ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರುಪೇಟೆಯ ಸೂಚ್ಯಂಕಗಳು ಹೆಚ್ಚು ಒತ್ತಡದಲ್ಲಿದ್ದು ಇಳಿಮುಖ ಹಾದಿಯಲ್ಲಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟದ ಒತ್ತಡ ಹೇರುತ್ತಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳ ಖರೀದಿಯು ಇಳಿಕೆಯನ್ನು ತಡೆಯದಾಗಿದೆ. ಚೆನ್ನೈನಲ್ಲಿ ಉದ್ಭವಿಸಿದ್ದ ಪ್ರವಾಹ ಪರಿಸ್ಥಿತಿಯು ಈ ಇಳಿಕೆಗೆ ಪೂರಕ ಅಂಶವಾಗಿದೆ.

ಷೇರುಪೇಟೆಯ ಸೂಚ್ಯಂಕಗಳು ಹೆಚ್ಚು ಒತ್ತಡದಲ್ಲಿದ್ದು ಇಳಿಮುಖ ಹಾದಿಯಲ್ಲಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟದ ಒತ್ತಡ ಹೇರುತ್ತಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳ ಖರೀದಿಯು ಇಳಿಕೆಯನ್ನು ತಡೆಯದಾಗಿದೆ. ಚೆನ್ನೈನಲ್ಲಿ ಉದ್ಭವಿಸಿದ್ದ ಪ್ರವಾಹ ಪರಿಸ್ಥಿತಿಯು ಈ ಇಳಿಕೆಗೆ ಪೂರಕ ಅಂಶವಾಗಿದೆ. 

ಆಟೊ ವಲಯದ ಪ್ರಮುಖ ತಯಾರಿಕಾ ಕೇಂದ್ರವಾದ ಚೆನ್ನೈ ನಲ್ಲಿನ ಪರಿಸ್ಥಿತಿಯು ಆ ವಲಯದ ಕಂಪೆನಿಗಳ ಸಾಧನೆಯ ಮೇಲೆ ಹೆಚ್ಚಿನ ಋಣಾತ್ಮಕ ಪ್ರಭಾವ ಬೀರಬಹುದಾಗಿದ್ದು, ಇದು ಇತರೆ ವಲಯದ ಕಂಪೆನಿಗಳ ಮೇಲೆ ಎಂತಹ ಪ್ರಭಾವ ಬೀರುತ್ತದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. 

ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿನ ಗಾತ್ರವು ಕ್ಷೀಣಿಸಿರು ವುದಲ್ಲದೆ  ಅಗ್ರಮಾನ್ಯ ಕಂಪೆನಿಗಳ ಷೇರಿನ ಬೆಲೆಗಳನ್ನು ಕುಸಿಯುವಂತೆ ಮಾಡಿದೆ.

ಈ ವಾರ, ಭಾರ್ತಿ ಏರ್‌ಟೆಲ್ ಕಂಪೆನಿಯು ಶೇ 6ರಷ್ಟು ಕುಸಿದರೆ,  ಟಾಟಾ ಮೋಟಾರ್ಸ್‌ ಕಂಪೆನಿಯ ಷೇರಿನ ಬೆಲೆ ಸಹ ₹424 ರ ಸಮೀಪದಿಂದ ₹399 ರವರೆಗೂ ಕುಸಿತ ಕಂಡಿತು. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ಸ್ ಕಂಪೆನಿಯ ಷೇರಿನ ಬೆಲೆ ₹427 ರ ಹಂತ ದಿಂದ  ₹464 ವರೆಗೂ ತಲುಪಿ  ₹ 448 ರಲ್ಲಿ ಕೊನೆಗೊಂಡಿತು. 

ಮುಂದಿನ ವಾರದಿಂದ ಇಂಡಿಯನ್ ರೈಲ್ವೆ ಕಾರ್ಪೊರೇಷನ್ ಕಂಪೆನಿಯು ಸುಮಾರು ನಾಲ್ಕೂವರೆ ಕೋಟಿ ಮೌಲ್ಯದ ತೆರಿಗೆ ಮುಕ್ತ ಬಾಂಡ್‌ಗಳನ್ನು ವಿತರಿಸಲಿದ್ದು, ಪೇಟೆಯ  ಮೇಲೆ ಹೆಚ್ಚು ಒತ್ತಡ ಬೀಳುವ ಸಾಧ್ಯತೆ ಇದೆ.

