ದಂಡದ ಮೂಲಕ ಜನತಂತ್ರ

ಸಾಕಷ್ಟು ತಿಳಿವಳಿಕೆ ಇರುವ ಭಾರತೀಯರನ್ನು ಕೇಳಿದರೂ ಹಿಲರಿ ಬೆನ್ ಯಾರೆಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂಬ ಉತ್ತರ ಸಿಗುವ ಸಾಧ್ಯತೆಯೇ ಹೆಚ್ಚು. ಬ್ರಿಟನ್‌ನ ಲೇಬರ್ ಪಾರ್ಟಿಯ ಹೊಸ ನಾಯಕ, ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕಟ್ಟಾ ವಿಚಾರವಾದಿ ಜೆರೆಮಿ ಕಾರ್ಬಿನ್ ಬಗ್ಗೆ ಕೇಳಿದರೆ ಗೊತ್ತಿರುವ ಸಾಧ್ಯತೆ ಇದೆ.

ನಮ್ಮ ರಾಜಕೀಯ ಪಕ್ಷಗಳಿಗೆ ಆಂತರಿಕ ಪ್ರಜಾಸತ್ತೆಯೇ ಇಲ್ಲ. ಹಾಗಾಗಿಯೇ ಹಿಲರಿ ಬೆನ್ ಅವರ ಭಾಷಣವನ್ನು ನಾವೊಮ್ಮೆ ಆಲಿಸಬೇಕು.

ಸಾಕಷ್ಟು ತಿಳಿವಳಿಕೆ ಇರುವ ಭಾರತೀಯರನ್ನು ಕೇಳಿದರೂ ಹಿಲರಿ ಬೆನ್ ಯಾರೆಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂಬ ಉತ್ತರ ಸಿಗುವ ಸಾಧ್ಯತೆಯೇ ಹೆಚ್ಚು. ಬ್ರಿಟನ್‌ನ ಲೇಬರ್ ಪಾರ್ಟಿಯ ಹೊಸ ನಾಯಕ, ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಕಟ್ಟಾ ವಿಚಾರವಾದಿ ಜೆರೆಮಿ ಕಾರ್ಬಿನ್ ಬಗ್ಗೆ ಕೇಳಿದರೆ ಗೊತ್ತಿರುವ ಸಾಧ್ಯತೆ ಇದೆ. ಅದೂ ಸಾಧ್ಯತೆ ಮಾತ್ರ. ಆದರೆ ಹಿಲರಿ ಬೆನ್ ಬಗ್ಗೆ ಈ ಸಾಧ್ಯತೆಯೂ ಇಲ್ಲ. ಇವು ಅತ್ಯಂತ ಸಂಕುಚಿತ ಮತ್ತು ಸ್ವಹಿತಾಸಕ್ತಿಯ ದಿನಗಳು. ಬ್ರಿಟನ್ ಈಗ ಕುಂದುತ್ತಿರುವ ಶಕ್ತಿ. ಸಿರಿಯಾದಲ್ಲಿರುವ ಐಎಸ್ ವಿರುದ್ಧ ವಾಯುದಾಳಿ ನಡೆಸುವ ವಿಷಯದಲ್ಲಿ ಬ್ರಿಟನ್ ಕೆಳಮನೆಯಲ್ಲಿ ಬೆನ್ ಮಾಡಿದ ಭಾಷಣ ಒಮ್ಮೆ ಕೇಳಬೇಕಾದಂತಹುದು. ಹಾಗಾಗಿಯೇ ಗೂಗಲ್‌ನಲ್ಲಿ ಜಾಲಾಡಿ ಅವರ 13 ನಿಮಿಷದ ಭಾಷಣವನ್ನು ಆಲಿಸಬೇಕು.

