ನಿನ್ನೆ ಶ್ರೀನಗರ, ಇಂದು ಚೆನ್ನೈ, ನಾಳೆ...?

ಹೀಗೆಲ್ಲ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲವೇ? ಅಂಥ ಅನಾಹುತ ಇದೇ ಮೊದಲ ಬಾರಿ ಆಗುತ್ತಿತ್ತೇ? ಅದನ್ನು ತಡೆಯಲು ಸಾಧ್ಯವಿತ್ತೇ? ಸಾಧ್ಯ ಎಂದು ಗೊತ್ತಿದ್ದರೂ ಇಚ್ಛಾಶಕ್ತಿ ಇರಲಿಲ್ಲವೇ? ಹೀಗೆ ಮತ್ತೆ ಆಗುವುದಿಲ್ಲವೇ? ಆಗುವುದಿಲ್ಲ ಎಂದು ಹೇಗೆ ಹೇಳುವುದು?

ನಿನ್ನೆ ಶ್ರೀನಗರ, ಇಂದು ಚೆನ್ನೈ, ನಾಳೆ...?

ಹೀಗೆಲ್ಲ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲವೇ? ಅಂಥ ಅನಾಹುತ ಇದೇ ಮೊದಲ ಬಾರಿ ಆಗುತ್ತಿತ್ತೇ? ಅದನ್ನು ತಡೆಯಲು ಸಾಧ್ಯವಿತ್ತೇ? ಸಾಧ್ಯ ಎಂದು ಗೊತ್ತಿದ್ದರೂ ಇಚ್ಛಾಶಕ್ತಿ ಇರಲಿಲ್ಲವೇ? ಹೀಗೆ ಮತ್ತೆ ಆಗುವುದಿಲ್ಲವೇ?
ಆಗುವುದಿಲ್ಲ ಎಂದು ಹೇಗೆ ಹೇಳುವುದು?

ಇಂದು ಇಲ್ಲಿ, ನಾಳೆ ಅಲ್ಲಿ. ನಿಸರ್ಗಕ್ಕೆ ಕರುಣೆ ಎಂಬುದು ಇರುವುದಿಲ್ಲ. ಏಕೆಂದರೆ ನಾವು ಅದರ ಜೊತೆಗೆ ಕರುಣೆಯಿಂದ ನಡೆದುಕೊಂಡಿಲ್ಲ. ನಮಗೆ ಅಭಿವೃದ್ಧಿ ಬೇಕಾಗಿದೆ. ಯಾವ ಎಗ್ಗೂ ಇಲ್ಲದ ಅಭಿವೃದ್ಧಿ ಎಂಬ ನಾಗಾಲೋಟದ ಕುದುರೆಯನ್ನು ಏರಿ ಕುಳಿತಿದ್ದೇವೆ. ನಾವು ನಿಜವಾಗಿಯೂ ಅಭಿವೃದ್ಧಿ ಹೊಂದುತ್ತೇವೆಯೇ ಅಥವಾ ವೇಗದ ಕುದುರೆ ನಮ್ಮನ್ನು ನಡುದಾರಿಯಲ್ಲಿ ಬೀಳಿಸಿ ಮಗ್ಗುಲು ಮುರಿಯುತ್ತದೆಯೇ? ಚೆನ್ನೈ ಅನುಭವ ನೋಡಿದರೆ ಮಗ್ಗುಲ ಮುರಿಯುವ ಸಾಧ್ಯತೆಯೇ ಹೆಚ್ಚು.

