ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಹೇಳಿಕೆ

ಭಾರದ್ವಾಜ್‌ ಒತ್ತಡದಿಂದ ನೇಮಕ

ರಾಜ್ಯಪಾಲರ (ಎಚ್‌.ಆರ್‌. ಭಾರದ್ವಾಜ್) ಒತ್ತಾಯಕ್ಕೆ ಮಣಿದು ಬಿಜೆಪಿ ಸರ್ಕಾರವು ನ್ಯಾಯಮೂರ್ತಿ ವೈ. ಭಾಸ್ಕರ್‌ ರಾವ್‌ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಿತ್ತು ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಮಂಗಳವಾರ ಬಹಿರಂಗಪಡಿಸಿದ್ದಾರೆ.

ಬೆಂಗಳೂರು:  ರಾಜ್ಯಪಾಲರ (ಎಚ್‌.ಆರ್‌. ಭಾರದ್ವಾಜ್) ಒತ್ತಾಯಕ್ಕೆ ಮಣಿದು ಬಿಜೆಪಿ ಸರ್ಕಾರವು ನ್ಯಾಯ ಮೂರ್ತಿ ವೈ. ಭಾಸ್ಕರ್‌ ರಾವ್‌ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಿತ್ತು ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಮಂಗಳವಾರ ಇಲ್ಲಿ ಬಹಿರಂಗಪಡಿಸಿದರು.

ಸುದ್ದಿಗೋಷ್ಠಿ ನಡೆಸಿದ ಅವರು, ‘ಸಂತೋಷ ಹೆಗ್ಡೆ  ನಿವೃತ್ತರಾದಾಗ ನಮ್ಮ ಮನಸ್ಸಿಗೆ ಬಂದ ಹೆಸರು ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರದ್ದು. ಆದರೆ, ನಿವೇಶನ ಹೊಂದಿದ್ದ ಆರೋಪ ಕೇಳಿ ಬಂದಾಗ, ಮನ ನೊಂದು ಲೋಕಾಯುಕ್ತ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರು. ಆ ಬಳಿಕ ನ್ಯಾಯಮೂರ್ತಿ ಬನ್ನೂರು ಮಠ ಅವರ ಹೆಸರನ್ನು ಸರ್ಕಾರ ರಾಜ್ಯ ಪಾಲ ರಿಗೆ ಕಳುಹಿಸಿತ್ತು. ಆದರೆ, ಅಂದಿನ ರಾಜ್ಯಪಾಲರು ಆ ಹೆಸರನ್ನು ತಿರಸ್ಕರಿಸಿದ್ದರು’ ಎಂದರು.

‘ಸರ್ಕಾರ ಹಲವು ನ್ಯಾಯ ಮೂರ್ತಿ ಗಳನ್ನು ಸಂಪರ್ಕಿಸಿತ್ತು. ಅಂತಿ ಮವಾಗಿ, ಭಾಸ್ಕರ ರಾವ್‌ ಅವರನ್ನೇ ನೇಮಕ ಮಾಡಬೇಕು ಎಂಬರ್ಥದ ಸೂಚನೆ ರಾಜಭವನದಿಂದ ಬಂದಿ ದ್ದರಿಂದ, ಅಂದಿನ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರೆಲ್ಲ ಚರ್ಚಿಸಿ, ಭಾಸ್ಕರ ರಾವ್‌ ಹೆಸರನ್ನೇ ಶಿಫಾರಸು ಮಾಡುವ ನಿರ್ಧಾರ ಕೈಗೊಂಡರು’ ಎಂದರು.

‘ಭಾಸ್ಕರ್‌ ರಾವ್ ಅವರು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯ ಮೂರ್ತಿ ಗಳಾಗಿ ಮಾತ್ರ ನಮಗೆ ಪರಿಚಯ ಇತ್ತು. ಅವರ ನೇಮಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎಂದ ಮಾತ್ರಕ್ಕೆ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನೀವು ಭಾರದ್ವಾಜ್‌ ಅವರನ್ನು ಉಲ್ಲೇಖಿಸಿ ಈ ಮಾತು ಹೇಳುತ್ತಿದ್ದೀರಾ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ನಾನು ಹೇಳುವುದನ್ನು ಈಗಾಗಲೇ ಹೇಳಿದ್ದೇನೆ. ಬನ್ನೂರು ಮಠ ಅವರ ಹೆಸರನ್ನು ತಿರಸ್ಕ ರಿಸಿದವರಿಂದ ಬಂದ ಸೂಚನೆಯಂತೆ ಭಾಸ್ಕರ್‌ ರಾವ್‌ ನೇಮಕವಾಗಿದೆ’ ಎಂದು ಸುರೇಶ್‌ ಕುಮಾರ್‌ ಉತ್ತರಿಸಿದರು.