ಲೇಬರ್ ಪಕ್ಷದ ಹಿರಿಯ ಸಂಸದ ಬೆನ್ ಅವರದ್ದು ಅತ್ಯಂತ ಭಾವನಾತ್ಮಕ ಭಾಷಣವಾಗಿತ್ತು. ಛಾಯಾ ವಿದೇಶಾಂಗ ಸಚಿವರೂ (ವಿರೋಧ ಪಕ್ಷದಲ್ಲಿ ವಿದೇಶಾಂಗ ವ್ಯವಹಾರಗಳ ಬಗ್ಗೆಯೇ ಹೆಚ್ಚು ಗಮನ ನೀಡುವ ಮತ್ತು ಆ ಪಕ್ಷ ಅಧಿಕಾರಕ್ಕೆ ಬಂದರೆ ವಿದೇಶಾಂಗ ಸಚಿವರ ಹುದ್ದೆ ವಹಿಸಿಕೊಳ್ಳುವ ವ್ಯಕ್ತಿ) ಆಗಿರುವ ಬೆನ್ ವಾಯುದಾಳಿಯ ಪರವಾಗಿ ಮಾತನಾಡಿದರು. ಸಹವರ್ತಿಗಳಾದ ಯುರೋಪಿನ ಸಮಾಜವಾದಿಗಳ (ಫ್ರಾನ್ಸ್‌ನ ಒಲಾಂಡ್ ಸರ್ಕಾರ) ಬಗ್ಗೆ ಇರುವ ಬದ್ಧತೆ ಮತ್ತು ಲೇಬರ್ ಪಕ್ಷವು ಹೊಂದಿರುವ ಅಂತರರಾಷ್ಟ್ರೀಯ ಬದ್ಧತೆಗಳೆರಡರ ದೃಷ್ಟಿಯಿಂದಲೂ ಅವರು ದಾಳಿಯನ್ನು ಸಮರ್ಥಿಸಿಕೊಂಡರು. ಸೈದ್ಧಾಂತಿಕ ವಿಭಜನೆಯ ಎರಡೂ ಭಾಗಗಳ ಬಗ್ಗೆ ಸಂಸತ್ತು ಪ್ರತಿಕ್ರಿಯೆ ನೀಡಿದ ರೀತಿ ಇನ್ನಷ್ಟು ಮಹತ್ವಪೂರ್ಣವಾಗಿತ್ತು.

ಆರಂಭದಲ್ಲಿ, ಕಾರ್ಬಿನ್ ಬಗ್ಗೆ ನಡೆಸಿದ್ದ ಒರಟು ಟೀಕೆಗೆ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ಬೆನ್ ತರಾಟೆಗೆ ತೆಗೆದುಕೊಂಡದ್ದಷ್ಟೇ ಅಲ್ಲದೆ, ಕ್ಷಮೆ ಕೇಳುವಂತೆ ಆಗ್ರಹಿಸಿದರು (ಆದರೆ ವಾಸ್ತವದಲ್ಲಿ ಕಾರ್ಬಿನ್ ಅವರನ್ನೇ ಬೆನ್ ಪರೋಕ್ಷವಾಗಿ ಟೀಕಿಸುತ್ತಿದ್ದರು). ಈ ಹಂತದಲ್ಲಿ ಮುಖ ಸಿಂಡರಿಸಿಕೊಂಡಿದ್ದ ಕ್ಯಾಮರೂನ್ ಅವರ ಕೈಕಾಲುಗಳ ಚಲನೆಯಲ್ಲಿ ಅಸಹನೆಯನ್ನು ಸ್ಪಷ್ಟವಾಗಿ ಕಾಣಬಹುದಿತ್ತು. ಆದರೆ ಬೆನ್ ಮುಖ್ಯ ವಿಷಯಕ್ಕೆ ಬಂದಾಗ ಕ್ಯಾಮರೂನ್ ಮುಖದಲ್ಲಿ ಅನುಮೋದನೆ ಅಷ್ಟೇ ಅಲ್ಲ ಮೆಚ್ಚುಗೆಯ ನಗು ಕಾಣಿಸಿಕೊಂಡಿತು. ಐಎಸ್ ಉಗ್ರರು ಹೊಸ ಧರ್ಮಾಂಧರು ಎಂದು ಬಣ್ಣಿಸಿದ ಬೆನ್, ಅವರ ವಿರುದ್ಧ ದಾಳಿ ನಡೆಸುವುದರ ಪರವಾಗಿ ಭಾವಾವೇಶದಿಂದ ಮಾತನಾಡಿದರು.

