ಆಹಾರ, ನೀರಿಗೆ ಹಾಹಾಕಾರ , ಈವರೆಗೆ 3.5 ಲಕ್ಷ ಜನರ ಸ್ಥಳಾಂತರ

ಚೆನ್ನೈ ಇನ್ನೂ ನೀಗದ ಸಂಕಟ

ಮಳೆಯಿಂದ ತತ್ತರಿಸಿದ್ದ ಚೆನ್ನೈ  ಶನಿವಾರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದರೂ,  ನಗರದ ಕೆಲವು ಭಾಗಗಳಲ್ಲಿ ನೀರು ಇನ್ನೂ ನಿಂತಿದೆ. ವಾಹನಗಳು ಸಂಚಾರ ಆರಂಭಿಸಿವೆ. ಕೆಲವೆಡೆ ವಿದ್ಯುತ್‌ ಪೂರೈಕೆ ಮತ್ತು ದೂರವಾಣಿ ಸಂಪರ್ಕ ಕಾರ್ಯಾರಂಭ ಮಾಡಿದೆ.

ಚೆನ್ನೈ (ಪಿಟಿಐ): ಮಳೆಯಿಂದ ತತ್ತರಿಸಿದ್ದ ಚೆನ್ನೈ  ಶನಿವಾರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದರೂ,  ನಗರದ ಕೆಲವು ಭಾಗಗಳಲ್ಲಿ ನೀರು ಇನ್ನೂ ನಿಂತಿದೆ. ವಾಹನಗಳು ಸಂಚಾರ ಆರಂಭಿಸಿವೆ. ಕೆಲವೆಡೆ ವಿದ್ಯುತ್‌ ಪೂರೈಕೆ ಮತ್ತು ದೂರವಾಣಿ ಸಂಪರ್ಕ ಕಾರ್ಯಾರಂಭ ಮಾಡಿದೆ.

ಆದರೆ ಅಗತ್ಯ ವಸ್ತುಗಳ ಪೂರೈಕೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಕೊಟ್ಟೂರಪುರಂ, ಉಪನಗರಗಳಾದ ಮುದಿಚೂರ್‌ ಮತ್ತು ಪಲ್ಲಿಕ್ಕಾರನೈಗಳಲ್ಲಿ ಮಳೆ ನೀರು ಅಪಾಯಕಾರಿ ಮಟ್ಟದಲ್ಲೇ ನಿಂತಿದೆ. ಈ ಪ್ರದೇಶಗಳಲ್ಲಿನ ಮನೆಗಳ ತಾರಸಿ ಮೇಲೆ ನೆಲೆಸಿರುವ ಜನರು ಕುಡಿಯುವ ನೀರು, ಹಾಲು ಮತ್ತು ಆಹಾರದ ಪೊಟ್ಟಣಗಳನ್ನು ಹೊತ್ತು ಬರುವ ರಕ್ಷಣಾ ಕಾರ್ಯಕರ್ತರನ್ನು ಕಾದು ಕುಳಿತಿದ್ದಾರೆ.

ನಗರದಲ್ಲಿ ಶುದ್ಧ ಕುಡಿಯುವ ನೀರಿಗೆ ಅತೀವ ಕೊರತೆ ಉಂಟಾಗಿದೆ. ಬಾಟಲಿ ನೀರಿನ ಬೆಲೆ ವಿಪರೀತ ಹೆಚ್ಚಿದೆ. ‘ಕುಡಿಯುವ ನೀರೂ ನಮಗೆ ಕನಸಿನ ಮಾತಾಗಿದೆ’ ಎಂದು ಮಳೆ ಸಂತ್ರಸ್ತರು ಆರೋಪಿಸಿದ್ದಾರೆ. ಇದರ ಜತೆಗೆ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.

ಸರ್ಕಾರಿ ಸ್ವಾಮ್ಯದ ಹಾಲು ಒಕ್ಕೂಟ ಮಂಡಳಿ– ಆವಿನ್‌ನ ಹಾಲು ಪೂರೈಕೆ ಬಹುತೇಕ ಆರಂಭವಾಗಿದೆ. ಅವುಗಳನ್ನು ಹಾಲು ಮಾರಾಟ ಮಳಿಗೆಗಳಲ್ಲಿ ಸಾಮಾನ್ಯ ಬೆಲೆಗೇ ಮಾರಾಟ ಮಾಡಲಾಗುತ್ತಿದೆ. ಆದರೆ ಪೂರೈಕೆ ಸ್ಥಗಿತಗೊಂಡಿರುವುದರಿಂದ ತರಕಾರಿಗಳ ಬೆಲೆ ಗಗನಮುಟ್ಟಿದೆ.

ಸ್ಥಳೀಯ ಸಂಸ್ಥೆಗಳು, ರಾಜ್ಯ ಸರ್ಕಾರದ ಇಲಾಖೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ಜ್ಞಾನದೇಸಿಕನ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳು ಅತ್ಯಂತ ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂದು ಅವರು ಸಮರ್ಥನೆ ನೀಡಿದ್ದಾರೆ.

