ಚಪ್ಪಟೆ ಜಗತ್ತಿನ ಉಬ್ಬು ತಗ್ಗು

....ಸಂವಿಧಾನವು ವ್ಯಕ್ತಿಗೆ ಖಾಸಗಿತನದ ಹಕ್ಕನ್ನೇ ನೀಡಿಲ್ಲ. ಪಡಿತರ ಪಡೆಯುವ ಬಡವರಿಗೆ ಖಾಸಗಿತನದ ಹಕ್ಕಿಲ್ಲ ಎಂಬಂಥ ವಾದಗಳನ್ನು ನಮ್ಮ ಸಾಲಿಸಿಟರ್ ಜನರಲ್ ಅವರೇ ಮಂಡಿಸುತ್ತಿದ್ದಾರೆ. ಯೂರೋಪಿನಂತೆಯೇ ಇಲ್ಲಿಯೂ ನ್ಯಾಯಾಲಯವೇ ಖಾಸಗಿತನದ ಹಕ್ಕನ್ನು ಕಾಪಾಡುವ ತೀರ್ಪು ನೀಡಬಹುದೆಂಬ ನಿರೀಕ್ಷೆಯಷ್ಟೇ ಬಡ ಭಾರತೀಯನದ್ದು.

ಮ್ಯಾಕ್ಸ್ ಶ್ರೆಮ್ಸ್

ಆಸ್ಟ್ರಿಯಾದ ಕಾನೂನು ವಿದ್ಯಾರ್ಥಿ ಸಿಲಿಕಾನ್ ವ್ಯಾಲಿಯ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯದಲ್ಲಿ ಒಂದು ಸೆಮಿಸ್ಟರ್ ಕಳೆದದ್ದು ಇಡೀ ಸಿಲಿಕಾನ್ ವ್ಯಾಲಿಯ ಇಂಟರ್ನೆಟ್ ಆಧಾರಿತ ಉದ್ಯಮಗಳನ್ನು ನಡೆಸುತ್ತಿರುವ ಎಲ್ಲರೂ ನಿದ್ರೆ ಕಳೆದುಕೊಳ್ಳುವಂತೆ ಮಾಡಿದೆ. ಮ್ಯಾಕ್ಸ್ ಶ್ರೆಮ್ಸ್ ಎಂಬ ಈ ಕಾನೂನು ವಿದ್ಯಾರ್ಥಿ ಅಲ್ಲಿದ್ದಾಗ ಫೇಸ್‌ಬುಕ್‌ನ ಪ್ರೈವಸಿ ವಕೀಲ ಎಡ್ ಪಾಲ್ಮಿರಿ ವಿಶ್ವವಿದ್ಯಾಲಯದಲ್ಲಿ ಒಂದು ತರಗತಿಯನ್ನು ನಡೆಸಿ ಕೊಡದೇ ಇದ್ದಿದ್ದರೆ ಇದು ಸಂಭವಿಸುತ್ತಿರಲಿಲ್ಲ. ಅಷ್ಟೇಕೆ ಈ ವಕೀಲ ಮಹೋದಯರಿಗೆ ಯೂರೋಪಿಯನ್ ಒಕ್ಕೂಟದ ದೇಶಗಳಲ್ಲಿರುವ ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ ಕಾನೂನಿನ ಬಗ್ಗೆ ಸ್ಪಷ್ಟ ಮಾಹಿತಿಯಿದ್ದಿದ್ದರೆ ಅಮೆರಿಕದ ಇಂಟರ್ನೆಟ್ ಕಂಪೆನಿಗಳಿಗೆ ಯೂರೋಪಿನಲ್ಲಿ ವ್ಯವಹರಿಸಲು ಅನುಕೂಲ ಕಲ್ಪಿಸಿದ್ದ ‘ಸೇಫ್ ಹಾರ್ಬರ್’ ಒಪ್ಪಂದ ರದ್ದಾಗುವಂಥ ಸ್ಥಿತಿ ಎದುರಾಗುತ್ತಿರಲಿಲ್ಲ.