ಭಾಷಣ ಮುಗಿಸಿದ ನಂತರ ತಾನು ಸಿರಿಯಾ ಮೇಲೆ ವಾಯುದಾಳಿ ನಡೆಸುವ ಸರ್ಕಾರದ ನಿಲುವಳಿಯನ್ನು ವಿರೋಧಿಸುತ್ತಿರುವವರ ಜತೆಗೆ ಹೋಗಿ ಕುಳಿತುಕೊಳ್ಳುತ್ತೇನೆ ಎಂಬುದನ್ನು ನೆನಪಿಸಿದರು. ಹಾಗಿದ್ದರೂ ಎಲ್ಲ ಸಂಸದರೂ ನಿಲುವಳಿಯ ಪರವಾಗಿ ಮತ ಹಾಕಬೇಕು ಎಂದು ಅವರು ವಿನಂತಿಸಿಕೊಂಡರು. ನಂತರ, 174 ಮತಗಳ ಭಾರಿ ಅಂತರದಿಂದ ನಿಲುವಳಿ ಅಂಗೀಕಾರಗೊಂಡಿತು. ಸದನದಲ್ಲಿ ಬಹುಮತ ಹೊಂದಿರುವ ಕನ್ಸರ್ವೇಟಿವ್ ಪಕ್ಷ ಈ ನಿಲುವಳಿಯನ್ನು ಅಂಗೀಕರಿಸಿಕೊಂಡಿದ್ದಕ್ಕಿಂತ ಪಕ್ಷಭೇದ ಮರೆತು ಲೇಬರ್ ಪಕ್ಷದ 66 ಸಂಸದರು ಈ ನಿಲುವಳಿ ಪರ ಮತ ಚಲಾಯಿಸಿದ್ದೇ ಮಹತ್ವದ ವಿಷಯ. ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಏನು ನಡೆಯುತ್ತದೆಯೋ ಅದು ಬ್ರಿಟನ್‌ನಲ್ಲಿ ಆಗುವುದಿಲ್ಲ.

ನಿಲುವಳಿ ಪರ ಮತ ಚಲಾಯಿಸಿದ ವಿರೋಧ ಪಕ್ಷದ ಸಂಸದರಿಗೆ ಪಕ್ಷಾಂತರ ತಡೆ ಕಾಯ್ದೆ ಅಡಿಯಲ್ಲಿ ಶಿಕ್ಷೆಯಾಗುವುದೂ ಇಲ್ಲ, ಅವರು ಅನರ್ಹತೆಯನ್ನೂ ಎದುರಿಸುವುದಿಲ್ಲ. ಈ ನಿಲುವಳಿ ಬಗ್ಗೆ ಲೇಬರ್ ಪಕ್ಷದೊಳಗೆ ಭಿನ್ನಾಭಿಪ್ರಾಯ ಇತ್ತು. ಹಾಗಾಗಿ ಪಕ್ಷ ವಿಪ್ ಜಾರಿ ಮಾಡದೆ ಮುಕ್ತವಾಗಿ ಮತ ಚಲಾಯಿಸುವ ಅವಕಾಶವನ್ನು ಸಂಸದರಿಗೆ ನೀಡಿತ್ತು. ಭಾರತದಲ್ಲಿರುವ ನಾವು ಗಮನಿಸಬೇಕಾದ ಹಲವು ಅಂಶಗಳು ಇಲ್ಲಿವೆ. ಬ್ರಿಟನ್‌ನ ರಾಜಕಾರಣ ನಮಗಿಂತ ಕಡಿಮೆ ಧ್ರುವೀಕರಣಗೊಂಡಿರುವುದೇನೂ ಅಲ್ಲ. ಹಾಗಿದ್ದರೂ ಅಲ್ಲಿನ ಪ್ರಮುಖ ವಿರೋಧ ಪಕ್ಷ ಭಿನ್ನಾಭಿಪ್ರಾಯ ಇರುವ ವಿಷಯವೊಂದರ ಬಗ್ಗೆ ಮುಕ್ತವಾಗಿ ಮತ ಹಾಕಲು ಅವಕಾಶ ನೀಡುವ ಮೂಲಕ ಆಂತರಿಕ ಪ್ರಜಾತಂತ್ರದ ಶಕ್ತಿಯನ್ನು ಎತ್ತಿ ಹಿಡಿದಿದೆ. ಇದು ಭಾರತದಲ್ಲಿ ಅಸಾಧ್ಯ.

