ಕೆಲವೆಡೆ ಸಂಚಾರ ಆರಂಭ, ಇಳಿಯುತ್ತಿರುವ ನೀರಿನ ಮಟ್ಟ

ಮಳೆ ಬಿಡುವು: ಚೇತರಿಕೆಯತ್ತ ಚೆನ್ನೈ

ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಗುರುವಾರ ರಾತ್ರಿಯಿಂದ ಮಳೆ ಬಿಡುವುಕೊಟ್ಟಿದೆ. ಶುಕ್ರವಾರ ಬೆಳಿಗ್ಗೆ ಸೂರ್ಯ ನಗರದ ರಸ್ತೆಗಳ ಮೇಲೆ ಬಿಸಿಲು ಚೆಲ್ಲುವುದರ ಜತೆಗೆ ಜನರೂ ರಸ್ತೆಗೆ ಇಳಿದಿದ್ದಾರೆ. ಪ್ರವಾಹದ ನೀರಿನ ಮಟ್ಟ ಇಳಿಯುತ್ತಿದ್ದು, ಚೆನ್ನೈ ಜನಜೀವನ ಚೇತರಿಕೆಯತ್ತ ಹೊರಳಿದೆ.

ಚೆನ್ನೈ (ಪಿಟಿಐ): ಚೆನ್ನೈ ಮತ್ತು ಅದರ ಉಪನಗರಗಳಲ್ಲಿ ಗುರುವಾರ ರಾತ್ರಿಯಿಂದ ಮಳೆ ಬಿಡುವುಕೊಟ್ಟಿದೆ. ಶುಕ್ರವಾರ ಬೆಳಿಗ್ಗೆ ಸೂರ್ಯ ನಗರದ ರಸ್ತೆಗಳ ಮೇಲೆ ಬಿಸಿಲು ಚೆಲ್ಲುವುದರ ಜತೆಗೆ ಜನರೂ ರಸ್ತೆಗೆ ಇಳಿದಿದ್ದಾರೆ. ಪ್ರವಾಹದ ನೀರಿನ ಮಟ್ಟ ಇಳಿಯುತ್ತಿದ್ದು, ಚೆನ್ನೈ ಜನಜೀವನ ಚೇತರಿಕೆಯತ್ತ ಹೊರಳಿದೆ.

ಚೆಂಬರಂಬಕ್ಕಂ ಕೆರೆಯಿಂದ ಬಿಡುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ. ಮೂರು ದಿನಗಳಿಂದ ನೀರಿನಲ್ಲಿ ಮುಳುಗಿದ್ದ ಮೌಂಟ್ ರೋಡ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಮತ್ತು ವಾಹನಗಳ ಸಂಚಾರ ಮತ್ತೆ ಆರಂಭವಾಗಿದೆ. ಅಡ್ಯಾರ್ ಮತ್ತು ಕೋವಂ ನದಿಗಳಲ್ಲಿ ನೀರು ಸಾಮಾನ್ಯ ಮಟ್ಟಕ್ಕೆ ಇಳಿದಿದೆ.

ಕೋಡಂಬಕ್ಕಂ, ಟಿ.ನಗರ, ಅಡ್ಯಾರ್, ಕೊಟ್ಟೂರಪುರಂ ಮತ್ತು ಉಪನಗರ ತಂಬರಂನಲ್ಲಿ ಶುಕ್ರವಾರ ಮಳೆ ಇಳಿಮುಖವಾಗಿದೆ. ಮುಂದಿನ 24 ತಾಸು ಅವಧಿಯಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ ತಮಿಳುನಾಡಿನ ದಕ್ಷಿಣ ಕರಾವಳಿ, ಒಳನಾಡು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ ಎಂದು ಇಲಾಖೆ ಹೇಳಿದೆ.

