ಆಸ್ಪತ್ರೆಯ ಜನರೇಟರ್‌ ಕೊಠಡಿ ಜಲಾವೃತ: ಆಮ್ಲಜನಕ ಕೊರತೆ

ಚೆನ್ನೈ: 18 ರೋಗಿಗಳ ಸಾವು

ಇಲ್ಲಿನ ಎಂಐಒಟಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ 18 ರೋಗಿಗಳು ಮೃತಪಟ್ಟಿದ್ದಾರೆ. ಜನರೇಟರ್‌ ಕೊಠಡಿ ಜಲಾವೃತವಾದ ಕಾರಣ ವಿದ್ಯುತ್‌ ಕೊರತೆ ಉಂಟಾಗಿದೆ. ಇದರಿಂದಾಗಿ ಆಮ್ಲಜನಕ ದೊರೆಯದೆ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಮಿಳು ನಾಡು ಸರ್ಕಾರ ಹೇಳಿದೆ.

ಚೆನ್ನೈ (ಪಿಟಿಐ): ಇಲ್ಲಿನ ಎಂಐಒಟಿ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ 18 ರೋಗಿಗಳು ಮೃತಪಟ್ಟಿದ್ದಾರೆ. ಜನರೇಟರ್‌ ಕೊಠಡಿ ಜಲಾವೃತವಾದ ಕಾರಣ ವಿದ್ಯುತ್‌ ಕೊರತೆ ಉಂಟಾಗಿದೆ. ಇದರಿಂದಾಗಿ ಆಮ್ಲಜನಕ ದೊರೆಯದೆ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಮಿಳು ನಾಡು ಸರ್ಕಾರ ಹೇಳಿದೆ.

ಈ ಬಗ್ಗೆ ತನಿಖೆ ನಡೆಸುವುದಾಗಿಯೂ ಸರ್ಕಾರ ತಿಳಿಸಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಹಲವು ದಿನಗಳ ಕಾಲ ಸುರಿದ ಮಳೆಯಿಂದಾಗಿ ಅಡ್ಯಾರ್  ನದಿ ದಂಡೆಯಲ್ಲಿರುವ ಮನಪಕ್ಕಣಂನಲ್ಲಿರುವ ಪ್ರಸಿದ್ಧ ಖಾಸಗಿ ಆಸ್ಪತ್ರೆಯ ಆವರಣದ ಕೆಲವು ಭಾಗ ಜಲಾವೃತವಾಗಿತ್ತು. ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಹಾಗಾಗಿ ವಿದ್ಯುತ್‌ಗಾಗಿ ಜನರೇಟರ್‌ ಬಳಸಿಕೊಳ್ಳಲಾಗುತ್ತಿತ್ತು.

ಜನರೇಟರ್‌ ಕೊಠಡಿ ಜಲಾವೃತವಾದ ಕಾರಣ ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡುವುದು ಸಾಧ್ಯವಾಗಿಲ್ಲ ಎಂದು ಮೃತ ರೋಗಿಗಳ ಸಂಬಂಧಿಕರು ಹೇಳಿದ್ದಾರೆ.

‘ಈ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಒಟ್ಟು 75 ರೋಗಿಗಳಿದ್ದರು. ಜೀವರಕ್ಷಕ ವ್ಯವಸ್ಥೆಯನ್ನು ಅವಲಂಬಿಸಿದ್ದ 57 ರೋಗಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. 18 ರೋಗಿಗಳು ಎರಡು ಮೂರು ದಿನಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ’ ಎಂದು ತಮಿಳುನಾಡು ಆರೋಗ್ಯ ಸಚಿವ ಜೆ. ರಾಧಾಕೃಷ್ಣನ್‌ ತಿಳಿಸಿದ್ದಾರೆ.

ಆಸ್ಪತ್ರೆ ಇದ್ದ ಪ್ರದೇಶ ಜಲಾವೃತವಾಗಿತ್ತು ಮತ್ತು ಅಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು ಎಂಬುದನ್ನು ಸಚಿವರು ದೃಢಪಡಿಸಿದ್ದಾರೆ. ಆದರೆ ವಿದ್ಯುತ್‌ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂದು ಹೇಳಲಾಗದು.   ಆಸ್ಪತ್ರೆಯಲ್ಲಿದ್ದ 575 ರೋಗಿಗಳನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಎಲ್ಲ ಸರ್ಕಾರಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಇತರ ಆಸ್ಪತ್ರೆಗಳಿಂದ ಬರುವ ರೋಗಿಗಳನ್ನು ಸಮಸ್ಯೆಯ ತೀವ್ರತೆಯ ಆಧಾರದಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಜಲಾವೃತಗೊಂಡಿರುವ ಇನ್ನೊಂದು ಆಸ್ಪತ್ರೆಗೂ ಸಚಿವರು ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿ ಭೇಟಿ ನೀಡಿದ್ದಾರೆ. ಅಲ್ಲಿನ ತೀವ್ರ ನಿಗಾ ಘಟಕದಲ್ಲಿದ್ದ ಶಿಶುಗಳನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Comments