ಸೂಚ್ಯಂಕ 490 ಅಂಶ ಇಳಿಕೆ: ಒಟ್ಟಾರೆ ಈ ವಾರ ಸಂವೇದಿ  ಸೂಚ್ಯಂಕ  490 ಅಂಶಗಳ ಇಳಿಕೆಯಿಂದ ಒತ್ತಡ ದಲ್ಲಿತ್ತು.  ಮಧ್ಯಮ ಶ್ರೇಣಿಯ ಸೂಚ್ಯಂಕ 49 ಅಂಶಗಳ ಇಳಿಕೆ ಕಂಡರೆ  ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು 11 ಅಂಶಗಳ ಏರಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ನಿವ್ವಳ ₹ 3,447 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ, ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,308 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ.  ಪೇಟೆಯ ಬಂಡವಾಳ ಮೌಲ್ಯವು ₹ 97.88 ಕೋಟಿಗೆ ಇಳಿಕೆಯಾಗಿತ್ತು.

ಲಾಭಾಂಶ : ಗುಜರಾತ್ ಗ್ಯಾಸ್ ಪ್ರತಿ ಷೇರಿಗೆ ₹5, ನೆಸ್ಲೆ ಪ್ರತಿ ಷೇರಿಗೆ ₹16

ಬೋನಸ್ ಷೇರು: ರಾಮ್ ಮಿನರಲ್ಸ್ ಆ್ಯಂಡ್‌ ಕೆಮಿಕಲ್ಸ್ ಕಂಪೆನಿಯು 8 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಹೊಸ ಷೇರು: ಅಲ್ಕೆಮ್ ಲ್ಯಾಬೋರೇಟರೀಸ್ ಲಿ. 1.28 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ ₹1,020 ರಿಂದ ₹1,050 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. ವಿತರಣೆಯು ಡಿ. 8 ರಿಂದ ಆರಂಭವಾಗಿ 10 ರಂದು ಕೊನೆ ಗೊಳ್ಳುವುದು. ಅರ್ಜಿಯನ್ನು 14 ಮತ್ತು ಅದರ ಘಟಕಗಳಲ್ಲಿ ಸಲ್ಲಿಸಬಹು ದಾಗಿದೆ. ಈ ಕಂಪೆನಿಯ ಷೇರುಗಳು ಬಿಎಸ್‌ಇ  ಮತ್ತು ಎನ್‌ಎಸ್‌ಇಗಳಲ್ಲಿ ವಹಿವಾಟಿಗಾಗಿ ಲೀಸ್ಟಿಂಗ್ ಆಗಲಿದೆ.

ಡಾ.ಲಾಲ್ ಪತ್ ಲ್ಯಾಬ್ಸ್ ಲಿ 1.16ಕೋಟಿ ಷೇರುಗಳನ್ನು ಪ್ರತಿ ಷೇರಿಗೆ ₹540 ರಿಂದ ₹550 ರ ಅಂತರದಲ್ಲಿ ಸಾರ್ವಜನಿಕ ವಿತರಣೆ ಮಾಡಲಿದೆ. ಈ ವಿತರಣೆಯು ಡಿ. 8 ರಿಂದ ಆರಂಭವಾಗಿ 10 ರಂದು ಕೊನೆಗೊಳ್ಳುವುದು. ಅರ್ಜಿಯನ್ನು 20 ಷೇರುಗಳ ಘಟಕಗಳಲ್ಲಿ ಸಲ್ಲಿಸಬಹುದಾಗಿದೆ. ಸಣ್ಣ ಹೂಡಿಕೆ ದಾರರ ಮಿತಿಯಾದ ಎರಡು ಲಕ್ಷ ದೊಳಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ಷೇರಿಗೆ ₹15 ರ ರಿಯಾಯ್ತಿ ಲಭ್ಯವಿದೆ.

