ಗಾಂಧೀಜಿ ನಾಡಿನಲ್ಲಿ ಕನ್ನಡದ ಹೆಣ್ಣುಮಕ್ಕಳ ಕಣ್ಣೀರು!

ಭಾಗ್ಯಶ್ರೀ ತಲೆ ಬೋಳಾಗಿದೆ. ತಲೆಗೆ ಕಟ್ಟಿದ ಬ್ಯಾಂಡೆಜ್‌  ರಕ್ತ ಕಾರುತ್ತಿದೆ. ಈಕೆ ನಿತ್ರಾಣಗೊಂಡಿದ್ದಾಳೆ. ಇಂಥ ಸ್ಥಿತಿಯಲ್ಲಿ ಮಗಳನ್ನು ಕಂಡ ಪೋಷಕರು ದಿಗ್ಭ್ರಮೆಗೊಳ್ಳುತ್ತಾರೆ. ‘ಏನಾಯ್ತು ಮಗಳೆ’ ಎಂದು ಗಾಬರಿಯಿಂದ ಕೇಳುತ್ತಾರೆ.

ಭಾಗ್ಯಶ್ರೀ ತಲೆ ಬೋಳಾಗಿದೆ. ತಲೆಗೆ ಕಟ್ಟಿದ ಬ್ಯಾಂಡೆಜ್‌  ರಕ್ತ ಕಾರುತ್ತಿದೆ. ಈಕೆ ನಿತ್ರಾಣಗೊಂಡಿದ್ದಾಳೆ. ಇಂಥ ಸ್ಥಿತಿಯಲ್ಲಿ ಮಗಳನ್ನು ಕಂಡ ಪೋಷಕರು ದಿಗ್ಭ್ರಮೆಗೊಳ್ಳುತ್ತಾರೆ. ‘ಏನಾಯ್ತು ಮಗಳೆ’ ಎಂದು ಗಾಬರಿಯಿಂದ ಕೇಳುತ್ತಾರೆ. ಆಗ ಅಂದರೆ, ಮೂರು ವರ್ಷಗಳ ಹಿಂದೆ ಕಲಬುರ್ಗಿ ಜಿಲ್ಲೆ ಚಿಂಚೋಳಿಯ ಭಾಗ್ಯಶ್ರೀ ತನ್ನ ಪೋಷಕರಿಗೆ ಹೇಳಿದ ಈ ಘಟನೆಯನ್ನು ಮೊನ್ನೆ ನನ್ನೊಂದಿಗೂ ಹಂಚಿಕೊಂಡರು.

ಭಾಗ್ಯಶ್ರೀ ಮನೆಯವರು ಕೃಷಿ ಕೂಲಿ ಕಾರ್ಮಿಕರು.  ಈಕೆಯ ಅತ್ತಿಗೆ ಮಾತ್ರ ತರಕಾರಿ ವ್ಯಾಪಾರಿ. ಆಕೆ ಬಳಿ ಪರಿಚಯಸ್ಥೆ ಕಮಲಮ್ಮ ‘ನಿನ್ನ ನಾದಿನಿಗೆ ಗುಜರಾತಿನಲ್ಲಿ ಒಳ್ಳೆಯ ವರ ಇದೆ’ ಎಂದು ಪ್ರಸ್ತಾಪ ಮುಂದಿಡುತ್ತಾಳೆ. ಅತ್ತಿಗೆ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಕಮಲಮ್ಮ ವರನ ಫೋಟೊ ತೋರಿಸಿ, ‘ನೀವು ಏನೂ ಚಿಂತೆ ಮಾಡಬೇಡಿ. ಅವರೇ ನಿಮಗೆ ಐವತ್ತು ಸಾವಿರ ಕೊಡುತ್ತಾರೆ. ಮದುವೆಯನ್ನೂ ಮಾಡಿಕೊಳ್ಳುತ್ತಾರೆ’ ಎಂದು ಬಣ್ಣದ ಮಾತುಗಳನ್ನಾಡುತ್ತಾಳೆ. ಎಲ್ಲರೂ ಒಪ್ಪಿಗೆ ಸೂಚಿಸುತ್ತಾರೆ.