ಆನ್‌ಲೈನ್ ಖಾಸಗಿತನ ಎಂಬ ವಿಚಾರದಲ್ಲಿ ಅಮೆರಿಕದಿಂದ ಆರಂಭಿಸಿ ತೃತೀಯ ಜಗತ್ತಿನ ದೇಶಗಳಲ್ಲಿರುವ ಸರ್ಕಾರಗಳು ಮತ್ತು ನಾಗರಿಕರ ವರ್ತನೆಗೂ ಯೂರೋಪಿನ ನಾಗರಿಕರು ಮತ್ತು ಸರ್ಕಾರಗಳ ನಿಲುವಿಗೂ ಬಹಳ ವ್ಯತ್ಯಾಸಗಳಿವೆ. ವಿಶ್ವದಲ್ಲೇ ಅತಿದೊಡ್ಡ ಸಂಖ್ಯೆಯ ‘ನ್ಯೂಡ್ ಬೀಚ್’ (ನಗ್ನರಾಗಿ ಇರಬಹುದಾದ ಕಡಲತೀರಗಳು) ಇರುವ ಯೂರೋಪ್ ಒಕ್ಕೂಟದ ದೇಶಗಳು ಖಾಸಗಿ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳುವ ವಿಚಾರದಲ್ಲಿ ಮಾತ್ರ ಬಹಳ ಸೂಕ್ಷ್ಮ. ಇದೇ ಕಾರಣದಿಂದ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಎಲ್ಲಾ ಆನ್‌ಲೈನ್ ಸೇವೆಗಳೂ ಯೂರೋಪ್ ಒಕ್ಕೂಟದ ಖಾಸಗಿತನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿವೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಒಂದು ವ್ಯವಸ್ಥೆಯೊಂದನ್ನು ಬಹಳ ಹಿಂದೆಯೇ ರೂಪಿಸಲಾಗಿದೆ. 2000ದಲ್ಲಿ ಅಮೆರಿಕ ಮತ್ತು ಯೂರೋಪ್ ಒಕ್ಕೂಟ ಮಾಡಿಕೊಂಡ ‘ಸೇಫ್ ಹಾರ್ಬರ್’ ಒಪ್ಪಂದವೂ ಇದರ ಭಾಗವೇ. ಇದರ ಅನ್ವಯ ಅಮೆರಿಕದ ಕಂಪೆನಿಗಳು ಖಾಸಗಿ ಮಾಹಿತಿಯನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಪಡೆದುಕೊಂಡೇ ವ್ಯವಹರಿಸಬೇಕಾಗುತ್ತದೆ. ಆಗ ಮಾತ್ರ ಅಮೆರಿಕದ ಕಂಪೆನಿಗಳು ತಾವು ಸಂಗ್ರಹಿಸುವ ಮಾಹಿತಿಯನ್ನು ಅಮೆರಿಕದಲ್ಲಿರುವ ತಮ್ಮ ಸರ್ವರ್‌ಗಳಿಗೆ ಕಳುಹಿಸಬಹುದು.

