ನವದೆಹಲಿ

ಐಎಸ್‌ಐ ಜತೆ ನಂಟು ಯೋಧನ ಬಂಧನ

ಪಾಕಿಸ್ತಾನದ ಗೂಢಚರ್ಯ ಸಂಸ್ಥೆ ಐಎಸ್‌ಐನೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಯೋಧನೊಬ್ಬನನ್ನು ದೆಹಲಿ ಪೊಲೀಸರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಭಾನುವಾರ ಬಂಧಿಸಿದ್ದಾರೆ.

ನವದೆಹಲಿ (ಪಿಟಿಐ): ಪಾಕಿಸ್ತಾನದ ಗೂಢಚರ್ಯ ಸಂಸ್ಥೆ ಐಎಸ್‌ಐನೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಯೋಧನೊಬ್ಬನನ್ನು ದೆಹಲಿ ಪೊಲೀಸರು ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಭಾನುವಾರ ಬಂಧಿಸಿದ್ದಾರೆ.

ಬಂಧಿತನನ್ನು ಫರೀಧ್ ಖಾನ್ ಎಂದು ಗುರುತಿಸಲಾಗಿದೆ. ಸೇನೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಹಂಚಿಕೊಂಡ ಆರೋಪದ ಮೇಲೆ ದೆಹಲಿ ಪೊಲೀಸರ ತಂಡ (ಅಪರಾಧ ವಿಭಾಗ) ಆತನನ್ನು ಬಂಧಿಸಿದೆ.

ಐಎಸ್‌ಐ ಜತೆ ನಂಟು ಹೊಂದಿರುವ ಆರೋಪದ ಮೇಲೆ ಈವರೆಗೆ ಐದು ಜನರನ್ನು ಬಂಧಿಸಲಾಗಿದೆ.

ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪದಲ್ಲಿ ನವೆಂಬರ್‌ 26ರಂದು ಖೈಫತ್‌ ಉಲ್ಲಾ ಖಾನ್ ಎಂಬಾತನನ್ನು ಬಂಧಿಸಲಾಗಿತ್ತು. ಆತನ ಸಂಪರ್ಕದಲ್ಲಿದ್ದ ಹಾಗೂ ರಹಸ್ಯ ಮಾಹಿತಿ ಹಂಚಿಕೊಂಡ ಆರೋಪದಲ್ಲಿ ಗಡಿ ಭದ್ರತಾ ಪಡೆಯ ಯೋಧ ಅಬ್ದುಲ್ ರಷೀದ್, ಮಾಜಿ ಸೈನಿಕ ಮುನ್ನಾವರ್ ಅಹ್ಮದ್ ಮಿರ್ ಹಾಗೂ ಸರ್ಕಾರಿ ಶಾಲಾ ಶಿಕ್ಷಕ ಸಬರ್‌ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ.

ಸಬರ್‌ನನ್ನು ಶನಿವಾರವಷ್ಟೆ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು.

‘ಫರೀದ್, ಖೈಫತ್ ಉಲ್ಲಾ ಖಾನ್‌ ಜತೆ ನಡೆಸಿದ ಸಂಭಾಷಣೆ ಇರುವ ಸಿ.ಡಿ.ಯನ್ನು ಫರೀದ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಆತ ‘ಸರ್ಜನ್’ ಎಂಬ ಸಂಕೇತ ಶಬ್ದ ಬಳಸಿದ್ದಾನೆ. ಆತನ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಸೋಮವಾರ ಬೆಳಿಗ್ಗೆ ನವದೆಹಲಿಗೆ ಕರೆತರಲಾಗುತ್ತದೆ’ ಎಂದು  ದೆಹಲಿ ಪೊಲೀಸ್ ಜಂಟಿ ಆಯುಕ್ತ (ಅಪರಾಧ ವಿಭಾಗ) ರವೀಂದ್ರ ಯಾದವ್ ಮಾಹಿತಿ ನೀಡಿದ್ದಾರೆ.

‘ರಾಜೌರಿಯಲ್ಲಿ ಸೇವೆಯಲ್ಲಿದ್ದಾಗ ಫರೀದ್ ಸಬರ್‌ನನ್ನು ಭೇಟಿ ಮಾಡಿದ್ದ. ಹಾಗೂ ಇತರ ಆರೋಪಿಗಳೊಂದಿಗೂ ಚರ್ಚೆ ನಡೆಸಿದ್ದ’ ಎಂದು ಯಾದವ್ ತಿಳಿಸಿದ್ದಾರೆ.

Comments