ದುಸ್ಸಾಹಸ ಬೇಡ
‘ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಭಾಸ್ಕರ ರಾವ್‌ ಅವರ ಪದಚ್ಯುತಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದ ನಂತರ, ಉಪಲೋಕಾಯುಕ್ತ ಸುಭಾಷ ಬಿ. ಅಡಿ ಅವರ ಪದಚ್ಯುತಿಗೆ ಕಾಂಗ್ರೆಸ್‌ ಪ್ರಸ್ತಾವ ಸಲ್ಲಿಸಿತು. ಸಚಿವ ಆಂಜನೇಯ  ರಾಜೀನಾಮೆಗೆ ಆಗ್ರಹಿಸಿ ನಾವು ಸದನದಲ್ಲಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಭಾಧ್ಯಕ್ಷರು ಪ್ರಸ್ತಾವ ಅಂಗೀ ಕರಿಸಿದ್ದಾರೆ’ ಎಂದರು.

‘ಅಡಿ ವಿರುದ್ಧದ ದಾಖಲೆಗಳು ಅವರ ಪದಚ್ಯುತಿಗೆ ಸಾಕಾಗುವುದಿಲ್ಲ ಎಂದು ಕಾಗೋಡು ತಿಮ್ಮಪ್ಪ ಅವರೇ ಹೇಳಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ಚರಮಗೀತೆ ಹಾಡಲು ಕಾಂಗ್ರೆಸ್‌ ಹುನ್ನಾರ ನಡೆಸಿದೆ’ ಎಂದರು.

ಆರೋಪ ಅಲ್ಲಗಳೆದ ಕಾಗೋಡು
ಸುರೇಶ್ ಕುಮಾರ್‌ ಆರೋಪಕ್ಕೆ ಸ್ಪಷ್ಟನೆ ನೀಡಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ‘ಅಡಿ ಅವರ ಪದಚ್ಯುತಿಗೆ ಕಾಂಗ್ರೆಸ್‌ ಸಲ್ಲಿಸಿದ್ದ ಪ್ರಸ್ತಾವ ಅಂಗೀಕರಿಸುವಾಗ ನಾನು ಯಾರ ಒತ್ತಡಕ್ಕೂ ಮಣಿದಿಲ್ಲ’ ಎಂದರು.

‘ಕಾಯ್ದೆಯ ಅನುಸಾರ, ಮೂರನೇ ಒಂದರಷ್ಟು ಸದಸ್ಯರು ಪ್ರಸ್ತಾವ ಮಂಡಿಸಿದಾಗ ನಾನು ಅದನ್ನು ಒಪ್ಪಿಕೊಳ್ಳಲೇ ಬೇಕು. ಸಭಾಧ್ಯಕ್ಷನಾಗಿ ಯಾವ ರೀತಿ ಕೆಲಸ ಮಾಡಬೇಕು ಎಂದು ನನಗೆ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

ಪದಚ್ಯುತಿ ತಪ್ಪಿಸಿಕೊಳ್ಳಲು ರಾಜೀನಾಮೆ: ನ್ಯಾ. ಹೆಗ್ಡೆ
‘ಪದಚ್ಯುತಿ ಪ್ರಕ್ರಿಯೆ ಯಿಂದ ತಪ್ಪಿಸಿಕೊಳ್ಳಲು ಭಾಸ್ಕರರಾವ್‌ ರಾಜೀನಾಮೆ ನೀಡಿದ್ದಾರೆ. ಅವರು ತಪ್ಪಿತಸ್ಥರು ಎಂದು ಹೈಕೋರ್ಟ್‌ ನ್ಯಾಯ ಮೂರ್ತಿಗಳ ಸಮಿತಿ ಮುಂದೊಮ್ಮೆ ಹೇಳಿಬಿಟ್ಟರೆ, ತಪ್ಪಿಸಿಕೊಳ್ಳುವ ಮಾರ್ಗವೇ ಇರುತ್ತಿರಲಿಲ್ಲ. ಹಾಗಾಗಿ, ಆ ಸಮಸ್ಯೆಯಿಂದ ಬಚಾವಾಗಲು ರಾಜೀನಾಮೆ ಕೊಟ್ಟಿದ್ದಾರೆ’ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಪ್ರಜಾವಾಣಿ ಜತೆ ದೂರವಾಣಿಯಲ್ಲಿ ಮಾತನಾಡಿದ ಅವ ರು, ‘ನಾಲ್ಕು ತಿಂಗಳ ಹಿಂದೆ ಮಗನ ಬಂಧನ ಆದಾಗ ಅವರು ಏಕೆ ರಾಜೀನಾಮೆ ನೀಡ ಲಿಲ್ಲ’ ಎಂದು ಪ್ರಶ್ನಿಸಿದರು.

