ದ್ವಿಪಕ್ಷೀಯ ಸಂವಾದ ಆರಂಭಕ್ಕೆ ಮುನ್ನುಡಿ

ಭಾರತ, ಪಾಕ್ ಭದ್ರತಾ ಸಲಹೆಗಾರರ ದಿಢೀರ್‌ ಚರ್ಚೆ

ಭಾರತ ಮತ್ತು ಪಾಕಿಸ್ತಾನ ನಡುವೆ ಸ್ಥಗಿತಗೊಂಡಿದ್ದ ಮಾತುಕತೆ ದಿಢೀರ್ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (ಎನ್‌ಎಸ್‌ಎ) ಅಜಿತ್‌ ಧೋಬಾಲ್‌ ಮತ್ತು ನಾಸಿರ್‌ ಜಂಜುವಾ ಬ್ಯಾಂಕಾಕ್‌ನಲ್ಲಿ ಭೇಟಿಯಾಗಿ ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರ ವಿಚಾರ ಮತ್ತು ಇತರ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ನವದೆಹಲಿ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ನಡುವೆ ಸ್ಥಗಿತಗೊಂಡಿದ್ದ ಮಾತುಕತೆ ದಿಢೀರ್ ಆರಂಭವಾಗಿದೆ.

ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ (ಎನ್‌ಎಸ್‌ಎ) ಅಜಿತ್‌ ಧೋಬಾಲ್‌ ಮತ್ತು ನಾಸಿರ್‌ ಜಂಜುವಾ ಬ್ಯಾಂಕಾಕ್‌ನಲ್ಲಿ ಭೇಟಿಯಾಗಿ ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರ ವಿಚಾರ ಮತ್ತು ಇತರ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಸತತವಾಗಿ ನಡೆದ ಮಾತುಕತೆಯಲ್ಲಿ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳಾದ ಎಸ್‌. ಜೈಶಂಕರ್‌ ಮತ್ತು ಇಜಾಜ್‌ ಅಹ್ಮದ್‌ ಚೌಧರಿ ಕೂಡ ಭಾಗಿಯಾದರು. ‘ರಚನಾತ್ಮಕ’ ಮಾತುಕತೆಯನ್ನು ಮುಂದುವರಿಸಲು ಈ ಸಂದರ್ಭದಲ್ಲಿ ಎರಡೂ ದೇಶಗಳು ಒಪ್ಪಿಕೊಂಡಿವೆ.

ನ. 30ರಂದು ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ವೈಪರೀತ್ಯ ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರು ಭೇಟಿಯಾಗಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದ್ದರು. ಈ ಭೇಟಿಯ ಹಿಂದೆಯೂ ಸ್ಥಗಿತಗೊಂಡ ಮಾತುಕತೆ ಪುನರಾರಂಭಿಸುವ ಉದ್ದೇಶ ಇತ್ತು.

ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಯ ನಂತರ ಜಂಟಿ ಹೇಳಿಕೆಯನ್ನೂ ಬಿಡುಗಡೆ ಮಾಡಲಾಗಿದೆ. ‘ಪ್ಯಾರಿಸ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿಗಳ ನಡುವಣ ಭೇಟಿಯ ಮುಂದುವರಿಕೆಯಾಗಿ ಎರಡೂ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಬ್ಯಾಂಕಾಕ್‌ನಲ್ಲಿ ನಡೆದಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಭೇಟಿಯು ಮುಂದಿನ ವಾರ ಪಾಕಿಸ್ತಾನದಲ್ಲಿ ನಡೆಯಲಿರುವ ಆಫ್ಘಾನಿಸ್ತಾನದ ಬಗೆಗಿನ ಬಹುಪಕ್ಷೀಯ ಸಮಾವೇಶದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಭಾಗವಹಿಸುವ ಹಾದಿಯನ್ನು ಸುಗಮಗೊಳಿಸಿದೆ.

ಮೋದಿ–ಷರೀಫ್‌ ಭೇಟಿ ಅನಿರೀಕ್ಷಿತವಲ್ಲ: ಪ್ಯಾರಿಸ್‌ನಲ್ಲಿ ಮೋದಿ ಮತ್ತು ಷರೀಫ್‌ ನಡುವಣ ಭೇಟಿ ಅನಿರೀಕ್ಷಿತ ಅಲ್ಲ ಎಂಬುದನ್ನು ಭಾನುವಾರದ ಮಾತುಕತೆಯು ಸ್ಪಷ್ಟಪಡಿಸಿದೆ. ಇದೊಂದು ಸೌಜನ್ಯದ ಭೇಟಿ ಎಂದು ಭಾರತ ಆಗ ಹೇಳಿತ್ತು. ಆದರೆ ಷರೀಫ್‌ ಅವರು ಪಾಕ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ. ‘ಉತ್ತಮ ಮಾತುಕತೆ ನಡೆಯಿತು. ದ್ವಿಪಕ್ಷೀಯ ಮಾತುಕತೆ ಆರಂಭವಾಗಬೇಕಿದೆ’ ಎಂದು ಹೇಳಿದ್ದರು.

ರಚನಾತ್ಮಕ ಮಾತುಕತೆಯನ್ನು ಮುಂದಕ್ಕೆ ಒಯ್ಯಲಾಗುವುದು ಎಂಬ ರಾಷ್ಟ್ರೀಯ ಸಲಹೆಗಾರರ ನಿರ್ಧಾರ ಕೂಡ ದ್ವಿಪಕ್ಷೀಯ ಮಾತುಕತೆಯನ್ನು ಮರಳಿ ಆರಂಭಿಸಲು ಎರಡೂ ದೇಶಗಳು ನೀಲನಕ್ಷೆಯನ್ನು ಹಾಕಿಕೊಂಡಿವೆ ಎಂಬುದನ್ನು ಸೂಚಿಸುತ್ತದೆ. 

