ಗುಜರಾತ್ ಅಭಿವೃದ್ಧಿ ಮಾದರಿ ಮರು ಅವಲೋಕನಕ್ಕೆ ಸಕಾಲ

ಗ್ರಾಮೀಣ ಭಾಗದ ಜನರ ಅಗತ್ಯಗಳನ್ನು ಬಿಜೆಪಿ ಕಡೆಗಣಿಸಲಾಗದು ಎಂಬುದಕ್ಕೆ ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶ ಎಚ್ಚರಿಕೆ ಗಂಟೆಯಾಗಿದೆ.

ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ, ಇತ್ತೀಚಿನ ದಿನಗಳಲ್ಲಿ  ಬಿಜೆಪಿ ಅನುಭವಿಸಿದ ಮತ್ತೊಂದು ಹೊಡೆತ. ದೆಹಲಿ ಹಾಗೂ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶಗಳ ನಂತರ ಪಕ್ಷ ಎದುರಿಸುತ್ತಿರುವ ಮತ್ತೊಂದು ಸೋಲು ಇದು.

2000ದಿಂದ ರಾಜ್ಯದಲ್ಲಿ ಆಡಳಿತದ ಎಲ್ಲಾ ಹಂತಗಳನ್ನು ಆವರಿಸಿಕೊಂಡಿದ್ದ ಬಿಜೆಪಿಯ ಹಿಡಿತ ಸಡಿಲಗೊಂಡಿರುವುದು ಈ ಫಲಿತಾಂಶಗಳಲ್ಲಿ ವ್ಯಕ್ತ. ಮೂರು ಅವಧಿಗೆ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ಸೂತ್ರ ಹಿಡಿದಿದ್ದ ನರೇಂದ್ರ ಮೋದಿಯವರು ಪ್ರಧಾನಿಯಾಗಿ ದೆಹಲಿಗೆ ವರ್ಗಾವಣೆಗೊಂಡ ನಂತರ ರಾಜ್ಯದಲ್ಲಿ ವ್ಯಕ್ತವಾಗಿರುವ ಜನಾಭಿಪ್ರಾಯ ಇದು.

2017ರಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಭಾವಭಿತ್ತಿಯನ್ನು ಗ್ರಹಿಸಲು ಇದೊಂದು ಅವಕಾಶವನ್ನಾಗಿ ಪರಿಗಣಿಸಬೇಕು. 

ಈ ಫಲಿತಾಂಶ ಬಿಜೆಪಿಗೆ ಖುಷಿ ತರುವಂತಹದ್ದೇನಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಒಂದಿಷ್ಟು ಹಿಗ್ಗು ತರುವಂತಹದ್ದಾಗಿದೆ. 2001ರಿಂದ 2014ರ ಆರಂಭದ ಅವಧಿಯವರೆಗೆ ನರೇಂದ್ರ ಮೋದಿ ಅವರು ಆಡಳಿತ ಸೂತ್ರ ಹಿಡಿದಿರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಕಳೆಗುಂದಿತ್ತು. ಈಗ ಪ್ರಮುಖ ಆರು ನಗರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ತನ್ನ ಹಿಡಿತವನ್ನು ಮತ್ತೆ ಪ್ರದರ್ಶಿಸಿದೆ.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯ ಸಾಧನೆ ಕಳಪೆಯಾಗಿಲ್ಲ. ಆದರೆ ಜಿಲ್ಲಾ ಪಂಚಾಯಿತಿಗಳಲ್ಲಿ ಮೂರನೇ ಎರಡರಷ್ಟನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿರುವುದು ಹೊಸ ಬೆಳವಣಿಗೆ. ಸ್ವತಃ ಮೋದಿ, ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಹಾಗೂ ಎಲ್.ಕೆ. ಅಡ್ವಾಣಿ ಅವರಿಗೆ ಸಂಬಂಧಿಸಿದ ಪ್ರದೇಶಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹಾಗೆಯೇ ತಾಲ್ಲೂಕು ಪಂಚಾಯಿತಿಗಳಲ್ಲೂ ಕಾಂಗ್ರೆಸ್ ಸಾಧನೆ ಮಹತ್ವದ್ದು. ಇದು ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಬೇಕು.

2014ರ ಲೋಕಸಭಾ ಚುನಾವಣೆ ವೇಳೆ ಅಭಿವೃದ್ಧಿ ಎಂದರೆ ‘ಗುಜರಾತ್ ಮಾದರಿ’ ಎಂಬುದು ಬಿಜೆಪಿಗೆ ದೊಡ್ಡ ಪ್ರಚಾರ ಸಾಧನವಾಗಿತ್ತು. ಆದರೆ ಈಗ ರಾಜ್ಯದ ಹೆಚ್ಚಿನ ಭಾಗದಲ್ಲಿ ಪಕ್ಷ ತಿರಸ್ಕೃತಗೊಂಡಿದೆ ಎಂಬುದು ವಿಪರ್ಯಾಸ.  ಗುಜರಾತ್‌ನ ಕೈಗಾರಿಕಾ ಸ್ನೇಹಿ ಹಾಗೂ ನಗರ ಕೇಂದ್ರಿತ ನೀತಿಗಳಿಂದಾಗಿ ನಗರಗಳು ಹಾಗೂ ನಗರಗಳ ಮಧ್ಯಮವರ್ಗಗಳು ಪ್ರಯೋಜನ ಪಡೆದುಕೊಂಡಿವೆ ಎಂಬುದೂ ನಿಜ. ಆದರೆ ರಾಜ್ಯದ ಬಹುಸಂಖ್ಯೆಯ ಜನರು ಈಗಲೂ ಜೀವಿಸುವುದು ಹಳ್ಳಿಗಳಲ್ಲಿ ಎಂಬ ವಾಸ್ತವ ಮರೆಯುವಂತಿಲ್ಲ.