ದೆಹಲಿ ಷೇರು ವಿನಿಮಯ ಕೇಂದ್ರ ದಲ್ಲಿ ವಹಿವಾಟಾಗುತ್ತಿರುವ ಫಿನ್ -ಇನ್ವೆಸ್ಟ್ - ಲೀಸ್ ಕಂಪೆನಿಯ ಷೇರುಗಳು ಡಿ. 8 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಎಕ್ಸ್ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ದೆಹಲಿ ಮತ್ತು ಅಹಮದಾಬಾದ್ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಗೀತಾಂಜಲಿ ಕ್ರೆಡಿಟ್ ಆ್ಯಂಡ್‌ ಕ್ಯಾಪಿಟಲ್  ಕಂಪೆನಿಯ ಷೇರುಗಳು ಡಿ. 8 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಎಕ್ಸ್ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಮುಖಬೆಲೆ ಸೀಳಿಕೆ: ಜಾಕ್ಸನ್ ಇನ್ವೆಸ್ಟ್‌ಮೆಂಟ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಡಿ.16  ನಿಗದಿತ ದಿನ. ಎಕ್ಸ್ ಡಿ ಸಮೂಹದ ಖೂಬ್ ಸೂರತ್ ಕಂಪೆನಿ ತನ್ನ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಡಿ.15 ನಿಗದಿತ ದಿನ.

ಅಮಾನತು ತೆರವು: ಭಾರತಿ ಶಿಪ್ ಯಾರ್ಡ್ ಲಿ. ಮೇಲೆ ವಿಧಿಸಿದ್ದ ಅಮಾನತನ್ನು ತೆರವು ಗೊಳಿಸಿದ ಕಾರಣ ಷೇರುಗಳು 14 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ  ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ. ಜೆಎಚ್‌ಎಸ್ ಸ್ವೆನ್ ಗಾರ್ಡ್ ಲ್ಯಾಬೊರೇಟರೀಸ್ ಕಂಪೆನಿಯ ಮೇಲೆ   ವಿಧಿಸಿದ್ದ  ಅಮಾನತನ್ನು ತೆರವುಗೊಳಿಸಿದ ಕಾರಣ ಈ ಕಂಪೆನಿಯ ಷೇರುಗಳು ಡಿ.10 ರಿಂದ ಟಿ  ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆ ಯಾಗಲಿವೆ.

ಸೂಚ್ಯಂಕದಲ್ಲಿ ಬದಲಾವಣೆ: ಕಂಪೆನಿ ಗಳಾದ ಇಂಡೋ ಕೌಂಟ್  ಇಂಡಸ್ಟ್ರೀಸ್, ಸೀಕ್ವೆಂಟ್ ಸೈಂಟಿಫಿಕ್, ಟಿವಿಎಸ್ ಶ್ರೀಚಕ್ರ, ಜಿಎಚ್‌ಸಿಎಲ್, ರಾಮ್ ಕೋ ಸಿಸ್ಟಮ್ಸ್, ತಮಿಳ್ ನಾಡು ನ್ಯೂಸ್ ಪ್ರಿಂಟ್, ಆವಂತಿ ಫೀಡ್ಸ್, ಸ್ಪೈಸ್ ಜೆಟ್, ನೀಲ್ ಕಮಲ್, ಜಿಂದಾಲ್ ಪಾಲಿ, ಬ್ಲಿಸ್ ಜಿವಿಕೆ, ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ, ಹಿಮ್ಮತ್ ಸಿಂಗ್ ಕಾ ಸೀಡೆ, ಕೆಪಿಆರ್ ಮಿಲ್ ಮುಂತಾದ ಷೇರುಗಳು ಈ ತಿಂಗಳ 21 ರಿಂದ ಬಿಎಸ್ಇ 500 ಸೂಚ್ಯಂಕದಲ್ಲಿ ಸ್ಥಾನ ಪಡೆದಿವೆ. 

ನವಭಾರತ್ ವೆಂಚರ್, ಹಾಕಿನ್ಸ್ ಕುಕ್ಕರ್ಸ್, ರುಚಿ ಸೋಯಾ, ಜೆಎಸ್ ಡಬ್ಲು ಹೋಲ್ಡಿಂಗ್ಸ್, ಆಪ್ಟೊ ಸರ್ಕ್ಯೂಟ್ಸ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಪಂಜಾಬ್ ಆ್ಯಂಡ್ ಸಿಂಧ್‌ ಬ್ಯಾಂಕ್, ಮೆಟಲಿಸ್ಟ್ ಫೋರ್ಜಿಂಗ್ಸ್,  ಲ್ಯಾಂಕೊ ಇನ್ಫ್ರಾಟೆಕ್‌, ಎಬಿಜಿ ಶಿಪ್ ಯಾರ್ಡ್, ಫೈನಾನ್ಶಿಯಲ್ ಟೆಕ್ನಾಲಜೀಸ್, ಮುಂತಾದವು ಈ ಸೂಚ್ಯಂಕದಿಂದ ಹೊರಬಂದಿವೆ.

