ಚೆನ್ನೈ

ಬೃಹತ್‌ ಕಾರ್ಯಾಚರಣೆ; 16 ಸಾವಿರ ಜನರ ರಕ್ಷಣೆ

ಕುಂಭದ್ರೋಣ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ತಮಿಳುನಾಡಿನಲ್ಲಿ ಬೃಹತ್ ಪ್ರಮಾಣದ ಕಾರ್ಯಾಚರಣೆಗೆ ಇಳಿದಿರುವ ರಾಷ್ಟ್ರೀಯ ವಿಪತ್ತು ನಿರ್ಹವಣಾ ಪಡೆ, ಚೆನ್ನೈ ಹಾಗೂ ಸುತ್ತಲಿನ ಪ್ರದೇಶಗಳಿಂದ ಈ ತನಕ 16 ಸಾವಿರ ಜನರನ್ನು ರಕ್ಷಿಸಿರುವುದಾಗಿ ಶನಿವಾರ ಹೇಳಿದೆ.

ಚೆನ್ನೈ (ಪಿಟಿಐ): ಮಳೆ ತಗ್ಗಿರುವುದರಿಂದ ಪ್ರವಾಹ ಪೀಡಿತ ತಮಿಳುನಾಡಿನಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯವನ್ನು ರಾಷ್ಟ್ರೀಯ ವಿಪತ್ತು ನಿರ್ಹವಣಾ ಪಡೆಯು (ಎನ್‌ಡಿಆರ್‌ಎಫ್‌) ಚುರುಕುಗೊಳಿಸಿದೆ.

200ಕ್ಕೂ ಹೆಚ್ಚು ದೋಣಿಗಳೊಂದಿಗೆ 50 ತಂಡಗಳಲ್ಲಿ ಕಾರ್ಯಾಚರಣೆಗೆ ಇಳಿದಿರುವ ಎನ್‌ಡಿಆರ್‌ಎಫ್‌, ಚೆನ್ನೈ ಹಾಗೂ ಸುತ್ತಲಿನ ಪ್ರದೇಶಗಳಿಂದ 16 ಸಾವಿರ ಜನರನ್ನು ರಕ್ಷಿಸಿರುವುದಾಗಿ ಶನಿವಾರ ಹೇಳಿದೆ.

1600 ಸಿಬ್ಬಂದಿ ನಿಯೋಜನೆ: ಶುಕ್ರವಾರದಿಂದ ಸ್ಥಳದಲ್ಲೇ ಬೀಡುಬಿಟ್ಟು ಪರಿಸ್ಥಿತಿ ಅವಲೋಕಿಸುತ್ತಿರುವ ಎನ್‌ಡಿಆರ್‌ಎಫ್‌ ಮಹಾನಿರ್ದೇಶಕ ಒ.ಪಿ.ಸಿಂಗ್ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಡರಾತ್ರಿ ಹೊಸದಾಗಿ 20 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು, ಸುಮಾರು 1600 ಸಿಬ್ಬಂದಿ 50 ತಂಡಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದರು.

‘ಈತನಕ ಯಾವುದೇ ಪ್ರವಾಹ ವಿಪತ್ತಿನ ಸನ್ನಿವೇಶದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ತಂಡಗಳನ್ನು ನಿಯೋಜಿಸಿರಲಿಲ್ಲ. 21 ಅಧಿಕಾರಿಗಳು ಹಾಗೂ 200 ದೋಣಿ ಒಳಗೊಂಡಂತೆ ನಾವು ಸುಮಾರು 1600 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೇವೆ.  ಈ ವರೆಗೂ 16 ಸಾವಿರ ಜನರನ್ನು ರಕ್ಷಿಸಿ, ಸುರಕ್ಷಿತ ತಾಣಗಳಿಗೆ ತಲುಪಿಸಿದ್ದೇವೆ’ ಎಂದು ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

16,325 ಜನರ ರಕ್ಷಣೆ: ಕಾರ್ಯಾಚರಣೆಯಲ್ಲಿ ಈವರೆಗೂ 16,325 ಜನರು ಹಾಗೂ 30 ಪ್ರಾಣಿಗಳನ್ನು ರಕ್ಷಿಸಲಾಗಿದೆ. 19,465 ಆಹಾರದ ಪೊಟ್ಟಣಗಳು ಮತ್ತು 16,002 ನೀರಿನ ಪೊಟ್ಟಣಗಳನ್ನು ವಿತರಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ ವಕ್ತಾರರೊಬ್ಬರು ಹೇಳಿದರು.

ಪರಿಶೀಲನಾ ಸಭೆ: ಕೊತ್ತುಪುರಮ್‌ ಪ್ರದೇಶದಲ್ಲಿ ಸಿಂಗ್‌ ಅವರು ಎನ್‌ಡಿಆರ್‌ಎಫ್ ಹಾಗೂ ತಮಿಳುನಾಡು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ಪರಿಶೀಲನಾ ಸಭೆ ನಡೆಸಿದರು.

Comments