ಎಲ್ಲ ಪಕ್ಷಗಳೂ ಹೈಕಮಾಂಡ್ ಅಥವಾ ಮುಖ್ಯಸ್ಥರ ನಿರಂಕುಶ ಆಧಿಪತ್ಯಕ್ಕೆ ಒಳಪಟ್ಟಿವೆ. ವಿಪ್ ಸಡಿಲಿಕೆ ಬಿಡಿ, ಪಕ್ಷದ ಸಂಸದರೊಬ್ಬರು ಬೇರೊಂದು ಪಕ್ಷದ ನೀತಿ ಅಥವಾ ವ್ಯಕ್ತಿಯನ್ನು ಹೊಗಳಿದರೂ ಅದನ್ನು ರಾಷ್ಟ್ರದ್ರೋಹ ಎಂಬಂತೆ ನೋಡಲಾಗುತ್ತದೆ. ಪಕ್ಷಗಳ ನಡುವೆ ಒಗ್ಗಟ್ಟು ನಮ್ಮ ಸಂಸತ್ತಿನಲ್ಲಿ ಅತ್ಯಂತ ವಿರಳ. ಯುದ್ಧ, ಭಯೋತ್ಪಾದಕ ದಾಳಿ, ನೈಸರ್ಗಿಕ ವಿಕೋಪಗಳು ಮತ್ತು ಕೆಲವೊಮ್ಮೆ ಅಣ್ಣಾ ಹಜಾರೆ ಅಂಥವರು ತೀಕ್ಷ್ಣ ದಾಳಿ ನಡೆಸಿದಾಗ ಸಾಂಪ್ರದಾಯಿಕ ರಾಜಕಾರಣದ ಸಮರ್ಥನೆಯಂತಹ ಸಮಾನ ಸಿದ್ಧಾಂತಗಳಿಗಾಗಿ ಮಾತ್ರ ಒಗ್ಗಟ್ಟು ಕಾಣಿಸಿಕೊಳ್ಳುತ್ತದೆ. ಹಳೆಯ ಭಿನ್ನತೆಗಳು ಇದ್ದಾಗಲೂ ಹೊಸ ಸಂವಾದವೇ ಮಹತ್ವ ಪಡೆದಂತಹ ಕ್ಷಣಗಳೂ ಇವೆ.

ಈಗ ನಡೆಯುತ್ತಿರುವ ಅಧಿವೇಶನದಲ್ಲಿನ ಸಂವಿಧಾನ ದಿನದ ಚರ್ಚೆಯ ಸಂದರ್ಭದಲ್ಲಿ ಇಂತಹ ಕೆಲವು ಝಲಕ್‌ಗಳು ಕಾಣಿಸಿಕೊಂಡಿವೆ. ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸಮತ ಎದುರಿಸಿದ ಎರಡು ಸಂದರ್ಭಗಳಲ್ಲಿ (1996 ಮತ್ತು 1999) ಜಾತ್ಯತೀತತೆ ಬಗ್ಗೆ ನಡೆದ ಎರಡು ಚರ್ಚೆಗಳು ನನ್ನ ಸಾರ್ವಕಾಲಿಕ ಮೆಚ್ಚುಗೆಯ ಸಂವಾದಗಳು. ಸಂಸದರು ಪಕ್ಷದ ವಿಪ್‌ಗೆ ವಿಧೇಯವಾಗಿದ್ದು, ಅದನ್ನು ಪ್ರಶ್ನಿಸದ ಮತ್ತು ಅದಕ್ಕೆ ಬದ್ಧರಾಗಿರುವ ಅನುಯಾಯಿಗಳಾಗುವುದಕ್ಕಿಂತ ತಮ್ಮದೇ ನಿಲುವುಗಳನ್ನು ಹೊಂದಿರುವ ಜನಪ್ರತಿನಿಧಿಗಳಾಗಿ ವರ್ತಿಸುವುದು ಬಹಳ ಭಿನ್ನ.