ನಮ್ಮ ಸಮಸ್ಯೆ ಏನು ಎಂದರೆ ನಮಗೇ ತೊಂದರೆ ಆಗುವ ವರೆಗೆ ಅದು ನಮ್ಮದೇ ತೊಂದರೆ ಎಂದು ನಾವು ಭಾವಿಸುವುದಿಲ್ಲ. ಶ್ರೀನಗರದಲ್ಲಿ ಇಂಥದೇ ಅನಾಹುತ ಆಗಿ ಬಹಳ ದಿನಗಳೇನೂ ಆಗಿರಲಿಲ್ಲ. ಕೇವಲ 15 ತಿಂಗಳು ಮಾತ್ರ ಕಳೆದಿವೆ. ಶ್ರೀನಗರದಲ್ಲಿ ಭಾರಿ ಮಳೆ ಬಂದು ಎಲ್ಲ ಕೊಚ್ಚಿ ಹೋಗುವುದಕ್ಕಿಂತ ಮುಂಚೆ ಉತ್ತರಾಖಂಡದಲ್ಲಿ ಕೇದಾರನಾಥ ದೇವಾಲಯದ ಪರಿಸರದಲ್ಲಿ ಇಂಥದೇ ಜಲಪ್ರಳಯ ಆಗಿತ್ತು. ಅದಕ್ಕಿಂತ ಮುಂಚೆ  ದಕ್ಷಿಣ ಭಾರತದಲ್ಲಿ ಇದೇ ತಮಿಳುನಾಡಿನ ಕರಾವಳಿಗೆ ಸುನಾಮಿ ಅಪ್ಪಳಿಸಿ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು. ನಡುವೆ, ಜಪಾನಿನಲ್ಲಿ ಸುನಾಮಿ ಅಬ್ಬರಕ್ಕೆ ಮನೆಗಳು ಮಾತ್ರವಲ್ಲ ಅಣುಸ್ಥಾವರಗಳೇ ಬಿದ್ದು ಬಿಟ್ಟುವು.

ಅಭಿವೃದ್ಧಿಯ ಉತ್ತುಂಗದಲ್ಲಿರುವ ನ್ಯೂಯಾರ್ಕ್‌, ನ್ಯೂಜೆರ್ಸಿ ನಗರಗಳೂ ಚಂಡಮಾರುತಕ್ಕೆ ಸಿಲುಕಿ ನಲುಗಿ ಹೋಗಿದ್ದು ಬಹಳ ಹಿಂದಿನ ಇತಿಹಾಸವೇನೂ ಅಲ್ಲ. ಅಂದರೆ ನಿಸರ್ಗ ನಮಗೆ ಪೂರ್ವದಿಂದ ಪಶ್ಚಿಮಕ್ಕೆ, ದಕ್ಷಿಣದಿಂದ ಉತ್ತರಕ್ಕೆ ಸೂಚನೆ ಕೊಡುತ್ತಲೇ ಇದೆ. ಒಂದೊಂದು ದೇಶದಲ್ಲಿಯೂ ಸೂಚನೆ ಕೊಡುತ್ತಿದೆ; ಜಗತ್ತಿನ ಆದ್ಯಂತವೂ ಇಂಗಿತ ನೀಡುತ್ತಿದೆ. ಅದಕ್ಕೆ ಯಾವ ಭಿನ್ನಭಾವವೂ ಇಲ್ಲ.  ಆದರೆ, ಇದೆಲ್ಲ ಅನಿರೀಕ್ಷಿತ ಎನ್ನುವಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ‘ಯಾವುದೋ ಚಂಡ ಮಾರುತ ಬೀಸಿತು, ಭಾರಿ ಮಳೆ ಬಂತು, ಏನು ಮಾಡಲು ಆಗುತ್ತದೆ’ ಎನ್ನುತ್ತೇವೆ. ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವಂತೆ ತಕ್ಷಣದ ಕ್ರಮಗಳನ್ನು ಕೈಗೊಳ್ಳುತ್ತೇವೆ. ಪ್ರಧಾನಿ ಬರುತ್ತಾರೆ.