ಟಿ ಗುಂಪಿಗೆ ವರ್ಗಾವಣೆ: ಕಂಪೆನಿ ಗಳಾದ ಅರವಿಂದ್ ಇನ್‌ಫ್ರಾಸ್ಟ್ರಕ್ಚರ್, ದ್ವಾರಿಕೀಶ್‌ ಶುಗರ್ ಇಂಡಸ್ಟ್ರೀಸ್, ಕೇಶೋರಾಮ್ ಇಂಡಸ್ಟ್ರೀಸ್,  ಮೊನ್ನೆಟ್ ಇಂಡಸ್ಟ್ರೀಸ್, ಶ್ರೀ ರಾಜಸ್ಥಾನ್ ಸಿಂಟೆಕ್ಸ್, ಸೇರಿ ಒಟ್ಟು 65 ಕಂಪೆನಿಗಳನ್ನು ಡಿ.5 ರಿಂದ ಟಿ ಗುಂಪಿಗೆ ವರ್ಗಾಯಿಸಲಾಗುವುದು.

ಇಂದಿನ ವ್ಯವಹಾರಿಕ ಚಿಂತನೆಗಳು ಹೇಗೆ ಸಾಗಿವೆ ಎಂಬುದಕ್ಕೆ ಇ– ಕಾಮರ್ಸ್ ಕಂಪೆನಿ ಫ್ಲಿಪ್‌ಕಾರ್ಟ್‌ ಪ್ರಕಟಿಸಿರುವ ಮಾರ್ಚ್ ಅಂತ್ಯದ ಫಲಿತಾಂಶವು ಬೆಳಕು ಚೆಲ್ಲುತ್ತದೆ.  ಹೆಚ್ಚಿನ ಕಂಪೆನಿಗಳು ಇತ್ತೀಚೆಗೆ ಕೇವಲ ವಹಿವಾಟಿನ ಗಾತ್ರದ ಕಡೆಗೆ ಗಮನಹರಿಸುತ್ತಲಿವೆ.  ಆದರೆ ಕಂಪೆನಿಗೆ ಈ ತರಹದ ವಹಿವಾಟಿನಿಂದ ಬರುವ ಆದಾಯದ ಬಗ್ಗೆ ಚಿಂತಿಸುವ ಗೋಜಿಗೆ ಹೋಗುತ್ತಿಲ್ಲ. 

ಫ್ಲಿಪ್‌ಕಾರ್ಟ್‌ ಮಾರ್ಚ್ ಅಂತ್ಯದ ವೇಳೆಗೆ ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ಹಾನಿಯನ್ನು ಅನುಭವಿಸಿದೆ.  ಆದರೆ ಕಂಪೆನಿಯ ವಹಿವಾಟಿನ ಗಾತ್ರ ಮಾತ್ರ ಮೂರು ಪಟ್ಟು ಹೆಚ್ಚಿದೆ. 

ಇಂತಹ ಭಾರಿ ಪ್ರಮಾಣದ ಹಾನಿಗೆ ವಲಯದಲ್ಲಿ ನಡೆಯುತ್ತಿರುವ ಸ್ಪರ್ಧಾತ್ಮಕ ರಿಯಾಯಿತಿ ಮಾರಾಟ ಕಾರಣವಾಗಿದೆ.  ಅದೇ ರೀತಿ ವಿತ್ತೀಯ, ವಿಶೇಷವಾಗಿ ಷೇರುಪೇಟೆಗಳಲ್ಲಿ ಮೂಡಿರುವ ಅಸ್ಥಿರತೆಗೂ ಇಂತಹ ಅಹಿತಕರ ಸ್ಪರ್ಧೆಯೇ ಕಾರಣವಾಗಿದೆ. 

