ಮಹಾರಾಷ್ಟ್ರ: ಇಂದಿನಿಂದ ಅಧಿವೇಶನ

ಪ್ರತ್ಯೇಕ ವಿದರ್ಭ ಚರ್ಚೆ ಸಂಭವ

ಪ್ರತ್ಯೇಕ ವಿದರ್ಭ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಕ್ಕೆ  ಅಡ್ವೊಕೇಟ್‌ ಜನರಲ್‌ ಶ್ರೀಹರಿ ಅಣೆ ಅವರು ಸಹಮತ ವ್ಯಕ್ತಪಡಿಸಿದ್ದು ಸೋಮವಾರ ಇಲ್ಲಿ ಆರಂಭವಾಗಲಿರುವ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆಯುವ ಸಂಭವವಿದೆ.

ನಾಗಪುರ: ಪ್ರತ್ಯೇಕ ವಿದರ್ಭ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಕ್ಕೆ  ಅಡ್ವೊಕೇಟ್‌ ಜನರಲ್‌ ಶ್ರೀಹರಿ ಅಣೆ ಅವರು ಸಹಮತ ವ್ಯಕ್ತಪಡಿಸಿದ್ದು ಸೋಮವಾರ ಇಲ್ಲಿ ಆರಂಭವಾಗಲಿರುವ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಕಾವೇರಿದ ಚರ್ಚೆ ನಡೆಯುವ ಸಂಭವವಿದೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಂತೆ ಅಣೆ ಅವರೂ,  ಮಹಾರಾಷ್ಟ್ರದ ಚಳಿಗಾಲದ ರಾಜಧಾನಿ ಹಾಗೂ ವಿದರ್ಭ ಪ್ರಾಂತ್ಯದ  ಕೇಂದ್ರ ಸ್ಥಾನವಾದ ನಾಗಪುರದವರೇ.

ಬಿಜೆಪಿಯ ಮಿತ್ರ ಪಕ್ಷವಾದ ಶಿವಸೇನೆ ಸಮಗ್ರ ಮಹಾರಾಷ್ಟ್ರದ ಪರವಾಗಿರುವ ಕಾರಣ ಅಣೆ ಅವರ ಹೇಳಿಕೆ ಎರಡೂ ಕೇಸರಿ ಮಿತ್ರ ಪಕ್ಷಗಳ ನಡುವೆ ಭಿನ್ನಮತ ಸೃಷ್ಟಿಸುವ ಸಾಧ್ಯತೆಯಿದೆ.

‘ಶೇ 51ರಷ್ಟು ಮತಗಳು ಪ್ರತ್ಯೇಕ ರಾಜ್ಯ ಸ್ಥಾಪನೆ ಪರವಾಗಿ ಚಲಾವಣೆಯಾದಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕ ರಾಜ್ಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ನಾವು ಬೇಡಿಕೆಯಿಡುವುದಿಲ್ಲ. ಆದರೆ ವಿದರ್ಭ ರಾಜ್ಯದ ಪರವಾಗಿ ಶೇ 80ಕ್ಕಿಂತಲೂ ಅಧಿಕ ಮತ ಬೀಳುತ್ತದೆ ಎಂಬ ವಿಶ್ವಾಸ ನನಗಿದೆ. ಇದೇ ಕಾರಣದಿಂದ ಕೇಂದ್ರ ಸರ್ಕಾರ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗುತ್ತಿಲ್ಲ’ ಎಂದು ಅಣೆ ಹೇಳಿದರು.

‘ವಿದರ್ಭಗಾಥಾ’ ಎಂಬ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಣೆ ಮಾತನಾಡಿದರು.

ಅಣೆ, ಕಾಂಗ್ರೆಸ್‌ನ ಹಿರಿಯ ಸಂಸದರಾಗಿದ್ದ ದಿವಂಗತ ಬಾಪೂಜಿ ಅಣೆ ಅವರ ಮೊಮ್ಮಗ ಹಾಗೂ ಪ್ರತ್ಯೇಕ ವಿದರ್ಭ ಹೋರಾಟದ ನೇತೃತ್ವ ವಹಿಸಿದ್ದಾರೆ. ಪ್ರತ್ಯೇಕ ವಿದರ್ಭ ಬೇಡಿಕೆ, ಅದಕ್ಕಾಗಿ ನಡೆದಿರುವ ಹೋರಾಟ ಹಾಗೂ ದೀರ್ಘಕಾಲದಿಂದಲೂ ಆಗಿರುವ ಅನ್ಯಾಯದ ಬಗ್ಗೆ ಪುಸ್ತಕದಲ್ಲಿ ಅವರು ಬರೆದಿದ್ದಾರೆ.

‘ಪ್ರತ್ಯೇಕ ವಿದರ್ಭ ಬೇಡಿಕೆ 1920ರಲ್ಲಿ ನಾಗಪುರ ಸಮಾವೇಶದ ವೇಳೆ ಮೊದಲ ಬಾರಿಗೆ ಪ್ರಸ್ತಾಪವಾದುದು. ಪಂಡಿತ್‌ ಜವಾಹರಲಾಲ್‌ ನೆಹರೂ ಅವರು ಅದನ್ನು ಬೆಂಬಲಿಸಿದ್ದರು. ಆದರೆ ರಾಜಕೀಯ ಸ್ಥಿತಿಗಳು ಬದಲಾದ ನಂತರ ಮತ್ತೆ ಅದರ ಪ್ರಸ್ತಾಪವಾಗಲೇ ಇಲ್ಲ’ ಎಂದು ಅಣೆ ಬರೆದಿದ್ದಾರೆ.

ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎನ್‌ಸಿಪಿ, ಮುಖ್ಯಮಂತ್ರಿ ಫಡಣವೀಸ್‌ ಭಾನುವಾರ ಏರ್ಪಡಿಸಿದ್ದ ಸಾಂಪ್ರದಾಯಿಕ ಚಹಾ ಕೂಟವನ್ನು ಬಹಿಷ್ಕರಿಸುವ ಮೂಲಕ ಅಧಿವೇಶನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸೂಚನೆ ನೀಡಿವೆ.

Comments