ವೈಮಾನಿಕ ಸಮೀಕ್ಷೆ ನಡೆಸುತ್ತಾರೆ. ಒಂದಿಷ್ಟು ಪರಿಹಾರ ಕೊಡುತ್ತಾರೆ. ಪ್ರವಾಹ ಇಳಿದ ನಂತರ ಮತ್ತೆ ಜನರು ಸಾವರಿಸಿಕೊಂಡು ಬದುಕು ಕಟ್ಟಿಕೊಳ್ಳಲು ಹೊರಡುತ್ತಾರೆ. ಸತ್ತವರು ಸತ್ತರು. ಇದ್ದವರು ಬದುಕಬೇಕಲ್ಲ; ಗೇಣುಗಾತ್ರದ ಹೊಟ್ಟೆ ಹೊರೆಯಬೇಕಲ್ಲ? ನಿಸರ್ಗ ಹೊಂಚು ಹಾಕುತ್ತ ಇರುತ್ತದೆ. ಇಂದು ಚೆನ್ನೈಗೆ ಧಕ್ಕೆ ಮಾಡಿದ್ದು ನಾಳೆ ವಿಶಾಖಪಟ್ಟಣಕ್ಕೆ ಮಾಡಬಹುದು, ನಾಡಿದ್ದು ಕಚ್ಛ್‌ನಲ್ಲಿ, ಆಚೆ ನಾಡಿದ್ದು ಮುಂಬೈನಲ್ಲಿ... ಎಲ್ಲಿ ಎಂದು ಹೇಗೆ ಹೇಳುವುದು? ನಿಸರ್ಗದ್ದೇನೂ ತಪ್ಪು ಇಲ್ಲ. ಇದೆಲ್ಲ ನಾವು ಮಾಡಿಕೊಂಡಿದ್ದು, ನಾವೇ ಆಹ್ವಾನಿಸಿದ ಅನಾಹುತ ಎಂದು ನಮಗೆ ತಿಳಿಯುತ್ತಿಲ್ಲ. ಕಳೆದ ಹದಿನೈದು ಇಪ್ಪತ್ತು ದಿನ ಚೆನ್ನೈ ನಗರ ಅನುಭವಿಸಿದ ನರಕದ ಪಾಠಗಳು ಇಡೀ ದೇಶಕ್ಕೆ, ಇಡೀ ಮನುಷ್ಯ ಕುಲಕ್ಕೆ ಅನ್ವಯಿಸುತ್ತವೆ ಎಂದು ನಮಗೆ ಗೊತ್ತಾಗುತ್ತಿಲ್ಲ.

ಹಾಗಿದ್ದರೆ ಶ್ರೀನಗರ ನಮಗೆ ಏನು ಪಾಠ ಕಲಿಸಿತು? ಉತ್ತರಾಖಂಡದಿಂದ ಕಲಿತ ಪಾಠಗಳು ಏನು? ಈಗ ಚೆನ್ನೈ ನಗರದ ಅನುಭವದಿಂದ ನಾವು ಏನಾದರೂ ಪಾಠ ಕಲಿತಿದ್ದೇವೆ ಎಂದು ಅನಿಸುತ್ತದೆಯೇ? ಹಾಗಿದ್ದರೆ ಚೆನ್ನೈ ಪಾಠಗಳು ಏನು ಎಂದು ಬೆಂಗಳೂರಿನಲ್ಲಿ ನಮ್ಮ ಮುಖ್ಯಮಂತ್ರಿಗಳು ಒಂದು ಸಭೆ ಮಾಡಬೇಕಿತ್ತಲ್ಲ? ಬರೀ ಬೆಂಗಳೂರು ಏಕೆ? ದೆಹಲಿಯಲ್ಲಿ ಪ್ರಧಾನಿಯೇ ಸಭೆ ಕರೆಯಬೇಕಿತ್ತಲ್ಲ? ಇಲ್ಲ, ನಾವು ಪಾಠ ಕಲಿಯುವುದಿಲ್ಲ. ನಮಗೆ ಎಲ್ಲವೂ ಅಡ್‌ಹಾಕ್‌ ಆಗಿರಬೇಕು. ನಮ್ಮ ಯಾವ ರಾಜಕೀಯ ನಾಯಕರಿಗೂ ದೂರದೃಷ್ಟಿ ಎಂಬುದು ಇಲ್ಲ. ಎಲ್ಲವೂ ಆಗಿನ ಮಟ್ಟಿನ ತೀರ್ಮಾನಗಳು ಮಾತ್ರ. ‘ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು, ಸಾವಿರ ವರ್ಷ ಆಯುಷ್ಯ’ ಎಂದುಕೊಂಡವರು ನಾವು.

