ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ

ಪ್ರವಾಹ: 3.5 ಲಕ್ಷ ಜನರ ಸ್ಥಳಾಂತರ

ಮಳೆಯಿಂದ ಜನರನ್ನು ರಕ್ಷಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಎನ್‌ಡಿಆರ್ಎಫ್, ಸೇನೆ, ರಾಜ್ಯ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿದ ಕಾರ್ಯಾಚರಣೆಯಲ್ಲಿ  ಈವರೆಗೆ ಒಟ್ಟು 3.5 ಲಕ್ಷ ಜನರನ್ನು ರಕ್ಷಿಸಲಾಗಿದೆ.

ಚೆನ್ನೈ(ಪಿಟಿಐ): ಮಳೆಯಿಂದ ತೊಂದರೆ ಗೊಳಗಾಗಿರುವ ಜನರನ್ನು ರಕ್ಷಿಸುವ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಎನ್‌ಡಿಆರ್ಎಫ್, ಸೇನೆ, ರಾಜ್ಯ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸೇರಿದಂತೆ ವಿವಿಧ ಸಂಸ್ಥೆಗಳು ನಡೆಸಿದ ಕಾರ್ಯಾಚರಣೆಯಲ್ಲಿ  ಈವರೆಗೆ ಒಟ್ಟು 3.5 ಲಕ್ಷ ಜನರನ್ನು ರಕ್ಷಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರೈಲು ಸಂಚಾರ ಆರಂಭ: ಚೆನ್ನೈ ಕೇಂದ್ರ ಮತ್ತು ದಕ್ಷಿಣ ಚೆನ್ನೈನೊಂದಿಗೆ ಸಂಪರ್ಕ ಕಲ್ಪಿಸುವ ಇಗ್ಮೋರ್‌–ತಂಬರಂ ಮಾರ್ಗದಲ್ಲಿ ಶನಿವಾರ ರೈಲುಸಂಚಾರ ಆರಂಭ ವಾಗಿದೆ.

ಸಾರಿಗೆ ಬಸ್‌ಗಳ ಸೇವೆ ಉಚಿತ: ಡಿಸೆಂಬರ್‌ 8ರವರೆಗೆ ಸರ್ಕಾರಿ ಸಾರಿಗೆ ಬಸ್‌ಗಳ ಸೇವೆ ಉಚಿತ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಸೇವೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸೀಮಿತವಾಗಿರುತ್ತದೆಯೇ ಅಥವಾ ಆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳಿಗೆ ಅನ್ವಯವಾಗುತ್ತದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ.

ಕೆರೆ ಏರಿ ಒಡೆದ ವದಂತಿ: ಸಂತ್ರಸ್ತರಿಗೆ ಚೆಂಬರಪಕ್ಕಂ ಕೆರೆ ಸಮೀಪದ ಬಯಲು ಪ್ರದೇಶದಲ್ಲಿ ತಾತ್ಕಾಲಿಕ ಬಿಡಾರಗಳಲ್ಲಿ ವಸತಿ ಕಲ್ಪಿಸಲಾಗಿದೆ.  ಶುಕ್ರವಾರ ರಾತ್ರಿ ಕೆರೆಯ ಏರಿ ಒಡೆದು ನೀರು ಬಿಡಾರಗಳತ್ತ ನುಗ್ಗುತ್ತಿದೆ ಎಂಬ ವದಂತಿ ಹರಡಿತ್ತು. ಗಾಬರಿ ಬಿದ್ದ ಜನತೆ ಬಿಡಾರಗಳಿಂದ ಹೊರ ಓಡಿದ ಘಟನೆ ನಡೆದಿದೆ. ಆದರೆ ಸ್ಥಳದಲ್ಲಿದ್ದ ಪೊಲೀಸರು, ಕೆರೆ ಏರಿ ಒಡೆದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಪರಿಸ್ಥಿತಿ ತಿಳಿಯಾಗಿದೆ.

ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ
ನವದೆಹಲಿ ವರದಿ:
ಚೆನ್ನೈ ಮಳೆ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 2ಲಕ್ಷ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜತೆಗೆ ಗಾಯಾಳುಗಳಿಗೆ ₹ 50 ಸಾವಿರ ಪರಿಹಾರ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಪುದುಚೇರಿಯಲ್ಲಿ 8,955 ಹೆಕ್ಟೇರ್‌ ಭತ್ತದ ಬೆಳೆ ನಾಶ: ಪುದುಚೇರಿ ಹಾಗೂ ಇತರೆಡೆ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ  ಶನಿವಾರವೂ ಮುಂದುವರೆದಿದೆ. ಇದ ರಿಂದ ಪರಿಹಾರ ಹಾಗೂ ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ. ಮಳೆಯಿಂದಾಗಿ ಸುಮಾರು 8,955 ಹೆಕ್ಟೇರ್‌ ಭತ್ತದ ಬೆಳೆ ನಾಶವಾಗಿದೆ ಎಂದು ಮುಖ್ಯಮಂತ್ರಿ ಎನ್‌.ರಂಗಸ್ವಾಮಿ ಅವರು ತಿಳಿಸಿದ್ದಾರೆ. ಅಪಾರ ಪ್ರಮಾಣದ ಭತ್ತದ ಬೆಳೆ ನಾಶದಿಂದಾಗಿ ಸುಮಾರು  11 ಸಾವಿರ ರೈತರು ನಷ್ಟ ಅನುಭವಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪ್ರತಿ ಹೆಕ್ಟೇರ್‌ಗೆ 20 ಸಾವಿರದಂತೆ ಈವರೆಗೆ ₹ 17.91 ಕೋಟಿ ಪರಿಹಾರ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

ಸೇನಾ ಮುಖ್ಯಸ್ಥರ ವೈಮಾನಿಕ ಸಮೀಕ್ಷೆ
ಚೆನ್ನೈ (ಪಿಟಿಐ):
ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್  ಶನಿವಾರ ಪ್ರವಾಹಪೀಡಿತ ಚೆನ್ನೈ ನಗರದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ತಮಿಳುನಾಡು ಸರ್ಕಾರಕ್ಕೆ ಅಗತ್ಯವಿದ್ದಷ್ಟೂ ದಿನ ಸೇನಾ ಸಿಬ್ಬಂದಿ ರಾಜ್ಯದಲ್ಲಿ ಎಕ್ಷಣಾ ಕಾರ್ಯಾಚರಣೆ ಮುಂದುವರೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ತಿಳಿಸಿದಲ್ಲಿ ಮತ್ತಷ್ಟು ಸಿಬ್ಬಂದಿ, ಅಗತ್ಯ ಸಲಕರಣೆಗಳು ಮತ್ತು ವೈದ್ಯರ ತಂಡವನ್ನು ಒದಗಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಸೇನೆ ಈಗಾಗಲೆ ನಗರದ ಹಲವೆಡೆ  ವೈದ್ಯಕೀಯ ಕ್ಯಾಂಪ್‌  ಆರಂಭಿಸಿದೆ. ಸೇನೆ ಈವರೆಗೆ ಒಟ್ಟು 5,500 ಜನರನ್ನು  ರಕ್ಷಿಸಿದೆ.

Comments