2011ರಲ್ಲಿ ಮ್ಯಾಕ್ಸ್ ಶ್ರೆಮ್ಸ್ ತಮ್ಮ ಒಂದು ಸೆಮಿಸ್ಟರ್‌ಗಾಗಿ ಸಿಲಿಕಾನ್ ವ್ಯಾಲಿಯ ಸಾಂಟಾ ಕ್ಲಾರಾ ವಿಶ್ವವಿದ್ಯಾಲಯಕ್ಕೆ ಹೋಗಿದ್ದರು. ಅಲ್ಲಿಗೆ ಬಂದಿದ್ದ ಫೇಸ್‌ಬುಕ್‌ನ ಪ್ರೈವಸಿ ವಕೀಲರು ಮಾತನಾಡಿದಾಗ ಅವರಿಗೆ ಯೂರೋಪ್ ಒಕ್ಕೂಟದ ದೇಶಗಳಲ್ಲಿರುವ ಖಾಸಗಿತನಕ್ಕೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅಷ್ಟೇನೂ ಅರಿವಿಲ್ಲ ಎಂಬುದು ಶ್ರೆಮ್ಸ್‌ಗೆ ಅರಿವಾಯಿತು. ಸಾಮಾನ್ಯರಾಗಿದ್ದರೆ ವಕೀಲರ ಅಜ್ಞಾನವನ್ನು ನೋಡಿ ನಕ್ಕು ಸುಮ್ಮನಾಗುತ್ತಿದ್ದರೇನೋ. ಆದರೆ ಶ್ರೆಮ್ಸ್‌ ಸಾಮಾನ್ಯ ವಿದ್ಯಾರ್ಥಿಯಾಗಿರಲಿಲ್ಲ. ಫೇಸ್‌ಬುಕ್‌ ಕಂಪೆನಿಗೆ ಯೂರೋಪಿನ ಖಾಸಗಿತನದ ಕಾನೂನುಗಳ ಬಗ್ಗೆ ಇರುವ ಸೀಮಿತ ಅರಿವನ್ನೇ ತನ್ನ ಪ್ರಬಂಧದ ವಿಷಯವನ್ನಾಗಿ ಆರಿಸಿಕೊಂಡು ಸಂಶೋಧನೆಗೆ ತೊಡಗಿದಾಗ ಅನಾವರಣಗೊಂಡದ್ದು ಬೇರೆಯೇ ಚಿತ್ರ. ಪ್ರತಿಯೊಬ್ಬ ಬಳಕೆದಾರನ ಬಗ್ಗೆಯೂ ಫೇಸ್‌ಬುಕ್ ಬಳಿ ಸಾವಿರಾರು ಪುಟಗಳಷ್ಟು ದೀರ್ಘವಾಗಿರುವ ವಿವರಗಳಿರುವುದು ತಿಳಿದುಬಂತು. ಆಸ್ಟ್ರಿಯಾಕ್ಕೆ ಹಿಂದುರುಗಿದ ಶ್ರೆಮ್ಸ್ ಈ ವಿಚಾರವನ್ನು ಬಹಿರಂಗಪಡಿಸಿದ್ದಷ್ಟೇ ಅಲ್ಲದೆ ಅದನ್ನೊಂದು ಆಂದೋಲನವನ್ನಾಗಿ ರೂಪಿಸಲು ತೀರ್ಮಾನಿಸಿದರು.

ಯೂರೋಪಿನ ಖಾಸಗಿತನದ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ಪ್ರತಿಯೊಬ್ಬ ಗ್ರಾಹಕನಿಗೂ ಅವನ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಯಾವುದೇ ಕಂಪೆನಿಯಿಂದ ಪಡೆಯುವ ಹಕ್ಕನ್ನು ನೀಡುತ್ತದೆ. ಇದನ್ನು ಬಳಸಿಕೊಂಡು ಶ್ರೆಮ್ಸ್ ಫೇಸ್‌ಬುಕ್ ಸಂಗ್ರಹಿಸಿಟ್ಟುಕೊಂಡಿರುವ ತನ್ನ ಮಾಹಿತಿಯನ್ನು ಪರಿಶೀಲಿಸಿದರು. ಅವರು ಅಳಿಸಿ ಹಾಕಿದ್ದೇನೆಂದುಕೊಂಡಿದ್ದ ಅನೇಕ ಮಾಹಿತಿಗಳೂ ಇನ್ನೂ ಉಳಿದುಕೊಂಡಿರುವುದು ಕಂಡುಬಂತು. ಇದನ್ನೇ ಆಧಾರವಾಗಿಟ್ಟುಕೊಂಡು ಫೇಸ್‌ಬುಕ್‌ನ ಯೂರೋಪ್ ಮುಖ್ಯಕಚೇರಿ ಇರುವ ಐರ್ಲೆಂಡ್‌ನ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ನಾಲ್ಕು ವರ್ಷಗಳಾಯಿತು. ಈ ಅವಧಿಯುದ್ದಕ್ಕೂ ನಡೆದ ಕಾನೂನು ಹೋರಾಟ ಯೂರೋಪ್ ಒಕ್ಕೂಟದ ಉಚ್ಚ ನ್ಯಾಯಾಲಯದ ತನಕವೂ ತಲುಪಿ ಅಕ್ಟೋಬರ್ 6ರಂದು ತೀರ್ಪು ಹೊರಬಿತ್ತು. ಅದರೊಂದಿದೆ ಈತನಕ ಅಮೆರಿಕವನ್ನು ಯೂರೋಪಿನ ನಾಗರಿಕರ ಖಾಸಗಿ ಮಾಹಿತಿಯ ಮಟ್ಟಿಗೆ ‘ಸುರಕ್ಷಿತ ಬಂದರು’ ಎಂದು ಪರಿಗಣಿಸಿದ್ದ ಒಪ್ಪಂದವೂ ರದ್ದಾಯಿತು.

