ನವದೆಹಲಿ

ನೈರ್ಮಲ್ಯ ಯೋಜನೆ ವಿಫಲ: ಸಿಎಜಿ

ದೇಶದ ನೈರ್ಮಲ್ಯ ಕಾರ್ಯಕ್ರಮಗಳು ಅಪೇಕ್ಷಿತ ಗುರಿ ಸಾಧಿಸುವಲ್ಲಿ ವಿಫಲವಾಗಿವೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ನವದೆಹಲಿ (ಪಿಟಿಐ): ದೇಶದ ನೈರ್ಮಲ್ಯ ಕಾರ್ಯಕ್ರಮಗಳು ಅಪೇಕ್ಷಿತ ಗುರಿ ಸಾಧಿಸುವಲ್ಲಿ ವಿಫಲವಾಗಿವೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಯೋಜನೆ ರೂಪಿಸುವಲ್ಲಿನ ಲೋಪಗಳು ಇದಕ್ಕೆ ಮುಖ್ಯ ಕಾರಣ. ನಿಧಿಯನ್ನು ಬೇರೆ ಕೆಲಸಗಳಿಗೆ ವರ್ಗಾಯಿಸುವುದು ಮತ್ತು ಅಕ್ರಮಗಳನ್ನೂ ಗುರುತಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಗ್ರಾಮೀಣ ನೈರ್ಮಲ್ಯ ಯೋಜನೆಗಾಗಿ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ₹10 ಸಾವಿರ ಕೋಟಿ ವ್ಯಯ ಮಾಡಿದೆ. ಆದರೆ ಈ ಮೊತ್ತವನ್ನು ಬೇರೆ ಯೋಜನೆಗಳಿಗೆ ವರ್ಗಾಯಿಸಿರುವುದು ಮತ್ತು ಅವ್ಯವಹಾರ  ನಡೆದಿರುವುದು ಲೆಕ್ಕಪರಿಶೋಧನೆಯಲ್ಲಿ ತಿಳಿದು ಬಂದಿದೆ ಎಂದು ವರದಿ ಹೇಳಿದೆ.

ಬಂದರುಗಳಲ್ಲಿ ಬಳಕೆಯಾಗದ ಭೂಮಿ: ದೇಶದ 12 ಪ್ರಮುಖ ಬಂದರುಗಳು ತಮ್ಮ ಸ್ವಾಧೀನದಲ್ಲಿದ್ದ ಜಮೀನಿನಲ್ಲಿ ಅರ್ಧಕ್ಕೂ ಹೆಚ್ಚು ಭಾಗವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ತಿಳಿಸಿದೆ.

ಬಂದರುಗಳ ಭವಿಷ್ಯದ ಚಟುವಟಿಕೆಗಾಗಿ ಸುಮಾರು 23 ಸಾವಿರ ಎಕರೆ ಜಮೀನು ಗುರುತಿಸಲಾಗಿತ್ತು.  ಅದರಲ್ಲಿ 13 ಸಾವಿರ ಎಕರೆಯನ್ನು ಈತನಕ ಯಾವ ಉದ್ದೇಶಕ್ಕೆ ಬಳಸಿಕೊಳ್ಳಬೇಕು ಎಂಬುದನ್ನೇ ನಿರ್ಧರಿಸಿಲ್ಲ ಎಂದು ವರದಿ ಹೇಳಿದೆ. ಪ್ರಮುಖ ಬಂದರುಗಳಲ್ಲಿ ನವಮಂಗಳೂರು ಬಂದರು ಸೇರಿದೆ.

ಭತ್ತ ಸಂಗ್ರಹದಲ್ಲೂ ನಷ್ಟ: ಪಡಿತರ ಮೂಲಕ ವಿತರಿಸುವುದಕ್ಕೆ  ಭತ್ತ ಸಂಗ್ರಹಿಸುವ ಯೋಜನೆಯಲ್ಲಿ ₹40,564 ಕೋಟಿ ಅವ್ಯವಹಾರ ನಡೆದಿದೆ ಎಂದು ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ಹೇಳಲಾಗಿದೆ.

Comments