‘ಸಂಸ್ಥೆಯ ಮಾನ ಉಳಿಸಬೇಕು ಎಂದಿದ್ದರೆ, ಅವತ್ತೇ ರಾಜೀನಾಮೆ ನೀಡುತ್ತಿದ್ದರು. ಸಂಸ್ಥೆಯಲ್ಲಿನ ಭ್ರಷ್ಟಾ ಚಾರದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತಂಡ ಅವರನ್ನು ಇನ್ನಾದರೂ ಬಂಧಿಸಬೇಕು’ ಎಂದು ಅವರು  ಒತ್ತಾಯಿಸಿದರು.

ಉಳಿದವರೇನು ಸಾಚಾ?
‘ಲೋಕಾಯುಕ್ತ ಸಂಸ್ಥೆ ಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಮೂರ್ತಿ ವೈ. ಭಾಸ್ಕರರಾವ್‌ ಮಾತ್ರ ತಪ್ಪು ಮಾಡಿದ್ದಾರೆಯೇ? ಇದರಲ್ಲಿ ಬೇರೆಯವರ ಪಾಲು ಇಲ್ಲವೇ?’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಪ್ರಶ್ನಿಸಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಭ್ರಷ್ಟಾಚಾರದಲ್ಲಿ ಬೇರೆಯವರ ಪಾತ್ರ ಇಲ್ಲವೇ? ಭಾಸ್ಕರ ರಾವ್ ಪುತ್ರ ಮಾತ್ರ ತಪ್ಪು ಮಾಡಿದ್ದಾರೆಯೇ?’ ಎಂದು ಪ್ರಶ್ನಿಸಿದರು.

‘ಲೋಕಾಯುಕ್ತ ಬದಲು ಲೋಕಪಾಲ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ ಮೊದಲು ತಮ್ಮನ್ನು ತಾವು ಸರಿಪಡಿಸಿಕೊಳ್ಳಲಿ. ನೈಸ್‌ ಸಂಸ್ಥೆ ನಡೆಸಿದ ಅವ್ಯವಹಾರಗಳ ತನಿಖೆಗೆ ರಚಿಸಿರುವ ಸದನ ಸಮಿತಿಯ ಅಧ್ಯಕ್ಷರು ಅವರು. ತನಿಖೆ ಚುರುಕುಗೊಳಿಸಿ ಎಂದು ಸ್ಪೀಕರ್‌ ಸೂಚಿಸಿದ್ದರೂ, ಅಧ್ಯಕ್ಷರು ಏನು ಮಾಡುತ್ತಿದ್ದಾರೆ’ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಹೊಸ ಲೋಕಾಯುಕ್ತ ತಿಂಗಳಲ್ಲಿ ನೇಮಕ
ಲೋಕಾಯುಕ್ತ ಸ್ಥಾನಕ್ಕೆ ಒಂದು ತಿಂಗಳಲ್ಲಿ ಹೊಸಬರನ್ನು ನೇಮಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಂಗಳವಾರ ತಿಳಿಸಿದರು.

‘ಭ್ರಷ್ಟಾಚಾರದ ಆರೋಪ ಹೊತ್ತ ವರು ಲೋಕಾಯುಕ್ತ ಹುದ್ದೆಯಲ್ಲಿ ಇರಬಾರದು ಎನ್ನುವುದು ವಿಧಾನ ಮಂಡಲದ ಒಟ್ಟಾಭಿಪ್ರಾಯವಾಗಿತ್ತು’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಇತ್ತೀಚೆಗೆ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಹೈಕೋರ್ಟ್‌ಗಳಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ನಿವೃತ್ತ ನ್ಯಾಯ ಮೂರ್ತಿಗಳನ್ನೂ ಲೋಕಾ ಯುಕ್ತ ರನ್ನಾಗಿ ನೇಮಿಸಬಹುದಾಗಿದೆ. ಇದರ ಜತೆಗೆ ಈ ಹಿಂದೆ ಇದ್ದ ಹಾಗೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನೂ ಈ ಹುದ್ದೆಗೆ ಪರಿಗಣಿಸಬಹುದಾಗಿದೆ’ ಎಂದು ವಿವರಿಸಿದರು.