ಈ ತೀರ್ಪಿನ ಪರಿಣಾಮ ಸಾಮಾನ್ಯವಾದುದೇನಲ್ಲ. ಇದು ಯೂರೋಪಿನಲ್ಲಿ ಕಾರ್ಯನಿರ್ವಹಿಸುತ್ತಿರುವ 4000ದಷ್ಟು ಅಮೆರಿಕ ಕಂಪೆನಿಗಳು ತಮ್ಮ ವ್ಯವಹಾರದ ಮಾದರಿಯನ್ನೇ ಬದಲಾಯಿಸಿಕೊಳ್ಳಬೇಕಾದ ಒತ್ತಡವನ್ನು ಹೇರುತ್ತಿದೆ. ಅಷ್ಟೇ ಅಲ್ಲ ಮ್ಯಾಕ್ಸ್ ಶ್ರೆಮ್ಸ್ ಎಂಬ ಕಾನೂನು ವಿದ್ಯಾರ್ಥಿಯನ್ನು ಖಾಸಗಿತನಕ್ಕೆ ಸಂಬಂಧಿಸಿದ ಹೋರಾಟದ ಪ್ರತೀಕವನ್ನಾಗಿಸಿಬಿಟ್ಟಿದೆ.

ಈ ವಿಚಾರವನ್ನು ಅಮೆರಿಕ ಮೂಲದ ಕಂಪೆನಿಗಳು ಮತ್ತು ಅಮೆರಿಕ ಸರ್ಕಾರಗಳೆರಡೂ ಇಂಟರ್ನೆಟ್‌ನ ಸಾಧ್ಯತೆಯನ್ನು ಕುಗ್ಗಿಸುವ ತೀರ್ಪು ಎಂದು ವರ್ಣಿಸುತ್ತಿದ್ದಾರೆ. ಕೆಲಮಟ್ಟಿಗೆ ಈ ವಾದ ನಿಜ ಕೂಡ. ಹತ್ತು ವರ್ಷಗಳ ಹಿಂದೆ ಅಮೆರಿಕದ ಲೇಖಕ ಥಾಮಸ್ ಫ್ರೀಡ್‌ಮನ್ ತಮ್ಮ ಪ್ರಖ್ಯಾತ ಪುಸ್ತಕ ‘ವರ್ಲ್ಡ್ ಈಸ್ ಫ್ಲ್ಯಾಟ್’ನಲ್ಲಿ ಜಾಗತೀಕರಣ ಮತ್ತು ತಂತ್ರಜ್ಞಾನಗಳೆರಡೂ ಜಗತ್ತಿನ ಗಡಿಗಳನ್ನೆಲ್ಲಾ ತೊಡೆದು ಹೇಗೆ ಜಗತ್ತನ್ನು ಸಪಾಟಾದ ಎಲ್ಲರೂ ಸ್ಪರ್ಧಿಸಬಹುದಾದ ಸಮಾನ ಕಣವನ್ನಾಗಿಸಿದೆ ಎಂದು ವಿವರಿಸಿದ್ದರು. ಇದನ್ನು ಜಗತ್ತು ಒಂದು ಬಗೆಯ ಬೆರಗಿನಲ್ಲಿ ನಂಬಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ವಿಕಿಲೀಕ್ಸ್ ಮತ್ತು ಎಡ್ವರ್ಡ್ ಸ್ನೋಡೆನ್ ಮೂಲಕ ಬಹಿರಂಗಗೊಂಡ ವಿಚಾರಗಳು ಇಂಟರ್ನೆಟ್ ಎಂಬುದು ಹೇಗೆ ಅಮೆರಿಕ ಕೇಂದ್ರಿತ ಎಂಬ ವಿಚಾರವನ್ನೂ ಬಯಲಿಗೆಳೆದಿವೆ.

ಖಾಸಗಿತನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಯೂರೋಪು ಕಠಿಣಗೊಳಿಸುತ್ತಿರುವುದಕ್ಕೆ ಒಬಾಮ ಪ್ರತಿಕ್ರಿಯಿಸಿದ್ದಾದರೂ ಹೇಗೆ? ‘ಇಂಟರ್ನೆಟ್‌ನ ಮಾಲೀಕರು ನಾವು. ಇದನ್ನು ರೂಪಿಸಿದ್ದು ಮತ್ತು ವಿಶ್ವದಾದ್ಯಂತ ಹರಡಿದ್ದು ಮತ್ತು ಉಳಿದವರು ಸ್ಪರ್ಧಿಸಲಾರದಂತೆ ಅದನ್ನು ಸುಧಾರಿಸಿದ್ದೂ ನಾವೇ. ಇದನ್ನು ವಿರೋಧಿಸುವವರಿಗೆ ಇರುವುದು ಅವರ ವಾಣಿಜ್ಯಾಸಕ್ತಿಗಳು ಮಾತ್ರ’. ಈ ಮಾತುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಇಂಟರ್ನೆಟ್‌ನ ಮೂಲಕ ಅಮೆರಿಕದ ವಾಣಿಜ್ಯಾಸಕ್ತಿಗಳು ತಣಿದರೆ ಅದು ಇಂಟರ್ನೆಟ್ ಸ್ವಾತಂತ್ರ್ಯ. ಬೇರೆಯವರು ಅದನ್ನೇ ಮಾಡಲು ಹೊರಟರೆ ‘ಸ್ಪರ್ಧಿಸಲಾರದವರ ವಾಣಿಜ್ಯಾಸಕ್ತಿ’. ಇದು ಬಹುಶಃ ಅಮೆರಿಕದ ಮಟ್ಟಿಗೆ ಮಾತ್ರ ಸಹಜವಾಗಿರುವ ದ್ವಂದ್ವ.

ಈ ತನಕ ಆನ್‌ಲೈನ್ ವ್ಯವಹಾರದಲ್ಲಿ ವಿಶ್ವವ್ಯಾಪಿಯಾಗಿ ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿರುವ ಕಂಪೆನಿಗಳಲ್ಲಿ ಹೆಚ್ಚಿನವು ಅಮೆರಿಕ ಮೂಲದವು. ಇ-ಕಾಮರ್ಸ್ ವ್ಯವಹಾರದಲ್ಲಿ ಅಮೆಜಾನ್‌ನಷ್ಟೇ ಪ್ರಬಲವಾಗಿರುವ ಮತ್ತೊಂದು ಕಂಪೆನಿಯಿದ್ದರೆ ಅದು ಚೀನಾ ಮೂಲದ ಆಲಿಬಾಬಾ. ಇದು ಸಾಧ್ಯವಾದದ್ದು ಅಮೆರಿಕ ಪ್ರತಿಪಾದಿಸುವ ‘ಮುಕ್ತ ಮಾರುಕಟ್ಟೆ’ಯಲ್ಲಿ ಅಥವಾ ಥಾಮಸ್ ಫ್ರೀಡ್‌ಮನ್ ಹೇಳುವ ಚಪ್ಪಟೆ ಜಗತ್ತಿನಲ್ಲಿ ಅಲ್ಲ. ಗೂಗಲ್, ಫೇಸ್‌ಬುಕ್, ಅಮೆಜಾನ್‌ಗಳ ಮೇಲೆ ಚೀನಾ ಹೇರಿದ ನಿಯಂತ್ರಣದ ಪರಿಣಾಮವಾಗಿ ಇದು ರೂಪುಗೊಂಡಿತು ಎಂಬುದು ವಿಪರ್ಯಾಸ. ಚೀನಾದ ಇಂಟರ್ನೆಟ್‌ನ ಮೇಲೆ ಹೇರಿರುವ ನಿಯಂತ್ರಣ ನಮಗೆ ಮಾದರಿಯಾಗಬೇಕಾಗಿಲ್ಲ. ಆದರೆ ಯೂರೋಪಿನ ಖಾಸಗಿತನ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ನಮಗೆ ಮಾದರಿಯಾಗಬಹುದಾದ ಎಲ್ಲಾ ಅರ್ಹತೆಗಳನ್ನೂ ಪಡೆದುಕೊಂಡಿದೆ.

