‘ನಿಮ್ಹಾನ್ಸ್‌ ಇಂಟಿಗ್ರೇಟೆಡ್‌ ಸೆಂಟರ್‌ ಫಾರ್‌ ಯೋಗ’ ಕಟ್ಟಡದ ಶಿಲಾನ್ಯಾಸ

ಮನಃಶಾಸ್ತ್ರಜ್ಞರಿಗೆ ದಲೈಲಾಮ ಪಾಠ

ಇವರು ನಿತ್ಯ ಮನೋ ರೋಗಿಗಳಿಗೆ ಚಿಕಿತ್ಸೆ ನೀಡುವವರು. ಆದರೆ ಮನುಷ್ಯನ ನಡವಳಿಕೆ, ಮನಸ್ಸಿಗೆ ಸಂಬಂಧಿಸಿದಂತೆ ಸೋಮವಾರ ಇವರೇ ಬೇರೆಯವರಿಂದ ಸಲಹೆ ಪಡೆದರು!

ಬೆಂಗಳೂರು: ಇವರು ನಿತ್ಯ ಮನೋ ರೋಗಿಗಳಿಗೆ ಚಿಕಿತ್ಸೆ ನೀಡುವವರು. ಆದರೆ ಮನುಷ್ಯನ ನಡವಳಿಕೆ, ಮನಸ್ಸಿಗೆ ಸಂಬಂಧಿಸಿದಂತೆ ಸೋಮವಾರ ಇವರೇ ಬೇರೆಯವರಿಂದ ಸಲಹೆ ಪಡೆದರು!

ಅಂದಹಾಗೆ ಈ ಮನಃಶಾಸ್ತ್ರಜ್ಞರಿಗೆ ಪಾಠ ಮಾಡಿದ್ದು ಟಿಬೆಟ್‌ ಧರ್ಮಗುರು ದಲೈಲಾಮ ಅವರು ಎನ್ನುವುದು ವಿಶೇಷ.
‘ನಿಮ್ಹಾನ್ಸ್‌ ಇಂಟಿಗ್ರೇಟೆಡ್‌ ಸೆಂಟರ್‌ ಫಾರ್‌ ಯೋಗ’ ಕಟ್ಟಡದ ಶಿಲಾನ್ಯಾಸವನ್ನು ದಲೈಲಾಮ ಅವರು ಸೋಮವಾರ ನಗರದಲ್ಲಿ ನೆರವೇರಿಸಿದರು. ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮನಃಶಾಸ್ತ್ರಜ್ಞರು ಹಾಗೂ ಸಿಬ್ಬಂದಿಯ ಪ್ರಶ್ನೆಗಳಿಗೆ ಉತ್ತರಿಸಿದರು.

‘ಇಂದು ವಿಜ್ಞಾನ ಸಾಕಷ್ಟು ಬೆಳೆದಿರಬಹುದು. ಆದರೆ ಪ್ರಾಚೀನ ಕಾಲದ ವ್ಯಕ್ತಿಯಲ್ಲಿದ್ದ ಬೌದ್ಧಿಕ ಪರಿಪಕ್ವತೆ ಈಗಿನವರಲ್ಲಿ ಕಾಣುತ್ತಿಲ್ಲ’ ಎಂದು  ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ನಿಮ್ಮಂತೆ ಸರಳ ಮನುಷ್ಯನಾಗಿ ಜೀವಿಸುವುದು ಹೇಗೆ’ ಎಂಬ ಪ್ರಶ್ನೆಗೆ, ‘ನಿಮ್ಮಲ್ಲಿರುವ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿಕೊಳ್ಳುವುದರ ಮೂಲಕ’ ಎಂದು ಉತ್ತರಿಸಿದಾಗ ಇಡೀ ಸಭೆ ನಗೆಗಡಲಲ್ಲಿ ತೇಲಾಡಿತು.

‘ಉದಾಹರಣೆಗೆ ನನ್ನನ್ನೆ ತೆಗೆದುಕೊಳ್ಳಿ, ನಾನೊಬ್ಬ ವಿಶೇಷ ವ್ಯಕ್ತಿ ಎಂದು ಭಾವಿಸಿಕೊಂಡರೆ ಸಾಮಾನ್ಯ ವ್ಯಕ್ತಿಯಂತೆ ಇರಲು ಸಾಧ್ಯವಾಗುವುದಿಲ್ಲ.  ನಾನು ಶ್ರೇಷ್ಠ ಎಂಬ ದುರಹಂಕಾರ ಬಂದರೆ ಜನಸಾಮಾನ್ಯರಂತೆ ಬದುಕಲು ಆಗುವುದಿಲ್ಲ. ಎಲ್ಲರೂ ಹುಟ್ಟುವುದು, ಸಾಯುವುದು ಇದೇ ಭೂಮಿಯಲ್ಲಿ ಎಂಬುದನ್ನು ಮರೆಯಬಾರದು’ ಎಂದೂ ಹೇಳಿದರು.