ಮಾತುಕತೆ ಮಹಾ ವಂಚನೆ: ಇದೊಂದು ರಹಸ್ಯ ಮಾತುಕತೆ ಎಂದು ಬಣ್ಣಿಸಿರುವ ಕಾಂಗ್ರೆಸ್‌, ಈ ಮಾತುಕತೆ ‘ಮಹಾ ವಂಚನೆ’ ಮತ್ತು ಮೋದಿ ಸರ್ಕಾರದ ಪಾಕಿಸ್ತಾನ ನೀತಿಯ ‘ಅಸ್ಥಿರತೆ’ಯನ್ನು ತೋರುತ್ತದೆ ಎಂದು ಟೀಕಿಸಿದೆ.

ವಿದೇಶಾಂಗ ಸಚಿವರು ಮತ್ತು ಪಾಕಿಸ್ತಾನದ ಹಿಂದಿನ ಎನ್‌ಎಸ್‌ಎ ನಡುವೆ ವಾಗ್ಯುದ್ಧ ನಡೆದಿತ್ತು. ಈಗ ಯಾವುದೇ ಕಾರಣ ಇಲ್ಲದೆ ದಿಢೀರ್ ಮಾತುಕತೆ ನಡೆಸಲಾಗಿದೆ. ಸೆಪ್ಟೆಂಬರ್‌ ಮತ್ತು ಡಿಸೆಂಬರ್‌ ತಿಂಗಳ ಮಧ್ಯೆ ಏನು ಬದಲಾಗಿದೆ ಎಂಬುದನ್ನು ದೇಶಕ್ಕೆ ತಿಳಿಸದೆಯೇ ಮಾತುಕತೆ ನಡೆಸಲಾಗಿದೆ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಆರೋಪಿಸಿದ್ದಾರೆ.

ಮಾತುಕತೆ ಅಷ್ಟೊಂದು ಅಗತ್ಯ ಆಗಿದ್ದಿದ್ದರೆ ಅದರ ಹಿಂದಿನ ತರ್ಕ ಏನು ಎಂಬುದನ್ನು ದೇಶಕ್ಕೆ ವಿವರಿಸಬೇಕಿತ್ತು. ಹಾಗೆಯೇ ಮಾತುಕತೆಯನ್ನು ಒಂದೋ ದೆಹಲಿಯಲ್ಲಿ ಇಲ್ಲವೇ ಇಸ್ಲಾಮಾಬಾದ್‌ನಲ್ಲಿ ನಡೆಸಬೇಕಿತ್ತು ಎಂದು ತಿವಾರಿ ಹೇಳಿದ್ದಾರೆ.

ಬ್ಯಾಂಕಾಕ್‌ನಲ್ಲಿ ಯಾಕೆ?
ಎರಡೂ ತಂಡಗಳಿಗೆ ‘ಅನುಕೂಲಕರ’ ಎಂಬ ಕಾರಣಕ್ಕೆ ಬ್ಯಾಂಕಾಕನ್ನು ಮಾತುಕತೆಗೆ ಆಯ್ಕೆ ಮಾಡಲಾಗಿದೆ. ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಭಾರತ ಭೇಟಿಯ ಸಂಬಂಧ ವಿದೇಶಾಂಗ ಕಾರ್ಯದರ್ಶಿಗಳು ಟೋಕಿಯೊದಲ್ಲಿದ್ದರು. ಪಾಕಿಸ್ತಾನದ ನಿಯೋಗ ಕೂಡ ಪ್ರವಾಸದಲ್ಲಿದೆ. ಹಾಗಾಗಿ ಎರಡೂ ಕಡೆಗಳಿಗೆ ಅನುಕೂಲಕರ ಎಂಬ ಕಾರಣಕ್ಕೆ ಬ್ಯಾಂಕಾಕ್‌ನಲ್ಲಿ ಭೇಟಿ ನಡೆಸಲಾಯಿತು ಎಂದು ತಿಳಿಸಲಾಗಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಸರ್ತಾಜ್‌ ಅಜೀಜ್‌ ಅವರು ಮಾತುಕತೆಗಾಗಿ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು. ಇಂತಹ ಅಹಿತಕರ ಬೆಳವಣಿಗೆ ಪುನರಾವರ್ತನೆ ಆಗುವುದನ್ನು ತಪ್ಪಿಸುವುದಕ್ಕೆ ಮಾತುಕತೆಗೆ ಮೂರನೇ ದೇಶವೊಂದನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ದೆಹಲಿಯಲ್ಲಿ ಸರ್ತಾಜ್‌ ಅಜೀಜ್‌ ಅವರು ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಭೇಟಿಯಾಗಲು ಅವಕಾಶ ನೀಡುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದ ಕಾರಣ ಅವರ ಭೇಟಿಯನ್ನೇ ಪಾಕಿಸ್ತಾನ ರದ್ದುಪಡಿಸಿತ್ತು.

ಪ್ರಸ್ತಾಪವಾದ ವಿಚಾರಗಳು

* ಶಾಂತಿ ಮತ್ತು ಭದ್ರತೆ
* ಭಯೋತ್ಪಾದನೆ
* ಜಮ್ಮು ಮತ್ತು ಕಾಶ್ಮೀರ
* ಗಡಿ ರೇಖೆಯಲ್ಲಿ ಶಾಂತಿ

Comments