ನವದೆಹಲಿ

ಅಸಹಿಷ್ಣುತೆ, ಭೀತಿ ಬೇಡ: ಸಿಜೆಐ ಠಾಕೂರ್‌

ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿರುವ ಅಸಹಿಷ್ಣುತೆ ಬಗ್ಗೆ ಮಾತನಾಡಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌, ನ್ಯಾಯಾಂಗವು ‘ಸ್ವತಂತ್ರ’ವಾಗಿರುವ ತನಕ ಮತ್ತು ಕಾನೂನು ವ್ಯವಸ್ಥೆ ಸಮರ್ಪಕವಾಗಿರುವ ವರೆಗೆ ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ನವದೆಹಲಿ (ಪಿಟಿಐ): ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿರುವ ಅಸಹಿಷ್ಣುತೆ ಬಗ್ಗೆ ಮಾತನಾಡಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್‌, ನ್ಯಾಯಾಂಗವು ‘ಸ್ವತಂತ್ರ’ವಾಗಿರುವ ತನಕ ಮತ್ತು ಕಾನೂನು ವ್ಯವಸ್ಥೆ ಸಮರ್ಪಕವಾಗಿರುವ ವರೆಗೆ ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಇದೊಂದು ರಾಜಕೀಯ ವಿಷಯ ಎಂದ ಠಾಕೂರ್‌ ಅವರು, ಜನರ ಹಕ್ಕುಗಳನ್ನು ನ್ಯಾಯಾಲಯಗಳು ಎತ್ತಿ ಹಿಡಿಯುತ್ತಿರುವುದರಿಂದ ಯಾರೂ ಯಾವುದರ ಬಗ್ಗೆಯೂ ಭೀತಿಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

‘ಕಾನೂನನ್ನು ಎತ್ತಿ ಹಿಡಿಯುವ ವ್ಯವಸ್ಥೆಗೆ ನಾನು ಮುಖ್ಯಸ್ಥನಾಗಿದ್ದೇನೆ. ಪ್ರತಿವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಲಾಗುವುದು. ಎಲ್ಲ ವರ್ಗದ ಜನರ ಹಕ್ಕುಗಳನ್ನು ರಕ್ಷಿಸುವ ಸಾಮರ್ಥ್ಯ ನಮಗೆ ಇದೆ ಎಂದು ನಾನು ಭಾವಿಸಿದ್ದೇನೆ’ ಎಂದು ಮಾಧ್ಯಮ ಪ್ರತಿನಿಧಿಗಳ ಜತೆ ಅನೌಪಚಾರಿಕವಾಗಿ ಮಾತನಾಡಿದ ಠಾಕೂರ್ ಅವರು ಹೇಳಿದ್ದಾರೆ.

ಅಸಹಿಷ್ಣುತೆ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ, ನಮಗೆ ಪೂರ್ವಗ್ರಹಗಳಿಲ್ಲ. ಅಸಹಿಷ್ಣುತೆ ಎಂಬುದು ಗ್ರಹಿಕೆಯ ವಿಚಾರ. ಆದರೆ ರಾಜಕಾರಣಿಗಳು ಅದನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

ಭಯೋತ್ಪಾದಕರೂ ಸೇರಿದಂತೆ ದೇಶದ ಪ್ರಜೆಗಳಲ್ಲದವರಿಗೂ ಕೆಲವು ಹಕ್ಕುಗಳಿವೆ. ಎಲ್ಲರೂ ಕಾನೂನು ವ್ಯವಸ್ಥೆಯ ಫಲಾನುಭವಿಗಳು. ಭಯೋತ್ಪಾದಕರನ್ನು ಕೂಡ ಕಾನೂನಿಗೆ ಅನುಗುಣವಾಗಿಯೇ ವಿಚಾರಣೆ ನಡೆಸಬೇಕು. ಸೂಕ್ತ ಪ್ರಕ್ರಿಯೆಗಳನ್ನು ನಡೆಸದೆ ಹೀನ ಕೃತ್ಯ ಎಸಗಿದ ಉಗ್ರರನ್ನು ಗಲ್ಲಿಗೇರಿಸುವುದಕ್ಕೂ ಸಾಧ್ಯವಿಲ್ಲ ಎಂದು ಠಾಕೂರ್‌ ಹೇಳಿದ್ದಾರೆ.

ಬೇರೆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದ ಜನರು ಕೂಡ ಭಾರತದಲ್ಲಿ ಬಂದು ಜೀವನ ಕಟ್ಟಿಕೊಂಡಿದ್ದಾರೆ. ಎಲ್ಲ ಧರ್ಮದ ಜನರೂ ಇಲ್ಲಿದ್ದಾರೆ. ನಮ್ಮಲ್ಲಿ ಪಾರ್ಸಿಗಳಿದ್ದಾರೆ. ದೇಶಕ್ಕೆ ಅವರ ಕೊಡುಗೆ ಬಹಳ ದೊಡ್ಡದು. ಎಫ್‌.ಎಸ್‌. ನಾರಿಮನ್‌ ಮತ್ತು ನಾನಿ ಪಾಲ್ಖಿವಾಲ ಅವರಂತಹ ಕಾನೂನು ಪಂಡಿತರು ಕಾನೂನು ವ್ಯವಸ್ಥೆಯನ್ನು ಎತ್ತಿ ಹಿಡಿಯಲು ನೀಡಿರುವ ಕೊಡುಗೆ ಎಲ್ಲರಿಗೂ ತಿಳಿದಿರುವಂತಹುದೇ ಎಂದು ಠಾಕೂರ್‌ ಹೇಳಿದ್ದಾರೆ.

‘ಬಸ್‌ನಲ್ಲಿ ಹೋಗಲು ಸಿದ್ಧ’(ಐಎಎನ್‌ಎಸ್‌ ವರದಿ): ರಾಷ್ಟ್ರ ರಾಜಧಾನಿಯಲ್ಲಿ ಅಪಾಯಕಾರಿಯಾಗಿ ಹೆಚ್ಚಿರುವ ವಾಯು ಮಾಲಿನ್ಯ ತಡೆಗೆ ಕೈಜೋಡಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಹೇಳಿದ್ದಾರೆ. ಮಾಲಿನ್ಯ ಕಡಿತಗೊಳಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಬಸ್‌ನಲ್ಲಿ ಹೋಗುವುದಕ್ಕೂ ಸಿದ್ಧ ಎಂದು ಅವರು ತಿಳಿಸಿದ್ದಾರೆ.

‘ಸುಪ್ರೀಂ ಕೋರ್ಟ್‌ನ ಹಲವು ನ್ಯಾಯಮೂರ್ತಿಗಳು ಒಂದೇ ಕಾರಿನಲ್ಲಿ ಜತೆಯಾಗಿ ಪ್ರಯಾಣಿಸುವುದು (ಕಾರ್‌ ಪೂಲಿಂಗ್‌) ಜನರಿಗೆ ಸರಿಯಾದ ಸಂದೇಶ ನೀಡುತ್ತದೆ. ನಾವು ನಡೆದುಕೊಂಡು ಹೋಗಲು ಅಥವಾ ಬಸ್‌ನಲ್ಲಿ ಹೋಗಲು ಸಿದ್ಧ’ ಎಂದು ಠಾಕೂರ್‌ ಹೇಳಿದ್ದಾರೆ.

ಸಮ ಮತ್ತು ಬೆಸ ಸಂಖ್ಯೆಯ ನೋಂದಣಿ ಸಂಖ್ಯೆ ಹೊಂದಿರುವ ಕಾರುಗಳಿಗೆ ದಿನ ಬಿಟ್ಟು ದಿನ ಮಾತ್ರ ದೆಹಲಿಯಲ್ಲಿ ಸಂಚಾರಕ್ಕೆ ಅವಕಾಶ ಒದಗಿಸುವ ಸರ್ಕಾರದ ಕ್ರಮಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ

Comments