ಮರುದಿನವೇ ಭಾಗ್ಯಶ್ರೀ, ಈಕೆಯ ತಮ್ಮ ರಾಮು, ಮಧ್ಯವರ್ತಿ ಕಮಲಮ್ಮ ಸೇರಿದಂತೆ ಐದಾರು ಮಂದಿ ಗುಜರಾತಿನ ರಾಜಕೋಟ್‌ ಬಳಿಯ ಹಳ್ಳಿಯೊಂದಕ್ಕೆ ಹೋಗುತ್ತಾರೆ. ಮಧ್ಯವರ್ತಿಗಳು ಭಾಗ್ಯಶ್ರೀ ಮತ್ತು ರಾಮುವನ್ನು ಅಲ್ಲಿ ಬಿಟ್ಟು ಹೋಗುತ್ತಾರೆ. ಭಾಗ್ಯಶ್ರೀ ಮತ್ತು ರಾಮುವಿಗೆ ಅಲ್ಲಿಯ ಜನರ ನಡವಳಿಕೆ ಅನುಮಾನಾಸ್ಪದವಾಗಿ ಕಾಣುತ್ತದೆ. ‘ಅಕ್ಕ, ಹೊರಡೋಣ. ಇದು ಮದುವೆ ಅನಿಸುತ್ತಿಲ್ಲ. ನಾವು ಮೋಸ ಹೋಗಿದ್ದೇವೆ’ ಎಂದು ರಾಮು ಹೇಳುತ್ತಾನೆ. ಭಾಗ್ಯಶ್ರೀಗೂ ಹೀಗೆ ಅನಿಸುತ್ತದೆ.

ಇವರು ತಪ್ಪಿಸಿಕೊಂಡು ರಾಜಕೋಟ್‌ ರೈಲು ನಿಲ್ದಾಣಕ್ಕೆ ಬರುತ್ತಾರೆ. ಇವರು ಹಳ್ಳಿಯ ಮನೆಯಲ್ಲಿ ನೋಡಿದ ನಾಲ್ಕೈದು ಒರಟು ಮುಖಗಳು ಹಿಂಬಾಲಿಸುತ್ತಿರುವುದು ತಿಳಿಯುತ್ತದೆ. ಭಾಗ್ಯಶ್ರೀ, ರಾಮು ಅಲ್ಲಿಂದ ತಲೆ ಮರೆಸಿಕೊಂಡು ಯಾವುದೋ ಹಳ್ಳಿಯ ದಾರಿಯನ್ನು ಹಿಡಿಯುತ್ತಾರೆ. ಆ ಒರಟು ಮುಖಗಳು ಅಲ್ಲಿಯೂ ಕಾಣಿಸಿಕೊಳ್ಳುತ್ತವೆ. ಇವರ ಕಣ್ಣಾ ಮುಚ್ಚಾಲೆ ಆಟ ಹೀಗೆ ಐದಾರು ದಿನ ನಡೆಯುತ್ತದೆ.

ಹಳ್ಳಿಯೊಂದರ ಜನರು ಭಾಗ್ಯಶ್ರೀ ಮತ್ತು ರಾಮುವನ್ನು ಕಳ್ಳರು ಎಂದು ಭಾವಿಸಿ ಹಿಡಿದು ಬಡಿಯುತ್ತಾರೆ. ತಲೆ ಒಡೆದು ರಕ್ತ ಬರುತ್ತದೆ. ಆಗ ರಾಮು ನಡೆದ ಕಥೆಯನ್ನೆಲ್ಲ ಹೇಳುತ್ತಾನೆ. ಗುಂಪಿನಲ್ಲಿದ್ದ ಕೆಲವರ ಮನಸ್ಸು ಕರಗಿ ಆಸ್ಪತ್ರೆಗೆ ಸೇರಿಸುತ್ತಾರೆ. ನಂತರ ಯಾವುದೋ ರೈಲು ನಿಲ್ದಾಣದಲ್ಲಿ ಭಾಗ್ಯಶ್ರೀ ಮತ್ತು ರಾಮು ಬೇರೆಯಾಗುತ್ತಾರೆ. ಭಾಗ್ಯಶ್ರೀ ಒಬ್ಬಳೇ ರೈಲು ಹಿಡಿದು ಮನೆ ಸೇರುತ್ತಾಳೆ.