ಇಂದು ಪ್ರಮುಖ ಬ್ರೋಕಿಂಗ್ ಕಂಪೆನಿಗಳು ತಮ್ಮ ಗ್ರಾಹಕರಿಗೆ ವಿಧಿಸುವ ಬ್ರೋಕರೇಜ್ ದರಗಳು ಕಡಿಮೆಯಾಗಿವೆ. ಇಂತಹ ಆದಾಯವು ಆ ಸಂಸ್ಥೆ ನಡೆಸಲು ಸಾಧ್ಯವಾಗದೆ ಇದ್ದಾಗ ಅಕ್ರಮ ಮಾರ್ಗಗಳಿಗೆ ಶರಣಾಗುತ್ತಾರೆ. ಅಂದರೆ ಸ್ಪರ್ಧಾತ್ಮಕ ಬ್ರೋಕರೇಜ್ ನೀಡಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಪ್ರಯತ್ನದಲ್ಲಿ ತಮ್ಮ ಸಂಸ್ಥೆಯ ಛಾಯೆಯನ್ನು ಕೆಡಿಸಿಕೊಳ್ಳುವರು.

ಒಂದು ಬ್ರೋಕರೇಜ್ ಸಂಸ್ಥೆಯು  ಜಾರಿಗೊಳಿಸಿರುವ ವಿಶೇಷವಾದ ಯೋಜನೆಯನ್ನು ನೋಡಿದಾಗ ಗ್ರಾಹಕರಿಗೆ ಸೋಜಿಗ ಉಂಟಾಗಬಹುದು.  ಕ್ಯಾಷ್‌ ವಿಭಾಗದಲ್ಲಿ (ಅಂದರೆ ವಿಲೇವಾರಿ ಚಟುವಟಿಕೆ) ಕೊಳ್ಳುವುದಕ್ಕಾಗಲಿ ಅಥವಾ ಮಾರಾಟ ಮಾಡುವುದಕ್ಕಾಗಲಿ ಬ್ರೋಕರೇಜ್ ಕೊಡಬೇಕಿಲ್ಲ, ಚಟುವಟಿಕೆ ಉಚಿತ. ಆದರೆ ಅವರು ಅದೇ ಸಂಸ್ಥೆಯಲ್ಲಿ ಅಭೌತೀಕರಣ ಖಾತೆ ಹೊಂದಿರಬೇಕು.

 ಇಲ್ಲಿ ಮೊಟ್ಟ ಮೊದಲು ಉಚಿತ ಎಂದಾಕ್ಷಣ ಗ್ರಾಹಕರು ಮುಗಿಬೀಳುವರು ಎಂಬ ಕಲ್ಪನೆ, ಎರಡನೆಯದಾಗಿ, ಉಚಿತ ಎಂದಾಕ್ಷಣ ವಹಿವಾಟಿನ ಗಾತ್ರ ಹೆಚ್ಚಾಗುತ್ತದೆ. ಈ ವಹಿವಾಟಿನ ಗಾತ್ರ ಹೆಚ್ಚಾದಾಗ ಅಭೌತೀಕರಣ  ಖಾತೆಯ ವಹಿವಾಟು ಸಹ ಹೆಚ್ಚಾಗುತ್ತದೆ. ಅಲ್ಲಿ ವಿಧಿಸಬಹುದಾದ ಶುಲ್ಕದ  ಪ್ರಮಾಣ ತಿಳಿದಿಲ್ಲ.  ಹಾಗೂ ಈ ವಹಿವಾಟಿನಲ್ಲಿ ಗ್ರಾಹಕರು ಮಾರ್ಜಿನ್ ಹಣ ನೀಡಬೇಕಾಗುತ್ತದೆ. ಆ ಹಣವು ಸಂಸ್ಥೆಯಲ್ಲಿರುತ್ತದೆ. ಕೊನೆಯಲ್ಲಿ ಬ್ರೋಕರೇಜ್ ಬಿಟ್ಟು ಬೇರೆ ಯಾವ ಶುಲ್ಕ ವಿಧಿಸಲಾಗುವುದು ಎಂಬುದು ತಿಳಿದಿಲ್ಲ.