ನಮ್ಮ ಸಂಸದರು ಪಕ್ಷದ ರೋಬೊಗಳಾಗಿರುವ ಬದಲಿಗೆ ಸ್ವಂತಿಕೆ ತೋರಬಹುದಾದ ಮೂರು ಸ್ಥಳಗಳಿವೆ. ಮೊದಲ ಎರಡು, ಸಂಸತ್ತಿನ ಸೆಂಟ್ರಲ್ ಹಾಲ್ ಮತ್ತು ನವದೆಹಲಿಯಲ್ಲಿನ ಸಂಜೆಯ ಪಾರ್ಟಿ ಸಮಯ. ಇಲ್ಲಿ ವೈರತ್ವ ಮತ್ತು ಪ್ರತಿಸ್ಪರ್ಧೆಗಳೆಲ್ಲವೂ ಅಮಾನತಿಗೊಳಪಡುತ್ತವೆ. ಮೂರನೆಯದು, ಸಂಸದೀಯ ಸಮಿತಿಗಳು. ಈ ಮೂರು ವೇದಿಕೆಗಳಲ್ಲಿ ಮಾತ್ರ ಸಂಸದರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಧ್ವನಿಸುವುದಕ್ಕೆ ಸಾಧ್ಯ. ಸಂಸದೀಯ ಸಮಿತಿಯ ಕೆಲವು ವರದಿಗಳನ್ನು ನಾನು ಪರಿಶೀಲಿಸಿದ್ದೇನೆ. ಅವುಗಳು ಅತ್ಯುನ್ನತ ಮಟ್ಟದ ವಿಚಾರವಾದಕ್ಕೆ ನಿದರ್ಶನಗಳಂತಿದ್ದು, ಸಂಸದರು ನಡೆಸುವ ಅತ್ಯುತ್ತಮ ಸಿದ್ಧತೆಯನ್ನು ತೋರುತ್ತವೆ. ಹಲವು ವರದಿಗಳು ಅತ್ಯುತ್ತಮ ಮಾಹಿತಿ ಮತ್ತು ವಿಶ್ಲೇಷಣೆಯೊಂದಿಗೆ ಅದ್ಭುತವಾಗಿವೆ. ಇಲ್ಲಿ ಮತದಾನ ಇಲ್ಲದಿರುವುದರಿಂದ ಯಾವ ಸಂಸದ ಅದರ ಪರವಾಗಿದ್ದರು ಮತ್ತು ಯಾರು ವಿರುದ್ಧವಾಗಿದ್ದರು ಎಂಬುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ.

ಈ ಮಟ್ಟದಲ್ಲಿ ವಿಭಜಿತವಾಗಿರುವ ರಾಜಕಾರಣದಲ್ಲಿ ಇಂತಹ ಉತ್ತಮ ವರದಿಗಳನ್ನು ತಯಾರಿಸುವ ಒಮ್ಮತ ಹೇಗೆ ಸಾಧ್ಯವಾಗುತ್ತದೆ? ಇದಕ್ಕೆ ಒಂದು ಕಾರಣ, ಇಂತಹ ಸಂಸದೀಯ ವ್ಯವಸ್ಥೆಗಳು ಸಾರ್ವಜನಿಕರಿಗೆ ಅಥವಾ ಮಾಧ್ಯಮಕ್ಕೆ ಮುಕ್ತವಲ್ಲ ಎಂಬುದಾಗಿದೆ. ಇದು ಬೇಸರದ ವಿಚಾರ. ತಾತ್ವಿಕವಾಗಿ ಇದು ಮರುಕದ ವಿಷಯವಾದರೆ, ವಾಸ್ತವದಲ್ಲಿ ಅದೊಂದು ವರ. ಇದು ಸಾರ್ವಜನಿಕರಿಗೆ ಮತ್ತು ಮಾಧ್ಯಮಕ್ಕೆ ಮುಕ್ತವಾದರೆ, ಭಾರತದ ಯಾವುದೇ ಸಂಸದ ತನ್ನ ಪಕ್ಷದ ಘೋಷಿತ ನಿಲುವಿಗಿಂತ ಭಿನ್ನ ನಿಲುವು ತಾಳುವುದು ಸಾಧ್ಯವಿದೆಯೇ? ಇಂದು, ಇಂತಹ ಸಮಿತಿಗಳಲ್ಲಿ ಸದಸ್ಯರು ತಮ್ಮ ಪಕ್ಷದ ನಿಲುವುಗಳಿಗಿಂತ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಉದಾಹರಣೆಗೆ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ, ಪಿಂಚಣಿ ಮಸೂದೆ ಮತ್ತು ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳದ ಬಗೆಗಿನ ಸಮಿತಿಗಳಲ್ಲಿದ್ದ ಕೆಲವು ಕಾಂಗ್ರೆಸ್ ಸಂಸದರು ಇವುಗಳನ್ನು ವಿರೋಧಿಸಿದ್ದರು.