ಸದ್ಯ ಭಾರತದಲ್ಲಿ ಖಾಸಗಿತನದ ಸಂರಕ್ಷಣೆಗೆ ಸಂಬಂಧಿಸಿದ ಯಾವ ನಿಯಮಾವಳಿಗಳೂ ಇಲ್ಲ. ಇದಕ್ಕೆ ಸಂಬಂಧಿಸಿದ ಮಸೂದೆಯೊಂದು ಸಿದ್ಧಗೊಂಡಿತ್ತಾದರೂ ಅದಕ್ಕೆ ಸಂಸತ್ತಿನಲ್ಲಿ ಮಂಡನೆಯಾಗುವ ಭಾಗ್ಯವೇ ದೊರೆತಿಲ್ಲ. ‘ಆಧಾರ್’ ಅನ್ನು ಚುನಾವಣಾ ಪ್ರಚಾರದ ಸಮಯದಲ್ಲಿ ಖಂಡತುಂಡವಾಗಿ ವಿರೋಧಿಸುತ್ತಿದ್ದ ಪಕ್ಷವೇ ಅಧಿಕಾರಕ್ಕೇರಿದ ಮೇಲೆ ಅದರ ಸಮರ್ಥನೆಗೆ ನಿಂತಿರುವ ತಮಾಷೆಯೊಂದು ನಮ್ಮ ಮುಂದಿದೆ. ಅಷ್ಟೇ ಅಲ್ಲ ಸಂವಿಧಾನವು ವ್ಯಕ್ತಿಗೆ ಖಾಸಗಿತನದ ಹಕ್ಕನ್ನೇ ನೀಡಿಲ್ಲ. ಪಡಿತರ ಪಡೆಯುವ ಬಡವರಿಗೆ ಖಾಸಗಿತನದ ಹಕ್ಕಿಲ್ಲ ಎಂಬಂಥ ವಾದಗಳನ್ನು ನಮ್ಮ ಸಾಲಿಸಿಟರ್ ಜನರಲ್ ಅವರೇ ಮಂಡಿಸುತ್ತಿದ್ದಾರೆ. ಯೂರೋಪಿನಂತೆಯೇ ಇಲ್ಲಿಯೂ ನ್ಯಾಯಾಲಯವೇ ಖಾಸಗಿತನದ ಹಕ್ಕನ್ನು ಕಾಪಾಡುವ ತೀರ್ಪು ನೀಡಬಹುದೆಂಬ ನಿರೀಕ್ಷೆಯಷ್ಟೇ ಬಡ ಭಾರತೀಯನದ್ದು.

Comments
ಈ ವಿಭಾಗದಿಂದ ಇನ್ನಷ್ಟು
ಡಿಜಿಟಲ್ ಭಾರತದ ವಸಾಹತೀಕರಣ

ಇ-ಹೊತ್ತು
ಡಿಜಿಟಲ್ ಭಾರತದ ವಸಾಹತೀಕರಣ

13 Mar, 2018
ಗೂಗಲ್ ಎಂಬ ಕೇಡಿನ ವರ್ತಮಾನ ಮತ್ತು ಭವಿಷ್ಯ

ಇ-ಹೊತ್ತು
ಗೂಗಲ್ ಎಂಬ ಕೇಡಿನ ವರ್ತಮಾನ ಮತ್ತು ಭವಿಷ್ಯ

13 Feb, 2018
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಗಾಂಧಿ ಪ್ರಣೀತ ಪರ್ಯಾಯ

ಇ-ಹೊತ್ತು
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ಗೆ ಗಾಂಧಿ ಪ್ರಣೀತ ಪರ್ಯಾಯ

30 Jan, 2018
ಆಧಾರ್: ಮೂವತ್ತು ಮೊಳದ ಮುಂಡಾಸಿನವರ ಹೆಗಲು

ಇ-ಹೊತ್ತು
ಆಧಾರ್: ಮೂವತ್ತು ಮೊಳದ ಮುಂಡಾಸಿನವರ ಹೆಗಲು

16 Jan, 2018
ಕ್ರಿಪ್ಟೋಕರೆನ್ಸಿ: ಸರ್ಕಾರಿ ಖಾತರಿಯ ಹಂಗಿಲ್ಲದ ದುಡ್ಡು

ಇ-ಹೊತ್ತು
ಕ್ರಿಪ್ಟೋಕರೆನ್ಸಿ: ಸರ್ಕಾರಿ ಖಾತರಿಯ ಹಂಗಿಲ್ಲದ ದುಡ್ಡು

2 Jan, 2018