ಇದು ಮಹಾದೇವಿ ಕುಟುಂಬದ ಕಥೆ. ಈಕೆ ಕೈಯಲ್ಲಿ ನಯಾ ಪೈಸೆಯೂ ಇಲ್ಲ. ಆದರೂ ಕುಟುಂಬವನ್ನು   ನಿಭಾಯಿಸಬೇಕು. ಗಂಡ ಸದಾ ನಶೆಯಲ್ಲೇ ಇರುತ್ತಾನೆ. ಮನೆಯಲ್ಲಿ ಇರುವವಳು ಸವತಿಯ ಮಗಳು. ಮದುವೆ ಮಾಡಿಕೊಡಬೇಕು ಎಂದರೆ ಕೈಯಲ್ಲಿ ರೊಕ್ಕವಿಲ್ಲ. ಚೆಂದದ ಮಗಳನ್ನು ಭದ್ರತೆಯೇ ಇಲ್ಲದ ಜೋಪಡಿಯಲ್ಲಿ ಇಟ್ಟುಕೊಳ್ಳುವುದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂಥ ಭಾವನೆ. ಆಗ ಮಧ್ಯವರ್ತಿಗಳು ಈಕೆಯ ಜೋಪಡಿಯನ್ನು ಪ್ರವೇಶಿಸುತ್ತಾರೆ.

‘ನಿಮ್ಮ ಅಶ್ವಿನಿ ನನ್ನ ಮೈದುನನಿಗೆ ಇಷ್ಟವಾಗಿದ್ದಾಳೆ. ಅವರೇ ನಿನಗೆ ಇಪ್ಪತ್ತೈದು ಸಾವಿರ ಕೊಡುತ್ತಾರೆ. ನಿನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನ್ನನ್ನೇ ನೋಡು, ಎಷ್ಟು ಸುಖವಾಗಿದ್ದೇನೆ’ ಎಂದು ಗುಜರಾತಿಗೆ ಮದುವೆಯಾಗಿರುವ ಅದೇ ಊರಿನ ರಮಾ ಪುಸಲಾಯಿಸುತ್ತಾಳೆ. ಮಹಾದೇವಿ ಮಗಳನ್ನು ಒಂದೂ ಮಾತು ಕೇಳದೆ ಒಪ್ಪಿಗೆ ಕೊಡುತ್ತಾಳೆ.

ಮರುದಿನ ಬೆಳಿಗ್ಗೆ ಹದಿನಾರರ ಬಾಲೆ ನಲವತ್ತು ವರ್ಷದ ವರನ ಸಂಗಾತಿಯಾಗುತ್ತಾಳೆ. ರಾತ್ರಿ ರೈಲು ಹಿಡಿದು ಗುಜರಾತಿಗೆ ಹೊರಟು ಹೋಗುತ್ತಾರೆ. ಇನ್ನು ಅಶ್ವಿನಿ ಊರಿನತ್ತ ಮುಖ ಮಾಡುವುದು ಯಾವಾಗ ಎನ್ನುವುದು ತಿಳಿಯದು. ಇಂಥ ಮದುವೆಗಳು ತುಂಬಾ ವ್ಯವಸ್ಥಿತವಾಗಿಯೂ, ಕೆಲವೊಮ್ಮೆ ಜಾಲದಂತೆಯೂ ನಡೆಯುತ್ತವೆ. ಮೊನ್ನೆ ಕಲಬುರ್ಗಿ ಜಿಲ್ಲೆಯಲ್ಲಿ ಇದೇ ರೀತಿ ಎರಡು ಮದುವೆಯಾದವು. ಮತ್ತೊಂದು ಮದುವೆಯನ್ನು ಅಧಿಕಾರಿಗಳೇ ತಡೆದರು.