‘ಶಾಲಾ ದಿನಗಳಲ್ಲಿ ನನ್ನ ಎಲ್ಲ ಪ್ರಶ್ನೆಗಳಿಗೆ ನಮ್ಮ ಶಿಕ್ಷಕಿಯೊಬ್ಬರು ನಗುಮುಖದಿಂದ ಉತ್ತರಿಸುತ್ತಿದ್ದರು. ಹಾಗಾಗಿ ಅವರು ಹೇಳಿದ ವಿಚಾರಗಳು ನಮ್ಮ ಅಂತರಾಳಕ್ಕೆ ಹೋಗುತ್ತಿತ್ತು. ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣದಿದ್ದರೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ಪ್ರಾರ್ಥನೆ, ಧ್ಯಾನ ಮಾಡುವುದರಿಂದ ಪ್ರತಿಯೊಬ್ಬರಿಗೂ ಲಾಭವಾಗುತ್ತದೆ. ಜೊತೆಗೇ ಮನುಷ್ಯನನ್ನು ಒಳಗಿನಿಂದ ಗಟ್ಟಿ ಮಾಡುತ್ತದೆ. ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಶಕ್ತಿ ನೀಡುತ್ತದೆ’ ಎಂದರು.

‘ದೇವರು ಸುಂದರ, ಶಾಂತಿಯುತ ಜಗತ್ತನ್ನು ಸೃಷ್ಟಿ ಮಾಡಿದ್ದಾನೆ. ಆದರೆ ಮನುಷ್ಯ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದಾನೆ’ ಎಂದು ಹೇಳಿದರು.

‘ಶೂನ್ಯತ್ವ ಎನ್ನುವುದು ಏನೂ ಇಲ್ಲ ಎಂದರ್ಥವಲ್ಲ. ಅದು ಎಲ್ಲವನ್ನೂ ಒಳಗೊಂಡಿರುವಂತಹದ್ದು, ಪರಿಪಕ್ವವಾದುದು’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.

‘ಪಾಶ್ಚಿಮಾತ್ಯರ ಪ್ರಭಾವದಿಂದ ಭಾರತ ತನ್ನ ಪರಂಪರೆ ಯನ್ನು ಮರೆಯುತ್ತಿದೆ. ಭಾರತದ ಪ್ರಾಚೀನ ಪರಂಪರೆ, ಜ್ಞಾನದ ಬಗ್ಗೆ ಇನ್ನಷ್ಟು ಸಂಶೋಧನೆ, ವಿಶ್ಲೇಷಣೆ ಆಗಬೇಕು. ಇದರಿಂದ ಮತ್ತಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತವೆ’ ಎಂದರು.

‘ಬೌದ್ಧ ಧರ್ಮ ಸೇರಿದಂತೆ ಇತರ ಯಾವುದೇ ಧರ್ಮದ ಬಗ್ಗೆ ಅಳವಾಗಿ ತಿಳಿದುಕೊಳ್ಳದ ಹೊರತು ಆ ಧರ್ಮವನ್ನು ಅನುಕರಿಸಬಾರದು’ ಎಂದು ಹೇಳಿದರು.

ಲ್ಹಮೊ ಧೊಂಡುಪ್‌ ಬಾಲ್ಯದ ಹೆಸರು
‘ಲ್ಹಮೊ ಧೊಂಡುಪ್‌ ನನ್ನ ಪೂರ್ವದ ಹೆಸರು. ನಮ್ಮ ಗ್ರಾಮದ ಬೌದ್ಧ ಸನ್ಯಾಸಿಯೊಬ್ಬರು ಈ ಹೆಸರು ಇಟ್ಟಿದ್ದರು. ‘ಲ್ಹಮೊ’ ಎಂದರೆ ‘ದೇವತೆ’, ‘ಧೊಂಡುಪ್‌’ ಎಂದರೆ ಸಾಧಿಸು ಎಂದರ್ಥ. ಬಳಿಕ ಮಂಗೋಲಿಯದ ಸನ್ಯಾಸಿಯೊಬ್ಬರು ದಲೈಲಾಮ ಎಂದು ಮರು ನಾಮಕರಣ ಮಾಡಿದರು. ‘ದಲೈ’ ಎಂದರೆ ‘ಸಾಗರ’, ‘ಲಾಮ’ ಎಂದರೆ ‘ಗುರು’ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ದಲೈಲಾಮ ಅವರು ಹೀಗೆ ವಿವರಣೆ ನೀಡಿದರು.

Comments