ನಮ್ಮ ಸಂಸದೀಯ ವ್ಯವಸ್ಥೆ ಕುಸಿದಿದೆ ಮತ್ತು ಕೆಲವೇ ಕೆಲವು ಕಾನೂನುಗಳು ಅತ್ಯಲ್ಪ ಚರ್ಚೆಯೊಂದಿಗೆ ಅಂಗೀಕಾರವಾಗುತ್ತವೆ ಎಂಬ ಆತಂಕವನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ. ದುರಹಂಕಾರದಿಂದ ಮಸೂದೆಯೊಂದನ್ನು ಅಂಗೀಕರಿಸಿಕೊಳ್ಳುವುದಕ್ಕಾಗಿ ಗದ್ದಲವನ್ನು ಬಳಸಿಕೊಳ್ಳಲಾಗುವಷ್ಟೇ ಪ್ರಮಾಣದಲ್ಲಿ ಮಸೂದೆಯನ್ನು ತಡೆಯಲು ಕೂಡ ಗದ್ದಲವನ್ನು ಬಳಸಿಕೊಳ್ಳಲಾಗುತ್ತದೆ (ಸಂಸತ್ತಿನಲ್ಲಿ ಗದ್ದಲ, ಕೋಲಾಹಲ ಎಂಬುದು ಭಾರತದ ಮಾಧ್ಯಮದಲ್ಲಿ ಅತ್ಯಂತ ಪ್ರಿಯವಾದ ಅಭಿವ್ಯಕ್ತಿ). ಅಮೆರಿಕದಲ್ಲಿ ಮಸೂದೆಯನ್ನು ತಡೆಯಲು ಸಂಸದರು ಕೊನೆ ಇಲ್ಲದಂತೆ ಮಾತನಾಡುತ್ತಲೇ ಇರುತ್ತಾರೆ. ಭಾರತದಲ್ಲಿ ಸಂಸದರು ಸ್ಪೀಕರ್ ಪೀಠದ ಮುಂದೆ ಜಮಾಯಿಸುತ್ತಾರೆ. ಅಷ್ಟೇ ಅಲ್ಲದೆ, ಪರಸ್ಪರರ ಮೇಲೆ ಕೈಗೆ ಸಿಕ್ಕದ್ದನ್ನು ಎಸೆಯುತ್ತಾರೆ, ಕೆಲವೊಮ್ಮೆ ಸ್ಪೀಕರ್ ಮೇಲೆಯೂ ಎಸೆಯುತ್ತಾರೆ.

ಪಕ್ಷಗಳು ಅಧಿಕಾರದಲ್ಲಿದ್ದಾಗ ಒಂದು ಮಸೂದೆಯನ್ನು ಪ್ರಸ್ತಾಪಿಸುತ್ತವೆ ಮತ್ತು ಅಧಿಕಾರದಿಂದ ಹೊರಗಿರುವಾಗ ಅದನ್ನೇ ವಿರೋಧಿಸುತ್ತವೆ. ಪತ್ರಕರ್ತರು, ಅಂಕಣಕಾರರು ಇದನ್ನು ಬೂಟಾಟಿಕೆ ಎಂದು ವಿಮರ್ಶಿಸುತ್ತಲೇ ಇರುತ್ತಾರೆ, ಜನ ತಮ್ಮ ಪ್ರತಿನಿಧಿಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಿದ್ದರೂ ಇಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಉದಾಹರಣೆಗೆ, ಸಿರಿಯಾ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ನಡೆದಂತಹ ಚರ್ಚೆಯನ್ನು ನಮ್ಮ ಸಂಸತ್ತು ಯಾವ ರೀತಿಯಲ್ಲಿ ನಿಭಾಯಿಸುತ್ತಿತ್ತು ಎಂಬ ಬಗ್ಗೆ ಚಿಂತಿಸಿ. ಕಲಾಪಕ್ಕೆ ಅಡ್ಡಿ ಉಂಟಾಗಿರುವುದಕ್ಕೆ ಪರಸ್ಪರರನ್ನು ಟೀಕಿಸುತ್ತಿದ್ದವು; ನಿರ್ಣಯ ಅಂಗೀಕಾರವಾಗಬೇಕು ಎಂಬ ಬಯಕೆ ವಿರೋಧ ಪಕ್ಷಕ್ಕೆ ಇದ್ದರೂ ಬಹುಶಃ ಅದು ಸಭಾತ್ಯಾಗ ನಡೆಸುತ್ತಿತ್ತು.

