ರುಜುವಾತಿನ ಅಗತ್ಯವಿಲ್ಲ: ಶಾರುಖ್ ಖಾನ್‌

ತಮ್ಮ ಜಾತ್ಯತೀತ ನಿಲುವುಗಳನ್ನು ರುಜುವಾತು ಪಡಿಸಬೇಕಾದ ಅಗತ್ಯವಿಲ್ಲ ಎಂದು ‘ಬಾಲಿವುಡ್‌ ಬಾದ್‌ಷಾ’ ಶಾರುಖ್ ಖಾನ್‌ ಮಂಗಳವಾರ ಹೇಳಿದ್ದಾರೆ.

ನವದೆಹಲಿ (ಐಎಎನ್‌ಎಸ್‌): ತಮ್ಮ ಜಾತ್ಯತೀತ ನಿಲುವುಗಳನ್ನುರುಜುವಾತು ಪಡಿಸಬೇಕಾದ ಅಗತ್ಯವಿಲ್ಲ ಎಂದು ‘ಬಾಲಿವುಡ್‌ ಬಾದ್‌ಷಾ’ ಶಾರುಖ್ ಖಾನ್‌ ಮಂಗಳವಾರ ಹೇಳಿದ್ದಾರೆ.

‘ನನಗೆ ಅನಿಸಿದ್ದನ್ನು ನೇರ ಮತ್ತು ಸ್ಪಷ್ಟವಾಗಿ ಹೇಳುತ್ತೇನೆ. ವ್ಯಕ್ತಿ ಯಾವ ಧರ್ಮಕ್ಕೆ ಸೇರಿದವರು, ಅವರು ಬೆಳ್ಳಗಿರುವರೊ ಅಥವಾ ಕಪ್ಪಗಿರುವರೊ ಎಂಬುದು ಮುಖ್ಯವಾಗುವುದಿಲ್ಲ’ ಎಂದು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅಸಹಿಷ್ಣುತೆ ಬಗ್ಗೆ ತಾವು ಈ ಹಿಂದೆ ನೀಡಿದ ಹೇಳಿಕೆ  ವಿವಾದಕ್ಕೆ ಕಾರಣವಾದ ಹಾಗೂ ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಅವರು ತಮ್ಮ ವಿರುದ್ಧ ಮಾತನಾಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಇಂತಹ ವಿಷಯಗಳು ಎಂದೂ ಮುಗಿಯದ ಸಂಗತಿ’ ಎಂದಿದ್ದಾರೆ.

‘ಆದರೆ ಇನ್ನು ಹುಟ್ಟುಹಬ್ಬ, ಸಿನೆಮಾದ ಪ್ರಚಾರ ಕಾರ್ಯಕ್ರಮದಂತಹ ವೇದಿಕೆಯಲ್ಲಿ ನಾನು ಗಂಭೀರ ವಿಷಯಗಳನ್ನು ಮಾತನಾಡದಿರಲು ನಿರ್ಧರಿಸಿದ್ದೇನೆ. ಅದಕ್ಕೆಂದೇ ಮೀಸಲಾದ ವೇದಿಕೆಗಳಲ್ಲಿ ಚರ್ಚೆಗೆ ಜನ ನನ್ನನ್ನು ಆಹ್ವಾನಿಸಿದರೆ ಮಾತ್ರ ಅಲ್ಲಿ ಮಾತನಾಡುತ್ತೇನೆ. ಆದರೆ ಅಂತಹ ಕಾರ್ಯಕ್ರಮಗಳು ಅಪರೂಪ’ ಎಂದು ಶಾರುಖ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳು ಅದ್ಭುತವಾಗಿವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

ದೇಶದ ಗೌರವಕ್ಕೆ ಧಕ್ಕೆ ತರುತ್ತಿರುವ ಶಾರುಖ್‌, ಅಮೀರ್‌–ಸಾಧ್ವಿ ಪ್ರಾಚಿ (ಜಮ್‌ಶೆಡ್‌ಪುರ ವರದಿ):ಬಾಲಿವುಡ್‌ ನಟರಾದ ಶಾರುಖ್‌ಖಾನ್‌ ಮತ್ತು ಅಮೀರ್‌ ಖಾನ್‌ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‌ ಅವರು ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆಪಾದಿಸುವ ಮೂಲಕ ದೇಶದ ಗೌರವಕ್ಕೆ ಕಳಂಕ ಉಂಟು ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್‌ನ ನಾಯಕಿ ಸಾಧ್ವಿ ಪ್ರಾಚಿ ಮಂಗಳವಾರ ಇಲ್ಲಿ ದೂರಿದ್ದಾರೆ.

ಶಾರುಖ್‌ ಖಾನ್‌, ಅಮೀರ್‌ ಖಾನ್‌ ಹಾಗೂ ಅಜಂ ಖಾನ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಸೇರಿಕೊಂಡು ಅಸಹಿಷ್ಣುತೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಅಸಹಿಷ್ಣುತೆಯ ಹೆಸರಿನಲ್ಲಿ ನಡೆದ ಇಡೀ ಅಭಿಯಾನವೇ  ದೇಶಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಕೂಡಿತ್ತು ಎಂದು ಅವರು ಟೀಕಿಸಿದ್ದಾರೆ.

Comments