ಒಟ್ಟಿನಲ್ಲಿ ಉಚಿತ ಎಂಬ ಪದವು ಗ್ರಾಹಕರನ್ನಷ್ಟೇ ಆಕರ್ಷಿಸುವುದಲ್ಲದೇ ಅವರ ಬಂಡವಾಳವನ್ನು ಅಪಾಯಕ್ಕೆ ಸಿಕ್ಕಿಸಬಹುದು. ಸಂಪೂರ್ಣ ವಿವರಗಳನ್ನು ಅರಿತು, ಧೃಢೀಕರಿಸಿಕೊಂಡು ವಹಿವಾಟಿಗೆ ಮುಂದಾಗುವುದು ಒಳಿತು. 
ಕಂಪೆನಿಗಳು ವಹಿವಾಟಿನ ಗಾತ್ರಕ್ಕೆ ಆದ್ಯತೆ ನೀಡುತ್ತವೆ. ಆದರೆ ಗ್ರಾಹಕರು ಬಂಡವಾಳ ಸುರಕ್ಷತೆಗೆ ಆದ್ಯತೆ ನೀಡುವುದು ಕ್ಷೇಮ. ವಹಿವಾಟು ನಡೆಸುವಾಗ ಗಳಿಸಬಹುದಾದ ಲಾಭದ ಕಡೆಗೆ ಗಮನವಿರಬೇಕು.  ಆಗಲೇ ಉತ್ತಮ ಫಲಿತಾಂಶ ಸಾಧ್ಯ. ಬ್ರೋಕರೇಜ್ ಎಂಬುದು ಒಂದು ರೀತಿಯ ವೇಗ ನಿಯಂತ್ರಕ ಇದ್ದ ಹಾಗೆ.

ಷೇರು ಕೊಳ್ಳುವಾಗ, ಮಾರಾಟ ಮಾಡುವಾಗ ತಗುಲಬಹುದಾದ ವೆಚ್ಚಗಳನ್ನು ಪರಿಶೀಲಿಸಿ ನಿರ್ಧರಿಸುತ್ತೇವೆ. ಬ್ರೋಕರೇಜ್ ಅಂಶವಿರುವುದರಿಂದ ವಹಿವಾಟಿನ ಗಾತ್ರಕ್ಕೆ ಕಡಿವಾಣ ಬಿದ್ದು ಆರೋಗ್ಯಕರ ವಾತಾವರಣಕ್ಕೆ ಕಾರಣವಾಗುತ್ತದೆ.  ಬ್ರೋಕರೇಜ್ ಇಲ್ಲವೆಂದರೆ ಕಡಿವಾಣವಿಲ್ಲದ ಕುದುರೆಯಂತೆ ದಾರಿ ತಪ್ಪುವ ಪ್ರಸಂಗಗಳೇ ಹೆಚ್ಚು ಎಂಬುದು ನೆನಪಿರಲಿ.

Comments
ಈ ವಿಭಾಗದಿಂದ ಇನ್ನಷ್ಟು
ಒತ್ತಡದಲ್ಲಿ ಷೇರುಪೇಟೆ ವಹಿವಾಟು

ಷೇರು ಸಮಾಚಾರ
ಒತ್ತಡದಲ್ಲಿ ಷೇರುಪೇಟೆ ವಹಿವಾಟು

12 Mar, 2018
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರು ಸಮಾಚಾರ
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

5 Mar, 2018
ಎಣಿಕೆಗೆ ನಿಲುಕದ ಪೇಟೆಯ ಚಲನೆ

ಷೇರು ಸಮಾಚಾರ
ಎಣಿಕೆಗೆ ನಿಲುಕದ ಪೇಟೆಯ ಚಲನೆ

26 Feb, 2018

ಷೇರು ಸಮಾಚಾರ
ಲಾಭ ನಗದೀಕರಣಕ್ಕೆ ದೊರೆತ ಅವಕಾಶ

ಷೇರುಪೇಟೆಯಲ್ಲಿನ ಕೆಲವು ಬೆಳವಣಿಗೆಗಳು ಕೇವಲ ಭಾಷಣ, ವಿಶ್ಲೇಷಣೆಗೆ ಮಾತ್ರ ಸೀಮಿತವಾಗಿದ್ದು ಅವನ್ನು ಕೈಗೆ ಎಟುಕಿಸಿಕೊಳ್ಳಲು ಸಾಧ್ಯವಿಲ್ಲದಂತಿರುತ್ತವೆ.

18 Feb, 2018
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

ಷೇರು ಸಮಾಚಾರ
ಸಣ್ಣ ಹೂಡಿಕೆದಾರರಿಗೆ ಉತ್ತಮ ಅವಕಾಶ

12 Feb, 2018