ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸ್ಪಷ್ಟನೆ

ಜನರಿಗೆ ಕಷ್ಟವಾದ್ರೆ ‘ದಿನ ಬಿಟ್ಟು ದಿನ’ ಯೋಜನೆ ಸ್ಥಗಿತ

ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಹೊಂದಿದ ಖಾಸಗಿ ವಾಹನಗಳಿಗೆ  ‘ದಿನ ಬಿಟ್ಟು ದಿನ’ ಸಂಚಾರಕ್ಕೆ ಅವಕಾಶ ನೀಡುವ ನಿರ್ಧಾರವನ್ನು ಜನರಿಗೆ ಕಷ್ಟವಾದರೆ ಕೈಬಿಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ (ಪಿಟಿಐ): ಜನರಿಗೆ ಕಷ್ಟವಾದರೆ ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಹೊಂದಿದ ಖಾಸಗಿ ವಾಹನಗಳಿಗೆ  ‘ದಿನ ಬಿಟ್ಟು ದಿನ’ ಸಂಚಾರಕ್ಕೆ ಅವಕಾಶ ನೀಡುವ ನಿರ್ಧಾರವನ್ನು ಕೈಬಿಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಈ ನಿರ್ಧಾರಕ್ಕೆ ತಜ್ಞರು, ವಿರೋಧ ಪಕ್ಷಗಳು ಸೇರಿದಂತೆ ಜನಸಾಮಾನ್ಯರಿಂದಲೂ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಕೇಜ್ರಿವಾಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ

ಹಿಂದೂಸ್ತಾನ್ ಟೈಮ್ಸ್‌ ನಾಯಕತ್ವ ಸಮಾವೇಶದಲ್ಲಿ ಮಾತನಾಡಿದ ಅವರು,‘ತಾತ್ವಿಕವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.  ಹಲವು ವಿಷಯ ಬಗ್ಗೆ ಇನ್ನೂ ಕೂಲಂಕಷವಾಗಿ ಚರ್ಚಿಸಬೇಕಿದೆ. ಒಂದಿಷ್ಟು ಸಮಯ ಅಂದರೆ, ಸುಮಾರು 15 ದಿನಗಳ ಕಾಲ ಇದನ್ನು ಪರೀಕ್ಷಾರ್ಥವಾಗಿ ಪ್ರಯತ್ನಿಸಿ ನೋಡಲಾಗುವುದು. ಅತಿಯಾದ ಸಮಸ್ಯೆಗಳು ಕಂಡರೆ, ಅದನ್ನು ಸ್ಥಗಿತಗೊಳಿಸಲಾಗುವುದು’ ಎಂದರು.

‘ವಾಯು ಮಾಲಿನ್ಯ ತೀವ್ರತರವಾಗಿ ಹೆಚ್ಚಿದ್ದು, ಏನಾದರೂ ಕಠಿಣ ಕ್ರಮಕೈಗೊಳ್ಳಬೇಕು ಎಂಬ ಭೀತಿ ಎದುರಾಗಿತ್ತು’ ಎನ್ನುವ ಮೂಲಕ ತಮ್ಮ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟರು.

ದೆಹಲಿಯ ವಾಯು ಮಾಲಿನ್ಯದ ಕುರಿತು ಅಸಾಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್‌ ‘ವಿಷಾನಿಲದ ಕೋಣೆ’ ಎಂದು ಕಟುವಾಗಿ ಟೀಕಿಸಿತ್ತು.

ಇದಾದ ಒಂದು ದಿನದ ಬಳಿಕ ಮಿತಿ ಮೀರಿದ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸಮ ಹಾಗೂ ಬೆಸ ನೋಂದಣಿ ಸಂಖ್ಯೆಗಳನ್ನು ಹೊಂದಿದ ಖಾಸಗಿ ವಾಹನಗಳು ನಗರದಲ್ಲಿ ದಿನ ಬಿಟ್ಟು ದಿನ ಸಂಚರಿಸಲು ಅವಕಾಶ ನೀಡಲು ಸರ್ಕಾರ ನಿರ್ಧರಿಸಿತ್ತು. ಅಲ್ಲದೇ, 2016ರ ಜನವರಿ 1ರಿಂದ ಅದನ್ನು ಜಾರಿಗೆ ಚಿಂತನೆ ನಡೆಸಿತ್ತು.

Comments