ಉಪ ಲೋಕಾಯುಕ್ತ ಹುದ್ದೆಗೆ ಎನ್‌. ಆನಂದ ಹೆಸರು
ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌.ಆನಂದ ಅವರ ಹೆಸರನ್ನು ಉಪ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಆಯ್ಕೆ ಸಮಿತಿ ಸರ್ವಾನುಮತದ ತೀರ್ಮಾನ ಮಾಡಿದೆ.

ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌  ಭಾಗವಹಿಸಿದ್ದರು.

‘ನ್ಯಾಯಮೂರ್ತಿ ಎಸ್‌.ಬಿ.ಮಜಗೆ ನಿವೃತ್ತಿಯಾದ ಸ್ಥಾನಕ್ಕೆ ಆನಂದ ಅವರ ಹೆಸರನ್ನು ಶಿಫಾರಸು ಮಾಡಲು ಸಭೆ ಯಲ್ಲಿ ಇದ್ದ ಎಲ್ಲರೂ ಒಪ್ಪಿದ್ದಾರೆ. ಅದನ್ನು ಸದ್ಯದಲ್ಲೇ ರಾಜ್ಯಪಾಲರಿಗೆ ಕಳುಹಿಸ ಲಾಗುವುದು’ ಎಂದು ಮುಖ್ಯಮಂತ್ರಿ ಸಭೆ ಬಳಿಕ  ಸುದ್ದಿಗಾರರಿಗೆ ತಿಳಿಸಿದರು.

ಹೈಕೋರ್ಟ್‌ ಮುಖ್ಯ ನ್ಯಾಯ ಮೂರ್ತಿಯವರ ಶಿಫಾರಸು ಪತ್ರದ ಲ್ಲಿಯೂ ಇವರ ಹೆಸರು ಇತ್ತು ಎಂದು ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆನಂದ ಅವರ ಜತೆಗೆ ಕೆ.ಎಲ್‌. ಮಂಜುನಾಥ, ಎಚ್‌.ಎನ್. ನಾಗ ಮೋಹನ ದಾಸ್‌  ಅವರ ಹೆಸರುಗಳನ್ನು ಮುಖ್ಯ ನ್ಯಾಯಮೂರ್ತಿಯವರು ಮೊದಲು ಶಿಫಾರಸು ಮಾಡಿದ್ದರು. ಮಂಜುನಾಥ ನೇಮಕಕ್ಕೆ ವಿರೋಧ ಬಂದ ನಂತರ ಅವರ ಬದಲಿಗೆ, ಅಜಿತ್‌ ಗುಂಜಾಳ್‌ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಶಿಫಾರಸು ಮಾಡಿದ್ದರು ಎನ್ನಲಾಗಿದೆ.

ಕಳೆದ ಬಾರಿ ನಡೆದ ಸಮಿತಿಯ ಸಭೆಯಲ್ಲಿ ಶೆಟ್ಟರ್‌ ಅವರು ಆನಂದ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಕೆ.ಎಲ್‌. ಮಂಜುನಾಥ ಅವರ ನೇಮಕಕ್ಕೆ ಪಟ್ಟುಹಿಡಿದ ಕಾರಣ ಆಯ್ಕೆ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು ಎಂದು ಗೊತ್ತಾಗಿದೆ.

ಗೈರುಹಾಜರಾಗಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಜತೆ ದೂರವಾಣಿ ಮೂಲಕ ಮಾತನಾಡಿ, ಆನಂದ ನೇಮಕಕ್ಕೆ ಅವರ ಒಪ್ಪಿಗೆ ಯನ್ನೂ ಪಡೆಯಲಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು.

