ರಾಜ್ಯ ವಾರ್ತೆ- ಲಂಚ ಮತ್ತು ಲೈಂಗಿಕ ದೌರ್ಜನ್ಯದ ಆರೋಪ

ಕೇರಳ ಸಿ.ಎಂ ಚಾಂಡಿಗೆ ಮತ್ತೆ ‘ಸೋಲಾರ್‌’ ಬಿಸಿ

ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರಿಗೆ ಎರಡು ವರ್ಷಗಳ ಹಿಂದೆ ಬಯಲಾದ ಸೋಲಾರ್‌ ಹಗರಣ ಮತ್ತೆ ಬಿಸಿ ಮುಟ್ಟಿಸಿದೆ.

ಬೆಂಗಳೂರು: ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರಿಗೆ ಎರಡು ವರ್ಷಗಳ ಹಿಂದೆ ಬಯಲಾದ ಸೋಲಾರ್‌ ಹಗರಣ ಮತ್ತೆ ಬಿಸಿ ಮುಟ್ಟಿಸಿದೆ.

ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಜಿ. ಶಿವರಾಜನ್‌ ಆಯೋಗದ ಮುಂದೆ ಕಳೆದ ಬುಧವಾರ ಹಾಜರಾದ ಹಗರಣದ ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್‌, ಇನ್ನೊಬ್ಬ ಆರೋಪಿ ಸರಿತಾ ನಾಯರ್‌ ಮೇಲೆ ಮುಖ್ಯಮಂತ್ರಿ ಸೇರಿ ಆರು ಪ್ರಭಾವಿ ರಾಜಕಾರಣಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಮುಖ್ಯಮಂತ್ರಿ ಅವರಿಗೆ ₹ 5.5 ಕೋಟಿ ಲಂಚ ನೀಡಿರುವುದಾಗಿಯೂ ಆತ ಆರೋಪಿಸಿದ್ದಾನೆ.

ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ಸಚಿವರಾದ ಎ.ಪಿ. ಅನಿಲ್  ಕುಮಾರ್‌,  ಶಿಬು ಬೇಬಿ ಜಾನ್‌, ಕುಮಾರ್  ಅವರ ಆಪ್ತ ಕಾರ್ಯದರ್ಶಿ ನಜೀರುಲ್ಲಾ, ಕಾಂಗ್ರೆಸ್‌ ಶಾಸಕ ಹೈಬಿ ಈಡನ್‌, ಕಾಂಗ್ರೆಸ್‌ ಮುಖಂಡ ಆರ್ಯಾಡನ್‌ ಶೌಕತ್‌ ಅವರು ಸರಿತಾ ನಾಯರ್‌ ಮೇಲೆ  ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೊ ತುಣುಕುಗಳು ತನ್ನ ಬಳಿ ಇದೆ ಎಂದೂ ರಾಧಾಕೃಷ್ಣನ್‌ ಆರೋಪ ಮಾಡಿದ್ದಾನೆ.

ಈ ವಿಡಿಯೊ ತುಣುಕುಗಳನ್ನು ಮುಖ್ಯಮಂತ್ರಿ ಚಾಂಡಿ ಅವರಿಗೆ ತೋರಿಸಿದ್ದಾಗಿಯೂ ಆತ ಹೇಳಿದ್ದಾನೆ. ಆದರೆ ಅವರೇ ಇರುವ ವಿಡಿಯೊವನ್ನು ಮಾತ್ರ ಅವರಿಗೆ ತೋರಿಸಿಲ್ಲ ಎಂದಿದ್ದಾನೆ.

ಹಗರಣದಲ್ಲಿ ತಾನು ಬಂಧನಕ್ಕೆ ಒಳಗಾದಾಗ, ಮುಖ್ಯಮಂತ್ರಿಗಳು ಅವರ ಆಪ್ತ ಉದ್ಯಮಿ ಥಾಮಸ್‌ ಕೊಂಡೋಡಿ ಅವರನ್ನು ಜೈಲಿಗೆ ಕಳುಹಿಸಿ ಎಲ್ಲವನ್ನೂ ಸರಿಮಾಡಲು ಯತ್ನಿಸಿದ್ದರು ಎಂದೂ ರಾಧಾಕೃಷ್ಣನ್‌ ಹೇಳಿದ್ದಾನೆ.

ಈ ಆರೋಪ ಕೇರಳ ರಾಜಕಾರಣದಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈಗ ಕೇರಳ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಮುಖ್ಯಮಂತ್ರಿ, ಸಚಿವರು ಮತ್ತು ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಗಳ ಬಗ್ಗೆ ಕೇಳಿ ಬಂದಿರುವ ಆರೋಪ ಕಲಾಪದಲ್ಲಿಯೂ  ಪ್ರತಿಧ್ವನಿಸಿದೆ.

ಬಿಜು ರಾಧಾಕೃಷ್ಣನ್‌ ಆರೋಪ ಮಾಡಿದ ದಿನದಿಂದಲೇ ವಿಧಾನಸಭೆಯಲ್ಲಿ ಗದ್ದಲ ಆರಂಭವಾಗಿದೆ. ಪ್ರತಿಪಕ್ಷ ಎಲ್‌ಡಿಎಫ್‌  ಮುಖಂಡ ವಿ.ಎಸ್‌. ಅಚ್ಯುತಾನಂದನ್‌, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿಯೂ ಅದಕ್ಕೆ ದನಿಗೂಡಿಸಿದೆ.