ಇಂತಹ ಮದುವೆಗಳನ್ನು ಮಾಡಿಸುವುದಕ್ಕಾಗಿಯೇ ಕರ್ನಾಟಕ, ಗುಜರಾತ್‌ನಲ್ಲಿ ಮಧ್ಯವರ್ತಿಗಳು ಇದ್ದಾರೆ. ಗುಜರಾತಿನ ವರನಿಗೆ ವಧು ಬೇಕು ಎನಿಸಿದಾಗ ಕರ್ನಾಟಕದ ಮಧ್ಯವರ್ತಿಗಳನ್ನು ಸಂಪರ್ಕಿಸುತ್ತಾರೆ. ಇಲ್ಲಿನ ಮಧ್ಯವರ್ತಿಗಳು ತಮ್ಮ ವ್ಯಾಪ್ತಿಯ ಹಳ್ಳಿಗಳ ಅಸಹಾಯಕ ಕುಟುಂಬಗಳ ಕುಡಿಗಳಾದ ಭಾಗ್ಯಶ್ರೀ, ಅಶ್ವಿನಿಯಂಥ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಳ್ಳುತ್ತಾರೆ.

ಗುಜರಾತಿನಿಂದ ವರ, ಆತನ ಐದಾರು ಮಂದಿ ಬಂಧುಗಳು, ಮಧ್ಯವರ್ತಿಗಳು ಉತ್ತರ ಕರ್ನಾಟಕಕ್ಕೆ ಬರುತ್ತಾರೆ. ವಸತಿಗೃಹದಲ್ಲಿ ಬೀಡುಬಿಡುತ್ತಾರೆ. ಸ್ಥಳೀಯ ಮಧ್ಯವರ್ತಿಗಳ ಮೂಲಕ ಮದುವೆಗೆ ಒಪ್ಪಿಸಲು ಮುಂದಾಗುತ್ತಾರೆ. ಹುಡುಗಿ ಲಕ್ಷಣವಾಗಿದ್ದರೆ ಆಕೆಯ ಪೋಷಕರಿಗೆ ಲಕ್ಷದವರೆಗೂ ಹಣ ಕೊಡಲಾಗುತ್ತದೆ. ಒಂದು ಮದುವೆ ಮಾಡಿಸಿದರೆ ಮಧ್ಯವರ್ತಿಗಳಿಗೆ ಇಪ್ಪತ್ತೈದರಿಂದ ಐವತ್ತು ಸಾವಿರದ ತನಕ ಕಮಿಷನ್‌ ಸಿಗುತ್ತದೆ.

ವರನಿಗೆ ಇಂಥ ಮದುವೆಗೆ ಒಂದೂವರೆಯಿಂದ ಎರಡು ಲಕ್ಷ ಖರ್ಚಾಗುತ್ತದೆ. ‘ಗುಜರಾತಿನ ವರಗಳು ವಧುಗಳನ್ನು ಹುಡುಕಿಕೊಂಡು ಇಲ್ಲಿಗೆ ಏಕೆ ಬರುತ್ತಾರೆ’ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ತಿಳಿಯುವುದು ಇಷ್ಟು: ಅಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ. ಪುರುಷರು ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. ಆದ್ದರಿಂದ ಅಲ್ಲಿಯ ಮಂದಿ ಇತ್ತ ಮುಖ ಮಾಡಿದ್ದಾರೆ. ಹಣ ಖರ್ಚಾದರೂ ಸರಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತದೆ. ಕಲಬುರ್ಗಿ ಕೊಳೆಗೇರಿಯೊಂದರ ಶೀಲಾಗೆ ಈಗ ಹದಿನಾಲ್ಕು ವರ್ಷ. ಒಂಬತ್ತು ತಿಂಗಳ ಹಿಂದೆ ಮನೆಯವರು ಗುಟ್ಟಾಗಿ ಮದುವೆ ಮಾಡಿದ್ದಾರೆ. ವರನ ವಯಸ್ಸು ಕೇವಲ ನಲವತ್ತೈದು!