ಪರಿಚಯ: ಕೋಲಾರ ತಾಲ್ಲೂಕಿನ ವೇಮಗಲ್‌ ಹೋಬಳಿಯ ಬೈರಾಂಡ ಹಳ್ಳಿಯ ಆನಂದ ಅವರು ನೇಕಾರ ಸಮುದಾಯದ ತೊಗಟವೀರ ಪಂಗಡಕ್ಕೆ ಸೇರಿದವರು. ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಅವರು 2006ರಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಕಳೆದ ಮೇಯಲ್ಲಿ  ನಿವೃತ್ತರಾದರು.

‘ಭಂಡತನ ಮೆರೆದ ಭಾಸ್ಕರರಾವ್‌’ (ಮೈಸೂರು ವರದಿ): ಮತ್ತೊಂದೆಡೆ, ಮೂರು ತಿಂಗಳ ಹಿಂದೆಯೇ ವೈ. ಭಾಸ್ಕರರಾವ್‌ ರಾಜೀನಾಮೆ ಕೊಟ್ಟಿದ್ದರೆ ಅವರ ಗೌರವ ಉಳಿಯುತ್ತಿತ್ತು. ಆದರೆ, ಭಂಡತನ ಮೆರೆದು ಇಷ್ಟು ದಿನ ಸುಮ್ಮನಿದ್ದರು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

‘ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣ ಹಾಗೂ ಕಳಂಕ ಬರುವ ರೀತಿಯಲ್ಲಿ ವರ್ತಿಸಿರುವ ಘಟನೆಗಳಿಂದಾಗಿ ಭಾಸ್ಕರರಾವ್‌ ಯಾವುದೇ ಕಾರಣಕ್ಕೂ ಲೋಕಾಯುಕ್ತರಾಗಿ ಮುಂದುವರಿಯಲು ಸಾಧ್ಯವೇ ಇರಲಿಲ್ಲ. ಅವರ ಪದಚ್ಯುತಿಗೆ ಶಾಸಕರೂ ಪ್ರಯತ್ನಿಸಿದರು. ರಾಜೀನಾಮೆ ನೀಡದೆ ಬೇರೆ ದಾರಿ ಇರಲಿಲ್ಲ’ ಎಂದು ತಿಳಿಸಿದರು.

ಉಪಲೋಕಾಯುಕ್ತರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಸೂಕ್ತ ದಾಖಲೆಗಳನ್ನು ಸಭಾಧ್ಯಕ್ಷರಿಗೆ ಸಲ್ಲಿಸಲಿ. ಬಳಿಕ ಅವರು ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಆದರೆ, ಸುಮ್ಮನೇ ತೇಜೋವಧೆ ಮಾಡಲು ಪ್ರಯತ್ನಿಸಬಾರದು ಎಂದರು.

ಎಫ್‌ಐಆರ್‌ಗೆ ಎಎಪಿ ಒತ್ತಾಯ
 ಭಾಸ್ಕರರಾವ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು  ತನಿಖೆಗೆ ಒಳಪಡಿಸಬೇಕು ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಉಪ ಸಂಚಾಲಕ ಶಿವಕುಮಾರ್‌ ಒತ್ತಾಯಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್‌, ಆರ್‌.ವಿ. ದೇಶಪಾಂಡೆ ಮತ್ತು ದಿನೇಶ್‌ ಗುಂಡೂರಾವ್‌ ಅವರ ಕಡತಗಳೂ ಇವೆ. ಹಾಗಾಗಿಯೇ  ಉಪ ಲೋಕಾಯುಕ್ತ ಸುಭಾಷ ಅಡಿ ಪದಚ್ಯುತಿ ಗೊತ್ತುವಳಿಯನ್ನು ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ತಕ್ಷಣ ಅಂಗೀಕರಿಸಿದ್ದಾರೆ. ನಂತರ ಮಾಧ್ಯಮಗಳಿಗೆ  ಸಮಜಾಯಿಷಿ  ನೀಡುತ್ತಾ, ಉಪಲೋಕಾಯುಕ್ತರ ವಿರುದ್ಧದ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಹೇಳಿಕೆ ನೀಡಿದ್ದಾರೆ. ಸರ್ಕಾರದ ಸಂಚಿನಲ್ಲಿ  ಅವರೂ ಭಾಗಿಯಾಗಿದ್ದಾರೆ’ ಎಂದು ಆರೋಪಿಸಿದರು.