ಆಗಲೂ ನಾವು ದೂರು ಹೇಳಲು ಯಾರಾದರೂ ಒಬ್ಬರನ್ನು ಗುರಾಣಿ ಮಾಡಿ ಇಟ್ಟುಕೊಂಡಿರುತ್ತೇವೆ. ಅದು ಅಲ್ಲಿನ ಸ್ಥಳೀಯ ಸಂಸ್ಥೆಯ ಹೊಣೆ ಎಂದೋ, ಸ್ಥಳೀಯ ಸಂಸ್ಥೆಯು ರಾಜ್ಯ ಸರ್ಕಾರದ ಹೊಣೆ ಎಂದೋ, ರಾಜ್ಯ ಸರ್ಕಾರವು ಕೇಂದ್ರದ ಹೊಣೆ ಎಂದೋ ಒಬ್ಬರ ಮೇಲೆ ಒಬ್ಬರು ಹಾಕಿ ದೂರು ಹೇಳುತ್ತ ಕುಳಿತುಕೊಳ್ಳಬಹುದು ಎಂದು ನಮಗೆ ಗೊತ್ತಿದೆ. ಇದನ್ನೆಲ್ಲ ನಾವು ಮೊದಲೇ ಯೋಚಿಸಿ ಇಟ್ಟುಕೊಂಡಿರುತ್ತೇವೆ. ಯಾರಿಗೂ ತಮ್ಮ ಐದು ವರ್ಷಗಳ ಆಡಳಿತದ ಆಚೆ ಏನೂ ಕಾಣುವುದಿಲ್ಲ. ದೂರಗಾಮಿಯಾದ ಯೋಜನೆಗಳನ್ನು ರೂಪಿಸಬೇಕು ಎಂದರೆ ಇನ್ನೂ ಬೇಕಾದಷ್ಟು ಕಾಲ ಇದೆ ಎಂದುಕೊಳ್ಳುವ ಸರ್ಕಾರಗಳು ದುಡ್ಡು ಹೊಡೆಯುವಾಗ ‘ಇರುವುದು ಇಂದು ಒಂದೇ ದಿನ’ ಎನ್ನುವಂತೆ ನಡೆದುಕೊಳ್ಳುತ್ತವೆ.

‘ಇರುವುದು ಇಂದು ಒಂದೇ ದಿನ’ ಎಂದುಕೊಂಡಾಗ ನಾವು ಬಕಾಸುರರು ಆಗುತ್ತೇವೆ. ಹಿಡಿ ಅನ್ನ ತಿನ್ನುವ ಹೊಟ್ಟೆಗೆ ಬಂಡಿ ಅನ್ನವೂ ಸಾಕಾಗುವುದಿಲ್ಲ. ನಗರ ತಜ್ಞ ರವಿಚಂದರ್‌ ಮೊನ್ನೆ ನಮ್ಮ ಕಚೇರಿಗೆ ಬಂದಿದ್ದರು. ಅವರು ಬೆಂಗಳೂರು ಹೊರವಲಯದ ವೈಟ್‌ಫೀಲ್ಡ್‌ ಪ್ರದೇಶ ಕಳೆದ ಹತ್ತು ವರ್ಷಗಳಲ್ಲಿ ಹೇಗೆ ಬೇಕಾಬಿಟ್ಟಿಯಾಗಿ ಬೆಳೆದು ಬಿಟ್ಟಿದೆ ಎಂದು ಗೂಗಲ್‌ ನಕಾಶೆ ತೋರಿಸಿ ಹೇಳುತ್ತಿದ್ದರು. ಕೇವಲ ಹತ್ತು ವರ್ಷಗಳ ಹಿಂದೆ ಎಲ್ಲಿಯೋ ಒಂದೋ ಎರಡೋ ಇದ್ದ ಕಟ್ಟಡಗಳು ಈಗ ಇಡಿಕಿರಿದು ಎನ್ನುವಂತೆ ಒತ್ತೊತ್ತಾಗಿ ತುಂಬಿಕೊಂಡಿವೆ. ಈಗ ಅಲ್ಲಿ ಬದುಕಿಗೆ ಉಸಿರುಕಟ್ಟಿದೆ. ಹಾಗೆಂದು ವೈಟ್‌ಫೀಲ್ಡ್‌ ಬೆಳೆಯುವುದು ನಿಂತಿದೆಯೇ? ಬಕಾಸುರನ ಹಸಿವೆಗೆ ತಣಿವು ಎಂಬುದು ಇರುವುದೇ ಇಲ್ಲ. ಇನ್ನೂ ಬೇಕು. ಇನ್ನೂ ಬೇಕು.

