ಗೆ ನಮ್ಮ ಸಭ್ಯ ಸಮಾಜಕ್ಕೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಲೈಂಗಿಕ ಅಲ್ಪಸಂಖ್ಯಾತರನ್ನು ನಮ್ಮ ಸಮಾಜ ಭಿನ್ನ ದೃಷ್ಟಿಯಿಂದ ನೋಡುತ್ತಿದೆ’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಸಹಾಯಕ ಪ್ರಾಧ್ಯಾಪಕ ಡಾ. ಶೇಖರ್‌ ಪಿ. ಶೇಷಾದ್ರಿ ತಿಳಿಸಿದರು.

ಬೆಂಗಳೂರು: ‘ಲೈಂಗಿಕತೆ ಬಗ್ಗೆ ನಮ್ಮ ಸಭ್ಯ ಸಮಾಜಕ್ಕೆ ಸರಿಯಾದ ಮಾಹಿತಿ ಇಲ್ಲ. ಹಾಗಾಗಿ ಲೈಂಗಿಕ ಅಲ್ಪಸಂಖ್ಯಾತರನ್ನು ನಮ್ಮ ಸಮಾಜ ಭಿನ್ನ ದೃಷ್ಟಿಯಿಂದ ನೋಡುತ್ತಿದೆ’ ಎಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಸಹಾಯಕ ಪ್ರಾಧ್ಯಾಪಕ ಡಾ. ಶೇಖರ್‌ ಪಿ. ಶೇಷಾದ್ರಿ ತಿಳಿಸಿದರು.

ಬೆಂಗಳೂರು ವಿಜ್ಞಾನ ವೇದಿಕೆಯು ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ಲೈಂಗಿಕ ಅಲ್ಪಸಂಖ್ಯಾತರ ಬಗೆಗಿನ ಸಾಮಾಜಿಕ ದೃಷ್ಟಿಕೋನ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ಲೈಂಗಿಕ ಅಲ್ಪಸಂಖ್ಯಾತರಿಗೆ ಅವರದೇ ಆದ ವ್ಯಕ್ತಿತ್ವ ಇದೆ. ನಮ್ಮ ಸಮಾಜ ಅದನ್ನು ಅರ್ಥ ಮಾಡಿಕೊಂಡು ಅವರ ಭಾವನೆಗಳನ್ನು ಗೌರವಿಸಬೇಕು’ ಎಂದರು.

‘ಕೆಲವರು ಅವರ ಹಾವ ಭಾವ ನೋಡಿ ಅದನ್ನು ಒಂದು ರೋಗ ಎಂದು ಭಾವಿಸಿದ್ದಾರೆ. ಆದರೆ ಅದು ರೋಗವಲ್ಲ. ಹಾಗಾಗಿ ಚಿಕಿತ್ಸೆ ನೀಡಿ ಗುಣಪಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

‘ವಾಸ್ತವದಲ್ಲಿ ಲೈಂಗಿಕ ಅಲ್ಪಸಂಖ್ಯಾತರಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ಸಮಾಜದಿಂದ ಅವರಿಗೆ ತೊಂದರೆ ಆಗುತ್ತಿದೆ’ ಎಂದರು.
‘ಲೈಂಗಿಕ ಅಲ್ಪಸಂಖ್ಯಾತರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಪನ್ಮೂಲ, ತಿಳಿವಳಿಕೆ ಹಾಗೂ ಅವಕಾಶಗಳ ಕೊರತೆಯಿಂದ ಮುಖ್ಯವಾಹಿನಿಯಿಂದ ಹಿಂದುಳಿದಿದ್ದಾರೆ’ ಎಂದು ತಿಳಿಸಿದರು.

‘ಇದು ಕೇವಲ ಮನುಷ್ಯ ಜಾತಿಯಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಇದೆ. ಇದೊಂದು ನೈಸರ್ಗಿಕ ಪ್ರಕ್ರಿಯೆಯಿಂದ ಆಗುವ ಬದಲಾವಣೆ’ ಎಂದು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Comments