ವಿಮಾನಗಳ ಹಾರಾಟ; ರೈಲುಗಳ ಓಡಾಟ ಭಾಗಶಃ ಆರಂಭ

ಮಳೆ ಹಾಗೂ ಪ್ರವಾಹ ಸ್ವಲ್ಪ ಮಟ್ಟಿಗೆ ತಗ್ಗಿದ ಬೆನ್ನಲ್ಲೇ ಸಂಚಾರ ವ್ಯವಸ್ಥೆ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ತಾಂತ್ರಿಕ ವಿಮಾನಗಳ ಹಾರಾಟ ಹಾಗೂ ಕೆಲ ವಿಶೇಷ ರೈಲುಗಳು ಶನಿವಾರ ಸಂಚರಿಸಿವೆ.  

ನವದೆಹಲಿ/ ಮದುರೈ (ಪಿಟಿಐ): ಮಳೆ ಹಾಗೂ ಪ್ರವಾಹ ಸ್ವಲ್ಪ ಮಟ್ಟಿಗೆ ತಗ್ಗಿದ ಬೆನ್ನಲ್ಲೇ ಸಂಚಾರ ವ್ಯವಸ್ಥೆ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ತಾಂತ್ರಿಕ ವಿಮಾನಗಳ ಹಾರಾಟ ಹಾಗೂ ಕೆಲ ವಿಶೇಷ ರೈಲುಗಳು ಶನಿವಾರ ಸಂಚರಿಸಿವೆ.

ಚೆನ್ನೈನಲ್ಲಿ ತಾಂತ್ರಿಕ ವಿಮಾನಗಳ ಹಾರಾಟ ಆರಂಭಗೊಂಡಿದ್ದು, ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಇನ್ನೆರಡು ದಿನಗಳು ಬೇಕಿದೆ.

‘ಚೆನ್ನೈ ವಿಮಾನ ನಿಲ್ದಾಣದಿಂದ ತಾಂತ್ರಿಕ ವಿಮಾನಗಳ ಹಾರಾಟ ಆರಂಭಿಸಿದ್ದೇವೆ. ಆದರೆ, ನಿಲ್ದಾಣದ ನೆಲಮಾಳಿಗೆ ಇನ್ನೂ ಜಲಾವೃತಗೊಂಡಿದೆ. ನಿಲ್ದಾಣದ ಟರ್ಮಿನಲ್ ಕಟ್ಟಡದಲ್ಲಿ ವಿದ್ಯುತ್ ಸಂಪರ್ಕ ಇನ್ನೂ ಸಂಪೂರ್ಣ ಸಹಜ ಸ್ಥಿತಿಗೆ ಬಂದಿಲ್ಲ. ಆದ್ದರಿಂದ ವಾಣಿಜ್ಯ ವಿಮಾನಗಳ ಹಾರಾಟ ಸಾಧ್ಯವಾಗಿಲ್ಲ’ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

‘ನಿಲ್ದಾಣವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಮರಳಲು ಕನಿಷ್ಠ ಇನ್ನೂ 2–3 ದಿನಗಳು ಬೇಕಾಗುತ್ತದೆ’ ಎಂದೂ ಅವರು ತಿಳಿಸಿದ್ದಾರೆ.

ರಜಾಲಿ ನೌಕಾ ವಾಯುನಿಲ್ದಾಣದಿಂದ ನಾಲ್ಕು ವಾಣಿಜ್ಯ ವಿಮಾನಗಳು ಹಾರಾಟ ನಡೆಸಿವೆ. ಎರಡು ಇಂಡಿಗೋ ಹಾಗೂ ತಲಾ ಒಂದು ಸ್ಫೈಸ್‌ ಜೆಟ್‌ ಹಾಗೂ ಟ್ರು ಜೆಟ್‌ ವಿಮಾನಗಳು 319 ಜನರನ್ನು ಸ್ಥಳಾಂತರಿಸಿವೆ ಎಂದರು.

ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ನಾಲ್ಕು ಪ್ರಯಾಣಿಕ ವಿಮಾನಗಳು ದೆಹಲಿ, ಮುಂಬೈ ಹಾಗೂ ಪೋರ್ಟ್‌ಬ್ಲೇರ್‌ಗೆ ನಿರ್ಗಮಿಸಿವೆ. ಸಿಂಗ್‌ಕಾರ್ಗೋ ಬಿ747 ಸರಕು ಸಾಗಣೆ ವಿಮಾನವು ಬೆಂಗಳೂರು ಮೂಲಕ ಸಿಂಗಪುರಕ್ಕೆ ತೆರಳಿದೆ.

ಕುಂಭದ್ರೋಣ ಮಳೆಯಿಂದಾಗಿ ವಿವಿಧ ಕಂಪೆನಿಗಳ 34 ವಿಮಾನಗಳು ನಿಲ್ದಾಣದಲ್ಲಿ ಸಿಲುಕಿದ್ದವು. ಕಳೆದ ಬುಧವಾರದಿಂದ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ಚೆನ್ನೈನಿಂದ ವಿಶೇಷ ರೈಲುಗಳು (ಮದುರೈ ವರದಿ): ಮತ್ತೊಂದಡೆ, ರೈಲುಗಳ ಓಡಾಟವೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಮಳೆ ಹಾಗೂ ಪ್ರವಾಹದಿಂದ ಸಿಲುಕಿರುವ ಚೆನ್ಣೈನಲ್ಲಿ ಪ್ರಯಾಣಿಕರನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಶನಿವಾರ ಮಧ್ತಾಹ್ನದ ಬಳಿಕ ಹಲವು ವಿಶೇಷ ರೈಲು ಓಡಾಟ ಆರಂಭಗೊಂಡಿದೆ.

ಚೆನ್ನೈನಿಂದ ಮದುರೈ, ತಿರುಚನಾಪಳ್ಳಿ, ತಿರುಚೆಂದುರ್, ಕರೈಕಲ್ ಹಾಗೂ ತಿರುನೆಲ್ವಿಗೆ ವಿಶೇಷ ರೈಲುಗಳನ್ನು ಬಿಡಲಾಗಿದೆ.

Comments