ನಗರದ ಕೆಲವೆಡೆ ಎಟಿಎಂಗಳು ಕಾರ್ಯಾರಂಭ ಮಾಡಿದ್ದು, ಅವುಗಳ ಮುಂದೆ ಜನರ ಸಾಲುಗಟ್ಟಿ ನಿಂತಿದ್ದಾರೆ. ಭಾನುವಾರವೂ ಬ್ಯಾಂಕ್‌ಗಳು ತೆರೆದಿ ರಲಿವೆ ಎಂದು ಮೂಲಗಳು ತಿಳಿಸಿವೆ.

30 ಶವ: ಚೆನ್ನೈನ ರೋಯಾಪೇಟ್‌ನ ಸರ್ಕಾರಿ ಆಸ್ಪತ್ರೆಗೆ ಶನಿವಾರ 30 ದೇಹಗಳನ್ನು ತರಲಾಗಿದೆ. ಅವು ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಶವಗಳು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ ಒಬ್ಬರ ಗುರುತೂ ಪತ್ತೆಯಾಗಿಲ್ಲ.  ಗುರುವಾರ ಇಲ್ಲಿನ ಖಾಸಗಿ ಆಸ್ಪತ್ರೆ ಜಲಾವೃತಗೊಂಡು ಆಮ್ಲಜನಕ ಪೂರೈಕೆ ಸ್ಥಗಿತಗೊಂಡು ಮೃತಪಟ್ಟ 18 ಮಂದಿಯ ಶವಗಳಲ್ಲಿ 14 ಶವಗಳನ್ನೂ ಇದೇ ಆಸ್ಪತ್ರೆಗೆ ತರಲಾಗಿದೆ.

ಇಂಧನ ಬರ
ಚೆನ್ನೈನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ರಸ್ತೆಗಳಲ್ಲಿದ್ದ ಪ್ರವಾಹದ ನೀರು ತೆರವಾಗುತ್ತಿದ್ದಂತೆ, ವಾಹನಗಳು ರಸ್ತೆಗೆ ಇಳಿದಿವೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್‌ ಸಿಗದೆ ಜನರು ಪರದಾಡುತ್ತಿದ್ದಾರೆ.

ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿರುವುದರಿಂದ  ಬಹುತೇಕ ಪೆಟ್ರೋಲ್ ಬಂಕ್‌ಗಳು ಮುಚ್ಚಿವೆ. ಮಾರಾಟ ಆರಂಭಿಸಿರುವ ಕೆಲವೇ ಬಂಕ್‌ಗಳ ಎದುರು ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ.

ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಕೊರತೆ ಇಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ತಿಳಿಸಿದೆ.
‘ಪ್ರವಾಹದ ನೀರು ತುಂಬಿರುವುದರಿಂದ ಬಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ವಾಹನಗಳಿಗೆ ಇಂಧನ ತುಂಬಿಸುವಲ್ಲಿ ವಿದ್ಯುತ್ ಬಳಸಬೇಕು. ನೀರು ನಿಂತಿರುವುದರಿಂದ ವಿದ್ಯುತ್ ಬಳಸುವುದು ಅಪಾಯಕಾರಿ.

ಹೀಗಾಗಿ ಹಲವು ಬಂಕ್‌ಗಳು ಮುಚ್ಚಿವೆ. ಜತೆಗೆ ಕೆಲ ಬಂಕ್‌ಗಳಲ್ಲಿ ಸಿಬ್ಬಂದಿ ಕೊರತೆ ಇದೆ’ ಎಂದು ಐಒಸಿ ತಿಳಿಸಿದೆ. ‘ನಗರದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದೆ. ಆದರೆ ಅವುಗಳನ್ನು ಬಂಕ್‌ಗಳಿಗೆ ಸರಬರಾಜು ಮಾಡಲು ಟ್ಯಾಂಕರ್‌ಗಳ ಕೊರತೆ ಇದೆ. ಟ್ಯಾಂಕರ್‌ ಚಾಲಕರೂ ಸಿಗುತ್ತಿಲ್ಲ. ಹೀಗಾಗಿ ಬಂಕ್‌ಗಳಲ್ಲಿ ಇಂಧನ ಲಭ್ಯವಿಲ್ಲ’ ಎಂದು ಐಒಸಿ ಸ್ಪಷ್ಟಪಡಿಸಿದೆ.


ಉಚಿತ ಬಸ್‌
ಬೆಂಗಳೂರು: ಚೆನ್ನೈ ಮಳೆ ಸಂತ್ರಸ್ತರಿಗಾಗಿ  ಕೆಎಸ್‌ಆರ್‌ಟಿಸಿ ಚೆನ್ನೈನಿಂದ ಬೆಂಗಳೂರಿಗೆ ಒಂದು ವಾರ ಉಚಿತ ಬಸ್‌ಗಳ ಸೇವೆ ಒದಗಿಸಲಿದೆ. ಐರಾವತ ಕ್ಲಬ್‌ ಕ್ಲಾಸ್‌,  ಕರ್ನಾಟಕ ಸಾರಿಗೆ ಬಸ್‌ಗಳು ಬೆಳಿಗ್ಗೆ 10, ಮಧ್ಯಾಹ್ನ 2 ಹಾಗೂ ಸಂಜೆ 5 ಗಂಟೆಗೆ ಚೆನ್ನೈ ಯಿಂದ ಹೊರಡಲಿವೆ.

Comments