ಚೆನ್ನೈ ಕೂಡ ಹೀಗೆಯೇ ಬೆಳೆಯಿತೇ? ಮಳೆ ನೀರು ಚರಂಡಿಗಳನ್ನು, ಕೆರೆಗಳನ್ನು, ಕಾಲುವೆಗಳನ್ನು, ನದಿಗಳನ್ನು, ಸಮುದ್ರವನ್ನು ಹೀಗೆ ಎಲ್ಲವನ್ನೂ ಆಪೋಶನ ತೆಗೆದುಕೊಂಡು ಚೆನ್ನೈ ಬೆಳೆಯಿತೇ? ನೀರಿನ ಹರಿವಿಗೆ ಅಡ್ಡಲಾಗಿ ಭೇದಿಸಲಾಗದ ಕಾಂಕ್ರೀಟ್‌ ಗೋಡೆಗಳನ್ನು ಅಲ್ಲಿ ಕಟ್ಟಿದ್ದರೇ? ಯಾವುದೇ ಒಂದು ಊರಿಗೆ ಒಂದು ಧಾರಣ ಶಕ್ತಿ ಎಂದು ಇರುತ್ತದೆ. ಅದನ್ನು ಮೀರಿ ಬೆಳೆದಾಗ ಅದರ ದುಷ್ಪರಿಣಾಮಗಳು ಗೋಚರಿಸತೊಡಗುತ್ತವೆ. ಕೆಂಪೇಗೌಡರು ಬೆಂಗಳೂರು ನಗರದ ನಾಲ್ಕು ಕಡೆಗಳಲ್ಲಿ ನಾಲ್ಕು ಗೋಪುರಗಳನ್ನು ಕಟ್ಟಿ ಅದನ್ನೇ ಹೇಳಲು ಹೊರಟಿದ್ದರೇ?

ನಿಜ. ಬೆಳೆಯುವ ಒಂದು ಊರಿಗೆ ಹೀಗೆ ಗಡಿಗಳನ್ನು ಹಾಕುವುದು ಕಷ್ಟ ಆಗಬಹುದು. ಆದರೆ, ಒಂದು ನಗರ ಹೇಗೆ ಬೆಳೆಯಬೇಕು ಎಂದು ಆ ಊರಿನ ಸ್ಥಳೀಯ ಸಂಸ್ಥೆಗೆ ಒಂದು ಯೋಜನೆ ಇರಬೇಕು. ಏಕೆಂದರೆ ಎಲ್ಲ ಕಟ್ಟಡಗಳಿಗೆ ಅದುವೇ ಅನುಮತಿ ಕೊಡುತ್ತದೆ. ಆದರೆ, ಸಮಸ್ಯೆ ಏನಾಗಿದೆ ಎಂದರೆ ಮೊದಲು ಇಂಥ ನಿರ್ಣಯಗಳು ದಾರಿ ತಪ್ಪಲು ಕಾರಣರಾಗುತ್ತಿದ್ದವರೇ ಈಗ ನಿರ್ಣಯ ಮಾಡುವ ಜಾಗದಲ್ಲಿ ಕುಳಿತುಕೊಂಡಿದ್ದಾರೆ. ಮಹಾನಗರ ಪಾಲಿಕೆಗಳಲ್ಲಿ, ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಲ್ಲಿ ಭೂ ಮಾಫಿಯಾದ ಪ್ರತಿನಿಧಿಗಳು ಬಂದು ಕುಳಿತುಕೊಳ್ಳುತ್ತಿದ್ದಾರೆ.

