ಮಾತುಕತೆ ನಡೆಯಲಿ, ಶಾಂತಿ ಪ್ರಕ್ರಿಯೆ ಮುಂದುವರಿಯಲಿ

ಬ್ಯಾಂಕಾಕ್‌ನಲ್ಲಿ ನಡೆದ ಭಾರತ– ಪಾಕ್‌ ಉನ್ನತ ಮಟ್ಟದ ಮಾತುಕತೆ ಅನಿರೀಕ್ಷಿತ; ಆದರೂ ಸ್ವಾಗತಾರ್ಹ

ಭಾರತ– ಪಾಕಿಸ್ತಾನದ ಮಧ್ಯೆ ಬಹುತೇಕ ನಿಂತೇ ಹೋಗಿದ್ದ ಮಾತುಕತೆಗೆ ಮತ್ತೆ  ಜೀವ ಬಂದಿದೆ. ಯಾರೂ ಊಹಿಸದೇ ಇದ್ದಂಥ ಅತ್ಯಂತ ಅನಿರೀಕ್ಷಿತ ಬೆಳವಣಿಗೆಯಲ್ಲಿ  ಎರಡೂ ದೇಶಗಳ ‘ರಾಷ್ಟ್ರೀಯ ಭದ್ರತಾ ಸಲಹೆಗಾರರು’ ಮೂರನೇ ದೇಶವೊಂದರ ನೆಲದಲ್ಲಿ ಅಂದರೆ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಭಾನುವಾರ ದಿಢೀರನೆ ಸಭೆ ನಡೆಸಿದ್ದಾರೆ.

ರಚನಾತ್ಮಕವಾಗಿ ಮಾತುಕತೆ ಮುಂದುವರಿಸಲು ಒಪ್ಪಿಕೊಂಡಿದ್ದಾರೆ. ಇದರ ಫಲವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮಂಗಳವಾರ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಆಫ್ಘಾನಿಸ್ತಾನಕ್ಕೆ ಸಂಬಂಧಪಟ್ಟ ಬಹುಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವೆಲ್ಲ ಸಕಾರಾತ್ಮಕ ಮತ್ತು ಸ್ವಾಗತಾರ್ಹ ಬೆಳವಣಿಗೆಗಳು. ವಾರದ ಹಿಂದೆ ಪ್ಯಾರಿಸ್‌ನಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರು  ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಜತೆ ಕುಳಿತು ಬರೀ 180 ಸೆಕೆಂಡ್‌ ಮಾತನಾಡಿದ್ದರು. 

ಅದೊಂದು ಸೌಜನ್ಯದ ಮುಖಾಮುಖಿ ಇರಬಹುದೇ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿದ್ದವು. ಅದು ಇಷ್ಟು ಬೇಗ ಉನ್ನತ ಮಟ್ಟದ ಮಾತುಕತೆಗೆ ದಾರಿ ಮಾಡಿಕೊಟ್ಟೀತು ಎಂಬ ಸಣ್ಣ ಸುಳಿವೂ ಇರಲಿಲ್ಲ. ಸದ್ಯಕ್ಕಂತೂ ಎರಡೂ ದೇಶಗಳ ನಡುವೆ ಮಾತುಕತೆ ಸಾಧ್ಯವೇ ಇಲ್ಲ ಎಂಬ ಭಾವನೆಯೇ ದಟ್ಟವಾಗಿತ್ತು. ಆ ವಾತಾವರಣವೇ ಹಾಗಿತ್ತು. ಏಕೆಂದರೆ ಜುಲೈ 11 ರಂದು ರಷ್ಯಾದ ಉಫಾದಲ್ಲಿ ಮೋದಿ ಮತ್ತು ಷರೀಫ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಗೆ ಒಪ್ಪಿಕೊಂಡ ನಂತರದ ವಿದ್ಯಮಾನಗಳು ಇಂಥದ್ದೊಂದು ಭಾವನೆ ಮೂಡಿಸಿದ್ದವು.