ನಗರ ಹಾಗೂ ಗ್ರಾಮೀಣ ಬದುಕಿನ ಬಿರುಕು ದೊಡ್ಡದಾಗುವುದು ‘ಮಾದರಿ ಅಭಿವೃದ್ಧಿ’ ಎನಿಸಿಕೊಳ್ಳದು. ಗುಜರಾತ್‌ನ ಅನೇಕ ಹಳ್ಳಿಗಳಲ್ಲಿ ಈಗಲೂ ವಿದ್ಯುತ್ ಇಲ್ಲ. ಹಾಗೆಯೇ ರಾಜ್ಯದ ಜನಸಂಖ್ಯೆಯ ಶೇ 28ರಷ್ಟಿರುವ ದಲಿತರು ಹಾಗೂ ಆದಿವಾಸಿಗಳು, ಶಿಕ್ಷಣ ಹಾಗೂ ಆರೋಗ್ಯ ಸೂಚ್ಯಂಕಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕೆಳಮಟ್ಟದಲ್ಲಿದ್ದಾರೆ ಎಂಬುದು ಅಭಿವೃದ್ಧಿಯಲ್ಲ.

ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲಿನ ರೈತರಿಗೆ ಹೋಲಿಸಿದರೆ ಗುಜರಾತ್ ರೈತರ ಸಂಕಷ್ಟ ಅಷ್ಟೊಂದು ಪ್ರಚಾರ ಗಳಿಸಿಲ್ಲ. ಆದರೆ ಇಳಿಮುಖವಾಗುತ್ತಿರುವ ಹತ್ತಿ ಬೆಲೆ ಗುಜರಾತ್ ರೈತರನ್ನೂ ಸಂಕಷ್ಟಕ್ಕೆ ದೂಡಿದೆ. ಇದೂ ಕೂಡ ಈ ಚುನಾವಣೆಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರಿದೆ.

ರಾಷ್ಟ್ರದಲ್ಲೇ ಅತಿ ಹೆಚ್ಚು ಹತ್ತಿ ಬೆಳೆ ಬೆಳೆಯುವ ಪ್ರದೇಶವನ್ನು ಗುಜರಾತ್ ಹೊಂದಿದೆ. ಹತ್ತಿ ಬೆಲೆ ಕುಸಿಯಲು ಜಾಗತಿಕ ಅಂಶಗಳು ಕಾರಣ ಎಂದು ಸರ್ಕಾರ ನೆಪ ಹೇಳಬಹುದು. ಆದರೆ ಗ್ರಾಮೀಣ ಜನರ ಅಭಿವೃದ್ಧಿ ಅಗತ್ಯಗಳನ್ನು ಕಡೆಗಣಿಸಲಾಗಿದೆ ಎಂಬಂತಹ ಪ್ರಜ್ಞೆ ಜನಮಾನಸದಲ್ಲಿ ಬೆಳೆದಿರುವುದನ್ನು ಅಲ್ಲಗಳೆಯಲಾಗದು.

ಇದೇ ಸಂದರ್ಭದಲ್ಲಿ ಮೀಸಲಾತಿಗೆ ಆಗ್ರಹಿಸಿ ಗುಜರಾತ್‌ನ ಪಟೇಲ್ ಸಮುದಾಯ ಇತ್ತೀಚೆಗೆ ನಡೆಸುತ್ತಿರುವ ಚಳವಳಿಯಾಚೆಗೂ ಜನಸಮುದಾಯದ ಅಸಮಾಧಾನದ ಕಾರಣಗಳನ್ನು ಸರ್ಕಾರ ಗುರುತಿಸುವುದು ಅತ್ಯವಶ್ಯ ಎಂಬುದು ಈ ಚುನಾವಣೆ ಫಲಿತಾಂಶದಿಂದ ಹೊರಹೊಮ್ಮಿರುವ ಪಾಠವಾಗಿದೆ. ಅಲ್ಲದೆ, ದಶಕಕ್ಕೂ ಹೆಚ್ಚು ಕಾಲ ಗುಜರಾತ್‌ನಲ್ಲಿ ಅಪ್ರಸ್ತುತವಾಗಿದ್ದ  ಕಾಂಗ್ರೆಸ್ ಪಕ್ಷ ಕಡೆಗೂ ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ.

ದೊಡ್ಡಮಟ್ಟದಲ್ಲಿ ಚೇತರಿಸಿಕೊಳ್ಳಲು ಕಾಂಗ್ರೆಸ್‌ಗೆ ಈಗ ಅವಕಾಶ ಲಭ್ಯವಾದಂತಾಗಿದೆ. ಆದರೆ ಕಾಂಗ್ರೆಸ್ ಒಡೆದ ಮನೆಯಾಗಿಯೇ ಉಳಿದಿದೆ. ಹೀಗಿದ್ದೂ ಮತ್ತೊಂದು ಪರ್ಯಾಯವಿಲ್ಲದೆ ಮತದಾರರು ಕಾಂಗ್ರೆಸ್‌ನತ್ತ ಒಲವು ತೋರಿದ್ದಾರೆ ಎನ್ನಬಹುದು. ಹೀಗಾಗಿ 2017ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್ ಅಭಿವೃದ್ಧಿ ಮಾದರಿಗೆ ಹೊಸದೊಂದು ದೃಷ್ಟಿಕೋನವನ್ನು ಜನರ ಮುಂದಿಡಬೇಕಾದ ಅನಿವಾರ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗಿದೆ.

Comments