ಲಂಚ ಮತ್ತು ಲೈಂಗಿಕ ದೌರ್ಜನ್ಯ ಆರೋಪ ಸದನದಲ್ಲಿ ಪ್ರಸ್ತಾಪವಾದ ನಂತರ ಮಾತನಾಡಿದ್ದ ಕಾರ್ಮಿಕ ಸಚಿವ  ಶಿಬು ಬೇಬಿ, ತಮ್ಮ ವಿರುದ್ಧದ ಆರೋಪದ ಹಿಂದೆ ಯಾರಿದ್ದಾರೆ ಎಂದು ತಿಳಿದಿದೆ ಎಂದು ಗುರುವಾರ ಹೇಳಿದ್ದರು. ಆ ನಂತರ ಷಡ್ಯಂತ್ರ ನಡೆಸಿದವರು ಯಾರು ಎಂಬದನ್ನು ಶಿಬು ಬೇಬಿ ಬಹಿರಂಗಪಡಿಸ ಬೇಕುಎಂದು ಒತ್ತಾಯಿಸಿ ಪ್ರತಿಪಕ್ಷ ಗದ್ದಲ ನಡೆಸುತ್ತಿದೆ.

ಮುಂದಿನ ವರ್ಷ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆ ಇಷ್ಟೊಂದು ಹತ್ತಿರ ಇರುವಾಗ ಮುಖ್ಯಮಂತ್ರಿ ಮತ್ತು ಇತರ ಪ್ರಮುಖರ ವಿರುದ್ಧದ ಆರೋಪವನ್ನು ಪ್ರತಿಪಕ್ಷ ಸುಲಭದಲ್ಲಿ ಬಿಟ್ಟು ಬಿಡುವುದಿಲ್ಲ.

2013ರಲ್ಲಿ ಸೋಲಾರ್ ಹಗರಣ ಬಯಲಿಗೆ ಬಂದಾಗಲೂ ಕೇರಳ ರಾಜಕಾರಣಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು.
ಏನಿದು ಹಗರಣ: ಟೀಮ್‌ ಸೋಲಾರ್‌ ಎಂಬ ಸಂಸ್ಥೆಯ ಮೂಲಕ ಅದರ ಪಾಲುದಾರರಾದ ಬಿಜು ರಾಧಾಕೃಷ್ಣನ್‌ ಮತ್ತು ಸರಿತಾ ನಾಯರ್‌   ಶುದ್ಧ ವಿದ್ಯುತ್‌ ಯೋಜನೆಯಲ್ಲಿ ಪಾಲುದಾರನ್ನಾಗಿ ಮಾಡುತ್ತೇವೆ ಎಂದು ಹೇಳಿ ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದರು. ಹೂಡಿಕೆದಾರರಿಗೆ ಸೌರಶಕ್ತಿ ಫಲಕಗಳನ್ನು ಪೂರೈಸಲಾಗುವುದು ಎಂದೂ ಅವರು  ಭರವಸೆ ನೀಡಿದ್ದರು.

ಹೂಡಿಕೆ ಮಾಡಿದವರಲ್ಲಿ ಕೇರಳದ ರಾಜಕಾರಣಿಗಳು ಮತ್ತು ಪ್ರಭಾವಿಗಳೇ ಹೆಚ್ಚಾಗಿದ್ದರು. ಹೂಡಿಕೆ ಮಾಡಿದ ಒಬ್ಬರು ದೂರು ನೀಡುವ ಮೂಲಕ 2013ರಲ್ಲಿ ಹಗರಣ ಬಯಲಿಗೆ ಬಂತು.

ನಂತರದ ತನಿಖೆಯಲ್ಲಿ ಮುಖ್ಯಮಂತ್ರಿ ಕಚೇರಿಯ ಮೂವರು ಹಿರಿಯ ಅಧಿಕಾರಿಗಳು ಸರಿತಾ ಜೊತೆ ಹಲವು ಬಾರಿ ದೂರವಾಣಿ ಮೂಲಕ ಮಾತನಾಡಿರುವ ಅಂಶ ತಿಳಿದು ಬಂದಿತ್ತು. ಇದರಿಂದಾಗಿ ತಮ್ಮ ದೀರ್ಘ ಕಾಲದ ಆಪ್ತ ಸಹಾಯಕರಾಗಿದ್ದ ಟಿ. ಜೋಪನ್‌, ಜಿಕ್ಕುಮೋನ್‌ ಜಾಕೋಬ್‌ ಮತ್ತು ರಾಜ್‌ ಅವರನ್ನು ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಜಾ ಮಾಡಿದ್ದರು. ಜೋಪನ್‌ ವಿರುದ್ಧ ಸೋಲಾರ್‌ ಹಗರಣದಲ್ಲಿ ಪ್ರಕರಣ ದಾಖಲಾಗಿದೆ.

ರಾಜ್‌ ವಿರುದ್ಧ ಭೂಕಬಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಕೂಡ ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪ್ರತಿಪಕ್ಷ ಎಲ್‌ಡಿಎಫ್‌ ರಾಜ್ಯದಾದ್ಯಂತ ಅಭಿಯಾನವನ್ನೇ ನಡೆಸಿತ್ತು.
ಈ ಪ್ರಕರಣದಲ್ಲಿ ಸುಮಾರು ₹10 ಕೋಟಿಯಷ್ಟು ವಂಚನೆಯಾಗಿದೆ ಎಂದು ಅಂದಾಜಿಸಲಾಗಿದೆ.

Comments