ಶೀಲಾ ತಾಯಿಯೊಂದಿಗೆ ಗುಜರಾತಿಗೆ ಹೋದಳು. ಮದುವೆಗೂ ಮುನ್ನ ವರನ ಕಡೆಯವರು ಮಧ್ಯವರ್ತಿಗಳ ಮೂಲಕ ಹೇಳಿದ ಎಲ್ಲ ಸಂಗತಿಗಳೂ ಸುಳ್ಳಾಗಿದ್ದವು. ‘ಆತನಿಗೆ ನಾನು ಎರಡನೇ ಹೆಂಡತಿ. ಮೊದಲ ಹೆಂಡತಿ ಏನಾದಳೋ ಗೊತ್ತಿಲ್ಲ. ಅಲ್ಲಿ ನನ್ನಂಥವರನ್ನು ಮಾರಿಕೊಳ್ಳುತ್ತಾರೆ ಎನ್ನುವ ಮಾತು ಕಿವಿಗೆ ಬಿದ್ದಿತು. ಊರಿಗೆ ಮರಳಲು ಹಟ ಹಿಡಿದೆ. ಅಮ್ಮ ಸಮಾಧಾನ ಮಾಡಿದಳು. ಆದರೂ ಒಪ್ಪಲಿಲ್ಲ. ಅವರು ಮದುವೆ ಖರ್ಚಿನ ಹಣವನ್ನು ಕೊಡುವಂತೆ ಬಲವಂತ ಮಾಡಿದರು. ನಾವು ನೆಪ ಹೇಳಿ ಬಂದುಬಿಟ್ಟೆವು. ನಾನು ಇನ್ನೆಂದಿಗೂ ಅಲ್ಲಿಗೆ ಹೋಗುವುದಿಲ್ಲ’ ಎಂದು ಶೀಲಾ ಕಣ್ಣೀರಾದಳು.

ಇಂಥ ಮದುವೆಗಳನ್ನು ಸಾಮಾಜಿಕವಾಗಿ ತೀರಾ ಹಿಂದುಳಿದ ವರ್ಗಗಳ ಕುಟುಂಬದವರು ಮಾಡುತ್ತಾರೆ. ಮದುವೆ ಎಂದರೆ ಇವರಿಗೆ ಕನಿಷ್ಠ ಒಂದೂವರೆ ಲಕ್ಷವಾದರೂ ಬೇಕು. ಬಡವರಾದರೂ ವರದಕ್ಷಿಣೆ, ವರೋಪಚಾರ ಮಾಡಲೇಬೇಕು. ಸಮಾಜದ ಕಟ್ಟಕಡೆಯ ಹೆಣ್ಣು ಮಗಳು ಗುಜರಾತಿನ ಇನ್ಯಾವುದೋ ಜಾತಿಯ ಮನೆ ಸೊಸೆಯಾಗುತ್ತಾಳೆ! ‘ಗುಜ್ಜರ್‌ ಕಿ ಶಾದಿ’ಯಲ್ಲಿ ಜಾತಿ, ಭಾಷೆಗಳು ತಮ್ಮಷ್ಟಕ್ಕೆ ತಾವೇ ಕರಗಿಹೋಗುತ್ತವೆ! ಬಾಲ್ಯ ವಿವಾಹದಿಂದಾಗಿ ಇಂಥ ಮದುವೆಗಳು ಬೆಳಕಿಗೆ ಬರುತ್ತಿವೆ.

ಇಲ್ಲದೇ ಹೋಗಿದ್ದರೆ ಹಣದ ವ್ಯವಹಾರದಲ್ಲಿ ಮುಚ್ಚಿ ಹೋಗುತ್ತಿದ್ದವು. ಆದ್ದರಿಂದ ಪೊಲೀಸರು ಇಂಥ ಮದುವೆಗಳನ್ನು ಗಂಭೀರವಾಗಿ ಪರಿಗಣಿಸಿ ಮೂಲವನ್ನು ಹುಡುಕಬೇಕು. ಸರ್ಕಾರಗಳೂ ಕೂಡ ಬಡವರ ಎಲ್ಲಾ ಸಮಸ್ಯೆಗಳಿಗೂ ತಾತ್ಕಾಲಿಕ, ಜನಪ್ರಿಯ ಕಾರ್ಯಕ್ರಮಗಳನ್ನೇ ರೂಪಿಸುತ್ತವೆ. ಬಡವರ ಕೈಗೆ ಉದ್ಯೋಗ ಕೊಡದೇ ಎಷ್ಟೇ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಅವರು ಹತಭಾಗ್ಯರೇ ಆಗಿರುತ್ತಾರೆ. ಸ್ವಯಂ ಉದ್ಯೋಗ, ಸ್ಥಳೀಯವಾಗಿ ಸಿಗುವ ಸಂಪನ್ಮೂಲವನ್ನು ಬಳಸಿ ಕೈ ಗೊಳ್ಳಬಹುದಾದ ಉದ್ಯೋಗಗಳನ್ನು ಸೃಷ್ಟಿಸಬೇಕು.

