ಖಾಸಗಿ ವಾಹನಗಳ ಸಂಚಾರ ನಿರ್ಬಂಧದಿಂದ ಗೊಂದಲ

ವಾಯುಮಾಲಿನ್ಯದ ಮಟ್ಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ತಾತ್ಕಾಲಿಕ ಕ್ರಮ ಆಗಬಹುದೇ ಹೊರತು, ದೀರ್ಘಕಾಲೀನ ಪರಿಹಾರವಾಗಿ ಯಶಸ್ಸು ಹೊಂದುವುದು ಕಷ್ಟ

ದೆಹಲಿಯಲ್ಲಿ ವಿಪರೀತ ಏರುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಹೊಸ ಉಪಕ್ರಮವೊಂದನ್ನು ಪ್ರಕಟಿಸಿದೆ. ಜನವರಿ ಒಂದರಿಂದ ಜಾರಿಗೆ ಬರಲಿರುವ ಈ ಉಪಕ್ರಮದ ಪ್ರಕಾರ, ಖಾಸಗಿ ವಾಹನಗಳು ಇನ್ನು ಮುಂದೆ ದಿನಬಿಟ್ಟು ದಿನ ರಸ್ತೆಗಿಳಿಯಲಿವೆ.

ಸಮ ಸಂಖ್ಯೆಯನ್ನು ನೋಂದಣಿಯಾಗಿ ಹೊಂದಿರುವ ಖಾಸಗಿ ವಾಹನಗಳು ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ರಸ್ತೆಗಿಳಿಯಬಹುದಾದರೆ, ಬೆಸಸಂಖ್ಯೆಯ ನಂಬರ್‌ಪ್ಲೇಟ್‌ ಹೊಂದಿರುವ ವಾಹನಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ರಸ್ತೆಗಿಳಿಯಬಹುದು.

ಭಾನುವಾರದ ವ್ಯವಸ್ಥೆ ಹೇಗೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಎರಡು ವಾರಗಳ ಕಾಲ ಈ ಪ್ರಯೋಗವನ್ನು ಅನುಸರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ದೆಹಲಿಯ ಸಾರಿಗೆ ಸಚಿವರು ಪ್ರಕಟಿಸಿದ್ದಾರೆ. ಜಗತ್ತಿನಲ್ಲೇ ಅತ್ಯಧಿಕ ವಾಯುಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೆಹಲಿ ಮುಂಚೂಣಿಯಲ್ಲಿ ಇರುವುದನ್ನು ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯೇ ಗುರುತಿಸಿ ಎಚ್ಚರಿಕೆ ನೀಡಿತ್ತು.

ವಾಯುಮಾಲಿನ್ಯದ ಅತ್ಯಧಿಕ ಪ್ರಮಾಣದಿಂದಾಗಿ ಚಳಿಗಾಲದ ದಿನಗಳಲ್ಲಿ ದೆಹಲಿಯ ವಾತಾವರಣದಲ್ಲಿ ದಟ್ಟ ಹೊಗೆ ಕವಿಯುತ್ತಿದ್ದು, ಅದನ್ನು ತಡೆಯಲೆಂದೇ ದೆಹಲಿ ಸರ್ಕಾರವು ಖಾಸಗಿ ವಾಹನ ಸಂಚಾರವನ್ನು ನಿಯಂತ್ರಿಸುವ ಈ ತುರ್ತು ಕ್ರಮಗಳನ್ನು ಪ್ರಕಟಿಸಿದೆ.

ಸರ್ಕಾರದ ಈ ಕ್ರಮ ಸಾರ್ವಜನಿಕರಲ್ಲಿ ಸಹಜವಾಗಿಯೇ ಗೊಂದಲವನ್ನು ಉಂಟು ಮಾಡಿದೆ. ದೆಹಲಿಯ ರಸ್ತೆಗಳಲ್ಲಿ ಪ್ರತಿನಿತ್ಯದ ‘ಟ್ರಾಫಿಕ್‌ ಜಾಮ್‌’ಗಳನ್ನು ಗಮನಿಸಿದರೆ, ಕಚೇರಿ, ಕಾರ್ಖಾನೆಗಳಿಗೆ ಓಡಾಡುವ ಜನರು ಸ್ವಂತ ವಾಹನವನ್ನು ಬಳಸದಿದ್ದರೆ ಸೂಕ್ತ ಸಮಯದಲ್ಲಿ ಕೆಲಸದ ಸ್ಥಳಕ್ಕೆ ತಲುಪುವುದು ಕಷ್ಟವೇ.