ಲೋಕಾಯುಕ್ತಖಾಲಿ ಖಾಲಿ
ನ್ಯಾಯಮೂರ್ತಿ ಎಸ್‌.ಬಿ. ಮಜಗೆ ಅವರ ನಿವೃತ್ತಿಯ ಕಾರಣ ಒಂದನೆಯ ಉಪ ಲೋಕಾಯುಕ್ತ ಸ್ಥಾನ ಖಾಲಿಯಾಗಿದೆ. ನ್ಯಾಯಮೂರ್ತಿ ಸುಭಾಷ ಬಿ. ಅಡಿ ಅವರ ಪದಚ್ಯುತಿಗೆ ಕಾಂಗ್ರೆಸ್ಸಿನ ಕೆಲವು ಶಾಸಕರು ಸಲ್ಲಿಸಿದ ಮನವಿಯನ್ನು ಸ್ಪೀಕರ್‌ ಅಂಗೀಕರಿಸಿರುವ ಕಾರಣ, ಅಡಿ ಅವರು ಕರ್ತವ್ಯ ನಿರ್ವಹಿಸುವಂತೆಯೂ ಇಲ್ಲ. ಭಾಸ್ಕರರಾವ್ ರಾಜೀ ನಾಮೆಯಿಂದ ಲೋಕಾಯುಕ್ತ ಸ್ಥಾನ ಖಾಲಿಯಾಗಿದೆ.

ಲೋಕಾಯುಕ್ತ ರಿಜಿಸ್ಟ್ರಾರ್‌ ಹುದ್ದೆಗೆ ಸರ್ಕಾರ ಐಎಎಸ್‌ ಅಧಿಕಾರಿ ಡಾ.ಪಿ.ಸಿ. ಜಾಫರ್ ಅವರನ್ನು ನೇಮಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಡಾ. ಜಾಫರ್‌ ನೇಮಕಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಅದು ಇನ್ನೂ ಚಾಲ್ತಿಯಲ್ಲಿದೆ.
ಹಾಗಾಗಿ, ಇಡೀ ಲೋಕಾಯುಕ್ತ ಸಂಸ್ಥೆ ಈಗ ಹಂಗಾಮಿ ರಿಜಿಸ್ಟ್ರಾರ್‌ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

********
ಪದಚ್ಯುತಿಗೂ ಮುನ್ನವೇ ಭಾಸ್ಕರರಾವ್‌ ಕುರ್ಚಿ ಖಾಲಿ ಮಾಡಿದ್ದು ಒಳ್ಳೆಯದಾಯಿತು.
-ಸಚಿವ ಜಯಚಂದ್ರ

ಲೋಕಾಯುಕ್ತ ಸಂಸ್ಥೆಯಲ್ಲಿನ ಬೇರೆ ವ್ಯಕ್ತಿಗಳ ಬಗ್ಗೆ ಯಾರೂ ಮಾತ ನಾಡುತ್ತಿಲ್ಲ ಯಾಕೆ? ಉಳಿದವರೆಲ್ಲ ಸತ್ಯ ಹರಿಶ್ಚಂದ್ರರೇನು?
-ಎಚ್‌.ಡಿ. ದೇವೇಗೌಡ, ಜೆಡಿಎಸ್ ರಾಷ್ಟ್ರಾಧ್ಯಕ್ಷ

ಕಾಂಗ್ರೆಸ್‌ ಸರ್ಕಾರವು ವಿಧಾನಸಭಾಧ್ಯಕ್ಷ   ಕಾಗೋಡು ತಿಮ್ಮಪ್ಪ ಅವರ ಮೇಲೆ ಒತ್ತಡ ತಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ ಬಿ. ಅಡಿ ಅವರ ಪದಚ್ಯುತಿಗೆ ಹುನ್ನಾರ ನಡೆಸಿದೆ
-ಸುರೇಶ್‌ ಕುಮಾರ್‌,ಬಿಜೆಪಿ ಶಾಸಕ

ವಿಳಂಬವಾದರೂ ಪ್ರತಿಪಕ್ಷಗಳು, ಮಾಧ್ಯಮ, ಜನರ ಒತ್ತಡಕ್ಕೆ ಮಣಿದು ಭಾಸ್ಕರರಾವ್‌ ರಾಜೀನಾಮೆ ಕೊಟ್ಟಿದ್ದು ಒಳ್ಳೆ ಬೆಳವಣಿಗೆ. ವಿಳಂಬಕ್ಕೆ ಸರ್ಕಾರದ ಮೃದು ಧೋರಣೆಯೇ ಕಾರಣ.
-ಜಗದೀಶ ಶೆಟ್ಟರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ

Comments