‘ಬಾಬ್ರಿ ಮಸೀದಿ ಧ್ವಂಸ’ 23ನೇ ವರ್ಷಾಚರಣೆ

ಅತ್ತ ಶೌರ್ಯ ದಿವಸ, ಇತ್ತ ಕಪ್ಪು ದಿವಸ

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮವಾಗಿ 23 ವರ್ಷ ಸಂದ ಪ್ರಯುಕ್ತ  ಭಾನುವಾರ ಮುಸ್ಲಿಂ ಸಮುದಾಯಗಳು ‘ದುಃಖದ ದಿವಸ’ವನ್ನು ಹಿಂದೂ ಸಂಘಟನೆಗಳು ‘ಶೌರ್ಯ ದಿವಸ’ವನ್ನು  ಆಚರಿಸಿದವು.

ಲಖನೌ/ ಫಾಜಿಯಾಬಾದ್‌: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮವಾಗಿ 23 ವರ್ಷ ಸಂದ ಪ್ರಯುಕ್ತ  ಭಾನುವಾರ ಮುಸ್ಲಿಂ ಸಮುದಾಯಗಳು ‘ದುಃಖದ ದಿವಸ’ವನ್ನು ಹಿಂದೂ ಸಂಘಟನೆಗಳು ‘ಶೌರ್ಯ ದಿವಸ’ವನ್ನು  ಆಚರಿಸಿದವು.

ಅಯೋಧ್ಯೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬಿಗಿ ಬಂದೋಬಸ್ತಿನಲ್ಲಿ ಮಸೀದಿ ಧ್ವಂಸದ ವಾರ್ಷಿಕ ದಿನವನ್ನು ಆಚರಿಸಲಾಯಿತು. ಅಯೋಧ್ಯೆ ಮತ್ತು ಫಾಜಿಯಾಬಾದ್‌ನಲ್ಲಿ ಭದ್ರತಾ ಸಿಬ್ಬಂದಿ  ಹಮ್ಮಿಕೊಂಡ ಧ್ವಜ ಪಥ ಸಂಚಲನ ಶಾಂತಿಯುತವಾಗಿ ನಡೆಯಿತು.

ವಿಶ್ವ ಹಿಂದೂ ಪರಿಷತ್ ಅಯೋಧ್ಯೆಯ ಕರಸೇವಕಪುರದಲ್ಲಿ ಶೌರ್ಯ ದಿನದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.  ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿಯು (ಬಿಎಂಎಸಿ) ಕಪ್ಪು ದಿವಸವಾಗಿ ಆಚರಿಸಿತಲ್ಲದೆ ಮುಸ್ಲಿಂ  ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಮಸೀದಿ ಧ್ವಂಸಕ್ಕೆ ವಿರೋಧ ವ್ಯಕ್ತಪಡಿಸಿದರು.

ಫಾಜಿಯಾಬಾದ್‌ ಜಿಲ್ಲಾಡಳಿತವು  ದೇವಸ್ಥಾನದ ಆಸುಪಾಸಿನ ರಸ್ತೆಗಳಲ್ಲಿ ಯಾವುದೇ ಬಗೆಯ ಮೆರವಣಿಗೆಗಳನ್ನು ನಿರ್ಬಂಧಿಸಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಇದೇ ವೇಳೆ ದೆಹಲಿಯಲ್ಲಿ ಶೌರ್ಯ ದಿವಸ ಆಚರಿಸಿದ ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್‌ನ ಸದಸ್ಯರು, ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಮ ಮಂದಿರ ನಿರ್ಮಾಣದ ದಿನಾಂಕ ಪ್ರಕಟಿಸಿ (ಪಟ್ನಾ):  ಭಗವಾನ್‌ ಶ್ರೀರಾಮನನ್ನು ಮತ ರಾಜಕೀಯದ ದಾಳವಾಗಿ ಬಳಸುತ್ತಿರುವ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ ಗಂಭೀರವಾಗಿರುವುದೇ ಆದಲ್ಲಿ ನಿರ್ಮಾಣದ ದಿನಾಂಕವನ್ನು ಪ್ರಕಟಿಸಲಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಭಾನುವಾರ ಸವಾಲೆಸೆದಿದ್ದಾರೆ.