ಭೂ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳು ಸೇರಿಕೊಂಡು ಊರಿನ ಭವಿಷ್ಯವನ್ನು ಒತ್ತೆ  ಇಡುತ್ತಿದ್ದಾರೆ. ಅವರಿಗೆ ಇಂದು ಮಾತ್ರ ಇದೆ. ನಮಗೆ ನಾಳೆಯೂ ಇದೆ. ಅವರ ಕರ್ಮದ ಫಲವಾಗಿ ಭರದಿಂದ ಬೀಸುವ ಚಂಡ ಮಾರುತಕ್ಕೆ, ಉಕ್ಕಿ ಬರುವ ಪ್ರವಾಹಕ್ಕೆ ನಮ್ಮ ಇಂದು ಮತ್ತು ನಾಳೆಗಳು ಎರಡೂ ಬಲಿಯಾಗುತ್ತಿವೆ. ನಮ್ಮ ರಾಜಕಾರಣಿಗಳು ಎಲ್ಲವನ್ನೂ ನಿರಾಕರಿಸುತ್ತ ಇರುತ್ತಾರೆ. ಅವರು ಮುಖ್ಯವಾಗಿ ಹೊಣೆಯನ್ನು ನಿರಾಕರಿಸುತ್ತ ಇರುತ್ತಾರೆ. ಹೊಣೆಯನ್ನು ಹೊತ್ತುಕೊಂಡರೆ ಸಮಸ್ಯೆ ಉದ್ಭವಿಸುತ್ತದೆ. ಹೀಗೆಲ್ಲ ನಿಯಮ ಉಲ್ಲಂಘಿಸಿದರೆ ನಿನ್ನೆ ಏನೂ ಆಗಿಲ್ಲ, ನಾಳೆಯೂ ಏನೂ ಆಗುವುದಿಲ್ಲ ಎಂದು ಅವರಿಗೆ ನಂಬಿಕೆ. ಚೆನ್ನೈಗೆ ಮೊನ್ನೆಯಂಥ ಮಳೆ ಅಪ್ಪಳಿಸಿದ್ದು ನೂರು ವರ್ಷಗಳ ನಂತರ. ಐದು ವರ್ಷಗಳ ನಂತರ ಏನಾಗುತ್ತದೆ ಎಂಬ ಚಿಂತೆಯಿಲ್ಲದ ನಮ್ಮ ಆಡಳಿತಗಾರರಿಗೆ ನೂರು ವರ್ಷಗಳ ಚಿಂತೆ ಹೇಗೆ ಇರಲು ಸಾಧ್ಯ?

ಚೆನ್ನೈ ನಗರ ಯಾವಾಗಲೂ ನಾರುತ್ತ ಇರುತ್ತದೆ. ಅಲ್ಲಿ ಏನೆಲ್ಲ ಅನಾಹುತ ಆಗಿದೆ ಎಂದು ಅಲ್ಲಿಗೆ ಹೋಗಿ ನೋಡಿದರೆ ತಿಳಿಯುತ್ತದೆ. ಒಂದು ನದಿ ಆರೋಗ್ಯವಾಗಿ ಹರಿಯುತ್ತದೆ ಎಂದರೆ ಅದಕ್ಕೆ ಒಂದು ಪಥ ಎಂದು ಇರುತ್ತದೆ. ಈಗ ಒಂದೋ ನಾವು ನಮ್ಮ ನದಿಗಳ ಸಹಜ ಹರಿವಿಗೆ ಅಡ್ಡಿ ಮಾಡಿದ್ದೇವೆ. ಇಲ್ಲವೇ ನದಿಯ ನೀರಿಗೆ ನಗರದ ಕೊಳಚೆಯನ್ನೆಲ್ಲ ಹರಿಯಲು ಬಿಟ್ಟಿದ್ದೇವೆ. ಆದರೆ, ನೀರಿಗೂ ತನ್ನದೇ ಆದ ಒಂದು ನಿಯಮ ಎಂದು ಇರುತ್ತದೆ. ಅದರ ಹರಿವಿಗೆ ನಾವು ಭೇದಿಸಲಾಗದ ಕಾಂಕ್ರೀಟ್‌ ಕಟ್ಟೆಗಳನ್ನು ಕಟ್ಟಿದರೆ ಅದು ಇನ್ನೆಲ್ಲಿಯೋ ದಾರಿ ಮಾಡಿಕೊಂಡು ನುಗ್ಗುತ್ತದೆ. ಹಾಗೆ ನುಗ್ಗುವಾಗ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ಚೆನ್ನೈ ನಗರದಲ್ಲಿ ಇನ್ನೂರು ಎಕರೆಗೆ ಮಿತಗೊಳ್ಳಬೇಕಿದ್ದ ಕಸದ ಗುಡ್ಡೆಗಳು ಈಗ ಏಳುಪಟ್ಟು ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿವೆ.