ಹಾಗಾಗಿಯೇ ಪಕ್ಷಾಂತರ ತಡೆ ಕಾಯ್ದೆ ಮತ್ತು ವಿಪ್ ವ್ಯವಸ್ಥೆಯನ್ನು ಮರುಪರಿಶೀಲನೆಗೆ ಒಳಪಡಿಸುವ ಕಾಲ ಈಗ ಬಂದಿದೆ. ಮುಖ್ಯ ವಿಷಯಗಳಲ್ಲಿ, ಕನಿಷ್ಠ ಪಕ್ಷ ಕೆಲವು ವಿಷಯಗಳಲ್ಲಿ ಸಂಸದರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಪಕ್ಷಾಂತರ ತಡೆ ಕಾಯ್ದೆಯ ಭೀತಿ ಇಲ್ಲದೆ ಮತ ಚಲಾಯಿಸಲು ಪಕ್ಷಗಳು ಅವಕಾಶ ಕೊಟ್ಟರೆ, ನಮ್ಮ ಸಂಸತ್ತು ಇನ್ನಷ್ಟು ಉತ್ತಮಗೊಳ್ಳುತ್ತದೆ ಮತ್ತು ಇನ್ನೂ ಹೆಚ್ಚು ಉತ್ಪಾದಕವಾಗುತ್ತದೆ. ಪಕ್ಷದೊಳಗೆ ಆಂತರಿಕ ಜನತಂತ್ರವೇ ಇಲ್ಲದ ದೊಡ್ಡ ಅವಮಾನದ ಸ್ಥಿತಿ ಬದಲಾದರೆ ಭಾರತದ ರಾಜಕಾರಣವೂ ಆರೋಗ್ಯಪೂರ್ಣವಾಗುತ್ತದೆ.

ಕಾರ್ಯಕಾರಿ ಸಮಿತಿ ಸೇರಿದಂತೆ ತನ್ನ ಎಲ್ಲ ವ್ಯವಸ್ಥೆಗಳನ್ನೂ ಕಾಂಗ್ರೆಸ್ ನಾಶಪಡಿಸಿದೆ. ಎಲ್ಲ ನಾಮಕರಣ ಸದಸ್ಯರನ್ನು ಒಳಗೊಂಡ ಈ ಸಮಿತಿಗಳು ಸಭೆ ಸೇರುವುದೇ ಇಲ್ಲ. ಹೊಸ ನಾಯಕತ್ವದ ಅಡಿಯಲ್ಲಿ ಬಿಜೆಪಿಯೂ ಅದೇ ದಿಕ್ಕಿನಲ್ಲಿ ಸಾಗಿದೆ. ಸಿಪಿಎಂ ಹೊರತುಪಡಿಸಿ ಇತರ ಎಲ್ಲ ಪಕ್ಷಗಳು ವಂಶಾಡಳಿತದ ರಾಜಕೀಯ ಮಾಫಿಯಾದ ಹಿಡಿತದಲ್ಲಿವೆ. ಈಗ ನಾವು ಬಳಸಿಕೊಳ್ಳುತ್ತಿರುವ ರೀತಿಯಲ್ಲಿ ನಮ್ಮ ಪಕ್ಷಾಂತರ ತಡೆ ಕಾಯ್ದೆ ಅವರಿಗೆ ಪರಮ ಮಿತ್ರವಾಗಿದೆ. ಇದು ಬದಲಾಗಬೇಕು. ಹಾಗಾದಾಗ, ನಮ್ಮಲ್ಲಿಯೂ ಹಿಲರಿ ಬೆನ್ ತರಹ, ಪಕ್ಷದ ನಾಯಕತ್ವವನ್ನು ಧಿಕ್ಕರಿಸಿ, ತಾತ್ವಿಕ ಕಾರಣಕ್ಕೆ ಪಕ್ಷಕ್ಕಿಂತ ಭಿನ್ನ ನಿಲುವು ಕೈಗೊಳ್ಳುವ ಕೆಲವರನ್ನಾದರೂ ನಾವು ಕಾಣಬಹುದು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

Comments