ವಾರದ ಮೂರು ದಿನಗಳಲ್ಲಿ ಅವರ ಸ್ವಂತ ವಾಹನಗಳನ್ನು ಬಳಸಲು ನಿಷೇಧ ಹೇರಿದರೆ, ಅವರು ಯಾವ ಪರ್ಯಾಯ ಕ್ರಮಗಳನ್ನು ಅನುಸರಿಸಬೇಕು? ಹೆಚ್ಚುವರಿಯಾಗಿ 7000 ನಗರ ಸಾರಿಗೆ ಬಸ್‌ಗಳನ್ನು ಸಂಚಾರಕ್ಕೆ ಬಿಡುವುದಾಗಿ ಅಲ್ಲಿನ ಸಚಿವರೇನೋ ಹೇಳಿದ್ದಾರೆ. ಆದರೆ ಇದರಿಂದ ಸಾರಿಗೆ ವ್ಯವಸ್ಥೆ ಸುಗಮವಾಗಿ ಸಕಾಲಕ್ಕೆ ತಲುಪಬಹುದು ಎನ್ನುವ ವಿಶ್ವಾಸ ಜನರಲ್ಲಿ ಇಲ್ಲ. ಮೆಟ್ರೊ ರೈಲಿನ ಕೋಚ್‌ಗಳ ಮತ್ತು ಟ್ರಿಪ್‌ಗಳ ಹೆಚ್ಚಳದ ಬಗ್ಗೆ ಪರಿಶೀಲಿಸುವುದಾಗಿಯೂ ಸಚಿವರು ಹೇಳಿದ್ದಾರೆ. ಆದರೆ ಈ ಕ್ರಮಗಳನ್ನು ಕೈಗೊಳ್ಳದೆ ಏಕಾಏಕಿ ಖಾಸಗಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಿದರೆ ಸಾರ್ವಜನಿಕರು ತೀವ್ರ ತೊಂದರೆಗೆ ಒಳಗಾಗುವುದು ಖಚಿತ.

ಈ ಹಿಂದೆ ಪ್ಯಾರಿಸ್‌, ಬೀಜಿಂಗ್ ಮತ್ತು ಮೆಕ್ಸಿಕೊ ನಗರಗಳಲ್ಲೂ ವಾಯುಮಾಲಿನ್ಯವನ್ನು ತಗ್ಗಿಸಲು ಇದೇ ರೀತಿಯಾಗಿ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಆ ನಗರಗಳಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಇದರಿಂದ ಹೆಚ್ಚಿನ ಉಪಯೋಗವಾದ ವರದಿಗಳಿಲ್ಲ. ಮೆಕ್ಸಿಕೊ ನಗರದಲ್ಲಂತೂ ಆ ಕ್ರಮದ ಬಳಿಕ ಎರಡೆರಡು ವಾಹನಗಳನ್ನು ಖರೀದಿಸಿದ ಜನರ ಸಂಖ್ಯೆ ಏರಿಕೆಯಾದದ್ದು ವರದಿಯಾಗಿತ್ತು. 

ವಾಯುಮಾಲಿನ್ಯದ ಮಟ್ಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇದೊಂದು ತಾತ್ಕಾಲಿಕ ಕ್ರಮ ಆಗಬಹುದೇ ಹೊರತು, ದೀರ್ಘಕಾಲೀನ ಪರಿಹಾರವಾಗಿ ಯಶಸ್ಸು ಹೊಂದುವುದು ಕಷ್ಟ. ದೆಹಲಿಯಲ್ಲಿ ಈಗಾಗಲೆ ಸರ್ಕಾರಿ ವಾಹನಗಳಿಗೆ ಸಿಎನ್‌ಜಿ ಇಂಧನದ ಸೌಲಭ್ಯವಿದೆ. ಇದರ ಹೊರತಾಗಿಯೂ ವಾಯುಮಾಲಿನ್ಯದ ಪ್ರಮಾಣ ತೀವ್ರ ಏರಿಕೆ ಕಂಡಿರುವುದರ ಹಿಂದಿನ ಬಲವಾದ ಕಾರಣಗಳನ್ನು ಪತ್ತೆ ಹಚ್ಚಬೇಕಿದೆ. ಖಾಸಗಿ ವಾಹನಗಳ ಹೊಗೆ ಪರೀಕ್ಷಾ ಕ್ರಮಗಳನ್ನು ಇನ್ನಷ್ಟು ಕಠಿಣಗೊಳಿಸಬೇಕಿದೆ.

ಕೇಂದ್ರ ಸರ್ಕಾರದ ಸೂಚನೆಯ ಪ್ರಕಾರ, 2019ರಿಂದ ಎಲ್ಲ ಹೊಸ ವಾಹನಗಳೂ ಯೂರೊ 6 ಮಾಲಿನ್ಯ ತಡೆ ಮಾನದಂಡಗಳನ್ನು ಅನುಸರಿಸಬೇಕಿದೆ. ಈ ಅವಧಿಯನ್ನು 2017ಕ್ಕೆ ಹಿಂದೂಡಲು ಕ್ರಮ ಕೈಗೊಳ್ಳುವ ಸಲಹೆಯೂ ಉತ್ತಮವಾದದ್ದು. ಹೆಚ್ಚು ಪರಿಸರ ಮಾಲಿನ್ಯ ಉಂಟು ಮಾಡುವ ಕಾರ್ಖಾನೆಗಳನ್ನು ಬಂದ್‌ ಮಾಡಲು ಹಾಗೂ ಜನರಲ್ಲಿ ಅನವಶ್ಯಕ ವಾಹನ ಬಳಕೆಯ ಪ್ರವೃತ್ತಿಯನ್ನು ತಡೆಯಲು ಸರ್ಕಾರ ಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹತ್ತಿರದ ಸ್ಥಳಗಳಿಗೆ ಸೈಕಲ್‌ನಲ್ಲಿ ತೆರಳಲು ಪ್ರತ್ಯೇಕ ಸೈಕಲ್‌ಟ್ರ್ಯಾಕ್‌ಗಳ ನಿರ್ಮಾಣವೂ ಆಗಬೇಕಿದೆ.

Comments