‘ಬಿಜೆಪಿ ಅಥವಾ ಆರ್ಎಸ್ಎಸ್‌ಗೆ ಶ್ರೀರಾಮನ ಬಗ್ಗೆ ನಂಬಿಕೆಯಿಲ್ಲ. ಅವರು  ರಾಮನ ಹೆಸರನ್ನು ಚುನಾವಣಾ ಕಾಲಗಳಲ್ಲಷ್ಟೇ ರಾಜಕೀಯ ಲಾಭಕ್ಕಾಗಿ ಬಳಸುತ್ತಾರೆ. ಇದನ್ನು ಜನರು ಹೆಚ್ಚು ಕಾಲ ಸಹಿಸಲಾರರು’ ಎಂದು ಇಲ್ಲಿ ಹೇಳಿದರು.

‘ಆರ್ಎಸ್ಎಸ್‌ ಉಗ್ರ ಸಂಘಟನೆ’
ರಾಂಪುರ್  (ಪಿಟಿಐ):
‘ರಾಷ್ಟ್ರೀಯ ಸ್ವಯಂಸೇವಾ ಸಂಘವನ್ನು (ಆರ್ಎಸ್ಎಸ್‌) ಭಯೋತ್ಪಾದನಾ ಸಂಘಟನೆಯೆಂದು ಘೋಷಿಸಬೇಕು’ ಎಂದು ಉತ್ತರ ಪ್ರದೇಶದ ಸಚಿವ ಅಜಂಖಾನ್‌ ಭಾನುವಾರ ಒತ್ತಾಯಿಸಿದ್ದಾರೆ.

‘ಆರ್ಎಸ್ಎಸ್‌ ಅನೇಕ ಗಲಭೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಯೋಜಿಸಿದೆ. ಹಾಗಾಗಿ, ಆರ್‌ಎಸ್‌ಎಸ್‌ಅನ್ನು ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಬೇಕೆಂದು’ ಖಾನ್ ಹೇಳಿದ್ದಾರೆ.

ಖಾನ್‌ ಅವರ ವಿವಾದಿತ ಹೇಳಿಕೆಗೆ ಬಿಜೆಪಿ ಅಷ್ಟೇ ತೀವ್ರವಾಗಿ ತಿರುಗೇಟು ನೀಡಿದೆ.
‘ಮಾಜಿ ಪ್ರಧಾನಿಗಳಾದ ಜವಾಹರ್‌ ಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಂಥವರೇ ಆರ್ಎಸ್ಎಸ್‌ಗೆ ಹಾನಿ ಮಾಡಲಾಗಲಿಲ್ಲ. ಇನ್ನು ಖಾನ್ ಅಂಥವರು ಏನು ಮಾಡಲು ಸಾಧ್ಯ’ ಎಂದು ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮ ಪ್ರತಿಕ್ರಿಯೆ ನೀಡಿದ್ದಾರೆ. 

‘ಉತ್ತರ ಪ್ರದೇಶ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು, ಒಂದು ವರ್ಗದ ಜನರನ್ನು ಸಮಾಧಾನ ಪಡಿಸಲು ಹಾಗೂ ಕೋಮು ಸೌಹಾರ್ದ ಕದಡಲು ಇದೊಂದು ಸಣ್ಣ  ಪ್ರಯತ್ನವಷ್ಟೇ. ಖಾನ್‌, ಸಮಾಜವಾದಿ ಮತ್ತು ಕಾಂಗ್ರೆಸ್‌ ಪಕ್ಷ ‘ಆರ್ಎಸ್ಎಸ್ ಫೋಬಿಯಾ’ದಿಂದ ನರಳುತ್ತಿವೆ. ಅವರ ಅಬ್ಬರದ ಭಾಷಣ ‘ರಾಷ್ಟ್ರೀಯ ಸಂಘಟನೆ’ ಮೇಲೆ ಏನೂ ಪರಿಣಾಮ ಬೀರದು’ ಎಂದು ಶರ್ಮ ಹೇಳಿದ್ದಾರೆ.

Comments