ಪಾಕಿಸ್ತಾನದ ಆಗಿನ  ಭದ್ರತಾ ಸಲಹೆಗಾರ ಸರ್ತಾಜ್‌ ಅಜೀಜ್‌ ಮತ್ತು ಭಾರತದ ಭದ್ರತಾ ಸಲಹೆಗಾರ ಅಜಿತ್‌ ಧೋಬಾಲ್‌ ಮಧ್ಯೆ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ  ಏರ್ಪಾಡಾಗಿದ್ದ ಮಾತುಕತೆ ಕೊನೆ ಕ್ಷಣದಲ್ಲಿ ರದ್ದಾಗಿತ್ತು. ಆಗಲೂ ಅಡ್ಡ ಬಂದದ್ದು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನ ನೀಡಿದ್ದ ಆಹ್ವಾನ. ಅದಾದ ಮೂರೇ ತಿಂಗಳಲ್ಲಿ ಏಕಾಏಕಿ ಕಾರ್ಮೋಡ ಕರಗಿದೆ. ಹೊಸ ಆಶಾಭಾವನೆಗೆ ಕಾರಣವಾಗಿದೆ.

ಸಹಜವಾಗಿಯೇ ರಾಜಕೀಯ ವಲಯದಲ್ಲಿ ಸಾಕಷ್ಟು ಅಪಸ್ವರವನ್ನೂ ಎಬ್ಬಿಸಿದೆ. ಭಯೋತ್ಪಾದನೆ ಮತ್ತು ಮಾತುಕತೆ ಜತೆಜತೆಯಾಗಿ ನಡೆಯಲು ಸಾಧ್ಯವೇ ಇಲ್ಲ ಎಂಬ ನಿಲುವನ್ನು ಪ್ರತಿಪಾದಿಸುತ್ತಿದ್ದ ಕೇಂದ್ರ ಸರ್ಕಾರದ ಮನಃಪರಿವರ್ತನೆಗೆ ಕಾರಣವಾದ ಬೆಳವಣಿಗೆಗಳು ಯಾವುವು ಎಂದು ಕಾಂಗ್ರೆಸ್‌ ಮೂಲಭೂತ ಪ್ರಶ್ನೆ ಎತ್ತಿದೆ. ಬಿಜೆಪಿಯ ಮಿತ್ರಪಕ್ಷವಾದ ಶಿವಸೇನಾ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಬಿಜೆಪಿಯ ಭಿನ್ನಬಣದ ಮುಖಂಡ, ವಿದೇಶಾಂಗ ಖಾತೆ ಮಾಜಿ ಸಚಿವ ಯಶವಂತ ಸಿನ್ಹಾ ಸಹ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಸಂಸತ್‌ ನಡೆಯುತ್ತಿರುವಾಗ ಅತ್ಯಂತ ಮಹತ್ವದ ಮಾತುಕತೆಯೊಂದನ್ನು ನಡೆಸಿದರೆ ಟೀಕೆಗಳು ಬರುವುದು ಸಹಜ. ಅದರರ್ಥ ಅವರೆಲ್ಲ ಶಾಂತಿ ಪ್ರಕ್ರಿಯೆ ವಿರೋಧಿಸುತ್ತಿದ್ದಾರೆ ಎಂದಲ್ಲ. ಮಹತ್ವದ ಹೆಜ್ಜೆ ಇಡುವ ಮುನ್ನ ಸಂಸತ್ತನ್ನು, ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದು ಅಪೇಕ್ಷಣೀಯವೂ ಹೌದು, ಪ್ರಜಾಸತ್ತಾತ್ಮಕವಾಗಿ ಕೆಲಸ ನಿರ್ವಹಿಸಬೇಕಾದ ಸರ್ಕಾರವೊಂದರ ಕರ್ತವ್ಯವೂ ಹೌದು.