ಅರಕ್ಕೋಣಂನಿಂದ ವಿಮಾನ ಹಾರಾಟ: ಚೆನ್ನೈ ಸಮೀಪದ ಅರಕ್ಕೋಣಂನಲ್ಲಿರುವ ನೌಕಾಪಡೆಯ ವಾಯುನೆಲೆಯಿಂದ ಕೆಲ ವಿಮಾನಗಳು ಹಾರಾಟ ಆರಂಭಿಸಿವೆ. ಅರಕ್ಕೋಣಂ ವಲಯದಲ್ಲಿ ಬಹುತೇಕ ಎಲ್ಲಾ ಸ್ಥಳೀಯ ರೈಲುಗಳು ಸಂಚಾರ ಆರಂಭಿಸಿವೆ. ತಂಬರಂ ಮತ್ತು ಚೆನ್ನೈ ಮಾರ್ಗದಲ್ಲಿ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ಬಸ್‌ ಮತ್ತು ರೈಲು ಸಂಚಾರ ಸಂಪೂರ್ಣವಾಗಿ ಆರಂಭವಾಗದೇ ಇರುವುದರಿಂದ ಚೆನ್ನೈ ಮೆಟ್ರೊ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.

ನೀರಿಲ್ಲ, ಹಾಲಿಲ್ಲ: ಮಳೆ ನಿಂತರೂ ಬಹುಪಾಲು ಮಂದಿಗೆ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ. ನಗರದ ಹಲವೆಡೆ ಹಾಲು ಪೂರೈಕೆಯಾಗುತ್ತಿಲ್ಲ. ಕೆಲವೆಡೆ ಹಾಲು ಲಭ್ಯವಿದ್ದರೂ ಲೀಟರ್‌ಗೆ ₹ 90ರಂತೆ ಮಾರಾಟ ಮಾಡಲಾಗುತ್ತಿದೆ.
ಅಗತ್ಯವಿರುವಷ್ಟು ಆಹಾರ ಸಾಮಾಗ್ರಿ, ದಿನಸಿ ವಸ್ತುಗಳು ಸಿಗುತ್ತಿಲ್ಲ. ತರಕಾರಿಗಳ ಬೆಲೆ ಇಳಿದಿಲ್ಲ ಎಂದು ಜನರು ದೂರುತ್ತಿದ್ದಾರೆ.

ಅಲ್ಲಲ್ಲಿ ಮೊಬೈಲ್ ಸಂಪರ್ಕ ವ್ಯವಸ್ಥೆ ಆರಂಭವಾಗಿದೆ. ಆದರೂ ಬಹುಪಾಲು ಮೊಬೈಲ್‌ ಜಾಲ ಸ್ಥಗಿತಗೊಂಡಿದೆ. ಸ್ಥಿರ ದೂರವಾಣಿ ವ್ಯವಸ್ಥೆ ಇನ್ನೂ ದುರಸ್ತಿಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರವೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.

ಮುಂದುವರಿದ  ಕಾರ್ಯಾಚರಣೆ
ಮಳೆ ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ 30 ತಂಡಗಳು ಜನರಿಗೆ ಆಹಾರ ಮತ್ತು ನೀರು ತಲುಪಿಸುವ ಕೆಲಸ ಮಾಡುತ್ತಿವೆ. ಇನ್ನೂ 20 ತಂಡಗಳು ಶುಕ್ರವಾರ ರಾತ್ರಿ ಚೆನ್ನೈ ತಲುಪಿವೆ.

ಶುಕ್ರವಾರ ಮಧ್ಯಾಹ್ನದವರೆಗೆ ಒಟ್ಟು 10,589 ಜನರನ್ನು ರಕ್ಷಿಸಲಾಗಿದ್ದು, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಮಳೆ ಬಿಡುವು ನೀಡಿರುವುದರಿಂದ ರಕ್ಷಣಾ ಕಾರ್ಯ ಚುರುಕುಗೊಂಡಿದೆ. ಮನಲಿ, ಕೊಟ್ಟೂರಪುರಂ ಮತ್ತು ಗ್ಲೋಬಲ್ ಹೆಲ್ತ್‌ ಸಿಟಿಗಳಲ್ಲಿ 2,300 ನೀರಿನ ಹಾಗೂ 1,400 ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಮೂಲಗಳು ತಿಳಿಸಿವೆ.

Comments