ಚೆನ್ನೈ ನಗರದಲ್ಲಿ ಕಸದ ವಿಲೇವಾರಿ ಒಂದು ಸಮಸ್ಯೆಯಲ್ಲ ಎಂದುಕೊಂಡ ನಮಗೆಲ್ಲ ಅದು ನಿಜವಲ್ಲ ಎಂದು ಈಗ ತಿಳಿಯುತ್ತಿದೆ. ಚೆನ್ನೈ ಕಸ ನೀರಿನ ಹರಿವಿನ ಸಹಜ ದಾರಿಯನ್ನು ತಪ್ಪಿಸಿದೆ ಎಂದೂ ಈಗ ಗೊತ್ತಾಗಿದೆ. ಬೆಂಗಳೂರಿನಲ್ಲಿಯೂ ಕಸದ ಬೆಟ್ಟಗಳು ಏರುತ್ತಿವೆ. ಚೆನ್ನೈ ನಗರದ ಹಾಗೆ ಇಲ್ಲಿ ಭಾರಿ ಮಳೆ ಬರದೇ ಇರಬಹುದು. ಆದರೆ, ಜನರನ್ನು ನುಂಗಿ ನೊಣೆಯುವಂಥ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಎಂದು ಹೇಗೆ ನಂಬುವುದು? ಚೆನ್ನೈನಲ್ಲಿ ಮಳೆ ಬಂದರೆ ಬೆಂಗಳೂರಿನಲ್ಲಿ ಕೊಡೆ ಹಿಡಿಯಬೇಕು ಎಂದು ಯಾರೂ ಬಯಸುವುದಿಲ್ಲ. ಪ್ರತಿಯೊಂದು ನಗರಕ್ಕೂ ಒಂದೊಂದು ಭಿನ್ನ ಸವಾಲುಗಳು ಇರುತ್ತವೆ. ಕಾರಣಗಳು ಮಾತ್ರ ಒಂದೇ ಇರಬಹುದು. ಚೆನ್ನೈ ನಗರ ಬೇಕಾಬಿಟ್ಟಿಯಾಗಿ ಬೆಳೆಯಲು ಭೂ ಮಾಫಿಯಾ ಕಾರಣವಾಗಿದ್ದರೆ ಬೆಂಗಳೂರು ಅಡ್ಡಾದಿಡ್ಡಿಯಾಗಿ ಬೆಳೆಯಲು ಅದೇ ಮಾಫಿಯಾ ಕಾರಣವಾಗಿದೆ.

ಚೆನ್ನೈ ನಗರದಲ್ಲಿ ಎಲ್ಲ ಜಲಸ್ಥಾವರಗಳು ಕಾಣೆಯಾಗಿದ್ದರೆ ಅಥವಾ ಅತಿಕ್ರಮಣಗೊಂಡಿದ್ದರೆ ಬೆಂಗಳೂರಿನಲ್ಲಿಯೇನೂ ಅವು ನಳನಳಿಸುತ್ತ, ಕಂಗೊಳಿಸುತ್ತ ಇಲ್ಲ. ಚೆನ್ನೈನಲ್ಲಿ ಮಹಾಪೂರ ಬಂದು ಎಲ್ಲವೂ ಕೊಚ್ಚಿಕೊಂಡು ಹೋದರೆ ಇಲ್ಲಿ ಜೀವಜಲವೇ ಬತ್ತಿ ಹೋಗಿ ನಾವೆಲ್ಲ ಹುಳುಗಳ ಹಾಗೆ ಸತ್ತು ಹೋಗಿ ಬಿಡಬಹುದು... ಚೆನ್ನೈ ನಗರದಲ್ಲಿನ ಗೆಳೆಯ ಭರತ್‌ಗೆ ನಿನ್ನೆ ಕರೆ ಮಾಡಿದೆ. ಕಳೆದ ಹದಿನೈದು ದಿನಗಳಿಂದ ಅವರು ಸಿಕ್ಕಿರಲಿಲ್ಲ. ಅವಸರದಲ್ಲಿ ಇದ್ದಂತಿದ್ದರು. ‘ಹೇಗಿದ್ದೀರಿ’ ಎಂದೆ. ಅವರ ಮೊಬೈಲಿಗೆ ಆಗಷ್ಟೇ ಜೀವ ಬಂದಿತ್ತು. ‘ಈಗ... ಚೆನ್ನಾಗಿದ್ದೇನೆ’ ಎಂದು ದೀರ್ಘ ಉಸಿರು ತೆಗೆದುಕೊಂಡರು. ‘ಯಾರದೋ ಮನೆಯಲ್ಲಿ ನಿನ್ನೆ ವರೆಗೆ ಇದ್ದೆವು. ಇಂದು ನಮ್ಮ ಮನೆಗೆ ಎಲ್ಲ ಬಂದಿದ್ದೇವೆ.