ಭಾರತದಲ್ಲಿ ಮದುವೆ ವ್ಯಾಪಾರವಾಗಿದೆ. ಅಸಹಾಯಕ ಕುಟುಂಬಗಳು ಏನು ಮಾಡಬೇಕು ಎನ್ನುವುದು ತಿಳಿಯದೆ ಮಕ್ಕಳನ್ನು ನರಕಕ್ಕೆ ನೂಕುತ್ತವೆ. ಆದ್ದರಿಂದಲೇ ಉತ್ತರ ಕರ್ನಾಟಕದಲ್ಲಿ ದಶಕದಿಂದ ‘ಗುಜ್ಜರ್‌ ಕಿ ಶಾದಿ’ ಎನ್ನುವ ಹೊಸದೊಂದು ನುಡಿಗಟ್ಟು ಚಾಲ್ತಿಯಲ್ಲಿದೆ. ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದ ಮಹಾತ್ಮಗಾಂಧಿಯವರ ತವರಲ್ಲೇ ಹೆಣ್ಣು ಭ್ರೂಣಗಳನ್ನು ಹೊಸಕಿ ಹಾಕಲಾಗುತ್ತಿದೆ.

ಇದರ ಪರಿಣಾಮವಾಗಿ ಕನ್ನಡದ ಹೆಣ್ಣು ಮಕ್ಕಳು ಮದುವೆ ಹೆಸರಿನಲ್ಲಿ ಬಿಕರಿಯಾಗುತ್ತಿವೆ. ಬಡ ಪೋಷಕರು ಮಗಳ ಮದುವೆ ಮಾಡಿ ಕನ್ಯಾಸೆರೆಯಿಂದ ಬಿಡುಗಡೆ ಹೊಂದಿದೆವು ಎಂದುಕೊಳ್ಳುವ ಹೊತ್ತಿಗೇ ಅಲ್ಲಿ ಮಗಳು ಬೇರೆಯೇ ರೀತಿಯ ಬಂಧನಕ್ಕೆ ಒಳಗಾಗಿರುತ್ತಾಳೆ. ‘ನಿನ್ನ ಕಥೆಯನ್ನು ಕೇಳಿದ ಮೇಲೆ ಕತ್ತಲೆ ಆವರಿಸಿದಂತೆ  ಭಾಸವಾಗುತ್ತಿದೆ’ ಎಂದೆ. ಶೀಲಾ ಹೇಳಿದಳು: ‘ಅಣ್ಣ, ನಾನು ಜೀವನ ಪೂರ ಕತ್ತಲಲ್ಲೇ ಇರಬೇಕಲ್ಲ’ ಎಂದಳು. ನನ್ನ ಕರುಳು ಚುರ್‌ ಎಂದಿತು.

Comments
ಈ ವಿಭಾಗದಿಂದ ಇನ್ನಷ್ಟು
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

ಈಶಾನ್ಯ ದಿಕ್ಕಿನಿಂದ
ಕಾವೇರಿಯಷ್ಟೇ ಜೀವನದಿಯೇ? ಕೃಷ್ಣಾ ಅಲ್ಲವೇ?

8 Dec, 2017
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

ಈಶಾನ್ಯ ದಿಕ್ಕಿನಿಂದ
ಕೂಡಿ ಬಾಳುವುದನ್ನು ಕಲಿಸಿದ ಸಂಕರ ಭಾಷೆಗಳು

24 Nov, 2017
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

ಈಶಾನ್ಯ ದಿಕ್ಕಿನಿಂದ
ಹಾ.ಮಾ.ನಾಯಕ ಮತ್ತು ರಾಜ್ಯೋತ್ಸವ ಪ್ರಶಸ್ತಿ

10 Nov, 2017
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

ಈಶಾನ್ಯ ದಿಕ್ಕಿನಿಂದ
ಕೊಟ್ರೇಶಿ ಮಾಸ್ತರರ ಸಮುದಾಯಮುಖಿ ಪರಸಂಗ

27 Oct, 2017
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

ಈಶಾನ್ಯ ದಿಕ್ಕಿನಿಂದ
ಬಹುಭಾಷೆ, ಸಂಸ್ಕೃತಿಗಳ ಸಂಗಮ ‘ಔರಾದ್‌’

28 Sep, 2017