ಆದರೆ ಎರಡೂ ದೇಶಗಳ ನಡುವಿನ ಚರ್ಚೆಯಲ್ಲಿ ಮೂರನೇ ವ್ಯಕ್ತಿಗೆ ಆಹ್ವಾನ  ಅಥವಾ ಮಧ್ಯಪ್ರವೇಶದ ಅವಕಾಶ ಇಲ್ಲ ಎಂಬುದು ಭಾರತದ ನಿಲುವು. ಈಗ  ಮೂರನೇ ದೇಶದಲ್ಲಿ ಸಭೆ ನಡೆದಿರಬಹುದು. ಇದರಲ್ಲಿ ಹೊಸದೇನಿಲ್ಲ. 1966ರ ಜನವರಿಯಲ್ಲಿ ಆಗಿನ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಮತ್ತು ಪಾಕ್‌ ಅಧ್ಯಕ್ಷ ಅಯೂಬ್‌ ಖಾನ್‌ ರಷ್ಯದ ತಾಷ್ಕೆಂಟ್‌ನಲ್ಲಿ ಮಾತುಕತೆ ನಡೆಸಿದ್ದರು. 
ಭಾರತ– ಪಾಕಿಸ್ತಾನದ ನಡುವಿನ ಸಂಬಂಧ ಯಾವಾಗಲೂ ಅತ್ಯಂತ ನಾಜೂಕು.

ಇತಿಹಾಸವನ್ನು ಅವಲೋಕಿಸಿದರೆ ಇದರಲ್ಲಿ ಅನಿರೀಕ್ಷಿತ ತಿರುವುಗಳೇ ಕಂಡು ಬರುತ್ತವೆ. ಯಾವುದೋ ಕಾರಣಕ್ಕೆ ದಿಢೀರನೆ ಒಮ್ಮೆ ಮಾತುಕತೆ ನಿಂತು ಹೋದ, ಅಷ್ಟೇ ಅಚ್ಚರಿ ಮೂಡಿಸುವಂತೆ ಪುನರಾರಂಭಗೊಂಡ ಅನೇಕ ನಿದರ್ಶನಗಳಿವೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಮತ್ತು ಸಮಾಲೋಚನೆಗಳು  ಕಾಶ್ಮೀರ ವಿವಾದದ ಬಗ್ಗೆ ಹಗ್ಗಜಗ್ಗಾಟ, ಕಾರ್ಮೋಡ ಇಲ್ಲದೆ ನಡೆದ ಉದಾಹರಣೆಗಳೇ ವಿರಳ.

ಆದರೆ ನೆರೆದೇಶದ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳುವುದು ಅತ್ಯಗತ್ಯ ಮತ್ತು ಅನಿವಾರ್ಯ. ‘ನಿಮ್ಮ ಸಂಬಂಧಿಗಳು ಯಾರಿರಬೇಕು ಎಂದು ನೀವು ಆಯ್ಕೆ ಮಾಡಿಕೊಳ್ಳಬಹುದು; ಆದರೆ ನೆರೆಹೊರೆಯವರು ಯಾರಿರಬೇಕು ಎಂದು ಆಯ್ಕೆ ಮಾಡಿಕೊಳ್ಳುವ ಅವಕಾಶವೇ ಇರುವುದಿಲ್ಲ. ಅವರೊಂದಿಗೆ ಸ್ನೇಹದಿಂದ ಇರುವುದೇ ಏಕೈಕ  ಮಾರ್ಗ’ ಎಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಒಮ್ಮೆ ಹೇಳಿದ್ದರು.

ಪಾಕ್‌ ಮತ್ತು ಭಾರತಕ್ಕೆ ಇದು  ಹೆಚ್ಚು ಅನ್ವಯಿಸುತ್ತದೆ. ವಿವಾದ ಪರಿಹಾರಕ್ಕೆ ಮಾತುಕತೆಯೊಂದೇ ಮಾರ್ಗ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ನಮ್ಮ ವಿದೇಶಾಂಗ ನೀತಿ ಪ್ರಬುದ್ಧವಾಗಿರಬೇಕು ಎಂಬ ಕಾಳಜಿ ಕೂಡ ಸರ್ಕಾರಕ್ಕೆ ಇರಬೇಕು.

Comments