ಈಗ ಯಾರೋ ಕಷ್ಟದಲ್ಲಿ ಇದ್ದಾರಂತೆ. ಅವರ ನೆರವಿಗೆ ಹೋಗಬೇಕು. ಮತ್ತೆ ಸಿಗುತ್ತೇನೆ’ ಎಂದು ಹೇಳಿದವರೇ ಫೋನು ಇಟ್ಟರು. ಅನೇಕ ಸಾರಿ ನಮಗೆ ಅನಿಸುತ್ತ ಇರುತ್ತದೆ: ನಾವೆಲ್ಲ ಎಷ್ಟು ಸ್ವಾರ್ಥಿಗಳು ಆಗಿದ್ದೇವೆ, ನಮಗೆ ನಮ್ಮ ಚಿಂತೆ ಮಾತ್ರ ಎಂದು. ಚೆನ್ನೈ ನಗರ ಅದನ್ನು ಸುಳ್ಳು ಮಾಡಿದೆ. ಎಲ್ಲ ಜಾತಿ–ಮತ–ಪಂಥಗಳನ್ನು ಮೀರಿ ಜನರು ಪರಸ್ಪರರ ಸಹಾಯಕ್ಕೆ ಧಾವಿಸಿದ್ದಾರೆ. ನಮ್ಮ ಇಂದು ಮತ್ತು ನಾಳೆಯ ಚಿಂತೆ ಇರುವವರು ಮಾತ್ರ ಹೀಗೆ ನಡೆದುಕೊಳ್ಳುತ್ತಾರೆ. ನಮ್ಮನ್ನು ಆಳುವವರ ಮನಸ್ಸಿನಲ್ಲಿಯೂ ಇಂಥ ಬೆಚ್ಚನೆಯ ಮನುಷ್ಯ ಭಾವನೆಗಳನ್ನು ತುಂಬಬೇಕು ಎಂದರೆ ಏನು ಮಾಡಬೇಕು?

Comments
ಈ ವಿಭಾಗದಿಂದ ಇನ್ನಷ್ಟು
ಈಗ ದಾರಿಗಳು ಅಗಲುವ ಸಮಯ...

ನಾಲ್ಕನೇ ಆಯಾಮ
ಈಗ ದಾರಿಗಳು ಅಗಲುವ ಸಮಯ...

27 Aug, 2017
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

ನಾಲ್ಕನೇ ಆಯಾಮ
ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

20 Aug, 2017
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

ನಾಲ್ಕನೇ ಆಯಾಮ
ಅಕಾಡೆಮಿಗಳ ಮೂಗುದಾರ ಬಿಚ್ಚುವುದು ಯಾವಾಗ?

13 Aug, 2017
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

ನಾಲ್ಕನೇ ಆಯಾಮ
ಮತ್ತೆ ಜಲಸಂಕಟದೆಡೆಗೆ ಕರ್ನಾಟಕ...

6 Aug, 2017
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

ನಾಲ್ಕನೇ ಆಯಾಮ
ಧರ್ಮಸಿಂಗ್‌ ಕುರಿತು ಹೀಗೊಂದಿಷ್ಟು ನೆನಪುಗಳು...

30 Jul, 2017